ಮಂಗಳವಾರ, ಏಪ್ರಿಲ್ 20, 2021
24 °C

ಪರಿಹಾರ ಕೋರಿ ಅರ್ಜಿ ಸಲ್ಲಿಸಿ ದಂಡ ತೆತ್ತರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಾಹನ ಚಲಿಸುವ ಸಂದರ್ಭದಲ್ಲಿ ತಮ್ಮದೇ ತಪ್ಪಿನಿಂದ ನಡೆದ ಅಪಘಾತವನ್ನು ಬೇರೊಬ್ಬರ ಮೇಲೆ ಹಾಕಿ ಪರಿಹಾರ ಪಡೆದುಕೊಳ್ಳಲು ಉತ್ಸುಕರಾಗಿದ್ದ ಸಹೋದರರು ಈಗ ಪರಿಹಾರದ ಬದಲು ತಾವೇ ದಂಡ ತೆರಬೇಕಾಗಿದೆ!ಇಂಥದ್ದೊಂದು ಆದೇಶ ಹೈಕೋರ್ಟ್‌ನಿಂದ ಶುಕ್ರವಾರ ಹೊರಬಿದ್ದಿದೆ. ಸ್ಕೂಟರ್ `ಸ್ಕಿಡ್~ ಆಗಿ ನಡೆದ ಅಪಘಾತವನ್ನು ಟ್ರ್ಯಾಕ್ಟರ್ ಒಂದರ ಮೇಲೆ ಹೊರಿಸಿ ಪರಿಹಾರ ಕೋರಿದ್ದ ಇವರಿಗೆ ನ್ಯಾಯಮೂರ್ತಿ ಎನ್.ಕೆ.ಪಾಟೀಲ್ ನೇತೃತ್ವದ ವಿಭಾಗೀಯ ಪೀಠ 50 ಸಾವಿರ ರೂಪಾಯಿಗಳ ದಂಡ ವಿಧಿಸಿದೆ.ಈ ದಂಡದ ಹಣವನ್ನು ಹೈಕೋರ್ಟ್ ಕಾನೂನು ಸೇವಾ ಸಮಿತಿಗೆ ನೀಡುವಂತೆ ಆಂಧ್ರಪ್ರದೇಶದ ಚಿತ್ತೂರಿನ ಸಹೋದರರಾದ ದೊರೆಸ್ವಾಮಿ ನಾಯ್ಡು ಹಾಗೂ ರಾಜಗೋಪಾಲ ನಾಯ್ಡು ಅವರಿಗೆ ಪೀಠ ನಿರ್ದೇಶಿಸಿದೆ.ಪ್ರಕರಣದ ವಿವರ: ನಾಯ್ಡು ಸಹೋದರರು 2000ನೇ ಸಾಲಿನ ಜೂನ್ 15ರಂದು ಕೆಜಿಎಫ್ ಬಳಿ ಸ್ಕೂಟರ್‌ನಲ್ಲಿ ಸಾಗುತ್ತಿದ್ದ ವೇಳೆ ಸ್ಕೂಟರ್ ಆಯತಪ್ಪಿದ್ದರಿಂದ ಇಬ್ಬರೂ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡರು.ವೇಗದಿಂದ ಬಂದ ಟ್ರ್ಯಾಕ್ಟರ್ ತಮ್ಮ ವಾಹನಕ್ಕೆ ಗುದ್ದಿದ ಪರಿಣಾಮ ಈ ಅಪಘಾತ ಸಂಭವಿಸಿದೆ ಎಂದು ಹೇಳಿ `ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪೆನಿ~ ಹಾಗೂ ಟ್ರ್ಯಾಕ್ಟರ್ ಮಾಲೀಕರು ತಮಗೆ ಪರಿಹಾರ ನೀಡಬೇಕು ಎಂದು ಕೋರಿ ಅವರು ಅದೇ ಸಾಲಿನಲ್ಲಿ ಕೆಜಿಎಫ್‌ನ ಮೋಟಾರು ಅಪಘಾತ ಪರಿಹಾರ ನ್ಯಾಯಮಂಡಳಿ ಮೊರೆ ಹೋಗಿದ್ದರು.ಅಪಘಾತದ ವೈದ್ಯಕೀಯ ವರದಿ ಸೇರಿದಂತೆ ಇತ್ಯಾದಿ ದಾಖಲೆಗಳನ್ನು ಪರಿಶೀಲಿಸಿದ್ದ ನ್ಯಾಯಮಂಡಳಿ ಇದು ಸ್ವ ತಪ್ಪಿನಿಂದ ಆದದ್ದೇ ಹೊರತು, ಟ್ರ್ಯಾಕ್ಟರ್ ಚಾಲಕನ ತಪ್ಪು ಇಲ್ಲ ಎಂದು ಅಭಿಪ್ರಾಯಪಟ್ಟಿತ್ತು. ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನು 2007ರಲ್ಲಿ ಅದು ವಜಾಗೊಳಿಸಿತ್ತು.ಈ ವಜಾ ಆದೇಶವನ್ನು ಅದೇ ಸಾಲಿನಲ್ಲಿ ಸಹೋದರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ತಮಗೆ ಕ್ರಮವಾಗಿ 18 ಲಕ್ಷ ಹಾಗೂ 14 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಬೇಕು ಎನ್ನುವುದು ಅವರ ಮನವಿಯಾಗಿತ್ತು. ದಾಖಲೆಗಳನ್ನು ಪರಿಶೀಲಿಸಿದ ಪೀಠ, ನ್ಯಾಯಮಂಡಳಿ ಆದೇಶದಲ್ಲಿ ಯಾವುದೇ ತಪ್ಪು ಇಲ್ಲ ಎಂದು ಮನಗಂಡಿತು. ಸುಳ್ಳು ಅರ್ಜಿ ಸಲ್ಲಿಸಿ, ಕೋರ್ಟ್ ಸಮಯ ವ್ಯರ್ಥ ಮಾಡಿದ್ದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ದಂಡ ವಿಧಿಸಿ ಆದೇಶಿಸಿದೆ.

 

`ಪೂಜೆಗೆ ಅನುಮತಿ ನೀಡಿ~


ಬೆಂಗಳೂರಿನ ಸಿಂಗಸಂದ್ರ ಗ್ರಾಮದಲ್ಲಿನ ಮಹೇಶ್ವರಮ್ಮ ಮತ್ತು ಕಾಳಿಕಾಂಬಾ ದೇವಾಲಯದಲ್ಲಿ ಯಾವ ಭಕ್ತರಿಗೂ ಪೂಜೆಗೆ ಅಡ್ಡಿ ಮಾಡಬಾರದು ಎಂದು ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.ಸುಮಾರು 27 ಗುಂಟೆ ವಿಸ್ತಾರವಾಗಿರುವ ಈ ದೇವಾಲಯದ ಜಾಗವು ತಮ್ಮ ಒಡೆತನಕ್ಕೆ ಸೇರಿದೆ ಎಂದು ಹೇಳುತ್ತಿರುವ ವೆಂಕಟೇಶ್ ರೆಡ್ಡಿ ಎನ್ನುವವರು ಪೂಜೆಗೆ ಅಡ್ಡಿ ಮಾಡುತ್ತಿದ್ದಾರೆ ಎಂದು ದೂರಿ ಮುನಿರಾಜು ಎನ್ನುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ನೇತೃತ್ವದ ವಿಭಾಗೀಯ ಪೀಠ ನಡೆಸಿತು.ಇದು ಸರ್ಕಾರಕ್ಕೆ ಸೇರಿರುವ ಜಮೀನು. ಅಪರಾಧ ಪ್ರಕರಣಗಳಲ್ಲಿ ಸಿಲುಕಿರುವ ರೆಡ್ಡಿ ಅವರು ತಮಗೇ ಈ ಜಮೀನು ಸೇರಿದೆ ಎಂದು ಹೇಳುತ್ತಿದ್ದಾರೆ. ಆದರೂ ಈ ಬಗ್ಗೆ ಸಂಬಂಧಿತ ಅಧಿಕಾರಿಗಳು ಕ್ರಮ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ಅರ್ಜಿದಾರರ ದೂರು. ವಿಚಾರಣೆ ಮುಂದೂಡಲಾಗಿದೆ.ಕಂಪ್ಯೂಟರೀಕರಣ: ಅ.8ರ ಗಡುವು

ಕಂದಾಯ ಇಲಾಖೆಯ ದಾಖಲೆಗಳನ್ನು ಕಂಪ್ಯೂಟರೀಕರಣಗೊಳಿಸಲು ಹೈಕೋರ್ಟ್, ಅಕ್ಟೋಬರ್ 8ರವರೆಗೆ ಗಡುವು ನೀಡಿ ಇಲಾಖೆಗೆ ಆದೇಶಿಸಿದೆ.ಕಂಪ್ಯೂಟರೀಕರಣಗೊಳಿಸುವ ಸಂಬಂಧದ ಉಸ್ತುವಾರಿ ವಹಿಸಿಕೊಳ್ಳಲು ಕಂದಾಯ ಇಲಾಖೆಯ ಅಧಿಕಾರಿಯಾಗಿದ್ದ ಬಾಲಸುಬ್ರಮಣಿಯನ್ ಅವರನ್ನು ನೇಮಕ ಮಾಡಿ ನ್ಯಾಯಮೂರ್ತಿ ಹುಲುವಾಡಿ ಜಿ. ರಮೇಶ್ ಆದೇಶಿಸಿದ್ದಾರೆ.ದಾಖಲೆಗಳನ್ನು ಸರಿಯಾಗಿ ನಿರ್ವಹಿಸದೇ ಇರುವುದರಿಂದ ಹಲವಾರು ದಾಖಲೆಗಳು ಕಳೆದು ಹೋಗಿರುವ ಬಗ್ಗೆ ಹೈಕೋರ್ಟ್ ಮೆಟ್ಟಿಲೇರುತ್ತಿರುವ ಹಲವಾರು ಪ್ರಕರಣಗಳನ್ನು ಗಮನಿಸಿರುವ ನ್ಯಾಯಮೂರ್ತಿಗಳು ಕಂಪ್ಯೂಟರೀಕರಣ ಅಗತ್ಯ ಇದೆ ಎಂದು ತಿಳಿಸಿದ್ದಾರೆ.ಕ್ಯಾರಿ ಓವರ್- ವಿದ್ಯಾರ್ಥಿಗಳಿಗೆ ಜಯ

ಸರ್ಕಾರ ಹೊಸದಾಗಿ ಜಾರಿಗೊಳಿಸಿರುವ `ಕ್ಯಾರಿ ಓವರ್~ ಪದ್ಧತಿಯಿಂದ ಪೇಚಿಗೆ ಸಿಲುಕಿದ್ದ ಕೆಲವು ಡಿಪ್ಲೊಮಾ ವಿದ್ಯಾರ್ಥಿಗಳ ನೆರವಿಗೆ ಹೈಕೋರ್ಟ್ ಧಾವಿಸಿದ್ದು, ಈ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುವಂತೆ ಕಾಲೇಜಿಗೆ ಆದೇಶಿಸಿದೆ.ಇದರಿಂದ ಐದನೆಯ ಸೆಮಿಸ್ಟರ್‌ಗೆ ಪ್ರವೇಶ ದೊರಕದೆ ನ್ಯಾಯಾಲಯದ ಮೊರೆ ಹೋಗಿದ್ದ ವಿದ್ಯಾರ್ಥಿಗಳಿಗೆ ಜಯ ದೊರೆತಿದೆ.ಒಂದು ಮತ್ತು ಎರಡನೆಯ ಸೆಮಿಸ್ಟರ್‌ನ ಒಟ್ಟು 14 ವಿಷಯಗಳ ಪೈಕಿ ಕನಿಷ್ಠ 8 ವಿಷಯಗಳಲ್ಲಿ ಉತ್ತೀರ್ಣಗೊಂಡಿದ್ದರೆ ಮಾತ್ರ ಮೂರನೆಯ ಸೆಮಿಸ್ಟರ್‌ಗೆ ಹೋಗಲು ವಿದ್ಯಾರ್ಥಿಗಳು ಅರ್ಹರು. ಐದನೆಯ ಸೆಮಿಸ್ಟರ್‌ಗೆ ಅರ್ಹತೆ ಪಡೆಯಬೇಕಿದ್ದರೆ 3-4 ಸೆಮಿಸ್ಟರ್‌ಗಳಲ್ಲಿ 8 ವಿಷಯಗಳಲ್ಲಿ ಉತ್ತೀರ್ಣ ಕಡ್ಡಾಯ~ ಎನ್ನುವುದು ಈ `ಕ್ಯಾರಿ ಓವರ್~ ಪದ್ಧತಿಯ ನಿಯಮ. ಇದನ್ನು ಸರ್ಕಾರ ಜುಲೈ 12ರಿಂದ ಜಾರಿಗೊಳಿಸಿದೆ.

 

ಈ ವಿದ್ಯಾರ್ಥಿಗಳೆಲ್ಲ ಅನೇಕ ವಿಷಯಗಳಲ್ಲಿ ಅನುತ್ತೀರ್ಣರಾಗಿದ್ದ ಕಾರಣದಿಂದ ಅವರಿಗೆ ಐದನೆ ಸೆಮಿಸ್ಟರ್‌ಗೆ ಕಾಲೇಜುಗಳು ಅನುಮತಿ ನೀಡಿರಲಿಲ್ಲ. ಇದನ್ನು ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು.ಸರ್ಕಾರ ಸುತ್ತೋಲೆ ಹೊರಡಿಸಿರುವುದು ಈಚೆಗಷ್ಟೇ. ಅದನ್ನು ಈ ವಿದ್ಯಾರ್ಥಿಗಳಿಗೆ ಅನ್ವಯ ಮಾಡುವುದು ಸರಿಯಲ್ಲ.ಅಷ್ಟೇ ಅಲ್ಲದೇ, ಇವರೆಲ್ಲ ಗ್ರಾಮೀಣ ಪ್ರದೇಶಗಳಿಂದ ಬೆಂಗಳೂರಿಗೆ ಬಂದವರು. ಗ್ರಾಮೀಣ ಪ್ರದೇಶಗಳಲ್ಲಿ ಶಿಕ್ಷಣದ ಗುಣಮಟ್ಟ, ನಗರ ಪ್ರದೇಶಗಳಷ್ಟು ಉತ್ತಮ ಇರದ ಕಾರಣದಿಂದ, ಇವರು ಹೆಚ್ಚಿನ ವಿಷಯಗಳಲ್ಲಿ ತೇರ್ಗಡೆಯಾಗಲು ಸಾಧ್ಯವಾಗಿಲ್ಲ. ಮುಂದಿನ ಸೆಮಿಸ್ಟರ್‌ಗೆ ಇವರಿಗೆಲ್ಲ ಪ್ರವೇಶ ನಿರಾಕರಿಸಿದರೆ, ಅವರ ಒಂದು ಶೈಕ್ಷಣಿಕ ವರ್ಷ ವ್ಯರ್ಥವಾಗುತ್ತದೆ~ ಎಂದು ಅವರ ಪರ ವಕೀಲ ಬಿ.ಆರ್.ವಿಶ್ವನಾಥ ವಾದಿಸಿದರು. ಈ ವಾದವನ್ನು ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಮಾನ್ಯ ಮಾಡಿದರು.ಶಾಸಕ, ಮಾಜಿ ಸಿಎಂ ವಿರುದ್ಧ ಅರ್ಜಿ

ಜವಾಹರಲಾಲ್ ನೆಹರೂ ವೈದ್ಯಕೀಯ ಕಾಲೇಜನ್ನು ನಡೆಸುತ್ತಿರುವ ಕೆ.ಎಲ್.ಇ. ಶಿಕ್ಷಣ ಸಂಸ್ಥೆಗೆ ಬೆಳಗಾವಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯೊಂದನ್ನು ಪರಭಾರೆ ಮಾಡುವ ಸಂಬಂಧ ಅಂದಿನ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡರು ನೀಡಿರುವ ಅನುಮತಿಗೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.`ಬೈಲಹೊಂಗಲ ಶಾಸಕರ (ಜಗದೀಶ ಮೆಟಗುಡ್) ಕೋರಿಕೆ ಮೇರೆಗೆ ಅಂದಿನ ಮುಖ್ಯಮಂತ್ರಿಗಳು ನಿಯಮಬಾಹಿರವಾಗಿ ಅನುಮತಿ ನೀಡಿದ್ದಾರೆ. ಈ ಶಿಕ್ಷಣ ಸಂಸ್ಥೆಗೆ ಶಾಸಕರ ಸಹೋದರ ಟ್ರಸ್ಟಿಯಾಗಿದ್ದಾರೆ. ಈ ರೀತಿ ಪರಭಾರೆ ಮಾಡುವುದು ಉಚಿತವಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಅಭಿಪ್ರಾಯ ನೀಡಿದ್ದರೂ, ಅದನ್ನು ಕಡೆಗಣಿಸಲಾಗಿದೆ. ಇದನ್ನು `ವಿಶೇಷ ಪ್ರಕರಣ~ ಎಂದು ಹೇಳಿರುವ ಮುಖ್ಯಮಂತ್ರಿಗಳು ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಜೂನ್ 30ರಂದು ಅನುಮತಿ ನೀಡಿದ್ದಾರೆ.ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಆಸ್ಪತ್ರೆಯನ್ನು ಹೀಗೆ ಖಾಸಗಿಯವರಿಗೆ ವಹಿಸಿಕೊಟ್ಟಿರುವುದು ಸರಿಯಲ್ಲ~ ಎಂದು ದೂರಿ ರಫೀಕ್ ಎಂ. ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಅರವಿಂದ ಕುಮಾರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ನಡೆಸಿತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.