ಶನಿವಾರ, ಜನವರಿ 18, 2020
21 °C

ಪಾಕ್ ಅಧ್ಯಕ್ಷ, ಪ್ರಧಾನಿ ಭವಿಷ್ಯ ಇಂದು ನಿರ್ಧಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಇಸ್ಲಾಮಾಬಾದ್ (ಪಿಟಿಐ):  ಪಾಕಿಸ್ತಾನ ಸರ್ಕಾರವು ತನ್ನ ಮೇಲಿನ ಮೆಮೊಗೇಟ್ ಹಗರಣ ಮತ್ತು ಗಣ್ಯರ ಭ್ರಷ್ಟಾಚಾರ ಪ್ರಕರಣಗಳಿಗೆ ಸಂಬಂಧಿಸಿದಂತೆ ಉಂಟಾದ ಆಡಳಿತ ಬಿಕ್ಕಟ್ಟನ್ನು ನಿವಾರಿಸಲು ಸಂಸತ್ತಿನ ಬೆಂಬಲ ಯಾಚಿಸಿದ್ದರೂ, ಸುಪ್ರೀಂಕೋರ್ಟ್ ಸೋಮವಾರ ಈ ವಿಷಯಗಳನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಮೂಲಕ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಮತ್ತು ಪ್ರಧಾನಿ ಯೂಸುಫ್ ರಜಾ ಗಿಲಾನಿ ಸೇರಿದಂತೆ ವಿವಾದಕ್ಕೆ ಸಿಲುಕಿರುವ ನಾಯಕರ ಹಣೆಬರಹ ನಿರ್ಧಾರವಾಗಲಿದೆ.ಪ್ರಜಾಪ್ರಭುತ್ವವನ್ನು ಬಲಪಡಿಸಲು ರಾಜಕೀಯ ನಾಯಕತ್ವ ನಡೆಸಿರುವ ಪ್ರಯತ್ನಕ್ಕೆ ಬೆಂಬಲ ಮತ್ತು ಒಪ್ಪಿಗೆ ನೀಡುವ ನಿರ್ಣಯದ ಮೇಲೆ ಸೋಮವಾರ ಪಾಕ್ ರಾಷ್ಟ್ರೀಯ ಅಸೆಂಬ್ಲಿ ಅಥವಾ ಸಂಸತ್ತಿನ ಕೆಳಮನೆಯಲ್ಲಿ ಮತದಾನ ನಡೆಯುವ ನಿರೀಕ್ಷೆಯಿದೆ. ಆಡಳಿತಾರೂಢ ಸರ್ಕಾರದ ಪ್ರಮುಖರು ತಮ್ಮಲ್ಲಿ ಪೂರ್ಣ ವಿಶ್ವಾಸ ಮತ್ತು ಭರವಸೆ ವ್ಯಕ್ತಪಡಿಸುವಂತೆ ಈಗಾಗಲೇ ಸಂಸತ್‌ನ್ನು ಕೋರಿದ್ದಾರೆ.ಸಂಸತ್‌ಗೆ ಮಾತ್ರ ಹೊಣೆಗಾರ: ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಅನುಮತಿ ಇಲ್ಲದೇ ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿದ ಸೇನಾ ಮುಖ್ಯಸ್ಥರು ಹಾಗೂ ಐಎಸ್‌ಐ ಮುಖ್ಯಸ್ಥರ ವಿರುದ್ಧ ಪ್ರಧಾನಿ ಟೀಕೆ ಮಾಡಿದ್ದಕ್ಕೆ ಸೇನೆ ಖಾರವಾಗಿ ಪ್ರತಿಕ್ರಿಯೆಗೆ ಪ್ರತ್ಯುತ್ತರ ನೀಡಿರುವ ಗಿಲಾನಿ, ತಾವು ಪಾಕ್‌ನ ಸಂಸತ್‌ಗೆ ಮಾತ್ರ ಹೊಣೆಗಾರರಾಗಿದ್ದು, ಬೇರಾವುದೇ ವ್ಯಕ್ತಿಗಳಿಗೆ ಉತ್ತರಿಸುವ ಅಥವಾ ಹೊಣೆಗಾರರಾಗುವ ಅಗತ್ಯ ಇಲ್ಲ ಎಂದು ಹೇಳಿದ್ದಾರೆ.

 

ಸೇನಾ ಮುಖ್ಯಸ್ಥರು ಮತ್ತು ಐಎಸ್‌ಐ ಮುಖ್ಯಸ್ಥರು ನೇರವಾಗಿ ಸುಪ್ರೀಂ ಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸುವ ಮೂಲಕ ಅಸಾಂವಿಧಾನಿಕವಾಗಿ ಹಾಗೂ ಅಕ್ರಮವಾಗಿ ವರ್ತಿಸಿದ್ದಾರೆ ಎನ್ನುವ ಪ್ರಧಾನಿ ಹೇಳಿಕೆ ಬಗ್ಗೆ ಅಧ್ಯಕ್ಷ ಜರ್ದಾರಿ ಅವರು ಸ್ಪಷ್ಟನೆ ಕೋರಿದ್ದಾರೆ ಎನ್ನುವ ವರದಿಗಳನ್ನು ಇದೇ ಸಂದರ್ಭದಲ್ಲಿ ಗಿಲಾನಿ ಅಲ್ಲಗಳೆದರು.`ನಾವೆಲ್ಲಾ ಜನರಿಂದ ನೇರವಾಗಿ ಆಯ್ಕೆಯಾಗಿದ್ದು, ಸಂವಿಧಾನದ 91ನೇ ವಿಧಿಗೆ ಅನುಗುಣವಾಗಿ ಪ್ರಧಾನಿ, ಸಚಿವರು ಹಾಗೂ ರಾಜ್ಯ ಸಚಿವರು ಸಂಸತ್‌ಗೆ ಹೊಣೆಗಾರರಾಗಿದ್ದು, ಸಂಸತ್‌ಗೆ ಮಾತ್ರ ಉತ್ತರ ನೀಡಬೇಕಾಗಿದೆ~ ಎಂದು ಗಿಲಾನಿ ಸ್ಪಷ್ಟವಾಗಿ ಹೇಳಿದರು.`ಒಂದೊಮ್ಮೆ ಯಾರಿಂದಲಾದರೂ ದೂರುಗಳಿದ್ದರೆ, ಅಂತಹ ದೂರುಗಳಿಗೆ ನಾನು ಉತ್ತರಿಸಲಾರೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗೆ ಉತ್ತರಿಸುವ ಅಗತ್ಯವೂ ಇಲ್ಲ~ ಎಂದು ತಿಳಿಸಿದರು.`ಯಾವುದೇ ಸಂದರ್ಭದಲ್ಲಿ ಸಂಸತ್ ನನ್ನಿಂದ ಉತ್ತರ ಬಯಸಿದರೆ ನನ್ನ ನಿಲುವುಗಳನ್ನು ಸಂಸತ್‌ಗೆ ವಿವರಿಸುತ್ತೇನೆ~ ಎಂದು ಪಂಜಾಬ್ ಪ್ರಾಂತ್ಯದ ವಿಹಾರಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ತಮ್ಮ ಹೇಳಿಕೆಯ ವರದಿಗಳನ್ನು ಅಧ್ಯಕ್ಷರ ಕಾರ್ಯಾಲಯ ತಿರಸ್ಕರಿಸಿದೆ ಎಂದೂ ಅವರು ಹೇಳಿದರು.ಕುತೂಹಲದ ದೃಷ್ಟಿ: ಈ ನಡುವೆ ಸರ್ಕಾರದ ನಿರ್ಣಯವನ್ನು ಸಂಸತ್ ಸ್ವೀಕರಿಸಿದ್ದರೂ, ಸುಪ್ರೀಂಕೋರ್ಟ್‌ನ 17 ಸದಸ್ಯರ ನ್ಯಾಯಪೀಠವು ಮಾಜಿ ಸೇನಾಡಳಿತಗಾರ ಜನರಲ್ ಪರ್ವೇಜ್ ಮುಷರಫ್ ಆಡಳಿತಾವಧಿಯಲ್ಲಿ ರಾಷ್ಟ್ರೀಯ ವ್ಯಾಜ್ಯ ಇತ್ಯರ್ಥ ಸುಗ್ರೀವಾಜ್ಞೆ ಅನ್ವಯ ಕ್ಷಮಾದಾನ ನೀಡಿದ ಉನ್ನತ ವ್ಯಕ್ತಿಗಳ ಭ್ರಷ್ಟಾಚಾರ ಪ್ರಕರಣಗಳನ್ನು ಮತ್ತೆ ವಿಚಾರಣೆಗೆ ಕೈಗೆತ್ತಿಕೊಳ್ಳುವ ನಿರ್ಧಾರ ಕೈಗೊಂಡಿರುವುದು ಕುತೂಹಲಕ್ಕೆ ಎಡೆಮಾಡಿದೆ.ಜೊತೆಗೆ ವಿವಾದಿತ ಮೆಮೊ ಹಗರಣವನ್ನು ತನಿಖೆ ಮಾಡಲು ಸುಪ್ರೀಂಕೋರ್ಟ್ ರಚಿಸಿರುವ ನ್ಯಾಯಾಂಗ ಆಯೋಗವು ಸಹ ಸೋಮವಾರ ವಿಚಾರಣೆ ನಡೆಸಲಿದೆ.  ಈ ಮಧ್ಯೆ, ಮೆಮೊ ಹಗರಣವನ್ನು ಬಹಿರಂಗಪಡಿಸಿ ದೇಶದ ರಾಜಕೀಯ ವಲಯದಲ್ಲಿ ನಡುಕ ಹುಟ್ಟಿಸಿರುವ ಪಾಕ್ ಮೂಲದ ಅಮೆರಿಕನ್ ವಾಣಿಜ್ಯೋದ್ಯಮಿ ಮನ್ಸೂರ್ ಇಜಾಜ್ ಕೂಡಾ ಸೋಮವಾರ ಸುಪ್ರೀಂಕೋರ್ಟ್ ಮುಂದೆ ಹಾಜರಾಗಿ ಹೇಳಿಕೆ ನೀಡಬೇಕಿದ್ದು, ಆದರೆ ಈತನ ಆಗಮನ ಇನ್ನೂ ಪ್ರಶ್ನಾರ್ಥ ಕವಾಗಿದೆ.ಅಧ್ಯಕ್ಷರ ಕಚೇರಿ ಸ್ಪಷ್ಟನೆ: ಮೆಮೊಗೇಟ್ ಹಗರಣದಲ್ಲಿ ಸೇನೆ ನಿರ್ವಹಿಸಿದ ಪಾತ್ರವನ್ನು ಟೀಕಿಸಿರುವ ಪ್ರಧಾನಿ ಗಿಲಾನಿ ವಿರುದ್ಧ ಜರ್ದಾರಿ ಅವರಿಗೆ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಕಯಾನಿ ದೂರು ಸಲ್ಲಿಸಿದ್ದಾರೆ ಎಂಬ ವರದಿಗಳನ್ನು ಅಧ್ಯಕ್ಷರ ವಕ್ತಾರ ಫರ‌್ಹಾತುಲ್ಲಾಹ್ ಬಾಬರ್ ಭಾನುವಾರ ನಿರಾಕರಿಸಿದ್ದಾರೆ.

ಪ್ರತಿಕ್ರಿಯಿಸಿ (+)