ಶುಕ್ರವಾರ, ಮೇ 27, 2022
30 °C

ಪಾಕ್ ನೂತನ ಪ್ರಧಾನಿ ಆಯ್ಕೆಗೆ ನಾಳೆ ವಿಶೇಷ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್ (ಪಿಟಿಐ, ಐಎಎನ್‌ಎಸ್): ಯೂಸುಫ್ ರಜಾ ಗಿಲಾನಿ ಅವರ ಪ್ರಧಾನಿ ಪಟ್ಟವನ್ನು ಪಾಕಿಸ್ತಾನದ ಸುಪ್ರೀಂಕೋರ್ಟ್ ಮಂಗಳವಾರ ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಹೊಸ ಪ್ರಧಾನಿ ಸ್ಥಾನಕ್ಕೆ ತನ್ನ ಅಭ್ಯರ್ಥಿಯನ್ನಾಗಿ ಹಿರಿಯ ನಾಯಕ ಮುಖ್ದೂಮ್ ಶಹಾಬುದ್ದೀನ್ ಅವರ ಹೆಸರನ್ನು ಬುಧವಾರ ಪಾಕಿಸ್ತಾನ ಪೀಪುಲ್ಸ್ ಪಾರ್ಟಿ (ಪಿಪಿಪಿ) ಸಂಸದೀಯ ಸಮಿತಿ ಪ್ರಕಟಿಸಿದೆ. ಇಲ್ಲಿ ನಡೆದ ಪಿಪಿಪಿ ಸಂಸದೀಯ ಸಮಿತಿ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಗಿದೆ.ಈ ಕುರಿತು ಪಕ್ಷದಿಂದ ಅಧಿಕೃತ ಹೇಳಿಕೆ ಹೊರಬಾರದಿದ್ದರೂ ಶಹಾಬುದ್ದೀನ್ ಅವರೇ ಪ್ರಧಾನಿ ಸ್ಥಾನದ ಅಭ್ಯರ್ಥಿಯಾಗಿದ್ದಾರೆ ಎಂದು ಟಿವಿ ವಾಹಿನಿಗಳು ವರದಿಮಾಡಿವೆ.ಪಂಜಾಬ್ ಪ್ರಾಂತ್ಯದ ರಹೀಂ ಯಾರ್ ಖಾನ್ ಜಿಲ್ಲೆಯಿಂದ ಸಂಸತ್‌ಗೆ ಆಯ್ಕೆಯಾಗಿರುವ ಶಹಾಬುದ್ದೀನ್ ಅವರು ಗಿಲಾನಿ ಸಂಪುಟದಲ್ಲಿ ಜವಳಿ ಖಾತೆ ಸಚಿವರಾಗಿದ್ದರು.ಹೊಸ ಪ್ರಧಾನಿ ಆಯ್ಕೆಗೆ ಶುಕ್ರವಾರ ಸಂಜೆ 5-30ಕ್ಕೆ ರಾಷ್ಟ್ರೀಯ ಸಂಸತ್ತಿನ ವಿಶೇಷ ಅಧಿವೇಶನ ನಡೆಯಲಿದೆ. ಚುನಾವಣೆಗಾಗಿ ಅಭ್ಯರ್ಥಿಗಳಿಂದ ಗುರುವಾರ ನಾಮಪತ್ರಗಳು ಸಲ್ಲಿಕೆಯಾಗಲಿವೆ.ಮಾಜಿ ರಕ್ಷಣಾ ಸಚಿವ ಚೌಧರಿ ಅಹಮ್ಮದ್ ಮುಖ್ತಾರ್, ಮಾಜಿ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್, ಲಾಹೋರ್ ಮೂಲದ ಪಿಪಿಪಿ ನಾಯಕಿ ಸಮೀನಾ ಘುಕ್ರಿ ಅವರ ಹೆಸರುಗಳೂ ಪರಿಗಣನೆಗೆ ಬಂದಿವೆ ಎನ್ನಲಾಗಿದೆ.ಅಧಿಸೂಚನೆ: ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ, ಸಂಪುಟ ಕಾರ್ಯಾಲಯವು, ಗಿಲಾನಿ ಹಾಗೂ ಅವರ 63 ಸಚಿವರ ಸಂಪುಟವನ್ನು ಅನೂರ್ಜಿತಗೊಳಿಸಿ ಅಧಿಸೂಚನೆ ಹೊರಡಿಸಿದೆ. ಜೂನ್ 19 ದಿನಾಂಕದಿಂದ ಅನ್ವಯವಾಗುವಂತೆಯೇ ಅಧಿಸೂಚನೆ ಪ್ರಕಟವಾಗಿದೆ.`ಗಿಲಾನಿ ಅವರ ಅಧಿಕಾರಾವಧಿ ಏಪ್ರಿಲ್ 26ಕ್ಕೇ ಕೊನೆಗೊಂಡಿದೆ~ ಎಂದೂ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದ್ದು, ಇದನ್ನು ರಾಷ್ಟ್ರದ ವಿಶೇಷ ಸಂದರ್ಭಗಳ ಗೆಜಿಟಿಯರ್‌ನಲ್ಲಿ ಪ್ರಕಟಿಸಲಾಗುತ್ತದೆ.

ತೀರ್ಪುಗಳ ಉಲ್ಲೇಖ: ಗಿಲಾನಿ ಅವರನ್ನು ಅನರ್ಹಗೊಳಿಸಿ ನೀಡಿದ ತೀರ್ಪಿಗೆ ಸಮರ್ಥನೆಯಾಗಿ, ಭಾರತದ ಸುಪ್ರೀಂ ಕೋರ್ಟ್‌ನ ಎರಡು ತೀರ್ಪುಗಳನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್ ಉಲ್ಲೇಖಿಸಿದೆ.ಇಫ್ತಿಕಾರ್ ಚೌಧರಿ ನೇತೃತ್ವದ ಮೂವರು ನ್ಯಾಯಮೂರ್ತಿಗಳ ಪೀಠ ನೀಡಿದ ನಾಲ್ಕು ಪುಟಗಳ ತೀರ್ಪಿನಲ್ಲಿ, ಒಟ್ಟು ಎಂಟು ತೀರ್ಪುಗಳನ್ನು ಉಲ್ಲೇಖಿಸಲಾಗಿದೆ. ಇದರಲ್ಲಿ ಆರು ತೀರ್ಪುಗಳು ಪಾಕಿಸ್ತಾನದ ವಿವಿಧ ನ್ಯಾಯಾಲಯಗಳಲ್ಲಿ ಪ್ರಕಟವಾಗಿದ್ದರೆ, ಉಳಿದ ಎರಡು ತೀರ್ಪುಗಳು ಭಾರತದ ಸುಪ್ರೀಂಕೋರ್ಟ್ ಪ್ರಕಟಿಸಿದ ತೀರ್ಪುಗಳಾಗಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.