ಸೋಮವಾರ, ಮೇ 17, 2021
23 °C

ಪಾಳುಬಿದ್ದ ಆರೋಗ್ಯ ಕೇಂದ್ರ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಂಗಾರಪೇಟೆ: ಇಲ್ಲಿನ ಆರೋಗ್ಯ ಇಲಾಖೆ ಪ್ರಕಾರ ದಾಸರಹೊಸಹಳ್ಳಿಯ ಆರೋಗ್ಯ ಉಪಕೇಂದ್ರ ಈಗಲೂ ಸುಸ್ಥಿತಿಯಲ್ಲಿದೆ. ಇದಕ್ಕಾಗಿ ಪ್ರತಿವರ್ಷ ಹಣ ಬಿಡುಗಡೆ ಯಾಗುತ್ತದೆ. ಆದರೆ ಆರೋಗ್ಯ ಉಪ ಕೇಂದ್ರ ಕಟ್ಟಡ ಯಾವುದಕ್ಕೂ ಉಪಯೋಗಬಾರದೆ ಪಾಳುಬಿದ್ದ ಸ್ಥಿತಿಯಲ್ಲಿ ಇದೆ. ಪರಿಣಾಮ  ಇಲ್ಲಿನ ಗ್ರಾಮಸ್ಥರು ಆರೋಗ್ಯ ಸೇವೆಯಿಂದ ವಂಚಿತರು.ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ಯೋಜನೆಯಡಿ ಸ್ಥಾಪಿಸಿದ ಕೇಂದ್ರ ಇರುವುದು ಬೆಮಲ್‌ನಗರದ ಸಮೀಪದ ದಾಸರಹೊಸಹಳ್ಳಿ ಗ್ರಾಮದಲ್ಲಿ.ಅಧಿಕಾರಿಗಳ ಮತ್ತು ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ  ಉಪಕೇಂದ್ರ ಶಾಶ್ವತವಾಗಿ ಕಾರ್ಯನಿರ್ವಹಣೆ ಇಲ್ಲದಂತಾಗಿದೆ.  ಗ್ರಾಮಸ್ಥರ ಅನುಕೂಲಕ್ಕಾಗಿ ಸ್ಥಾಪಿಸಿದ ಆರೋಗ್ಯ ಕೇಂದ್ರ ಸುಮಾರು 6  ವರ್ಷಗಳ ಹಿಂದೆ ಮುಚ್ಚಿದಂತಾಗಿದೆ. ಇಲ್ಲಿ ಕೆಲಸ ನಿರ್ವಹಿಸುತ್ತಿದ್ದ ಆರೋಗ್ಯ ಸಹಾಯಕಿಯರು ಬೇರೆಡೆಗೆ ಹೊರಟ ಮೇಲೆ ಉಪಕೇಂದ್ರ ಅನುಪಯುಕ್ತವಾಗಿದೆ.ಕಿಟಕಿ, ಬಾಗಿಲು, ವಿದ್ಯುತ್ ಸಂಪರ್ಕ ಸಾಧನಗಳನ್ನು ದುಷ್ಕರ್ಮಿಗಳು ಕಿತ್ತುಕೊಂಡು ಹೋದರು. 

ದುರುಪಯೋಗ: ಈ ಆರೋಗ್ಯ ಕೇಂದ್ರದ ಕೆಲಸ ನಿಂತು ವರ್ಷಗಳು ಕಳೆದರು ಪ್ರತಿ ವರ್ಷ ಮೂಲ ಸೌಕರ್ಯ ಕಲ್ಪಿಸಲು ಆರೋಗ್ಯ ಇಲಾಖೆ ಕೇಂದ್ರದ ನಿರ್ವಹಣೆಗೆ ಹಣ ಬಿಡುಗಡೆ ಮಾಡುತ್ತಲೇ ಇದೆ.

`ದೊಡ್ಡಚಿನ್ನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಈ ಕೇಂದ್ರಕ್ಕೆ ಆರೋಗ್ಯ ಸಹಾಯಕಿಯರು ಬರುವುದೇ ಅಪರೂಪ.ಯಾವಾಗಲೋ ಒಮ್ಮೆ ಬರುತ್ತಾರೆ. ಮರದ ಕೆಳಗೆ ಕುಳಿತುಕೊಂಡು ಕಷ್ಟಸುಖ ಮಾತನಾಡಿಕೊಂಡು ಹೋಗುತ್ತಾರೆ~ ಎನ್ನುತ್ತಾರೆ ಗ್ರಾಮದ ನಿವಾಸಿ ಮುರಳಿ.`ಪ್ರತಿ ವರ್ಷ ಅಧಿಕಾರಿಗಳು ಇಲ್ಲಿಗೆ ಬಂದು ಕಟ್ಟಡದ ಸುತ್ತ ಹರಡಿರುವ ಕಸ ಮತ್ತಿತರ ತ್ಯಾಜ್ಯ ವಸ್ತು ತೆಗೆಯಲು ಹೇಳುತ್ತಾರೆ. ನಂತರ ಪರಿಶೀಲನೆ ಮುಗಿದ ಮೇಲೆ ಈ ಕಡೆ ಯಾರೂ ಇತ್ತ ತಲೆ ಹಾಕುವುದಿಲ್ಲ~ ಎಂದು ವಿವರಿಸುತ್ತಾರೆ ಗ್ರಾಮದ ನಾರಾಯಣಸ್ವಾಮಿ.ಗ್ರಾಮಸ್ಥರರಿಗಾಗಿ ಸ್ಥಾಪಿಸಿದ ಆರೋಗ್ಯ ಕೇಂದ್ರವನ್ನು ಈಗ ದಾಸರಹೊಸಹಳ್ಳಿಯಿಂದ ಅಜ್ಜಪಲ್ಲಿ ಗ್ರಾಮಕ್ಕೆ ವರ್ಗಾವಣೆ ಮಾಡುತ್ತಿರುವುದು ಗ್ರಾಮಸ್ಥರ ಕೋಪಕ್ಕೆ ಕಾರಣವಾಗಿದೆ.  `ಅಜ್ಜಪಲ್ಲಿ ಗ್ರಾಮದಲ್ಲಿ ಆರೋಗ್ಯ ಉಪಕೇಂದ್ರ ಬೇಕು. ಆದರೆ ಮುಚ್ಚಿರುವ ದಾಸರಹೊಸಹಳ್ಳಿ ಉಪಕೇಂದ್ರ ದುರಸ್ತಿ ಗೊಳಿಸದೆ ಹಣ ದುರುಪಯೋಗ ಮಾಡಿಕೊಂಡಿರುವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಗಿದೆ~ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ನಾರಾಯಣಮ್ಮ  ಅವರು  `ಪ್ರಜಾವಾಣಿ~ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.