ಬುಧವಾರ, ಏಪ್ರಿಲ್ 21, 2021
30 °C

ಪಾಕ್ ಪರಮಾಣು ಶಸ್ತ್ರಾಸ್ತ್ರದ ಮೇಲೆ ಭಯೋತ್ಪಾದಕರ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಷಿಂಗ್ಟನ್ (ಪಿಟಿಐ): ಪಾಕಿಸ್ತಾನದಲ್ಲಿರುವ ಹಲವು ಉಗ್ರರ ಗುಂಪುಗಳು ಅಲ್ಲಿರುವ ಪರಮಾಣು ಶಸ್ತ್ರಾಸ್ತ್ರಗಳ ಮೇಲೆ ಕಣ್ಣಿಟ್ಟಿದ್ದು, ಈ ಬಗ್ಗೆ ಅಮೆರಿಕ ತೀವ್ರ ಎಚ್ಚರಿಕೆ ವಹಿಸುವ ಅಗತ್ಯವಿದೆ ಎಂದು ಅಮೆರಿಕ ಸೇನೆಯ ಮುಖ್ಯ ಕಮಾಂಡರ್ ಸಲಹೆ ನೀಡಿದ್ದಾರೆ. ‘ಪಾಕ್‌ನ ಪಂಜಾಬ್ ಪ್ರಾಂತ್ಯದಲ್ಲಿ ನೆಲೆಸಿರುವ ಅನೇಕ ಸಣ್ಣಪುಟ್ಟ ಉಗ್ರರ ಗುಂಪುಗಳು ಪಾಕ್ ಮತ್ತು ಆಫ್ಘಾನ್ ಗಡಿಯಲ್ಲಿರುವ ಬುಡಕಟ್ಟು ಪ್ರದೇಶದಲ್ಲಿ ಬಹು ಚಟುವಟಿಕೆಯಿಂದ ಕೂಡಿವೆ. ಮಾತ್ರವಲ್ಲದೆ ಪರಮಾಣು ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲು ಸಂಚು ನಡೆಸುತ್ತಿವೆ ಎಂದು ಆಫ್ಘಾನಿಸ್ತಾನದಲ್ಲಿರುವ ನ್ಯಾಟೋ ಪಡೆಯ ಜನರಲ್ ಕೂಡ ಆಗಿರುವ ಡೇವಿಡ್ ಪೆಟ್ರಾಯಸ್ ಹೇಳಿದ್ದಾರೆ ಎಂದು ಅಮೆರಿಕದ ರಕ್ಷಣಾ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.‘ಈ ಸಣ್ಣಪುಟ್ಟ ಉಗ್ರರ ಗುಂಪುಗಳು ಪ್ರಮುಖ ಸಂಘಟನೆಗಳಾದ ಅಲ್ ಖೈದಾ ಮತ್ತು ತಾಲಿಬಾನ್‌ಗಳೊಂದಿಗೆ ನಿಕಟ ಒಡನಾಟ ಹೊಂದಿವೆ. ಹಾಗಾಗಿ ಈ ಭಯೋತ್ಪಾದಕರಿಗೆ ಪರಮಾಣು ಶಸ್ತ್ರಾಸ್ತ್ರಗಳೇನಾದರೂ ದೊರಕಿದರೆ ಅದು ಮಾನವರ ಜೀವಕ್ಕೆ ಕಂಟಕವಾಗುವುದು ನಿಶ್ಚಿತ. ಪಾಕ್ ಸರ್ಕಾರ ತನ್ನ ಬಳಿ ಇರುವ ಪರಮಾಣು ಶಸ್ತ್ರಾಸ್ತ್ರಗಳು ಸುರಕ್ಷಿತವಾಗಿವೆ ಎಂದು ಎಷ್ಟೇ ಹೇಳಿದರೂ ಸಹ ಈ ಬಗ್ಗೆ ಅಮೆರಿಕ ನಿಗಾ ಇಡಬೇಕಾದ ಅಗತ್ಯವಿದೆ’ ಎಂದು ಪೆಟ್ರಾಯಸ್ ಸೆನೆಟ್‌ನ ಸೇನಾ ಸೇವಾ ವಿಭಾಗದ ಸಮಿತಿಗೆ ತಿಳಿಸಿದ್ದಾರೆ. ‘ಪಾಕಿಸ್ತಾನದ ಅನೇಕ ಬಡುಕಟ್ಟು ಪ್ರದೇಶದಲ್ಲಿ ಸರ್ಕಾರಿ ವ್ಯವಸ್ಥೆಯೇ ಇಲ್ಲ. ಇಂತಹ ಪ್ರದೇಶಗಳು ಈ ಉಗ್ರರ ಗುಂಪುಗಳಿಗೆ ಪ್ರಶಸ್ತ ಸ್ಥಳಗಳಾಗಿವೆ. ಈ ನೆಲೆಗಳಿಂದ ಆಫ್ಘಾನಿಸ್ತಾನಕ್ಕೂ ಯುದ್ಧ ಭೀತಿ ಇದೆ. 2014ರ ಹೊತ್ತಿಗೆ ಆಫ್ಘಾನ್‌ನಿಂದ ಅಮೆರಿಕ ತನ್ನ ಪಡೆಗಳನ್ನು ಹಿಂದಕ್ಕೆ ಕರೆಯಿಸಿಕೊಳ್ಳುವ ಇಚ್ಛೆಯನ್ನು ಈಗಾಗಲೇ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿನ ಇಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಅಮೆರಿಕವು ಪಾಕ್ ರಕ್ಷಣೆ ಪಡೆಗಳ ಜೊತೆಗೂಡಿ ಜಂಟಿ ಸೇನಾ ನೆಲೆಯನ್ನು ಸ್ಥಾಪಿಸುವ ಸಾಧ್ಯತೆ ಬಗ್ಗೆ ಆಲೋಚಿಸುವ ಅಗತ್ಯವಿದೆ’ ಎಂದು ಪೆಟ್ರಾಯಸ್ ಸಲಹೆ ನೀಡಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.