ಗುರುವಾರ , ಫೆಬ್ರವರಿ 25, 2021
19 °C

ಪಿಲಾಟೆ ಆರೋಗ್ಯಕರ ಆಕರ್ಷಕ ವೃತ್ತಿ

ಸುಶೀಲಾ Updated:

ಅಕ್ಷರ ಗಾತ್ರ : | |

ಪಿಲಾಟೆ ಆರೋಗ್ಯಕರ ಆಕರ್ಷಕ ವೃತ್ತಿ

ವರ್ಷಗಳ ಹಿಂದೆ ಅಪರಿಚಿತವಾಗಿದ್ದ ‘ಪಿಲಾಟೆ’ ಪದ ಈಚೆಗೆ ಫಿಟ್‌ನೆಸ್‌ ವಲಯದಲ್ಲಿ ದಿನದಿಂದ ದಿನಕ್ಕೆ ಜನಪ್ರಿಯಗೊಳ್ಳುತ್ತಿದೆ. ಫಿಟ್‌ನೆಸ್‌ ಧ್ಯೇಯಮಂತ್ರಗಳಲ್ಲಿ ಪಿಲಾಟೆಗೆ ಹೆಚ್ಚು ಪ್ರಾಮುಖ್ಯ ದೊರೆಯುತ್ತಿದೆ. ಆರೋಗ್ಯಕರ ಜೀವನ ಶೈಲಿಗೆ ಈಗದು ಮೂಲಮಂತ್ರವಾಗಿ ರೂಪುಗೊಳ್ಳುತ್ತಿದೆ.

ಒಂದೆಡೆ ಆರೋಗ್ಯದ ದೃಷ್ಟಿಯಿಂದ ನವಯುಗದ ಜನತೆಯ ಮೊದಲ ಆಯ್ಕೆಯಾಗಿ ಬೆಳೆಯುತ್ತಿರುವ ಪಿಲಾಟೆ,  ಇನ್ನೊಂದೆಡೆ ಆಕರ್ಷಕ ವೃತ್ತಿಯಾಗಿಯೂ ಯಶಸ್ಸು ಸಾಧಿಸುತ್ತಿದೆ.ಪಿಲಾಟೆ ಸ್ಟೂಡಿಯೊ, ಫಿಟ್‌ನೆಸ್‌  ಮತ್ತು ವೆಲ್‌ನೆಸ್‌ ಕ್ಲಬ್ ಸೇರಿದಂತೆ ಅನೇಕ ಕಡೆ ಪಿಲಾಟೆ ತರಬೇತುದಾರರಿಗೆ ಹೆಚ್ಚಿನ ಅವಕಾಶಗಳು ಲಭ್ಯವಾಗುತ್ತಿವೆ. ಅಮೆರಿಕದ ಕ್ರೀಡಾ ಶಾಲೆಗಳಲ್ಲಿ ಪಿಲಾಟೆ ತರಬೇತುದಾರರಿಗೆ ಹೆಚ್ಚು ಬೇಡಿಕೆ ಇದೆ. ಅಲ್ಲಿನ ಶಾಲಾ–ಕಾಲೇಜುಗಳಲ್ಲಿಯೂ ಪಿಲಾಟೆ ಟ್ರೇನರ್ಸ್ ಕೆಲಸ ಮಾಡುತ್ತಾರೆ. ಭಾರತದಲ್ಲಿ ಸಧ್ಯಕ್ಕೆ ಶಿಕ್ಷಣ ವಲಯದಲ್ಲಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಪಿಲಾಟೆಯನ್ನು ಬಳಸಿಕೊಳ್ಳುತ್ತಿಲ್ಲ. ಆದರೆ ಇಲ್ಲಿಯೂ ಸಹ ಅನೇಕ ಸೆಲಿಬ್ರಿಟಿಗಳು, ಕ್ರೀಡಾಪಟುಗಳು, ವೈದ್ಯರು, ಕೆಲವು ರೀತಿಯ ಕಾಯಿಲೆಗೆ ಒಳಗಾದ ರೋಗಿಗಳು ಖಾಸಗಿ ತರಬೇತುದಾರರ ಸೇವೆಯನ್ನು ಬಯಸುತ್ತಿದ್ದಾರೆ.

ಏನಿದು ಪಿಲಾಟೆ?

ಮನಸ್ಸು ಮತ್ತು-ದೇಹ ಎರಡನ್ನೂ ಒಳಗೊಂಡ ಸುರಕ್ಷಿತವಾದ ಒಂದು ವ್ಯಾಯಾಮ ಪದ್ಧತಿ ಎಂದು ಹೇಳಬಹುದು. ಮನಸ್ಸು ಹಾಗೂ ದೇಹ ಎರಡರ ಆರೋಗ್ಯಕ್ಕೂ ಪೂರಕವಾಗಿ ಕೆಲಸ ಮಾಡುವ ಈ ವ್ಯಾಯಾಮ, ಮನಸ್ಸಿನ ಏಕಾಗ್ರತೆ, ಶಾಂತಿ, ಹಾಗೂ ಸಮ್ಮಿಳಿತವನ್ನು ಬಯಸುವುದರಿಂದ ಒಂದರ್ಥದಲ್ಲಿ ಧ್ಯಾನವೂ ಹೌದು. ಆದರೆ ಇದನ್ನು ಒಮ್ಮೆ ಕಲಿತು ಬಿಟ್ಟು ನಂತರ ನಮ್ಮಷ್ಟಕ್ಕೆ ನಾವೇ ಮಾಡಿಕೊಂಡು ಹೋಗಲು ಬರುವುದಿಲ್ಲ.ಪ್ರತಿ ಬಾರಿಯೂ ನಿಮಗೆ ಸೂಚನೆ ನೀಡಲು ಒಬ್ಬ ಟ್ರೇನರ್ ಇರಲೇಬೇಕು. ನೆಲ ಹಾಸಿಗೆ ಅಥವಾ ವಿವಿಧ ಪ್ರಕಾರಗಳ ಸಾಧನಗಳನ್ನು ಬಳಸಿ ಈ ವ್ಯಾಯಾಮವನ್ನು ಮಾಡಬಹುದು. ದೇಹದ ಆಕಾರ, ರಚನೆ, ಮಾಟದ ಮೇಲೆ ಇದು ಪರಿಣಾಮಕಾರಿ ಪಾತ್ರ ವಹಿಸುತ್ತದೆ. ಮನಸ್ಸನ್ನೂ ಪ್ರಸನ್ನಗೊಳಿಸುತ್ತದೆ. ತೆಳುವಾದ ತೊಡೆ ಮತ್ತು ಸಮತಟ್ಟಾದ ಹೊಟ್ಟೆಯ ಒಂದು ನಯವಾದ ದೇಹ ರಚನೆಯನ್ನು ಇದು ಸಾಕಾರಗೊಳಿಸುತ್ತದೆ.ಎಷ್ಟು ಸುರಕ್ಷಿತ

ಇದು ಒಂದು ಬಗೆಯ ಸುರಕ್ಷಿತ ಮತ್ತು ಸಂವೇದನಾಶೀಲ ವ್ಯಾಯಾಮ ಎಂದು ಗುರುತಿಸಿಕೊಂಡಿದೆ. ಅತ್ಯುತ್ತಮ ಭಂಗಿ ಮತ್ತು ಸುಲಭವೂ, ಆಕರ್ಷಕವೂ ಆದ ಚಲನವಲನವನ್ನು ಇದು ಕಲಿಸುತ್ತದೆ. ಚಲನೆಯ ನಮ್ಯತೆ, ಚಾಣಾಕ್ಷತೆ ಮತ್ತು ವ್ಯವಸ್ಥೆಯನ್ನೂ ಸುಧಾರಿಸುತ್ತದೆ. ಅಲ್ಲದೇ, ಕತ್ತು ನೋವು, ಬೆನ್ನು ನೋವಿನಂತಹ ಸ್ಥಿತಿಗಳಿಗೆ ಇದೊಂದು ಉತ್ತರವೆನ್ನುತ್ತಾರೆ ಪಿಲಾಟೆ ತಜ್ಞರು. ಯಾವುದೇ ವಯೋಮಾನ, ವಲಯ, ಲಿಂಗಕ್ಕೆ ಇದು ಸೀಮಿತವಾದುದಲ್ಲ. ಪ್ರತಿಯೊಬ್ಬರಿಗೂ ಇದು ಅಗತ್ಯವಾದ ಮತ್ತು ಸೂಕ್ತವಾದ ವ್ಯಾಯಾಮ ಎನ್ನುವುದು ಅವರ ಅಭಿಪ್ರಾಯ.ಪಿಲಾಟೆ ತರಬೇತುದಾರರಾಗಿ

ಭಾರತದ ಮಟ್ಟಿಗೆ ಇದೊಂದು ಹೊಸ ಪರಿಕಲ್ಪನೆಯಾದರೂ ವೃತ್ತಿ ಅವಕಾಶಗಳಿಗೇನೂ ಕೊರತೆ ಇಲ್ಲ. ಈಗಂತೂ ಭಾರತದ ಬಹುತೇಕ ಮೆಟ್ರೊ ನಗರಗಳಲ್ಲಿ ಅನೇಕ ಪಿಲಾಟೆ ಸ್ಟುಡಿಯೊಗಳಿವೆ. ಅಲ್ಲಿ ಮೊದಲು ತರಬೇತುದಾರರಿಗೆ ಸಹಾಯಕರಾಗಿ ಅನುಭವ ಪಡೆಯಬೇಕಾಗುತ್ತದೆ. ನಂತರ ಮುಖ್ಯ ತರಬೇತುದಾರರಾಗಿ ಬೆಳೆಯಬಹುದು. ಅಲ್ಲದೇ ಏರೊಬಿಕ್ಸ್, ಫಿಟ್‌ನೆಸ್‌ ಹಾಗೂ ವ್ಯಾಯಾಮ ಕೇಂದ್ರಗಳಲ್ಲಿ ವೃತ್ತಿಯನ್ನರಸಬಹುದು. ಸ್ವಂತ ಸ್ಟುಡಿಯೊ ಮಾಡಿಕೊಂಡು, ಇತರೆ ವೃತ್ತಿಪರರ ಸಹಾಯದೊಂದಿಗೆ  ವೈಯಕ್ತಿಕ ತರಬೇತಿಗಳನ್ನೂ ನೀಡಬಹುದು. ಅಲ್ಲದೇ ಸೆಲೆಬ್ರಿಟಿಗಳು, ಕ್ರೀಡಾಪಟುಗಳು ಸೇರಿದಂತೆ ಇತರರಿಗೆ ವೈಯಕ್ತಿಕ ತರಬೇತುದಾರರಾಗಿಯೂ ಸೇವೆ ನೀಡಬಹುದು.ಅರೆಕಾಲಿಕ ವೃತ್ತಿಯಾಗಿ...

ಅರೆಕಾಲಿಕ ವೃತ್ತಿಯನ್ನಾಗಿಯೂ ಇದನ್ನು ಸ್ವೀಕರಿಸುವವರಿದ್ದಾರೆ. ಗೃಹಿಣಿಯರು ಹಾಗೂ ವಿದ್ಯಾರ್ಥಿಗಳಿಗೆ ಇದು ಉತ್ತಮ ಆಯ್ಕೆ. ದಿನದಲ್ಲಿ ಅಥವಾ ವಾರದಲ್ಲಿ ಕೆಲ ಗಂಟೆಗಳನ್ನು ಮಾತ್ರ ಈ ಕೆಲಸದಲ್ಲಿ ತೊಡಗಿಸುವವರೂ ಇದ್ದಾರೆ. ಅನೇಕರು ತಮ್ಮ ಬಿಡುವಿನ ಸಮಯ ಹಾಗೂ ಗ್ರಾಹಕರ ಬಿಡುವಿನ ಸಮಯದಲ್ಲಿ ಮನೆ–ಮನೆಗೆ ಹೋಗಿ ತರಬೇತಿ ನೀಡಿ ಬರುತ್ತಾರೆ.ಅರ್ಹತೆಗಳೇನು?

ಪಿಲಾಟೆ ತರಬೇತುದಾರರಾಗಲು ಬಯಸುವವರಿಗೆ ಯಾವುದಾದರೂ ಒಂದು ಪದವಿಯ ಜೊತೆಗೆ ವ್ಯಾಯಾಮ, ಯೋಗ, ಏರೊಬಿಕ್ಸ್, ಡಾನ್ಸ್‌ನಂತಹ ಯಾವುದಾದರೂ ಒಂದು ವಲಯದಲ್ಲಿ ತುಸು ಜ್ಞಾನವಿದ್ದರೆ ಸೂಕ್ತ. ಆದರೆ ಕೇವಲ ಪಿಲಾಟೆ ಸುತ್ತ ಜ್ಞಾನ ಬೆಳೆಸಿಕೊಂಡರೆ ಆಗದು, ಜೊತೆಗೆ ಹೊಸ ಆವಿಶ್ಕಾರಗಳು, ನೂತನ ಯಂತ್ರೋಪಕರಣಗಳು, ಸಾಧನಗಳು, ಹೊಸ ಪ್ರಯೋಗ, ತಂತ್ರಗಳ ಬಗ್ಗೆಯೂ ತಿಳಿದುಕೊಂಡಿರಬೇಕು. ನೆಲದ ನಿರ್ವಹಣೆಯಿಂದ ಹಿಡಿದು ವ್ಯಾಪಾರೋದ್ಯಮದವರೆಗೂ ಹಲವಾರು ವಿಷಯಗಳ ಬಗ್ಗೆ ತಿಳಿವಳಿಕೆ ಪಡೆಯಬೇಕು.‘ಹೌದು, ಈ ವಲಯದಲ್ಲಿ ಸಾಧನೆಯ ಮೆಟ್ಟಿಲೇರಬೇಕು ಎಂದು ಬಯಸುವವರು ತುಸು ಶ್ರಮ ಹಾಕಬೇಕು. ಕೇವಲ ಒಂದು ಬಾರಿ ಕಲಿತು, ನಂತರ ಕಲಿತಿದ್ದನ್ನೇ ಮತ್ತೆ–ಮತ್ತೆ ಕಲಿಸುವ ವಿಷಯ ಇದಲ್ಲ. ದಿನ–ದಿನವೂ ಹೊಸದನ್ನು ಕಲಿಯುತ್ತ, ಕಲಿಸುತ್ತ, ಹೊಸ ಹೊಸ ಪ್ರಯೋಗಗಳಿಗೆ ಒಡ್ಡಿಕೊಳ್ಳುತ್ತ ಸಾಗುವವರಿಗೆ ಇದು ಅತ್ಯುತ್ತಮ ಆಯ್ಕೆ’ ಎನ್ನುತ್ತಾರೆ  ‘ದಿ ಝೋನ್’ ಪಿಲಾಟೆ ಕೇಂದ್ರದ ವ್ಯವಸ್ಥಾಪಕಿ ಅಂಜಲಿ ಸರೀನ್.ಬೋಧನೆಯ ಕೌಶಲ

* ಚುರುಕಾದ, ಸಂವೇದನಾಶೀಲ ವ್ಯಕ್ತಿತ್ವ

* ಗತಿ ಮತ್ತು ಲಯವನ್ನು ಅರ್ಥಮಾಡಿಕೊಳ್ಳುವ ಜಾಣ್ಮೆ

* ಸುರಕ್ಷಿತ ವ್ಯಾಯಾಮ ಮತ್ತು ಸಮತೋಲನವನ್ನು ಪಾಕಾಡುವುದು

* ತರಬೇತಿಯಲ್ಲಿರುವವರಿಗೆ ತಮ್ಮ ವೈಯಕ್ತಿಕ ಗುರಿಗಳನ್ನು ಸಾಧಿಸಲು ಸಹಾಯ ಮಾಡುವುದು ಮತ್ತು ಅವುಗಳನ್ನು ತಲುಪಲು ಅವರಿಗೆ ವೈಯಕ್ತಿಕ ಮಟ್ಟದಲ್ಲಿ ಮಾರ್ಗೋಪಾಯಗಳನ್ನು ಹಾಕಿಕೊಡುವುದು.ಮನಸ್ಸು ಮತ್ತು ದೇಹ ಎರಡೂ ಪರಸ್ಪರ ಪೂರಕವಾಗಿರುವ ವ್ಯವಸ್ಥೆಗಳು. ವ್ಯಕ್ತಿಯ ಪರಿಪೂರ್ಣ ಆರೋಗ್ಯ ಇವೆರಡೂ ವ್ಯವಸ್ಥೆಗಳ ಅತ್ಯುತ್ತಮ ನಿರ್ವಹಣೆಯನ್ನು ಅವಲಂಬಿಸಿರುತ್ತದೆ. ಪಿಲಾಟೆ ಎನ್ನುವುದು ಮನಸ್ಸು ಮತ್ತು ದೇಹ ಎರಡರ ನಡುವೆ ಲಯ ಸೃಷ್ಟಿಸಿ ಉತ್ತಮ ಆರೋಗ್ಯವನ್ನು ಸಾಧಿಸುವ ಒಂದು ಕಲೆ. ಮತ್ತು ಅದು ಒಂದು ವಿಜ್ಞಾನವೂ ಆಗಿದೆ.ಆರೋಗ್ಯ, ವ್ಯಕ್ತಿತ್ವ ಹಾಗೂ ವೃತ್ತಿಜೀವನ ಎಲ್ಲವೂ ಒಂದೇ ನಿಟ್ಟಿನಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಿರುವ ಕ್ಷೇತ್ರವಿದು. ಇತರರ ಆರೋಗ್ಯದೊಂದಿಗೆ ತಮ್ಮ ಸ್ವಾಸ್ಥ್ಯವನ್ನೂ ಕಾಪಾಡಿಕೊಳ್ಳಲು ಬಯಸುವವರು, ಮೈ–ಮನಗಳೆರಡಕ್ಕೂ ಚೈತನ್ಯ ತುಂಬುತ್ತ–ತುಂಬಿಕೊಳ್ಳುತ್ತ, ಆರೋಗ್ಯವನ್ನು ಹಂಚಿ, ಬಾಚಿಕೊಳ್ಳಲು ಬಯಸುವವರು ಪಿಲಾಟೆ ತರಬೇತುದಾರರಾಗಬಹುದು.(ಮಾಹಿತಿಗೆ: ವೆಬ್ ಸೈಟ್ www.thezonestudio.com. ಮೊಬೈಲ್ 88611 36302)ಇಲ್ಲೂ ಇದೆ ಭವಿಷ್ಯ

‘ದಿ ಝೋನ್’ ಸ್ಟೂಡಿಯೊದಲ್ಲಿ ಇಂತಹ ಪಿಲಾಟೆ ತರಬೇತುದಾರರಿಗೆ ವೃತ್ತಿಪರ ತರಬೇತಿ ನೀಡುತ್ತೇವೆ. ಇಲ್ಲಿ ಕಲಿತು ಪ್ರಮಾಣಪತ್ರ ಪಡೆದವರು ದೇಶದ ಯಾವುದೇ ಮೂಲೆಯಲ್ಲಿ ಹೋಗಿ ತಮ್ಮ ವೃತ್ತಿಯನ್ನು ಆರಂಭಿಸಬಹುದು. ಅವರವರ ವೈಯಕ್ತಿಕ ಸಾಮರ್ಥ್ಯದ ಮೇಲೆ 3ರಿಂದ 6 ತಿಂಗಳ ಕಾಲ ತರಬೇತಿ ನೀಡಲಾಗುತ್ತದೆ. ಯಾರು, ಯಾವ ಕೋರ್ಸನ್ನು ಎಷ್ಟು ಅವಧಿಯಲ್ಲಿ ಮುಗಿಸುತ್ತಾರೆ ಎನ್ನುವುದರ ಆಧಾರದ ಮೇಲೆ ಶುಲ್ಕವನ್ನು ನಿಗದಿಪಡಿಸಲಾಗುತ್ತದೆ. ಸಾಮಾನ್ಯವಾಗಿ 30,000 ರೂಪಾಯಿಯಿಂದ 1.5 ಲಕ್ಷದವರೆಗೆ ಖರ್ಚು ತಗುಲಬಹುದು. ಈವರೆಗೆ ಇಲ್ಲಿ ಸುಮಾರು 150 ಜನರು ತರಬೇತಿ ಪಡೆದು ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದಾರೆ.

–ಅಂಜಲಿ ಸರೀನ್, ‘ದಿಝೋನ್’ ವ್ಯವಸ್ಥಾಪಕಿ ಮತ್ತು ನಿರ್ದೇಶಕಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.