ಶುಕ್ರವಾರ, ಜನವರಿ 17, 2020
22 °C

ಪಶುವೈದ್ಯಕೀಯ ಮಹಾವಿದ್ಯಾಲಯದ ಘಟಿಕೋತ್ಸವ:ಭರತ್ ಗೆ 9 ಚಿನ್ನದ ಪದಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ತಾಲ್ಲೂಕಿನ ಕಮಠಾಣ ಸಮೀಪ ಇರುವ ಕರ್ನಾಟಕ ಪಶು ವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ 5ನೇ ಘಟಿಕೋತ್ಸವದಲ್ಲಿ 9 ಚಿನ್ನದ ಪದಕ ಪಡೆಯುವ ಮೂಲಕ ಎಲ್ಲರ ಗಮನ ಸೆಳೆದವರು ಬೆಂಗಳೂರಿನ ಪಶು ವೈದ್ಯಕೀಯ ಮಹಾವಿದ್ಯಾಲಯದ ಪದವೀಧರ ಭರತಕುಮಾರ ಲೋಕೇಶ್. ಪಶು ವೈದ್ಯ ಕ್ಷೇತ್ರದಲ್ಲಿ ಸಂಶೋಧನೆ ಮಾಡುವ ಇಲ್ಲವೇ ಪ್ರೊಫೆಸರ್ ಆಗುವ ಬಯಕೆ ಇವರದು.ವಿಶ್ವವಿದ್ಯಾಲಯದ ಸಹ ಕುಲಾಧಿಪತಿಯೂ ಆಗಿರುವ ಪಶು ಸಂಗೋಪನಾ ಸಚಿವ ರೇವುನಾಯಕ್ ಬೆಳಮಗಿ ಬಿ.ವಿ.ಎಸ್.ಸಿ. ಆ್ಯಂಡ್ ಎ.ಎಚ್. ಪದವೀಧರನ ಕೊರಳಿಗೆ ಒಂಭತ್ತು ಚಿನ್ನದ ಪದಕಗಳನ್ನು ಹಾಕುತ್ತಿದ್ದಂತೆ ನೆರೆದಿದ್ದ ವಿದ್ಯಾರ್ಥಿಗಳು, ಪಾಲಕರು ಹಾಗೂ ಅಧ್ಯಾಪಕರು ಚಪ್ಪಾಳೆ ತಟ್ಟಿ ಅಭಿನಂದಿಸಿದರು. ಅದ್ಭುತ ಸಾಧನೆ ತೋರಿದ ಭರತಕುಮಾರ ಮುಖದಲ್ಲಿ ಸಾರ್ಥಕ್ಯದ ಭಾವವಿತ್ತು.ಮೂಲತಃ ಹಾಸನದವರಾಗಿರುವ ಭರತಕುಮಾರ ಸದ್ಯ ಹೈದರಾಬಾದ್‌ನ ಪಶು ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ನಡೆಸುತ್ತಿದ್ದಾರೆ. ಪಿಯುಸಿಯಲ್ಲಿ ಶೇ. 85 ಅಂಕ ಗಳಿಸಿರುವ ಇವರು ನಂತರ ಆಯ್ಕೆ ಮಾಡಿಕೊಂಡಿದ್ದು ಪಶು ವೈದ್ಯಕೀಯ ಕ್ಷೇತ್ರವನ್ನು.ಪಶು ವೈದ್ಯಕೀಯ ಪರೀಕ್ಷಕರಾಗಿರುವ ತಂದೆ ಲೋಕೇಶ ಅವರಿಗೆ ತಮ್ಮ ಮಗನಿಗೆ ಮೆಡಿಕಲ್ ಓದಿಸುವ ಆಸೆ ಇತ್ತು. ಆತ ಮಾತ್ರ ತಂದೆಯವರ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಂಡ ಎಂದು ತಿಳಿಸುತ್ತಾರೆ ಭರತಕುಮಾರ ತಾಯಿ ಭಾಗ್ಯಲಕ್ಷ್ಮಿ. ಆರ್ಥಿಕ ಸಮಸ್ಯೆ ಮಧ್ಯೆ ಮಗನ ಸಾಧನೆ ಹೆಮ್ಮೆ ತಂದಿದೆ ಎಂದು ಭಾವುಕರಾಗಿ ನುಡಿದರು.

ಕಷ್ಟಪಟ್ಟು ಪದವಿ ಪಡೆದಿದ್ದೇನೆ. ಅನೇಕ ಬಾರಿ ಡೀನ್ ಹಾಗೂ ಸೀನಿಯರ್‌ಗಳು ಆರ್ಥಿಕ ನೆರವು ನೀಡಿದ್ದಾರೆ.  ಎಂದು ಸ್ಮರಿಸುತ್ತಾರೆ ಭರತಕುಮಾರ.

 

 

 

 

 

 

 

ಪ್ರತಿಕ್ರಿಯಿಸಿ (+)