ಬುಧವಾರ, ಜನವರಿ 29, 2020
28 °C

ಪಾಲಿಕೆ ಚುನಾವಣೆ: ಪಕ್ಷಾತೀತ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ನಗರಪಾಲಿಕೆಗೆ ಆರು ತಿಂಗಳಲ್ಲಿ ಚುನಾವಣೆ ನಡೆಸಲು ಪಕ್ಷಾತೀತ ವಿರೋಧ ವ್ಯಕ್ತವಾಗಿದೆ.

ಪಾಲಿಕೆ ಸದಸ್ಯರನ್ನು ಪೂರ್ಣಾವಧಿಗೆ ಮುಂದು­ವರಿ­ಸಲು ನೆರವಾಗುವ ಕಾನೂನು ತಿದ್ದುಪಡಿ ತರುವಂತೆ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸ­ಲಾಗುವುದು ಎಂದು ಶಾಸಕ ಡಾ.ರಫೀಕ್‌ ಅಹಮದ್‌ ಇಲ್ಲಿ ಸೋಮವಾರ ಹೇಳಿದರು.ನಗರಪಾಲಿಕೆ ಘೋಷಣೆಯ ಅಧಿಸೂಚನೆ ಪ್ರಕಟವಾದ 6 ತಿಂಗಳಲ್ಲಿ ಚುನಾವಣೆ ನಡೆಸಿ, ನೂತನ ಚುನಾಯಿತ ಮಂಡಳಿ ರಚಿಸಬೇಕೆಂಬ ಕಾನೂನಿದೆ. ಸರ್ಕಾರ ಚುನಾವಣೆಗೆ ಮುಂದಾದರೆ ಕಾನೂನು ತೊಡಕು ಎದುರಾಗಲಿದೆ. ಈ ಹಿನ್ನೆಲೆ­ಯಲ್ಲಿ ಈಗಿರುವ ಕಾಯ್ದೆಗೆ ತಿದ್ದುಪಡಿ ತಂದು ಸದಸ್ಯರನ್ನು ಪೂರ್ಣಾವಧಿಗೆ ಮುಂದುವರಿಸಲು ಮುಖ್ಯಮಂತ್ರಿ, ಕಾನೂನು ಸಚಿವರಿಗೆ ಪಕ್ಷಾತೀತ­ವಾಗಿ ಮಾನವಿ ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.ಸರ್ಕಾರ ಬಿಡುಗಡೆ ಮಾಡಲಿರುವ ₨ 100 ಕೋಟಿ ಅನುದಾನಕ್ಕೆ ಈಗಾಗಲೇ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಈಗಿರುವ 35 ವಾರ್ಡ್‌ಗಳು 41 ವಾರ್ಡ್‌ಗಳಾಗಿ ಪುನರ್‌ವಿಂಗಡಣೆ ಆಗಲಿದ್ದು, ಪ್ರತಿ ವಾರ್ಡ್‌ ಅಭಿವೃದ್ಧಿಗೆ ₨ 1.2 ಕೋಟಿ ಅನುದಾನ ಒದಗಿಸಲಾಗುವುದು. ಪೊಲೀಸ್‌ ಇಲಾಖೆಗೆ ಶೇ 5, ಒಳಚರಂಡಿ ವ್ಯವಸ್ಥೆಗೆ ಶೇ 15, ನೀರು ಸರಬರಾಜು ಶೇ 15, ಇತರೆ ಕಾಮಗಾರಿಗಳಿಗೆ ಶೇ 10ರಷ್ಟು ಅನುದಾನವನ್ನು ಕ್ರಿಯಾಯೋಜನೆಯಲ್ಲಿ ಹಂಚಿಕೆ ಮಾಡಲಾಗಿದೆ ಎಂದು ವಿವರಿಸಿದರು.2010–11ನೇ ಸಾಲಿನ ₨ 100 ಕೋಟಿ ವಿಶೇಷ ಅನುದಾನದಲ್ಲಿ ಬಿಡುಗಡೆ ಮಾಡಿರುವ ₨ 25 ಕೋಟಿಯಲ್ಲಿ ₨ 10 ಕೋಟಿ ಖರ್ಚಾಗಿದ್ದು, 20 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. 2011–12ರಲ್ಲಿ ಬಿಡುಗಡೆಯಾದ ₨ 42 ಕೋಟಿಯಲ್ಲಿ ₨ 26 ಕೋಟಿ ವೆಚ್ಚದ 33 ಕಾಮಗಾರಿಗಳಿಗೆ ಜನವರಿಯಲ್ಲಿ ಚಾಲನೆ ನೀಡಲಾಗುವುದು. ಹಾಗೆಯೇ 2ನೇ ಹಂತದ ನಗರೋತ್ಥಾನ ಯೋಜನೆಯಲ್ಲಿ ₨ 30 ಕೋಟಿ, ಎಸ್‌ಎಫ್‌ಸಿ­ಯಲ್ಲಿ 14.40 ಕೋಟಿ, 13ನೇ ಹಣಕಾಸು ಅನುದಾನದಲ್ಲಿ ₨ 7.43 ಕೋಟಿ ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಹೇಳಿದರು.ತ್ಯಾಜ್ಯ ಸಂಸ್ಕರಣ ಯಂತ್ರ

ಪ್ರತಿ ವಾರ್ಡ್‌ನಲ್ಲಿ ತ್ಯಾಜ್ಯ ಸಂಸ್ಕರಣ ಯಂತ್ರ ಅಳವಡಿಸಲು ಉದ್ದೇಶಿಸಲಾಗಿದೆ. ಪ್ರಾತ್ಯಕ್ಷಿಕೆಗಾಗಿ ಎರಡು ಯಂತ್ರಗಳನ್ನು ಖರೀದಿಸಲಾಗುವುದು. ಜಪಾನ್‌ ತಂತ್ರಜ್ಞಾನದ ಈ ಯಂತ್ರಗಳು 2 ಟನ್‌ ಕಸವನ್ನು 2 ಕೆ.ಜಿ. ಪುಡಿಯಾಗಿ ಮಾರ್ಪಡಿಸುವ ಸಾಮರ್ಥ್ಯ ಹೊಂದಿವೆ. ಈ ರೀತಿ ಬಂದ ಪುಡಿಯನ್ನು ಸಿಮೆಂಟ್‌ಗೂ ಮಿಶ್ರಣ ಮಾಡಬಹುದಾಗಿದೆ. ಬೆಂಗಳೂರು ಕೆಂಗೇರಿಯಲ್ಲಿ ಈ ಯಂತ್ರಗಳು ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರೊಂದಿಗೆ ಭೇಟಿ ನೀಡಿ ಪರಿಶೀಲಿಸಲಾಗುವುದು ಎಂದರು.ಸಂಸದ ಜಿ.ಎಸ್‌.ಬಸವರಾಜು ಮಾತನಾಡಿ, 6 ತಿಂಗಳ ನಂತರವೂ ಪಾಲಿಕೆ ಸದಸ್ಯರನ್ನು ಮುಂದುವರೆಸುವಂತೆ ಸರ್ಕಾರಕ್ಕೆ ಎಲ್ಲ ನಾಯಕರು ಮನವಿ ಮಾಡಲಿದ್ದಾರೆ. ಒಂದು ವೇಳೆ ಅತೃಪ್ತರು ಕಾನೂನು ಸಂಘರ್ಷಕ್ಕೆ ಇಳಿದರೆ ಸರ್ಕಾರದಿಂದಲೇ ನ್ಯಾಯಾಲಯಕ್ಕೆ ಆಕ್ಷೇಪಣೆ ಇಲ್ಲ ಎಂಬ ಪ್ರಮಾಣಪತ್ರ ಸಲ್ಲಿಸಲಾಗುತ್ತದೆ ಎಂದು ಹೇಳಿದರು.ವಿಧಾನಪರಿಷತ್‌ ಸದಸ್ಯ ಡಾ.ಎಂ.ಆರ್‌.ಹುಲಿ­ನಾಯ್ಕರ್‌ ಮಾತನಾಡಿ, ನಗರಪಾಲಿಕೆ ಕಾನೂನು ಏನೇ ಇದ್ದರೂ ಸದಸ್ಯರ ಮುಂದುವರಿಕೆಗೆ ತೊಡಕಾಗದಂತೆ ತಿದ್ದುಪಡಿ ತರುವಂತೆ ಕೋರಿ ಮುಖ್ಯಮಂತ್ರಿ ಬಳಿಗೆ ನಿಯೋಗ ಕೊಂಡೊಯ್ಯ­ಲಾಗುವುದು ಎಂದು ತಿಳಿಸಿದರು.

ಮೇಯರ್‌ ಗೀತಾ, ಉಪಮೇಯರ್‌ ಧನಲಕ್ಷ್ಮೀ, ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)