ಶನಿವಾರ, ಏಪ್ರಿಲ್ 10, 2021
30 °C

ಪರಿಸರ ಪೂಜಿಸಿ: ಚಿಕ್ಕಮಾದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಣಸೂರು : ಜನಸಂಖ್ಯೆಗೆ ಅನುಗುಣವಾಗಿ ಮರ ಬೆಳೆಸಬೇಕಾದ ಪರಿಸ್ಥಿತಿ ಎದುರಾಗಿದ್ದು, ಪ್ರತಿಯೊಬ್ಬರೂ ಪ್ರಕೃತಿ ಆರಾಧಿಸುವ ಪಾಠ ಕಲಿಯಬೇಕಾಗಿದೆ ಎಂದು ವಿಧಾನಪರಿಸತ್ ಸದಸ್ಯ ಎಸ್.ಚಿಕ್ಕಮಾದು ಹೇಳಿದರು. ಪಟ್ಟಣದ ಕಲ್ಪತರು ವೃತ್ತದಲ್ಲಿ ವಿಶ್ವ ಜಲ ದಿನಾಚರಣೆ ಅಂಗವಾಗಿ ಸೇವ್ ಅವರ್ ಅರ್ಥ್ ಕ್ಲಬ್ ಆಯೋಜಿಸಿದ್ದ ‘ಸಸ್ಯಗಳ ಪಾಲನೆ ಮತ್ತು ಪೋಷಣೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ  ಅವರು ಮಾತನಾಡಿದರು.ದೇಶದ ಜನಸಂಖ್ಯೆಗೆ ಅನುಗುಣವಾಗಿ ಮರವಿಲ್ಲದೆ ಆಮ್ಲಜನಕ ಕೊರತೆ ಮತ್ತು ಸೂರ್ಯನ ಬಿಸಿಲಿನ ತಾಪ ಹೆಚ್ಚಿ ಭೂಮಿ ತಾಪ ದಿನದಿಂದ ದಿನಕ್ಕೆ ಏರುತ್ತಿದೆ. ಅರಣ್ಯವನ್ನು ಮಾನವರು ತಮ್ಮ ಭೋಗದ ವಸ್ತು ಎಂದು ಪರಿಗಣಿಸಿ ದಶಕಗಳಿಂದ ಅರಣ್ಯ ಸಂಪತ್ತು ನಾಶಪಡಿಸಿದ ಪರಿಣಾಮ ಇಂದಿನ ಮಾನವ ಸಂಕುಲ ಪ್ರಕೃತಿ ವಿಕೋಪಗಳನ್ನು ಎದುರಿಸುವಂತಾಗಿದೆ ಎಂದರು.ಹುಣಸೂರು ಪಟ್ಟಣ ಈ ಹಿಂದೆ ಹಸಿರಿನಿಂದ ಕಂಗೊಳಿಸುತ್ತಿತ್ತು. ಇಂದು ಮರಗಳಿಲ್ಲದೆ ಬೇಸಿಗೆ   ಬಿಸಿಲು ಸಹಿಸಿಕೊಳ್ಳಲಾಗದಂತಾಗಿದೆ. ಈ ನಿಟ್ಟಿನಲ್ಲಿ ಸೇವ್ ಅವರ್ ಅರ್ಥ್ ಕ್ಲಬ್ ಉತ್ತಮ ಕೆಲಸ ನಿರ್ವಹಿಸಿ ಸಸಿ ನೆಟ್ಟು ಬೆಳೆಸಿ ಹಸಿರು ಹೊದಿಕೆ ಕ್ರೋಢೀಕರಿಸಿ ಎಂಬ ಘೋಷಣೆ ಪ್ರತಿಯೊಬ್ಬರ ಕಣ್ಣು ತೆರೆಸುವಂತಾಗಿದೆ ಎಂದರು.ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ  ಬಸವರಾಜು ಮಾತನಾಡಿ ‘ದೇಶ ಪ್ರಗತಿ ಕಾಣಬೇಕಿದ್ದರೆ ಶೇ. 33ರಷ್ಟು ಅರಣ್ಯ ಅವಶ್ಯಕವಿದೆ. ಭಾರತದಲ್ಲಿ ಶೇ. 20 ರಷ್ಟು ಅರಣ್ಯವಿದ್ದು, ಶೇ.13ರಷ್ಟು ಅರಣ್ಯ ಕೊರತೆ ಎದುರಿಸುತ್ತಿದ್ದೇವೆ. ಈ ಕೊರತೆಯನ್ನು ಸಾಮಾಜಿಕ ಅರಣ್ಯ ನಿರ್ಮಿಸುವ ಮೂಲಕ ನೀಗಿಸುವ ಪ್ರಯತ್ನ ನಿರಂತರವಾಗಿ ಅರಣ್ಯ ಇಲಾಖೆ ನಡೆಸುತ್ತಿದೆ. ಕಲ್ಪತರು ಬಸ್ ನಿಲ್ದಾಣದ ಎದುರು ಸ್ತಬ್ದ ಚಿತ್ರ ಅನಾವರಣ ಮಾಡಲಾಯಿತು. ದೇವರಾಜ ಅರಸು ಪ್ರಥಮ ದರ್ಜೆ ಕಾಲೇಜು ಮತ್ತು ಮಹಿಳಾ ಕಾಲೇಜಿನ ಎನ್‌ಎಸ್‌ಎಸ್ ಶಿಬಿರದ ವಿದ್ಯಾರ್ಥಿಗಳು ಹನುಮಂತನ ದೇವಾಲಯದಲ್ಲಿ 200 ವರ್ಷದ ಇತಿಹಾಸ ಹೊಂದಿರುವ ಕೊಳ ಸ್ವಚ್ಚಗೊಳಿಸುವ ಕಾರ್ಯದಲ್ಲಿ ತೊಡಗಿಸಿಕೊಂಡರು. ಗೋಷ್ಠಿ : ವಿಶ್ವ ಜಲ ದಿನಾಚರಣೆ ಅಂಗವಾಗಿ ಮಹಿಳಾ ಸಮಾಜದಲ್ಲಿ ವಿವಿಧ ವಿಚಾರ ಕುರಿತು ಗೋಷ್ಠಿ ಹಮ್ಮಿಕೊಳ್ಳಲಾಗಿತ್ತು. ಪ್ರಾಧ್ಯಾಪಕ ಹೇಮಚಂದ್ರ ಮತ್ತು ಪುರಸಭೆ ಮುಖ್ಯಾಧಿಕಾರಿ ಹರೀಶ್ ಭಾಗವಹಿಸಿದ್ದರು. ಸಮಾರೋಪದಲ್ಲಿ ಪುರಸಭಾಧ್ಯಕ್ಷ ಮಂಜುಳ ಚೆನ್ನಬಸಪ್ಪ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.