ಸೋಮವಾರ, ಜನವರಿ 20, 2020
18 °C

ಪಿಲಿಕುಳ ನಿಸರ್ಗಧಾಮದಲ್ಲಿ ಭಾಷೆ, ಗಡಿ ಮೀರಿ ಹಾಡು, ನೃತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ಬಿಡದಿಯ ಸಿಂಚನಾ-ಸಂಪತ್ ಅವರ ಪೂಜಾ ಕುಣಿತದ ಹೆಜ್ಜೆ ಗುರುತು ಮರೆಯುವ ಮೊದಲೇ ಆಂಧ್ರದ ಹುಡುಗರ ಪೆರಿನಿ ಶಿವ ತಾಂಡವದ ಡಮರುಗ ಸದ್ದು ಮಾಡಿತ್ತು. ಬಿಹಾರದ ವಿಕ್ರಮ ಬೇತಾಳ ನೃತ್ಯ ಬೆನ್ನು ಬಿಡದಂತೆ ಕಾಡಿತು. ಶಿವರಾಮ ಕಾರಂತ ಬಯಲು ರಂಗಮಂದಿರದಿಂದ ಹೊರಟ ಮಕ್ಕಳ ಚಪ್ಪಾಳೆ ಸದ್ದು ನೇರವಾಗಿ ಮುಗಿಲಿಗೆ ಮುಟ್ಟಿತು...ಇಲ್ಲಿಗೆ ಸಮೀಪದ ಪಿಲಿಕುಳ ನಿಸರ್ಗಧಾಮದಲ್ಲಿ ನಡೆಯುತ್ತಿರುವ `ಬಾಲ ಭಾರತ್ ಸೃಜನೋತ್ಸವ~ದಲ್ಲಿ ಸೋಮವಾರ ಕಂಡ ಕೆಲವು ದೃಶ್ಯಗಳು ಇವು. ದೂರದ ಜಮ್ಮು ಮತ್ತು ಕಾಶ್ಮೀರ, ಗುಜರಾತ್, ಒಡಿಶಾ ಸಹಿತ ಒಟ್ಟು 17 ರಾಜ್ಯಗಳ 420ಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ರಾಜ್ಯದ ಸುಮಾರು 1200ರಷ್ಟು ವಿದ್ಯಾರ್ಥಿಗಳು ಒಂದೆಡೆ ಸೇರಿದ ಸಂದರ್ಭ ಇದು. ವಾರದ ಹಿಂದೆಯಷ್ಟೇ ಯುವಜನೋತ್ಸವದಿಂದ ಮಿನಿ ಭಾರತವೆಂಬಂತೆ ಕಂಗೊಳಿಸಿದ್ದ ಮಂಗಳೂರು, ಪಿಲಿಕುಳದಲ್ಲಿನ ಹಕ್ಕಿಗಳನ್ನೂ ಮೀರಿ ವಿನೂತನ ಕಲರವದೊಂದಿಗೆ ಗಮನ ಸೆಳೆಯಿತು.ಪಿಲಿಕುಳದ ಗುತ್ತಿನಮನೆಯ ಅಂಗಳದಲ್ಲಿ 350 ಮೀಟರ್ ಉದ್ದದ ಕ್ಯಾನ್ವಾಸ್ ಬಟ್ಟೆಯಲ್ಲಿ 400 ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲಿ ಮೂಡಿದ ಚಿತ್ರವನ್ನು ರಚಿಸುವ ಮೂಲಕ ಅಲ್ಲೊಂದು ಕಲಾಲೋಕ ಸೃಷ್ಟಿಯಾಯಿತು. ಮಣ್ಣಿನ ಕಲಾಕೃತಿ, ಡ್ರಾಯಿಂಗ್ ಶೀಟ್‌ನಲ್ಲಿ ಚಿತ್ರ ರಚನೆ, ಗೂಡುದೀಪ, ಮುಖವಾಡ, ಸರಳ ಜಾದೂ ಕಲೆ ಸಹಿತ ಮಕ್ಕಳ ಕುತೂಹಲ ತಣಿಸುವುದಕ್ಕೆ ಅಲ್ಲಿ ನಾನಾ ಪ್ರಕಾರಗಳ ಪ್ರಾತ್ಯಕ್ಷಿಕೆಗಳು ಇದ್ದವು.ಮೋಜಿನ ವಿಜ್ಞಾನ ವಸ್ತುಪ್ರದರ್ಶನ ಮತ್ತೊಂದು ಆಕರ್ಷಣೆಯಾಗಿತ್ತು. ದ್ರವ ಸಾರಜನಕದಲ್ಲಿ (ಲಿಕ್ವಿಡ್ ನೈಟೋಜನ್) ಅದ್ದಿದ ಹಸಿರೆಲೆ ಕ್ಷಣದಲ್ಲಿ ಹಪ್ಪಳದಂತೆ ಪುಡಿಪುಡಿಯಾಗುವುದು, ಗಾಳಿ ತುಂಬಿದ ಬಲೂನನ್ನು ನೈಟ್ರೋಜನ್‌ನಲ್ಲಿ ಅದ್ದಿದ ತಕ್ಷಣ ಉಂಟಾಗುವ ವಿಸ್ಮಯಗಳನ್ನು ಕಂಡ ಮಕ್ಕಳು ಪುಳಕಗೊಂಡರು.ಉಚಿತ ಪ್ರವೇಶ: ಪಿಲಿಕುಳದ ಮೃಗಾಲಯದೊಳಗೆ ಮಕ್ಕಳಿಗೆ ಉಚಿತ ಪ್ರವೇಶ ಕಲ್ಪಿಸಿದ್ದರಿಂದ ಅವರೆಲ್ಲ ತುಂಬಾ ಖುಷಿಪಟ್ಟರು. ಬೆಂಗಳೂರಿನ ಬಾಲಭವನ ಸೊಸೈಟಿಯ ಆಸಕ್ತಿಯ ಫಲ ಇದು. ಹೊರ ರಾಜ್ಯಗಳ ಬಾಲಭವನ ಸೊಸೈಟಿ ವತಿಯಿಂದ ಬಂದ ಮಕ್ಕಳು ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಚ್ಚು ಒತ್ತು ಕೊಟ್ಟಿದ್ದರು. ಹೀಗಾಗಿಯೇ ಅವರ ವೇಷ ಭೂಷಣ, ತಾಳ, ನೃತ್ಯಗಳು ಬಹಳ ಶಾಸ್ತ್ರಬದ್ಧವಾಗಿದ್ದವು. ಬಹಳ ಸಮಯದಿಂದ ಕಲಿತು ಇಲ್ಲಿ ಪ್ರೌಢ ಪ್ರದರ್ಶನ ನೀಡಿಬಿಟ್ಟರು.`ಸೃಜನೋತ್ಸವ~ ಎಂಬುದು ನಾಲ್ಕು ವಿಭಾಗಗಳ ಸಂಗಮ. ಸೃಜನಾತ್ಮಕ ಕಲೆ, ಸೃಜನಾತ್ಮಕ ಬರವಣಿಗೆ, ಸೃಜನಾತ್ಮಕ  ಪ್ರದರ್ಶನ ಕಲೆ ಮತ್ತು ವಿಜ್ಞಾನ ಸಾಧನೆ ಇವುಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆ ತೋರಿಸುವ ಮಹಾನ್ ವೇದಿಕೆ ಇದು. ಹೊರ ರಾಜ್ಯಗಳ ವಿದ್ಯಾರ್ಥಿಗಳು ಸೃಜನಾತ್ಮಕ ಪ್ರದರ್ಶನ ಕಲೆ ಮತ್ತು ಕಲಾಕೃತಿ ರಚನೆಯಲ್ಲಿ ವಿಶೇಷವಾಗಿ ತೊಡಗಿಕೊಂಡರು.ರಾಜ್ಯದ ಮಕ್ಕಳು ಎಲ್ಲಾ ಕ್ಷೇತ್ರಗಳಲ್ಲೂ ಇದ್ದರು. ಬಿಹಾರದ ಕಿಲ್ಕರಿ ನೃತ್ಯಕ್ಕೆ ಪ್ರತಿಯಾಗಿ ನಮ್ಮವರು ಪೂಜಾ ನೃತ್ಯ ತೋರಿಸಿಕೊಟ್ಟರು. ಗುಜರಾತ್‌ನವರು ಆದಿವಾಸಿ ನೃತ್ಯಕ್ಕೆ ಮಂಗಳೂರಿನವರು ನವಿಲಿನ ನೃತ್ಯದಿಂದ ಉತ್ತರಿಸಿದರು. ಶಿವರಾಮ ಕಾರಂತ ಬಯಲು ರಂಗಮಂದಿರದಲ್ಲಿ ಮಿನಿ ಭಾರತವೇ ನರ್ತಿಸುತ್ತಿತ್ತು.

 

ಪ್ರತಿಕ್ರಿಯಿಸಿ (+)