ಗುರುವಾರ , ಮೇ 13, 2021
35 °C

ಪಿಂಚಣಿಗೆ ಕಾದಿರುವ ರಂಗಾಯಣ ಪುಟ್ಟಯ್ಯ

ಗಣೇಶ ಅಮೀನಗಡ ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೈಸೂರು:  ಇಲ್ಲಿಯ ರಂಗಾಯಣದಲ್ಲಿ ಕಾರ್ಪೆಂಟರ್ ಆಗಿ 6 ವರ್ಷಗಳ ಹಿಂದೆ ನಿವೃತ್ತಿಯಾದ ಪುಟ್ಟಯ್ಯ ಅವರಿಗೆ ಇದುವರೆಗೂ ಪಿಂಚಣಿ ಸೌಲಭ್ಯ ಸಿಕ್ಕಿಲ್ಲ.64 ವರ್ಷದ ಅವರು ರಂಗಾಯಣದ ಪಿಂಚಣಿಗೆ ಕಾಯುತ್ತಲೇ ಇದ್ದು, ಸದ್ಯ ಪ್ರತಿ ತಿಂಗಳು ವೃದ್ಧಾಪ್ಯ ವೇತನವೆಂದು ರೂ 500 ಮಾತ್ರ ಸಿಗುತ್ತಿದೆ.ರಂಗಾಯಣದಲ್ಲಿ ಕಾರ್ಪೆಂಟರ್ ಆಗಿರುವ ದಿನಗೂಲಿ ನೌಕರ, ಪುತ್ರ ಜನಾರ್ದನ್ ಅವರೊಂದಿಗೆ ಬದುಕು ಸಾಗಿಸುತ್ತಿದ್ದಾರೆ. ವೃದ್ಧಾಪ್ಯ, ಕಾಯಿಲೆಗಳ ಜತೆಗೆ ಮಂಗಳೂರಲ್ಲಿ ರಂಗಾಯಣದ ಕಲಾವಿದರು ನಾಟಕ ಆಡುವಾಗ ರಂಗ ಸಜ್ಜಿಕೆ ಸಜ್ಜುಗೊಳಿಸುವಾಗ ಏಣಿಯಿಂದ ಕೆಳಬಿದ್ದ ಪುಟ್ಟಯ್ಯ ಅವರ ಕಾಲಿನ ಮೂಳೆ ಮುರಿದಿತ್ತು. ಜತೆಗೆ ಬೆನ್ನುನೋವೂ ಕಾಣಿಸಿಕೊಂಡಿತ್ತು.

ಈಚೆಗೆ ಅವರ ಬೆನ್ನುಮೂಳೆಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಇದರ ಚಿಕಿತ್ಸೆಗಾಗಿ ಅವರು ಪರದಾಡುತ್ತಿದ್ದಾರೆ.  ಸಮಾಧಾನದ ಸಂಗತಿ ಎಂದರೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಜನವರಿ ತಿಂಗಳಲ್ಲಿ ಅವರಿಗೆ ಪತ್ರವೊಂದು ಬಂದಿದೆ. ಕಲಾವಿದರಿಗೆ ನೀಡುವ ರೂ 1 ಸಾವಿರ ಮಾಸಾಶನ ಪಡೆಯಲು ಅರ್ಹರಾಗಿದ್ದೀರಿ ಎನ್ನುವ ಪತ್ರವದು. ಮಾಸಾಶನ ಸಿಗಬೇಕಷ್ಟೇ.ಬಿ.ವಿ. ಕಾರಂತರು ರಂಗಾಯಣದ ನಿರ್ದೇಶಕರಾಗಿದ್ದ ಅವಧಿಯಿಂದ ಸುಮಾರು 16 ವರ್ಷಗಳವರೆಗೆ ರಂಗಾಯಣದ ಎಲ್ಲ ನಾಟಕಗಳಿಗೆ ಅಗತ್ಯವಾದ ರಂಗ ಸಜ್ಜಿಕೆ ಸಜ್ಜುಗೊಳಿಸಿದವರು ಪುಟ್ಟಯ್ಯ. ಅದರಲ್ಲೂ ಟಿಪ್ಪು ಸುಲ್ತಾನ್, ಗಾಂಧಿ ವರ್ಸಸ್ ಗಾಂಧಿ, ತಲೆದಂಡ, ಒಥೆಲೊ, ಹ್ಯಾಮ್ಲೆಟ್... ಮತ್ತಿತರ ನಾಟಕಗಳ ಯಶಸ್ಸಿನ ಹಿಂದೆ ಪುಟ್ಟಯ್ಯ ಅವರ ಶ್ರಮವೂ ಇದೆ.ಅವರು ರಂಗಾಯಣಕ್ಕೆ ಕಾರ್ಪೆಂಟರ್ ಆಗಿ ನೇಮಕಗೊಂಡಿದ್ದು ಕುತೂಹಲಕಾರಿಯಾದುದು. ಜರ್ಮನಿಯ ಐಡಿ ಎಂಬ ರಂಗ ನಿರ್ದೇಶಕಿ ರಂಗಾಯಣದಲ್ಲಿ `ಮಗ್ಗದವರು' ನಾಟಕ  ನಿರ್ದೇಶಿಸುತ್ತಿದ್ದರು. ನಾಟಕದ ಮೊದಲ ದೃಶ್ಯಕ್ಕೆ ಪಿಯಾನೊ ಬೇಕಿತ್ತು. ಆಗ ರಂಗಾಯಣದಲ್ಲಿದ್ದ ರಂಗಕರ್ಮಿ ಜಯತೀರ್ಥ ಜೋಶಿ ಅವರು ಒಂಟಿಕೊಪ್ಪಲಿನ ಶಿವಣ್ಣ ಎಂಬ ಕಾರ್ಪೆಂಟರ್ ಬಳಿ ಹೋಗಿ ವಿಚಾರಿಸಿದರು. ಆಗ ಶಿವಣ್ಣ ಅವರು ಪುಟ್ಟಯ್ಯ ಅವರಿಗೆ ಬರಹೇಳಿದರು.

ಅದುವರೆಗೆ ಪುಟ್ಟಯ್ಯ ಅವರು ಕೋಲ್ಕತ್ತ ಹಾರ್ಮೋನಿಯಂ ಆ್ಯಂಡ್ ಫರ್ನಿಚರ್ ಅಂಗಡಿಯಲ್ಲಿ ಹಾರ್ಮೋನಿಯಂ ತಯಾರಿಸಿ, ಮಾರುತ್ತಿದ್ದರು ಜತೆಗೆ ದುರಸ್ತಿಗೊಳಿಸುತ್ತಿದ್ದರು. ಶಿವಣ್ಣ ಬಳಿ ಬಂದ ಪುಟ್ಟಯ್ಯ ಅವರಿಗೆ ಪಿಯಾನೊ ಹೇಗಿರಬೇಕೆಂದು ಡ್ರಾಯಿಂಗ್ ಶೀಟ್‌ನಲ್ಲಿ ತೋರಿಸಲಾಯಿತು. ಮರುದಿನ ಅದರ ಮಾದರಿಯನ್ನು ರಟ್ಟಿನಲ್ಲಿ ಪುಟ್ಟಯ್ಯ ಮಾಡಿತೋರಿಸಿದರು.

ಅದನ್ನು ಕಂಡ ಶಿವಣ್ಣ ಪಿಯಾನೊ ಮಾಡಲು ಹೇಳಿದರು. ನಂತರ ಬೇಕಾದ ಸಾಮಗ್ರಿಗಳು ಅವರ ಅಂಗಡಿ ಬಳಿ ಹೋದವು. ಆದರೆ ಅಂಗಡಿ ಚಿಕ್ಕದು ಎಂದು ರಂಗಾಯಣದ ಶೆಡ್‌ನಲ್ಲಿ ಪಿಯಾನೊ ಸಿದ್ಧಗೊಳಿಸಿದರು. ಅದು ನಾಟಕಕ್ಕೆ ಬಳಕೆಯಾಯಿತು. ಆಮೇಲೆ ರಂಗಾಯಣದ ಕಾರ್ಪೆಂಟರ್ ಆಗಿ ನೇಮಕಗೊಂಡ ಪುಟ್ಟಯ್ಯ,ರೂ 2 ಸಾವಿರ ಸಂಬಳ ಪಡೆಯತೊಡಗಿದರು.

ನಂತರ ಅವರ ನೇಮಕಾತಿ ಕಾಯಂ ಆಯಿತು. ಅವರು ನಿವೃತ್ತಿಯಾದಾಗ ಪಡೆಯುತ್ತಿದ್ದ ಸಂಬಳ ಕೇವಲ ರೂ 8 ಸಾವಿರ. ಬಿ.ವಿ. ಕಾರಂತ, ಸಿ. ಬಸವಲಿಂಗಯ್ಯ, ಪ್ರಸನ್ನ, ಚಿದಂಬರರಾವ್ ಜಂಬೆ ಅಲ್ಲದೇ ದೇಶ, ವಿದೇಶದ ನಿರ್ದೇಶಕರ ನಾಟಕಗಳಿಗೆ ರಂಗ ಸಜ್ಜಿಕೆಗೆ ದುಡಿದಿದ್ದಾರೆ.`ನೇಪಥ್ಯ ಕಲಾವಿದನೆಂದು ಕರ್ನಾಟಕ ನಾಟಕ ಅಕಾಡೆಮಿಯು ಸುವರ್ಣ ಕರ್ನಾಟಕ ರಂಗ ಪುರಸ್ಕಾರ ನೀಡಿದೆ. ಇದರೊಂದಿಗೆ ಮುಂಬೈಯ ನಾದಿರಾ ಬಬ್ಬರ್ ಅವರ `ಏಕ್ ಜೂಟ್' ನಾಟಕ ತಂಡವು ತನ್ನ ರಜತ ಮಹೋತ್ಸವ ಅಂಗವಾಗಿ ನೇಪಥ್ಯ ಕಲಾವಿದನೆಂದು ಮುಂಬೈಗೆ ಆಹ್ವಾನಿಸಿ ಸನ್ಮಾನಿಸಿತು. ಅಲ್ಲದೇ ಮೈಸೂರಿನ ಕೆಲ ರಂಗ ತಂಡಗಳೂ ಸನ್ಮಾನಿಸಿವೆ. ಆದರೆ ಪಿಂಚಣಿಯದೇ ಚಿಂತೆ' ಎಂದು ಪುಟ್ಟಯ್ಯ ಬೇಸರ ವ್ಯಕ್ತಪಡಿಸುತ್ತಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.