ಬುಧವಾರ, ಮೇ 18, 2022
23 °C

ಪಾರದರ್ಶಕ ಕಾರ್ಯನಿರ್ವಹಣೆ: ಅಣ್ಣಾ ತಂಡದ ಸಮರ್ಥನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ತಮ್ಮ ಕಾರ್ಯ ನಿರ್ವಹಣೆ ಪಾರದರ್ಶಕವಾಗಿದೆ ಎಂಬುದಾಗಿ ಭಾನುವಾರ ಇಲ್ಲಿ ಪ್ರತಿಪಾದಿಸಿರುವ ಅಣ್ಣಾ ತಂಡವು ಅಣ್ಣಾ ಹಜಾರೆ ಅವರ ಚಳವಳಿ ಕಾಲದಲ್ಲಿ ಸಂಗ್ರಹಿಸಲಾದ ದೇಣಿಗೆಯನ್ನು ಅರವಿಂದ ಕೇಜ್ರಿವಾಲ್ ಸ್ವಂತ ಟ್ರಸ್ಟ್ ಗೆ ಬಳಸಿಕೊಂಡಿದ್ದಾರೆ ಎಂಬ ಸ್ವಾಮಿ ಅಗ್ನಿವೇಶ್ ಅವರ ಆರೋಪವನ್ನು ಅಲ್ಲಗಳೆದಿದೆ.ತಂಡದಿಂದ ಹೊರಹಾಕಲಾಗಿರುವ ಅಗ್ನಿವೇಶ್ ಅವರು ~ಸಿಟ್ಟಿನ~ ಹಿನ್ನೆಲೆಯಲ್ಲಿ ಇಂತಹ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಅಣ್ಣಾ ತಂಡ ಹೇಳಿದೆ.ಅಗ್ನಿವೇಶ್ ಅವರು ಮಾಡಿದ ಎಲ್ಲಾ ಆರೋಪಗಳನ್ನೂ ಅಲ್ಲಗಳೆದ ಅಣ್ಣಾ ತಂಡ ಹಾಗೂ ಕೇಜ್ರಿವಾಲ್ ಅವರ ನಿಕಟವರ್ತಿ ಮನಿಶ್ ಸಿಸೋಡಿಯ ಅವರು ~ನಮ್ಮ ಖಾತೆಗಳು ಈಗಾಗಲೇ ವೆಬ್ ಸೈಟ್ ನಲ್ಲಿ ಇವೆ. ನಾವು ಕಳೆದ 6 ತಿಂಗಳ ಅವಧಿಯಲ್ಲಿ ವಿಶೇಷ ಆಡಿಟ್ ಮಾಡಿಸಿದ್ದೇವೆ ಮತ್ತು ತಿಂಗಳ ಒಳಗಾಗಿ ವಿವರಗಳನ್ನು ವೆಬ್ ಸೈಟ್ ನಲ್ಲಿ ಹಾಕಲಿದ್ದೇವೆ~ ಎಂದು ಹೇಳಿದರು.~ಅಗ್ನಿವೇಶ್ ಅವರ ಬಗ್ಗೆ ನಮಗೆ ವೈರತ್ವ ಇಲ್ಲ. ಅವರು ಸಿಟ್ಟಿನ ಭರದಲ್ಲಿ ಏನೋ ಹೇಳಿದ್ದಾರೆ. ಹಿರಿಯರು ಹೇಳಿದ್ದಕ್ಕೆ ವಿರುದ್ಧ ಆಡುವುದು ನಮ್ಮ ಸಂಪ್ರದಾಯವಲ್ಲ. ಅವರು ಒಳ್ಳೆಯ ವ್ಯಕ್ತಿ ಮತ್ತು ನಾವೆಲ್ಲರೂ ಅವರನ್ನು ಗೌರವಿಸುತ್ತೇವೆ~ ಎಂದು ಸಿಸೋಡಿಯ ನುಡಿದರು.ಅಣ್ಣಾ ಹಜಾರೆ ಅವರ ಚಳವಳಿಗಾಗಿ ಸಂಗ್ರಹಿಸಲಾಗಿದ್ದ ಹಣವನ್ನು ಅರವಿಂದ ಕೇಜ್ರಿವಾಲ್ ಅವರು ನಡೆಸುವ ಟ್ರಸ್ಟ್ ನಲ್ಲಿ ಠೇವಣಿ ಇಡಲಾಗಿತ್ತು. ಈ ಟ್ರಸ್ಟ್ ನಲ್ಲಿ ತಂಡದ ಪ್ರಮುಖರ ಹೆಸರುಗಳಿರಲಿಲ್ಲ ಎಂದು ಹೇಳಿದ್ದ ಅಗ್ನಿವೇಶ್, ಸುಮಾರು 80 ಲಕ್ಷ ರೂಪಾಯಿಗಳಿಗೂ ಹೆಚ್ಚಿನ ಹಣವನ್ನು ಕೇಜ್ರಿವಾಲ್ ಅವರು ಸ್ವಂತ ಟ್ರಸ್ಟ್ ಗೆ ಬಳಸಿಕೊಂಡಿದ್ದಾರೆ ಎಂದು ಆಪಾದಿಸಿದ್ದರು.

ಅಣ್ಣಾ ತಂಡದ ವಿರುದ್ದ ಆರೋಪ ನಾಚಿಕೆಗೇಡು: ವರುಣ್ ಗಾಂಧಿನವದೆಹಲಿ (ಐಎಎನ್‌ಎಸ್): ಸಾರ್ವಜನಿಕರ ದೇಣಿಗೆ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರ ತಂಡದ ವಿರುದ್ದ ಆರೋಪ ಮಾಡುತ್ತಿರುವುದು `ನಾಚಿಕೆಗೇಡು~ ಎಂದು ಬಿಜೆಪಿ ಸಂಸದ ವರುಣ್ ಗಾಂಧಿ ಭಾನುವಾರ ತಮ್ಮ ಟ್ವಿಟರ್‌ನಲ್ಲಿ ಬರೆದಿದ್ದಾರೆ.ಅಣ್ಣಾ ತಂಡಕ್ಕೆ ತಮ್ಮ ಬೆಂಬಲ ಘೋಷಿಸಿರುವ ವರುಣ್ `ಅಣ್ಣಾ ತಂಡದ ಮೇಲೆ ಯೋಜಿತ ರೀತಿಯಲ್ಲಿ ಆಪಾದನೆಗಳನ್ನು ಮಾಡುತ್ತಿರುವುದು ಅವಮಾನಕರ. ನಾವೆಲ್ಲರೂ ಒಗ್ಗಟ್ಟಾಗಿ `ಭ್ರಷ್ಟಾಚಾರ ವಿರೋಧಿ ಚಳವಳಿ~ ಮೇಲಿನ ನಿಂದನೆಯನ್ನು ವಿರೋಧಿಸಬೇಕು~ ಟ್ವಿಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.