ಶುಕ್ರವಾರ, ಜನವರಿ 24, 2020
27 °C

ಪುಟಿದೇಳುವ ಉತ್ಸಾಹದಲ್ಲಿ ದೋನಿ ಪಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಡ್ನಿ (ಪಿಟಿಐ): ಕಾಂಗರೂ ನಾಡಿನಲ್ಲಿ ಈಗ ಒಂದು ಮಾತು ಚಾಲ್ತಿಯಲ್ಲಿದೆ. ಅದು ಸಿಡ್ನಿ ಕ್ರಿಕೆಟ್ ಕ್ರೀಡಾಂಗಣಕ್ಕೆ (ಎಸ್‌ಸಿಜೆ) `ಸಚಿನ್ ಕ್ರಿಕೆಟ್ ಕ್ರೀಡಾಂಗಣ~ ಎಂದು ಹೆಸರಿಡಬೇಕು ಎಂಬುದು! ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಕೂಡ ಒಮ್ಮೆ ತಮಾಶೆಗೆ ಈ ರೀತಿ ಹೇಳಿದ್ದರು.ಅದಕ್ಕೆ ಕಾರಣವಿದೆ. ಈ ಕ್ರೀಡಾಂಗಣದಲ್ಲಿ ಆಡಿದ ನಾಲ್ಕು ಪಂದ್ಯಗಳಿಂದ ತೆಂಡೂಲ್ಕರ್ 221.33 ಸರಾಸರಿಯಲ್ಲಿ 664 ರನ್ ಗಳಿಸಿದ್ದಾರೆ. ಅದರಲ್ಲಿ ಎರಡು ಶತಕ ಹಾಗೂ ಒಂದು ದ್ವಿಶತಕ ಸೇರಿದೆ. ವಿದೇಶದ ಕ್ರೀಡಾಂಗಣಗಳ ಪೈಕಿ ಇದು ಸಚಿನ್ ಪಾಲಿಗೆ ನೆಚ್ಚಿನ ಅಂಗಳ ಕೂಡ.

 

ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಮಂಗಳವಾರ ಇಲ್ಲಿ ಆರಂಭವಾಗಲಿರುವ ಟೆಸ್ಟ್ ಕ್ರಿಕೆಟ್ ಸರಣಿಯ ಎರಡನೇ ಪಂದ್ಯ ಇದೇ ಕಾರಣದಿಂದ ಕುತೂಹಲ ಕೆರಳಿಸಿದೆ. ಮೆಲ್ಬರ್ನ್ ಟೆಸ್ಟ್ ಪಂದ್ಯದ ಸೋಲಿನಿಂದ ಆಘಾತಗೊಂಡಿದ್ದ ಮಹಿ ಬಳಗ ಇಲ್ಲಿ ಪುಟಿದೇಳುವ ಉತ್ಸಾಹದಲ್ಲಿದೆ.ಸಚಿನ್ ಅವರ ಸದ್ಯದ ಫಾರ್ಮ್ ಹಾಗೂ ಈ ಅಂಗಳದಲ್ಲಿ ಅವರ ಸಾಧನೆ ಕೊಂಚ ಸ್ಫೂರ್ತಿ ನೀಡಿದೆ. ಶತಕಗಳ ಶತಕದ ಸಾಧನೆ ಸನಿಹದಲ್ಲಿರುವ ಸಚಿನ್ ಅವರಿಗೆ ಒಂಬತ್ತು ತಿಂಗಳಿನಿಂದ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೂರಂಕಿ ಮುಟ್ಟಲು ಸಾಧ್ಯವಾಗಿಲ್ಲ. ಹಾಗಾಗಿ ಅವರ ನೆಚ್ಚಿನ ಕ್ರೀಡಾಂಗಣದಲ್ಲಿ ಈ ಸಾಧನೆ ಮೂಡಿಬರಬಹುದು ಎಂಬುದು ಎಲ್ಲರ ವಿಶ್ವಾಸ.ವಿಶೇಷವೆಂದರೆ ಈ ಐತಿಹಾಸಿಕ ಕ್ರೀಡಾಂಗಣದಲ್ಲಿ ನಡೆಯಲಿರುವ ನೂರನೇ ಟೆಸ್ಟ್ ಪಂದ್ಯವಿದು. ಹಾಗಾಗಿ ಈ ಪಂದ್ಯ ಮಹತ್ವ ಪಡೆದುಕೊಂಡಿದೆ. ಈ ಪಂದ್ಯದಲ್ಲಿ ಸಚಿನ್ ಶತಕಗಳ ಶತಕದ ಸಾಧನೆ ಮಾಡಿದರೆ ಅದರ ತೂಕ ಮತ್ತಷ್ಟು ಹೆಚ್ಚಲಿದೆ. ಆಗ `ಸಚಿನ್ ಕ್ರಿಕೆಟ್ ಕ್ರೀಡಾಂಗಣ~ ಎಂದು ಹೆಸರು ಇಟ್ಟರೂ ಅಚ್ಚರಿ ಇಲ್ಲ. ಲಾರ್ಡ್ಸ್ (123) ಹಾಗೂ ಮೆಲ್ಬರ್ನ್ (104) ಕ್ರೀಡಾಂಗಣದಲ್ಲಿ ಮಾತ್ರ 100ಕ್ಕೂ ಅಧಿಕ ಟೆಸ್ಟ್ ಪಂದ್ಯಗಳು ನಡೆದಿವೆ.ಭಾರತ ಈ ಕ್ರೀಡಾಂಗಣದಲ್ಲಿ ಇದುವರೆಗೆ ಏಳು ಪಂದ್ಯಗಳನ್ನು ಆಡಿದೆ. ಆದರೆ 1978ರಲ್ಲಿ ಮಾತ್ರ ಗೆಲುವು ದಾಖಲಿಸಿತ್ತು ಅಷ್ಟೆ. ಈ ಬಾರಿ ಸಚಿನ್ ಬಲದಿಂದ ಗೆಲುವಿನ ವಿಶ್ವಾಸದಲ್ಲಿದೆ. ಹಾಗೇ, ವಿ.ವಿ.ಎಸ್.ಲಕ್ಷ್ಮಣ್ ಕೂಡ ಈ ಅಂಗಳದಲ್ಲಿ 96.20 ಸರಾಸರಿ ಹೊಂದಿದ್ದು, ಆಡಿದ ಮೂರೂ ಪಂದ್ಯಗಳಲ್ಲಿ ಶತಕ ಗಳಿಸಿದ್ದಾರೆ.ಆದರೆ ಗೌತಮ್ ಗಂಭೀರ್ ಹಾಗೂ ವಿರಾಟ್ ಕೊಹ್ಲಿ ಅವರ ಫಾರ್ಮ್ ಆತಂಕಕ್ಕೆ ಕಾರಣವಾಗಿದೆ. ಗಂಭೀರ್ ಪದೇಪದೇ ವಿಫಲರಾಗುತ್ತಿದ್ದಾರೆ. ವಿದೇಶಿ ಪಿಚ್‌ಗಳಲ್ಲಿ ಕೊಹ್ಲಿ ಏಳು ಇನಿಂಗ್ಸ್‌ಗಳಿಂದ ಕೇವಲ 107 ರನ್ ಕಲೆ ಹಾಕಿದ್ದಾರೆ. ಆಕಸ್ಮಾತ್ ಭಾರತ ತಂಡ ಈ ಪಂದ್ಯದಲ್ಲಿ ಏನಾದರೂ ಬದಲಾವಣೆ ಮಾಡಲು ಮುಂದಾದರೆ ಅದು ಕೊಹ್ಲಿ ಕೈಬಿಟ್ಟು ರೋಹಿತ್ ಶರ್ಮ ಅವರಿಗೆ ಸ್ಥಾನ ನೀಡುವುದು.ಆದರೆ ಆಸ್ಟ್ರೇಲಿಯಾ ತಂಡದಲ್ಲಿ ಯಾವುದೇ ಬದಲಾವಣೆ ಇಲ್ಲ.  ಮೆಲ್ಬರ್ನ್‌ನಲ್ಲಿ ಆಡಿದ ತಂಡವೇ ಇಲ್ಲೂ ಕಣಕ್ಕಿಳಿಯಲಿದೆ. ಇದನ್ನು ಕಾಂಗರೂ ಪಡೆಯ ನಾಯಕ ಮೈಕಲ್ ಕ್ಲಾರ್ಕ್ ಸ್ಪಷ್ಟಪಡಿಸಿದ್ದಾರೆ.ನಾಲ್ಕು ಮಂದಿ ವೇಗಿಗಳನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದ್ದರಾದರೂ ಅದಕ್ಕೆ ತಂಡದಲ್ಲಿ ಸಹಮತ ಸಿಕ್ಕಿಲ್ಲ. ಹಾಗಾಗಿ ಮೂರು ಮಂದಿ ವೇಗಿಗಳು ಹಾಗೂ ಒಬ್ಬ ಸ್ಪಿನ್ನರ್ ಕಣಕ್ಕಿಳಿಸಲು ಸಜ್ಜಾಗಿದೆ. ಈ ಕಾರಣ ವೇಗಿ ರ‌್ಯಾನ್ ಹ್ಯಾರಿಸ್‌ಗೆ ಈ ಪಂದ್ಯದಲ್ಲಿ ಅವಕಾಶ ಇಲ್ಲ.ಈ ಸರಣಿ ಆರಂಭಕ್ಕೂ ಮುನ್ನ ಸದ್ಯದ ತಂಡವನ್ನು ಆಸ್ಟ್ರೇಲಿಯಾ ಕಂಡ ಅತಿ ದುರ್ಬಲ ತಂಡ ಎಂದು ಕ್ರಿಕೆಟ್ ಪರಿಣತರು ಬಣ್ಣಿಸಿದ್ದರು. ಆದರೆ ಮೆಲ್ಬರ್ನ್‌ನಲ್ಲಿ ಆಡಿದ ರೀತಿ ಅಚ್ಚರಿ ಮೂಡಿಸಿದೆ.ಪ್ರಮುಖವಾಗಿ ಸ್ಥಾನ ಕಳೆದುಕೊಳ್ಳುವ ಭೀತಿಯಲ್ಲಿದ್ದ ಹಿರಿಯ ಆಟಗಾರರಾದ ರಿಕಿ ಪಾಂಟಿಂಗ್ ಹಾಗೂ ಮೈಕ್ ಹಸ್ಸಿ ಮೊದಲ ಪಂದ್ಯದಲ್ಲಿ ತಂಡವನ್ನು ರಕ್ಷಿಸಿದ್ದರು. ಈಗ ಈ ತಂಡದವರು ನಾಲ್ಕು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆಯ ಕನಸು ಕಾಣುತ್ತಿದ್ದಾರೆ.ಭಾರತ ಯಾವತ್ತೂ ಹೀಗೆ. ಏಕೆಂದರೆ ವಿದೇಶಿ ನೆಲದಲ್ಲಿ ಸರಣಿಯ ಮೊದಲ ಪಂದ್ಯದಲ್ಲಿ ಆಘಾತ ಎದುರಿಸುವುದು ಹೊಸ ವಿಷಯವೇನಲ್ಲ. ಬಳಿಕ ಪುಟಿದೆದ್ದು ಆತಿಥೇಯರಿಗೆ ಸವಾಲು ನೀಡಿದ ಉದಾಹರಣೆ  ಕೂಡ ಇದೆ. ಹಾಗಾಗಿ ಈ ಸರಣಿಯಲ್ಲೂ ದೋನಿ ಬಳಗ ತಿರುಗೇಟು ನೀಡಲಿದೆ ಎಂಬ ವಿಶ್ವಾಸ ಭಾರತದ ಕ್ರಿಕೆಟ್ ಪ್ರೇಮಿಗಳದ್ದು.ಆದರೆ ಆತಿಥೇಯ ದೇಶದ ವೇಗಿಗಳಾದ ಪೀಟರ್ ಸಿಡ್ಲ್, ಜೇಮ್ಸ ಪ್ಯಾಟಿನ್‌ಸನ್, ಬೆನ್ ಹಿಲ್ಫೆನ್ಹಾಸ್ ಅವರನ್ನು ಪ್ರವಾಸಿ ತಂಡದ ಅನುಭವಿ ಬ್ಯಾಟ್ಸ್‌ಮನ್‌ಗಳು ಯಾವ ರೀತಿ ಎದುರಿಸುತ್ತಾರೆ ಎಂಬುದರ ಮೇಲೆ ಈ ಪಂದ್ಯ ಫಲಿತಾಂಶ ಅವಲಂಬಿಸಿದೆ.2008ರಲ್ಲಿ ಪ್ರವಾಸ ಕೈಗೊಂಡಿದ್ದಾಗ ಹರಭಜನ್ ಸಿಂಗ್ ಹಾಗೂ ಆ್ಯಂಡ್ರ್ಯೂ ಸೈಮಂಡ್ಸ್ ನಡುವಿನ `ಮಂಕಿಗೇಟ್~ ಪ್ರಕರಣ ನಡೆದಿದ್ದು ಇದೇ ಕ್ರೀಡಾಂಗಣದಲ್ಲಿ. ಆದರೆ ಈ ಇಬ್ಬರೂ ಆಟಗಾರರು ಈಗ ತಂಡದಲ್ಲಿಲ್ಲ!ತಂಡಗಳು

ಭಾರತ: ಮಹೇಂದ್ರ ಸಿಂಗ್ ದೋನಿ (ನಾಯಕ), ವೀರೇಂದ್ರ ಸೆಹ್ವಾಗ್, ಗೌತಮ್ ಗಂಭೀರ್, ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್, ವಿ.ವಿ.ಎಸ್.ಲಕ್ಷ್ಮಣ್, ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಆರ್.ಅಶ್ವಿನ್, ಜಹೀರ್ ಖಾನ್, ಇಶಾಂತ್ ಶರ್ಮ, ಉಮೇಶ್ ಯಾದವ್, ಅಜಿಂಕ್ಯ ರಹಾನೆ, ಆರ್.ವಿನಯ್ ಕುಮಾರ್, ಅಭಿಮನ್ಯು ಮಿಥುನ್, ಪ್ರಗ್ಯಾನ್ ಓಜಾ ಹಾಗೂ ವೃದ್ಧಿಮಾನ್ ಸಹಾ.ಆಸ್ಟ್ರೇಲಿಯಾ: ಮೈಕಲ್ ಕ್ಲಾರ್ಕ್ (ನಾಯಕ), ಎಡ್ ಕೋವನ್, ಡೇವಿಡ್ ವಾರ್ನರ್, ಶಾನ್ ಮಾರ್ಷ್, ರಿಕಿ ಪಾಂಟಿಂಗ್, ಮೈಕಲ್ ಹಸ್ಸಿ, ಬ್ರಾಡ್ ಹಡ್ಡಿನ್, ಪೀಟರ್ ಸಿಡ್ಲ್, ಜೇಮ್ಸ ಪ್ಯಾಟಿನ್‌ಸನ್, ಬೆನ್ ಹಿಲ್ಫೆನ್ಹಾಸ್, ನೇಥನ್ ಲಿಯೋನ್ ಹಾಗೂ ರ‌್ಯಾನ್ ಹ್ಯಾರಿಸ್ (12ನೇ ಆಟಗಾರ)

ಅಂಪೈರ್‌ಗಳು: ಮರಾಯಿಸ್ ಎರಾಸ್ಮಸ್ (ದಕ್ಷಿಣ ಆಫ್ರಿಕಾ) ಹಾಗೂ ಇಯಾನ್ ಗೌಲ್ಡ್ (ಇಂಗ್ಲೆಂಡ್).

ಮ್ಯಾಚ್ ರೆಫರಿ: ರಂಜನ್ ಮದುಗಲೆ (ಶ್ರೀಲಂಕಾ)

ಪಂದ್ಯ ಆರಂಭ: ಬೆಳಿಗ್ಗೆ 5 ಗಂಟೆಗೆ (ಭಾರತೀಯ ಕಾಲಮಾನ). ನೇರ ಪ್ರಸಾರ: ಸ್ಟಾರ್ ಕ್ರಿಕೆಟ್.

ಪ್ರತಿಕ್ರಿಯಿಸಿ (+)