ಶುಕ್ರವಾರ, ಮೇ 20, 2022
27 °C

ಪಶುಸಂಗೋಪನೆ ಬದಲು ನಾಯಿ ಸಾಕಣೆ: ರೈತನ ನೂತನ ಚಿಂತನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೊಡ್ಡಬಳ್ಳಾಪುರ: ಕೃಷಿಯೊಂದಿಗೆ ಉಪ ಕಸುಬಾಗಿ ಹಸು, ಕುರಿ, ಕೋಳಿ ಮುಂತಾದವುಗಳನ್ನು ಸಾಕಾಣಿಕೆ ಮಾಡುವುದು ಸಾಮಾನ್ಯ. ಆದರೆ ನಾಯಿಗಳನ್ನು ಸಾಕಾಣಿಕೆ ಮಾಡಿ ಲಾಭಗಳಿಸಬಹುದು ಎನ್ನುವುದನ್ನು ದೊಡ್ಡಬಳ್ಳಾಪುರ ತಾಲ್ಲೂಕಿನ ಲಿಂಗನಹಳ್ಳಿ ಗ್ರಾಮದ ರೈತ ಎಲ್.ವೆಂಕಟೇಶ್ ಸಾಭೀತು ಮಾಡಿದ್ದಾರೆ.15 ವರ್ಷಗಳಿಂದಲೂ ನಾಯಿ ಸಾಕಾಣಿಕೆ ಮಾಡುತ್ತಿರುವ ಎಲ್.ವೆಂಕಟೇಶ್ ಅವರ ಮನೆಯಲ್ಲಿ ಒಂದಲ್ಲ, ಎರಡಲ್ಲ 18 ನಾಯಿಗಳಿವೆ. ಜರ್ಮನ್ ಶಪರ್ಡ್, ಸೆಂಟ್‌ಬರ್ನಲ್, ಲ್ಯಾಬ್‌ರಿರ್ಡಾರ್, ಬಾಕ್ಸ್‌ರ್, ಗ್ರೇಡ್‌ಡನ್  ಮುಂತಾದ ತಳಿ ನಾಯಿಗಳು ಇವರ ಮನೆಯಲ್ಲಿವೆ. ನಾಯಿಗಳಿಗಾಗಿಯೇ ಪ್ರತ್ಯೇಕ ಮನೆ ನಿರ್ಮಿಸಲಾಗಿದೆ. ನಾಯಿಗಳ ಸಾಕಾಣಿಕೆಯಲ್ಲಿ ಪ್ರಥಮ ಆದ್ಯತೆ ನಾಯಿಗಳ ಕೊಠಡಿ ಸ್ವಚ್ಚತೆಗೆ ನೀಡ ಬೇಕು. ಇಲ್ಲಿಂದಲೇ ಅನೇಕ ರೋಗಗಳು ಹರಡುವುದನ್ನು ತಡೆಯಲು ಸಹಕಾರಿ. ಇನ್ನು ನಾಯಿಗಳು ಮೊದಲೇ ಮನುಷ್ಯರನ್ನು ಹೆಚ್ಚು ಅವಲಂಭಿಸುವ, ನಂಬುವ ಪ್ರಾಣಿ. ಹೀಗಾಗಿ ಪ್ರತಿದಿನ ಅವುಗಳೊಂದಿಗೆ ಕನಿಷ್ಠ ಒಂದು ಗಂಟೆ ಕಾಲವಾದರು ಕಳೆಯಬೇಕು. ಅವುಗಳ ಮೈ ಸವರುತ್ತ ಪ್ರೀತಿಯಿಂದ ಕಾಣಬೇಕು. ಇಲ್ಲವಾದರೆ ಮಂಕಾಗಿ ಹೋಗುತ್ತವೆ ಎನ್ನುತ್ತಾರೆ ಎಲ್.ವೆಂಕಟೇಶ್.

ನಾಯಿಗಳ ಸಾಕಾಣಿಕೆಗೆ ಇಂದು ಹಲವಾರು ಬಗೆಯ ತಿಂಡಿಗಳು ಬಂದಿವೆ. ಅದರೊಂದಿಗೆ ರಾಗಿ ಅಂಬಲಿಯನ್ನು ಮನೆಯಲ್ಲಿಯೇ ತಯಾರಿಸಿ ನೀಡಲಾಗುತ್ತದೆ. ಇದರಿಂದ ಸದೃಢ ಹಾಗೂ ಆರೋಗ್ಯಯುತ ಬೆಳವಣಿಗೆಗೆ ಸಹಕಾರಿ ಆಗುತ್ತದೆ. ನಾಯಿಗಳು ಸಾಮಾನ್ಯವಾಗಿ  ಆರು ತಿಂಗಳಿಗೆ ಒಮ್ಮೆ  ಮರಿ ಹಾಕುತ್ತವೆ. ಆದರೆ ಆರೋಗ್ಯವಂತ ನಾಯಿ ಮರಿಗಳನ್ನು ಪಡೆಯುವ ಉದ್ದೇಶದಿಂದ ವರ್ಷಕ್ಕೆ ಒಮ್ಮೆ ಮಾತ್ರ ಮರಿಗಳನ್ನು ಪಡೆಯಲಾಗುತ್ತದೆ. ಒಂದ ರಿಂದ ಎರಡು ತಿಂಗಳವರೆಗೆ ಮರಿಗಳನ್ನು ಸಾಕಾಣಿಕೆ ಮಾಡಿ ಮಾರಾಟ ಮಾಡಲಾಗುತ್ತದೆ. ಮರಿಗಳು ಜನಿಸಿದ ತಕ್ಷಣ ತಾಯಿ ನಾಯಿಯಿಂದ ಮರಿಗಳನ್ನು ಪ್ರತ್ಯೇಕ ಮಾಡಿ ವಿದ್ಯುತ್ ಬಲ್ಬ್ ಶಾಖ ಹೊಂದಿರುವ ಬೋನಿನಲ್ಲಿ ಮರಿಗಳನ್ನು ಸಾಕಾಣಿಕೆ ಮಾಡಲಾಗುತ್ತದೆ. ಇದರಿಂದ ನಾಯಿ ತುಳಿತಕ್ಕೆ ಹಾಗೂ ಬೆಚ್ಚಗಿನ ವಾತಾವರಣಕ್ಕಾಗಿ ಮರಿಗಳು ಒಂದರ ಮೇಲೊಂದು ಮಲಗಿ ಉಸಿರು ಕಟ್ಟಿ ಮರಿಗಳು ಸಾವನ್ನಪ್ಪುವುದನ್ನು ತಡೆಗಟ್ಟಬಹುದು.

15 ನಾಯಿಗಳಿಂದ ವರ್ಷಕ್ಕೆ 45 ರಿಂದ 50 ಮರಿಗಳನ್ನು ಜನಿಸುತ್ತವೆ. ನಾಯಿ ಮರಿಗಳ ಮಾರಾಟಕ್ಕೆ ಮಾರುಕಟ್ಟೆ ಸಮಸ್ಯೆ ಇದೆ.ಆದರೂ ಉತ್ತಮ ತಳಿ ನಾಯಿ ಮರಿಗಳಿಗೆ ಸದಾ ಬೇಡಿ ಇದೆ. ಬೆಂಗಳೂರಿನ ಹೆಬ್ಬಾಳ ಹಾಗೂ ನಾಯಿ ಆಹಾರ ಮಾರಾಟ ಮಾಡುವ ಅಂಗಡಿಗಳವರು ನಾಯಿ ಮರಿಗಳಿಗೆ ಮಾರಾಟಕ್ಕೆ ಮಧ್ಯ ವರ್ತಿಗಳಾಗಿದ್ದಾರೆ. ಮರಿ ಹಾಕಿದ ಸಮಯದಲ್ಲಿ ಹಲವಾರು ಅಂಗಡಿಗಳವರಿಗೆ ಹಾಗೂ ಪಶು ವೈದ್ಯರಿಗೆ ತಿಳಿಸಲಾಗುತ್ತದೆ. ಇವರು ಒಂದು ಮರಿಯನ್ನು 8 ರಿಂದ 15 ಸಾವಿರ ರೂಗಳವರೆಗೆ ಮಾರಾಟ ಮಾಡಿಕೊಡುತ್ತಾರೆ.ನಾಯಿ ಮರಿಗಳಿಗೆ ಉತ್ತಮ ಮಾರುಕಟ್ಟೆ ಇದೆ. ಆದರೆ ಮಾರಾಟದ ಸಮಸ್ಯೆಯಿಂದಾಗಿ ನಾಯಿಗಳನ್ನು ಸಾಕಾಣಿಕೆ ಮಾಡಲು ಯಾರು ಮುಂದೆ ಬರುತ್ತಿಲ್ಲ. ವರ್ಷಕ್ಕೆ ಒಮ್ಮೆ ಹೆಬ್ಬಾಳದಲ್ಲಿ ನಾಯಿಗಳ ಪ್ರದರ್ಶನ ನಡೆಸಲಾಗುತ್ತದೆ. ಇದೇ ಸಮಯದಲ್ಲಿ ನಾಯಿ ಮರಿಗಳ ಮಾರಾಟಕ್ಕೂ ವೇದಿಕೆ ಕಲ್ಪಿಸಿದರೆ ನಾಯಿ ಸಾಕಾಣಿಕೆಗೆ ಹೆಚ್ಚಿನ ಆಸಕ್ತ ವಹಿಸಲು ಸಾಧ್ಯವಾಗಲಿದೆ ಎನ್ನುವುದು ಎಲ್.ವೆಂಕಟೇಶ್ ಅವರ ಅಭಿಪ್ರಾಯ. ಎಲ್.ವೆಂಕಟೇಶ್ ಅವರ ದೂರವಾಣಿ ಸಂಖ್ಯೆ: 9845564722

-ಎನ್.ಎಂ.ನಟರಾಜ್ ನಾಗಸಂದ್ರ.        

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.