ಬುಧವಾರ, ಏಪ್ರಿಲ್ 21, 2021
30 °C

ಪಹಣಿಪತ್ರಕ್ಕಾಗಿ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಸ್ಕಿ:  ಕಂದಾಯ ಇಲಾಖೆಯ ಗ್ರಾಮಲೆಕ್ಕಾಧಿಕಾರಿ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಸತತ ಮೂರು ದಿನಗಳಿಂದ ಕಚೇರಿಗೆ ಸಮಯಕ್ಕೆ ಸರಿಯಾಗಿ ಬರದಿರುವ ಕಾರಣ ಮಸ್ಕಿ ಕಂದಾಯ ವ್ಯಾಪ್ತಿಯಲ್ಲಿ ಬರುವ ನೂರಾರು ರೈತರು ಪಹಣಿಪತ್ರ ಸೇರಿ ಮತ್ತಿತರ ಪ್ರಮಾಣ ಪತ್ರಗಳನ್ನು ಪಡೆಯಲು ಪರದಾಡುತ್ತಿದ್ದಾರೆ.ಜಾತಿ ಪ್ರಮಾಣ ಪತ್ರ, ಆದಾಯ ಪತ್ರ, ಪಹಣಿ ಸೇರಿದಂತೆ ಮತ್ತಿತರ ಕೆಲಸಗಳಿಗೆ ನಿತ್ಯ ನೂರಾರು ರೈತರು ಇಲ್ಲಿಯ ವಿಶೇಷ ತಹಸೀಲ್ದಾರ್ ಕಚೇರಿಗೆ ಆಗಮಿಸುತ್ತಿದ್ದಾರೆ. ಆದರೆ, ಕಳೆದ ಮೂರು ದಿನಗಳಿಂದ ಇಲ್ಲಿಯ ಕಛೇರಿಯಲ್ಲಿ ಯಾವ ಅಧಿಕಾರಿಯೂ ಕಾಣುತ್ತಿಲ್ಲ. ಇದರಿಂದ ಸುಮಾರು 50 ಕ್ಕೂ ಹೆಚ್ಚು ಗ್ರಾಮಗಳ ನೂರಾರು ರೈತರು ಮೂರು ದಿನಗಳಿಂದ ಪ್ರಮಾಣ ಪತ್ರಗಳನ್ನು ಪಡೆಯಲು ಪರಡಾಡುವಂತಾಗಿದೆ.ಗ್ರಾಮ ಲೆಕ್ಕಾಧಿಕಾರಿಗಳು, ಕಂದಾಯ ನಿರೀಕ್ಷಕರು ಕಛೇರಿಯಲ್ಲಿಯೇ ಇದ್ದು ರೈತರಿಗೆ ಅನುಕೂಲವಾಗುವಂತೆ ಕರ್ತವ್ಯ ನಿರ್ವಹಿಸಬೇಕು. ಆದರೆ, ಇಲ್ಲಿಯ ವಿಶೇಷ ತಹಸೀಲ್ದಾರರ ಕಛೇರಿಯು ಹೆಸರಿಗೆ ಮಾತ್ರ ಇದ್ದು ಅಧಿಕಾರಿಗಳು ಸತತ ಮೂರು ದಿನಗಳಿಂದ ಕಚೇರಿಗೆ ಬರುತ್ತಿಲ್ಲ ಎಂದು ರೈತರು ದೂರಿದ್ದಾರೆ.ಶುಕ್ರವಾರ ಮಧ್ಯಾಹ್ನ 12 ಗಂಟೆಯಾಗಿದ್ದರೂ ಕಂದಾಯ ಇಲಾಖೆಯ ಕಚೇರಿಗಳ ಬಾಗಿಲುಗಳು ತೆರೆಯದೆ ಮುಚ್ಚಿರುವುದು ಕಂಡ ರೈತರು ವಿಶೇಷ ತಹಸೀಲ್ದಾರರ ಕಚೇರಿ ಮುಂದೆ ಕೆಲಕಾಲ  ಕುಳಿತು ಪ್ರತಿಭಟನೆ ನಡಿಸಿದ ಘಟನೆಯೂ ನಡೆಯಿತು. ನೆಮ್ಮದಿ ಕೇಂದ್ರದ ಮುಂದೆಯೂ ರೈತರ ಜನಸಂದಣಿ ಹೆಚ್ಚಿತ್ತು.ಇಲ್ಲಿಯ ಕಂದಾಯ ಇಲಾಖೆ ಸೇರಿದಂತೆ ಇತರೆ ಅಧಿಕಾರಿಗಳ ಮೇಲೆ ಕ್ಷೇತ್ರದ ಶಾಸಕರ ಹಿಡಿತ ಇಲ್ಲ. ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದು ಹೋಗಿದೆ ಎಂದು ದಲಿತ ಮುಖಂಡರಾದ ಹನುಮಂತಪ್ಪ ವೆಂಕಟಾಪುರ ಹಾಗೂ ಮಲ್ಲಯ್ಯ ಬಳ್ಳಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸಮಸ್ಯೆಯನ್ನು ಶಾಸಕರು ಸರಿಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇಲ್ಲದಿದ್ದರೆ ಈ ಭಾಗದ ರೈತರೊಂದಿಗೆ ಸೇರಿ ಶಾಸಕರ ಕಚೇರಿ ಮುಂದೆ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.