ಶುಕ್ರವಾರ, ಮೇ 14, 2021
25 °C
ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ಅವ್ಯವಹಾರ-ಆರೋಪ

ಪರೀಕ್ಷೆಗೂ ಮೊದಲೇ ವಿದ್ಯಾರ್ಥಿಗೆ ಪ್ರಶ್ನೆಪತ್ರಿಕೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾಸನ: ಪರೀಕ್ಷೆಗಿಂತ ಮೂರು ದಿನ ಮೊದಲು ಕಾಲೇಜಿನ ಅರೆಕಾಲಿಕ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗೆ ಪ್ರಶ್ನೆಪತ್ರಿಕೆ ಕಳುಹಿಸಿಕೊಟ್ಟಿರುವ ಪ್ರಕರಣ ಇಲ್ಲಿನ ಮಲೆನಾಡು ಎಂಜಿನಿ ಯರಿಂಗ್ ಕಾಲೇಜಿನಲ್ಲಿ ನಡೆದಿರು ವುದು ತಡವಾಗಿ ಬೆಳಕಿಗೆ ಬಂದಿದೆ.ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಉಪನ್ಯಾಸಕರು ಫೇಸ್‌ಬುಕ್ ಮೂಲಕ ವಿದ್ಯಾರ್ಥಿಗೆ ಪ್ರಶ್ನೆಪತ್ರಿಕೆ ಕಳುಹಿಸಿದ್ದು ಅಚ್ಚರಿಗೆ ಕಾರಣವಾಗಿದೆ.ಕಾಲೇಜಿನ ಎಂಟನೇ ಸೆಮಿಸ್ಟರ್‌ಗೆ 50 ಅಂಕಗಳ ಆಂತರಿಕ ಪರೀಕ್ಷೆ (ಇಂಟರ್‌ನಲ್ಸ್) ಏಪ್ರಿಲ್ 25ರಂದು ನಡೆದಿತ್ತು. ಇಲ್ಲಿ `ಡಿಸ್ಟ್ರಿಬ್ಯೂಟೆಡ್ ಆಪರೇಟಿಂಗ್ ಸಿಸ್ಟಮ್'  ವಿಷಯ  ಕುರಿತ ಪ್ರಶ್ನೆಪತ್ರಿಕೆಯನ್ನು ವಿಭಾಗದಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಲೋಕನಾ ಎಂಬುವರು ಫೇಸ್‌ಬುಕ್ ಮೂಲಕ ಕಾಶ್ಮೀರ ಮೂಲದ ವಿದ್ಯಾರ್ಥಿ ದೀಕ್ಷಿತ್ ರಾಜ್ದಾನ್ ಎಂಬುವವರಿಗೆ ಕಳುಹಿಸಿ ಕೊಟ್ಟಿದ್ದರು.ಪರೀಕ್ಷೆಗಿಂತ ಮೂರು ದಿನ ಮುಂಚಿತವಾಗಿ ಏ. 22ರಂದು ಈ ಪ್ರಕರಣ ನಡೆದಿರುವುದು ತಡವಾಗಿ ಕೆಲವು ವಿದ್ಯಾರ್ಥಿಗಳ ಗಮನಕ್ಕೆ ಬಂದಿದೆ. ವಿಷಯ ತಿಳಿಯುತ್ತಿದ್ದಂತೆ 'ಪ್ರಶ್ನೆಪತ್ರಿಕೆ ಮಾರಾಟ ಮಾಡಲಾಗಿದೆ' ಎಂದು ವಿದ್ಯಾರ್ಥಿಗಳು ದೂರಿದ್ದಾರೆ.ಲೋಕನಾ ಇದೇ ಕಾಲೇಜಿನ ಕೊನೇ ಬ್ಯಾಚ್ ವಿದ್ಯಾರ್ಥಿನಿಯಾಗಿದ್ದು, ಎಂಜಿನಿಯರಿಂಗ್  ಮುಗಿಯುತ್ತಿದ್ದಂತೆ ಇಲ್ಲಿಯೇ ಉಪನ್ಯಾಸಕರಾಗಿ ಸೇರಿದ್ದರು.

ಎಂಜಿನಿಯರಿಂಗ್ ಕಾಲೇಜಿನ ಪ್ರಶ್ನೆಪತ್ರಿಕೆ ತಯಾರಿಸಬೇಕಾದರೆ ಉಪನ್ಯಾಸಕರಾಗಿ ಕನಿಷ್ಠ ಐದು ವರ್ಷ ಹಾಗೂ ಉತ್ತರ ಪತ್ರಿಕೆ ಮೌಲ್ಯಮಾ ಪನಕ್ಕೆ ಎರಡು ವರ್ಷಗಳ ಅನುಭವ ಇರಬೇಕು ಎಂಬ ನಿಯಮವಿದೆ. ಆದರೆ, 5 ತಿಂಗಳ ಹಿಂದೆಯಷ್ಟೇ ಕಾಲೇಜಿಗೆ ಸೇರಿದ್ದ ಅರೆಕಾಲಿಕ ಉಪನ್ಯಾಸಕರು (ಇದೇ ಕಾಲೇಜಿನ ಹಿರಿಯ ಉಪನ್ಯಾಸಕರೊಬ್ಬರ ಪುತ್ರ) ಪ್ರಶ್ನೆಪತ್ರಿಕೆ ತಯಾರಿಸಿದ್ದರು. ಲೋಕನಾ ಎರಡು ಮೂರು ತಿಂಗಳ ಹಿಂದೆಯಷ್ಟೇ ಇಲ್ಲಿ ಸೇರಿದ್ದರು.`ತಾತ್ಕಾಲಿಕ ಉಪನ್ಯಾಸಕರಿಗೆ ಈ ಕೆಲಸಗಳಿಗೆ ಹಣ ಕೊಡಬೇಕಾಗುವುದಿಲ್ಲ. ಅದಕ್ಕಾಗಿ ಕಾಲೇಜಿ ನವರು ಅವರಿಂದಲೇ ಈ ಕೆಲಸ ಮಾಡಿಸುತ್ತಾರೆ' ಎಂದು ಹೆಸರು ತಿಳಿಸಲು ಇಚ್ಛಿಸದ ಉಪನ್ಯಾಸಕರು ತಿಳಿಸಿದ್ದಾರೆ.ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ ಪ್ರಾಂಶುಪಾಲ ಸತ್ಯ ನಾರಾಯಣ, `ವಿಚಾರ ಆಡಳಿತ ಮಂಡಳಿಯ ಗಮನಕ್ಕೆ ಬಂದಿದೆ. ಒಂದೆರಡು ದಿನಗಳಲ್ಲಿ ಅವರೇ ಉತ್ತರ ನೀಡುತ್ತಾರೆ' ಎಂದಿದ್ದಾರೆ. ಸರ್ಕಾರದ ಮಾಜಿ ಅಡ್ವೋಕೆಟ್ ಜನರಲ್ ಅಶೋಕ ಹಾರನಹಳ್ಳಿ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿದ್ದಾರೆ.ಕಳೆದ ಕೆಲವು ತಿಂಗಳಿಂದ ಕಾಲೇಜಿನ ಬಗ್ಗೆ ಹಲವು ಆರೋಪಗಳು ಬರುತ್ತಿದ್ದು, ಹಿಂದಿನ ಕಾರ್ಯದರ್ಶಿ ಯವರೇ ಪತ್ರಿಕಾಗೋಷ್ಠಿ ನಡೆಸಿ ಹಲವು ಆರೋಪಗಳನ್ನು ಮಾಡಿದ್ದರು. ಇತ್ತೀಚೆಗೆ ಸಮಿತಿಯ ಸದಸ್ಯರೂ ಆಗಿರುವ ಎಂಜಿನಿಯರ್ ಒಬ್ಬರು ಕಾಲೇಜಿನಲ್ಲಿ ಅವ್ಯವಹಾರ ನಡೆಯುತ್ತಿವೆ ಎಂದು ಆರೋಪ ಮಾಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.