ಸೋಮವಾರ, ಜೂನ್ 14, 2021
21 °C

ಪಾರು ಪರಿ

ಡಿ.ಕೆ.ರಮೇಶ್ Updated:

ಅಕ್ಷರ ಗಾತ್ರ : | |

`ಯಶಸ್ಸಿನ ಸೂತ್ರಗಳಾವುವು?~ ಎಂಬ ತೀಕ್ಷ್ಣ ಪ್ರಶ್ನೆ ಎತ್ತಿದರು ಮಲಯಾಳಂ ಚಿತ್ರರಂಗದ ಕುಡಿ ಪಾರ್ವತಿ ಮೆನನ್. ಸೋಲು ಗೆಲುವುಗಳ ಬಗ್ಗೆ ಅವರಿಗೆ ಭಯವಿಲ್ಲ. ಗಲ್ಲಾಪೆಟ್ಟಿಗೆ ಯಶಸ್ಸಿಗಿಂತಲೂ ಅವರಿಗೆ ಪ್ರೇಕ್ಷಕರ ಪ್ರೀತಿ ಮುಖ್ಯ.

 

ಮೈ ತೋರಿಸುವುದಕ್ಕಿಂತಲೂ ಮನಸ್ಸಿನಲ್ಲಿ ಉಳಿಯುವಂತಹ ಪಾತ್ರಗಳಲ್ಲಿ ಅಭಿನಯಿಸುವುದು ಮುಖ್ಯ. `ಮಿಲನ~, `ಮಳೆ ಬರಲಿ ಮಂಜೂ ಇರಲಿ~ ಹಾಗೂ `ಪೃಥ್ವಿ~ ಚಿತ್ರಗಳ ಮೂಲಕ ಕನ್ನಡ ಪ್ರೇಕ್ಷಕರ ಗಮನ ಸೆಳೆದ ಅವರಿಗೆ ಈಗ `ಅಂದರ್ ಬಾಹರ್~ನಲ್ಲಿ ನಟಿಸುವ ಅವಕಾಶ.ನಟ ಶಿವರಾಜ್‌ಕುಮಾರ್ ಪತ್ನಿಯಾಗಿ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವ್ಯಕ್ತಿಯ ವೈರುಧ್ಯಗಳನ್ನು ಚಿತ್ರಿಸುವ ಜತೆಗೆ ಕೌಟುಂಬಿಕ ಸಂಬಂಧಗಳನ್ನು ಗಾಢವಾಗಿ ಕಟ್ಟಿಕೊಡುವ ಚಿತ್ರವಂತೆ ಇದು.

 

ಚಿತ್ರದಲ್ಲಿ ಅವರ ಮೇಕಪ್ ಮಾಗಿದೆ. ಪ್ರೇಯಸಿಯಾಗಿ ಕಾಲೇಜು ಹುಡುಗಿಯಾಗಿ ಕಾಣಿಸಿಕೊಂಡಿದ್ದ ಆಕೆಯ ಪಾಲಿಗೆ ಇದೊಂದು ವಿಭಿನ್ನ ಪಾತ್ರ. ಗೃಹಿಣಿಗೆ ತಕ್ಕಂಥ ಮೇಕಪ್ ಚಿತ್ರದಲ್ಲಿದೆ.ಉತ್ತಮ ಕಥೆ ಇರುವ ಕಾರಣ ಅವರು ಪಾತ್ರವನ್ನು ಸಲೀಸಾಗಿ ಒಪ್ಪಿದ್ದಾರೆ. ಇಲ್ಲಿ ಅವರದು ಕೇವಲ ಬಂದು ಹೋಗುವ ಪಾತ್ರ ಅಲ್ಲವಂತೆ. ಕತೆಯುದ್ದಕ್ಕೂ ಅವರು ಕಾಣಿಸಿಕೊಳ್ಳುವರಂತೆ. `ಅಂದರ್ ಬಾಹರ್~ ತಮಗೆ ಕನ್ನಡ ಚಿತ್ರರಂಗದಲ್ಲಿ ಮತ್ತಷ್ಟು ಅವಕಾಶಗಳನ್ನು ಕಲ್ಪಿಸಲಿದೆ ಎಂಬ ಆಶಯ ಅವರಲ್ಲಿದೆ.ಒಂದು ಚಿತ್ರವನ್ನು ಪೂರ್ಣಗೊಳಿಸಿದ ನಂತರವೇ ಮತ್ತೊಂದರತ್ತ ಗಮನ ಹರಿಸುವ ಅವರು ಕಂಡದ್ದನ್ನೆಲ್ಲ ಒಪ್ಪುವವರಲ್ಲ. ಹೀಗಾಗಿ ಬಂದ ಅನೇಕ ಅವಕಾಶಗಳನ್ನು ಅಲ್ಲಗಳೆದಿದ್ದಾರೆ.

 

`ಒಂದೇ ಬಾರಿಗೆ ಐದಾರು ಚಿತ್ರಗಳಲ್ಲಿ ನಟಿಸುವುದು; ಯಾವುದರಲ್ಲೂ ತನ್ಮಯಳಾಗಿ ತೊಡಗಿಸಿಕೊಳ್ಳದೇ ಹೊಗುವುದು ನನಗಿಷ್ಟವಿಲ್ಲ. ಒಂದೇ ಚಿತ್ರವನ್ನು ಅಚ್ಚುಕಟ್ಟಾಗಿ ಮಾಡಬೇಕು.ಅದು ದುಡ್ಡು ಹಾಕಿದವರಿಗೂ ಪಾತ್ರಕ್ಕೆ ಆಯ್ಕೆ ಮಾಡಿದವರಿಗೂ ಮೆಚ್ಚುಗೆಯಾಗಬೇಕು~ ಎಂಬ ನೀತಿಪಾಠ ಅವರಿಂದ. ಅಂದರ್ ಬಾಹರ್ ಪೂರ್ಣಗೊಂಡ ಬಳಿಕ ಅವರು ಮಲಯಾಳಂ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 

 

ಅದಾದ ಬಳಿಕ ಅದೇ ಭಾಷೆಯ ಮತ್ತೊಂದು ಚಿತ್ರ. ಎರಡೂ ಅವರಿಗೆ ಮಹತ್ವದ ಚಿತ್ರಗಳು. ಮಾತು ತಮಿಳು ಚಿತ್ರರಂಗದತ್ತ ಹೊರಳಿತು. `ಪೂ~ ಅವರು ಅಭಿನಯಿಸಿದ ತಮಿಳು ಚಿತ್ರ. ಆ ಬಳಿಕ ಅಲ್ಲಿಂದ ಬಂದ ಎರಡು ಅವಕಾಶಗಳನ್ನು ಅವರು ನಿರಾಕರಿಸಿದರು.

 

ಒಂದು ಚಿತ್ರದಲ್ಲಿ `ಪೂ~ನಂಥದ್ದೇ ಪಾತ್ರದಲ್ಲಿ ಅಭಿನಯಿಸಬೇಕಾಗಿತ್ತು. ಮತ್ತೊಂದರಲ್ಲಿ ಅದಕ್ಕೆ ತದ್ವಿರುದ್ಧವಾದ, ಗ್ಲಾಮರ್ ತುಂಬಿ ತುಳುಕುವ ಪಾತ್ರ. ಹೀಗಾಗಿಯೇ ಎರಡಕ್ಕೂ ಗುಡ್ ಬೈ ಹೇಳಿದರು.ಈ ಮಧ್ಯೆ ಅವರ ಕನ್ನಡ ಬಹಳಷ್ಟು ಪಳಗಿದೆ. ಕಂಠಪಾಠ ಒಪ್ಪಿಸುವುದಷ್ಟೇ ಅನ್ಯಭಾಷೆಯ ಕಲಾವಿದರ ಕೆಲಸವಾಗಬಾರದು ಎಂದು ಬಲವಾಗಿ ನಂಬಿರುವ ಅವರು ಕನ್ನಡವನ್ನು ಪ್ರಾಮಾಣಿಕವಾಗಿ ಕಲಿಯುತ್ತಿದ್ದಾರೆ.ಇದಕ್ಕೆ ಸ್ಫೂರ್ತಿ ನೀಡಿದ್ದು `...ಮಂಜೂ ಇರಲಿ~ ಚಿತ್ರದ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್. ಪಾತ್ರಕ್ಕೆ ದನಿ ನೀಡಲಾಗದೆ ಅಸಹಾಯಕತೆ ವ್ಯಕ್ತಪಡಿಸಿದಾಗ ವಿಜಯಲಕ್ಷ್ಮಿ ಸಹಾಯಕ್ಕೆ ಬಂದರು.ಹಿಂದಿ ಇಂಗ್ಲಿಷ್‌ನಲ್ಲಿ ಮಾತನಾಡುವ ಬದಲು ಕನ್ನಡದಲ್ಲೇ ಮಾತನಾಡುವಂತೆ ಪ್ರೇರೇಪಿಸಿದರು. ಮಲಯಾಳಂ ಮರೆತೇ ಹೋಗುವಷ್ಟು ಕನ್ನಡದಲ್ಲಿ ಮಾತನಾಡಿದರು. ಈಗ ಚಿತ್ರಗಳಿಗೆ ಸ್ವತಃ ಡಬ್ ಮಾಡಬಲ್ಲೆ ಎಂಬ ಆತ್ಮವಿಶ್ವಾಸ ಅವರಲ್ಲಿ ಮೂಡಿದೆ.ಅಂದಹಾಗೆ ಪಾರ್ವತಿ ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಅವರು ಚಿತ್ರರಂಗದಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಕೊಳ್ಳದೇ ಇರಲು ಇದೂ ಒಂದು ಕಾರಣ. ಮೊದಲು ಓದು. ನಂತರ ವೃತ್ತಿ ಪ್ರವೃತ್ತಿ ಎನ್ನುತ್ತಾರೆ ಅವರು. ಸಾಹಿತ್ಯದ ವಿದ್ಯಾರ್ಥಿಯಾಗಿರುವುದು ಉದ್ಯಮದಲ್ಲಿ ಅನೇಕ ರೀತಿಯಲ್ಲಿ ಸಹಾಯ ಮಾಡಿದೆ.ಬೇರೆ ಬೇರೆ ಸಂಸ್ಕೃತಿಗಳನ್ನು ಪರಿಚಯ ಮಾಡಿಕೊಳ್ಳಲು ಅವಕಾಶ ದೊರೆತಿದೆಯಂತೆ.ಕಲಾವಿದರು ಸಂಶೋಧಕರೂ ಆಗಿರಬೇಕು. ಆಗ ಮಾತ್ರ ಚಿತ್ರದಲ್ಲಿ ಜೀವಂತವಾಗಿ ತೊಡಗಿಕೊಳ್ಳಲು ಸಾಧ್ಯ ಎಂಬುದು ಅವರ ಬಲವಾದ ವಾದ. `ಮಿಲನ~ದಲ್ಲಿ ಪುನೀತ್ ಅವರೊಂದಿಗೆ ಕಾಣಿಸಿಕೊಂಡಿದ್ದ ಪಾರ್ವತಿ ಅವರಿಗೆ ಈಗ ಡಾ.ರಾಜ್ ಕುಟುಂಬದ ಮತ್ತೊಬ್ಬ ಸದಸ್ಯರ ಜತೆಗೆ ನಟಿಸುವ ಅವಕಾಶ ದೊರೆತಿರುವುದು ಸಂತಸ ತಂದಿದೆಯಂತೆ.`ಶಿವರಾಜ್ ಕುಮಾರ್ ಒಬ್ಬ ಅನುಭವಿ ನಟ. ಅವರು ಪಾತ್ರವನ್ನು ಅನುಭವಿಸಿ ನಟಿಸುತ್ತಾರೆ~ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.`ಮಿಲನ~ ಹಾಗೂ `...ಮಂಜೂ ಬರಲಿ~ ಚಿತ್ರಗಳಲ್ಲಿ ತಮ್ಮ ಪ್ರತಿಭೆಯ ಅನಾವರಣಕ್ಕೆ ಹೆಚ್ಚು ಒತ್ತು ದೊರೆಯಿತು ಎನ್ನುವ ಅವರಿಗೆ ವಿಭಿನ್ನ ಪಾತ್ರಗಳು ಬಹಳ ಇಷ್ಟ. ಅಂತಹ ಅವಕಾಶಗಳು ಕನ್ನಡ ಚಿತ್ರರಂಗದಿಂದ ಹೆಚ್ಚು ಹೆಚ್ಚು ದೊರೆಯುವಂತಾಗಲಿ ಎಂಬ ಬಯಕೆಯೊಂದಿಗೆ ಅವರು ಮಾತು ಪೂರ್ಣಗೊಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.