ಭಾನುವಾರ, ಜನವರಿ 26, 2020
27 °C

ಪಾಕ್ ಧ್ವಜ ಹಾರಿಸಿದವರು ಆರೆಸ್ಸೆಸ್‌ನವರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಜಾಪುರ: `ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದವರು ಶ್ರೀರಾಮ ಸೇನೆಯವರು ಅಲ್ಲವೇ ಅಲ್ಲ. ಶ್ರೀರಾಮ ಸೇನೆಯಲ್ಲಿ ವಿದ್ಯಾರ್ಥಿ ಘಟಕವೇ ಇಲ್ಲ. ಆದಾಗ್ಯೂ ಈ ಪ್ರಕರಣದಲ್ಲಿ ಬಂಧಿತ ರಾಕೇಶ್ ಮಠದ ಹಿಂದೂ ಜಾಗರಣ ವೇದಿಕೆ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿದ್ದ~ ಎಂದು ಶ್ರೀರಾಮ ಸೇನೆಯ ರಾಜ್ಯ ಘಟಕದ ಸಹ ಸಂಚಾಲಕ ನೀಲಕಂಠ ಕಂದಗಲ್ ಹೇಳಿದರು.`ಬಾಗಲಕೋಟೆಯಲ್ಲಿ 2011ರಲ್ಲಿ ನಡೆದಿದ್ದ ಹಿಂದೂ ಜಾಗರಣ ವೇದಿಕೆಯ 25ನೇ ವರ್ಷಾಚರಣೆ ಕಾರ್ಯಕ್ರಮದ ವೇದಿಕೆಯ ಎದುರು ತಲ್ವಾರ್‌ಗಳನ್ನು ಹಿಡಿದುಕೊಂಡು ರಾಕೇಶ್ ಮಠ ಭಾವಚಿತ್ರ ತೆಗೆಸಿಕೊಂಡಿದ್ದಾನೆ. ಧ್ವಜ ಹಾರಿಸಿದ್ದನ್ನು ಖಂಡಿಸಿ ಸಿಂದಗಿಯಲ್ಲಿ ನಡೆದ ಪ್ರತಿಭಟನೆಯಲ್ಲಿ ಆತ ಆರ್‌ಎಸ್‌ಎಸ್ ಚಡ್ಡಿ ಹಾಕಿಕೊಂಡು ಪಾಲ್ಗೊಂಡಿದ್ದ. ಅದೇ ದಿನ ಅಲ್ಲಿ ಟೈರ್‌ಗಳಿಗೆ ಬೆಂಕಿಯನ್ನೂ ಹಚ್ಚಿದ್ದ~ ಎಂದು ಹೇಳಿ ಅದಕ್ಕೆ ಸಂಬಂಧಿಸಿದ ಭಾವಚಿತ್ರಗಳನ್ನು ಬಿಡುಗಡೆ ಮಾಡಿದರು.`ಈತ ಈ ಸಂಘಟನೆಗಳಲ್ಲಿ ಪಾಲ್ಗೊಂಡ ಮತ್ತಷ್ಟು ದಾಖಲೆಗಳು ನಮ್ಮ ಬಳಿ ಇವೆ. ಕೆಲವೇ ದಿನಗಳಲ್ಲಿ ಅವುಗಳನ್ನೂ ಬಿಡುಗಡೆ ಮಾಡುತ್ತೇವೆ~ ಎಂದು ಶುಕ್ರವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.`ಸಿಂದಗಿಯಲ್ಲಿ ಪಾಕ್ ಧ್ವಜ ಹಾರಿಸಿದವರು ಶ್ರೀರಾಮ ಸೇನೆಯ ವಿದ್ಯಾರ್ಥಿ ಘಟಕದವರು ಎಂದು ಎಸ್ಪಿ ಹೇಳಿದ್ದಾರೆ. ಕರ್ನಾಟಕದ ಎಲ್ಲಿಯಾದರೂ ನಮ್ಮ ಸಂಘಟನೆಯ ವಿದ್ಯಾರ್ಥಿ ಘಟಕ ಇದೆಯೇ ಎಂಬುದನ್ನು ಹಾಗೂ ಬಂಧಿತರ ಬಳಿ ನಮ್ಮ ಸಂಘಟನೆಗೆ ಸಂಬಂಧಿಸಿದ ದಾಖಲೆ, ಗುರುತಿನ ಚೀಟಿಗಳಿವೆಯೇ ಎಂಬುದನ್ನು ಬಹಿರಂಗ ಪಡಿಸಲಿ~ ಎಂದು ಸವಾಲು ಹಾಕಿದರು.`ನಮ್ಮಲ್ಲಿ ವಿದ್ಯಾರ್ಥಿ ಘಟಕವೇ ಇಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಲ್ಪಿತ ಹೇಳಿಕೆ ನೀಡಿದ್ದಾರೆ. ಈ ನಾಟಕದ ಹಿಂದೆ ಇರುವ ನಿರ್ದೇಶಕರು ಯಾರು ಎಂಬುದನ್ನು ಬಹಿರಂಗ ಪಡಿಸಲಿ. ಪ್ರಮೋದ್ ಮುತಾಲಿಕ್ ಅವರ ಹೆಸರು ಕೆಡಿಸಲಿಕ್ಕೆ ಹಾಗೂ ಈ ಸಂಘಟನೆಯನ್ನು ನಿರ್ನಾಮ ಮಾಡಲು ರಾಜಕೀಯ ಪಕ್ಷ ಮತ್ತು ಸರ್ಕಾರದ ಶಕ್ತಿ ಬೆನ್ನು ಬಿದ್ದಿದೆ.  ಈ ಕುತಂತ್ರದಿಂದಲೇ ನಮ್ಮ ಸಂಘಟನೆಯನ್ನು ಬಲಿಪಶುಮಾಡಲಾಗುತ್ತಿದೆ~ ಎಂದು ದೂರಿದರು.`ಬಂಧಿತರು ಯಾವ ಸಂಘಟನೆಯ ಕಾರ್ಯಕರ್ತರು? ಆತ ಯಾವ ಸಂಘಟನೆಯ ಸಭೆಯಲ್ಲಿ ಪಾಲ್ಗೊಂಡಿದ್ದ? ಎಂಬುದು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹಾಗೂ ತನಿಖಾ ತಂಡದ ಅಧಿಕಾರಿಗಳಿಗೆ ಗೊತ್ತಿದೆ. ಶ್ರೀರಾಮ ಸೇನೆ ಮೇಲೆ ಮಾಡಿರುವ ಆರೋಪವನ್ನು ಅವರು 24 ಗಂಟೆಗಳಲ್ಲಿ ವಾಪಸ್ ಪಡೆಯಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸುತ್ತೇವೆ~ ಎಂದು ಎಚ್ಚರಿಸಿದರು.`ನಾವು ದೇಶಭಕ್ತರು. ನಮಗೆ ದೇಶದ್ರೋಹಿಗಳ ಪಟ್ಟ ಕಟ್ಟುವ ಹುನ್ನಾರ ನಡೆಯುತ್ತಿದ್ದರೂ ನಾವು ದೃತಿಗೆಟ್ಟಿಲ್ಲ. ಹಿಂದೂ ಸಂಘಟನೆಗಳು ಎಂದೂ ದೇಶದ್ರೋಹ ಕೆಲಸ ಮಾಡುವುದಿಲ್ಲ. ಆರ್.ಎಸ್.ಎಸ್. ಸಹ ಅದನ್ನು ಕಲಿಸಲ್ಲ.

 

ಇದು ಅತ್ಯಂತ ಸೂಕ್ಷ್ಮ ವಿಷಯ. ರಾಜ್ಯ ಸರ್ಕಾರ ಈ ಪ್ರಕರಣದ ಮರು ತನಿಖೆ ನಡೆಸಬೇಕು. ನಿಜ ಆರೋಪಿಗಳು ಯಾರು ಎಂಬುದನ್ನು ಪತ್ತೆ ಹಚ್ಚಿ ಅವರ ಹಿನ್ನೆಲೆ ಬಹಿರಂಗ ಪಡಿಸಬೇಕು. ಬಂಧಿತರು ನಮ್ಮವರಲ್ಲ. ನಮ್ಮವರು ತಪ್ಪು ಮಾಡಿದ್ದರೂ ನಾವು ಅವರನ್ನು ಸಮರ್ಥಿಸುವುದಿಲ್ಲ~ ಎಂದು ಹೇಳಿದರು.ಶ್ರೀರಾಮ ಸೇನೆಯ ಪದಾಧಿಕಾರಿಗಳಾದ ಅಶೋಕ ಮಠ, ಗೋವಿಂದ ರಜಪೂತ, ಅರುಣ, ಮಹೇಶ ದೊಡಮನಿ, ಸತೀಶ ಪಾಟೀಲ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು.

ಪ್ರತಿಕ್ರಿಯಿಸಿ (+)