ಭಾನುವಾರ, ಜೂನ್ 13, 2021
20 °C

ಪಿಯುಸಿ ಪ್ರಶ್ನೆಪತ್ರಿಕೆ ಬಯಲು: ಗಣಿತ ಪರೀಕ್ಷೆ ಏ.3ಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರಶ್ನೆಪತ್ರಿಕೆ ಬಹಿರಂಗವಾದ ಹಿನ್ನೆಲೆಯಲ್ಲಿ ಮಂಗಳವಾರ (ಮಾ.20) ನಡೆಯಬೇಕಿದ್ದ ದ್ವಿತೀಯ ಪಿಯುಸಿ ಗಣಿತ ವಿಷಯದ ಪರೀಕ್ಷೆ ಯನ್ನು ಏಪ್ರಿಲ್ ಮೂರಕ್ಕೆ ಮುಂದೂ ಡಿದ್ದು, ಈ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸಲಾಗಿದೆ. ಘಟನೆ ಸಂಬಂಧ ಈಗಾಗಲೇ ಚಿಂತಾಮಣಿ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇಬ್ಬರನ್ನು ಬಂಧಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.ಮಂಗಳವಾರ ನಡೆಯಬೇಕಿದ್ದ ಗಣಿತ ವಿಷಯದ ಪರೀಕ್ಷೆಯ ಪ್ರಶ್ನೆಪತ್ರಿಕೆಯು ಚಿಂತಾಮಣಿ, ಮುಳಬಾಗಿಲು, ಮಾಲೂರು ಸೇರಿದಂತೆ ಹಲವೆಡೆ ಸೋಮವಾರ ಸಂಜೆ ಬಹಿರಂಗವಾಗಿರುವ ಸುದ್ದಿ ಕೇಳಿಬಂತು. ಆದರೆ ಮಧ್ಯರಾತ್ರಿವರೆಗೂ ಇದು ಖಚಿತವಾಗಲಿಲ್ಲ.ಬಹಿರಂಗವಾಗಿರುವ ಪ್ರಶ್ನೆಪತ್ರಿಕೆ ಮತ್ತು ಮೂಲ ಪ್ರಶ್ನೆಪತ್ರಿಕೆ ಒಂದೇ ಆಗಿರುವುದು ತೀವ್ರ ಪರಿಶೀಲನೆ ನಂತರ ಖಚಿತವಾಯಿತು ಎನ್ನಲಾಗಿದೆ.

 

ಈ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗಿನ ಜಾವ 2.30ಕ್ಕೆ ಪರೀಕ್ಷೆ ಮುಂದೂಡುವ ತೀರ್ಮಾನ ತೆಗೆದುಕೊಳ್ಳಲಾಯಿತು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಆಯುಕ್ತರಾದ ವಿ.ರಶ್ಮಿ `ಪ್ರಜಾವಾಣಿ~ಗೆ ತಿಳಿಸಿದರು.ಏಪ್ರಿಲ್ 3ರಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12.15ರವರೆಗೆ ಗಣಿತ ವಿಷಯದ ಪರೀಕ್ಷೆ ನಡೆಯಲಿದ್ದು, ಈಗಾಗಲೇ ಸೂಚಿಸಿರುವ ಪರೀಕ್ಷಾ ಕೇಂದ್ರಗಳಲ್ಲಿ ಆ ದಿನ ಪರೀಕ್ಷೆಗೆ ಹಾಜರಾಗಬೇಕು.ಇನ್ನೂ ಗೊತ್ತಾಗಿಲ್ಲ: ಪ್ರಶ್ನೆಪತ್ರಿಕೆ ಬಹಿರಂಗವಾಗಿದ್ದು ಹೇಗೆ ಎಂಬುದು ಇನ್ನೂ ಗೊತ್ತಾಗಿಲ್ಲ. ಪರೀಕ್ಷೆಯ ದಿನವೇ ಬೆಳಿಗ್ಗೆ 8 ಗಂಟೆ ಸುಮಾರಿಗೆ ಆಯಾ ತಾಲ್ಲೂಕಿನ ಖಜಾನೆಯಿಂದ ಪ್ರಶ್ನೆಪತ್ರಿಕೆಗಳನ್ನು ಹೊರ ತೆಗೆದು ಸಂಬಂಧಪಟ್ಟ ಕಾಲೇಜುಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಇದೆ. ಆದರೆ ಸೋಮವಾರವೇ ಪ್ರಶ್ನೆಪತ್ರಿಕೆ ಹೇಗೆ ಹೊರಗೆ ಬಂತು ಎಂಬುದು ಅಧಿಕಾರಿಗಳಿಗೂ ಗೊತ್ತಾಗುತ್ತಿಲ್ಲ.ಮೊದಲಿಗೆ ಚಿಂತಾಮಣಿಯ ವೆಂಕಟಾದ್ರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಶ್ನೆಪತ್ರಿಕೆ ಬಹಿರಂಗವಾಯಿತು. ಇದಾದ ನಂತರ ಮುಳಬಾಗಿಲು, ಮಾಲೂರಿನಲ್ಲೂ ಇದೇ ರೀತಿ ಪ್ರಶ್ನೆಪತ್ರಿಕೆಗಳು ಬಹಿರಂಗವಾಗಿರುವುದು ಖಚಿತವಾಯಿತು ಎಂದು ಅವರು ಹೇಳಿದರು.ಪದವಿ ಪೂರ್ವ ಶಿಕ್ಷಣ ಇಲಾಖೆ ಮಂಗಳವಾರ ಬೆಳಗಿನ ಜಾವ ಪರೀಕ್ಷೆ ಮುಂದೂಡುವ ತೀರ್ಮಾನ ತೆಗೆದುಕೊಂಡಿತು. ಆದರೆ ಪರೀಕ್ಷೆ ಮುಂದೂಡಿರುವ ವಿಷಯ ವಿದ್ಯಾರ್ಥಿಗಳಿಗೆ ಕಾಲೇಜುಗಳಿಗೆ ಬರುವವರೆಗೂ ಗೊತ್ತಾಗಿರಲಿಲ್ಲ. ಇದರಿಂದಾಗಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡಿರುವ ವಿಷಯ ಕೇಳಿ ಗಾಬರಿಗೆ ಒಳಗಾದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.