ಭಾನುವಾರ, ಮೇ 22, 2022
21 °C

ಪುಟ್ಟಸ್ವಾಮಿ ಬಳಿ ಕುಮಾರಸ್ವಾಮಿ ಜಾತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಒಟ್ಟು 275.25 ಎಕರೆ ಜಮೀನನ್ನು ಡಿನೋಟಿಫೈ ಮಾಡಿದ್ದು, ಇದರಲ್ಲಿ 7.36 ಎಕರೆ ಜಾಗವನ್ನು ಅವರ ಸಂಬಂಧಿಕರೇ ಖರೀದಿಸಿದ್ದಾರೆ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಶನಿವಾರ ಇಲ್ಲಿ ಆರೋಪ ಮಾಡಿದರು.ಕುಮಾರಸ್ವಾಮಿ ಅವರ ಹತ್ತಿರದ ಸಂಬಂಧಿಗಳೇ ಡಿನೋಟಿಫೈ ಮಾಡಿದ ಜಾಗವನ್ನು ಖರೀದಿ ಮಾಡಿದ್ದು, ಇದು ಕಾನೂನು ಬಾಹಿರ ಅಲ್ಲವೇ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.ಯಡಿಯೂರಪ್ಪ ಅವರು ಯಾವುದೊ ಒಂದು ಜಮೀನನ್ನು ಡಿನೋಟಿಫೈ ಮಾಡಿದ್ದಕ್ಕೆ ವಿನಾಕಾರಣ ಟೀಕೆ ಮಾಡುತ್ತಿದ್ದು, ಈ ಪ್ರಕರಣಗಳಿಗೆ ಕುಮಾರಸ್ವಾಮಿ ಉತ್ತರ ನೀಡಲಿ ಎಂದು ಸವಾಲು ಹಾಕಿದ್ದಾರೆ.ಧರ್ಮಸಿಂಗ್ ಸಂಪುಟದಲ್ಲಿ ಎಚ್.ಡಿ.ರೇವಣ್ಣ ಸಚಿವರಾಗಿದ್ದರು. ಆ ಸಂದರ್ಭದಲ್ಲಿಯೂ ಹೊಸಹಳ್ಳಿಯ ಗೌರಮ್ಮ ಎಂಬುವರ 10.17 ಎಕರೆ ಜಾಗವನ್ನು ಡಿನೋಟಿಫೈ ಮಾಡಲಾಗಿದೆ. ಅದರಲ್ಲಿ 2.20 ಎಕರೆ ಜಾಗವನ್ನು ರೇವಣ್ಣ ಅವರ ಸಹೋದರ ಎಚ್.ಡಿ.ಬಾಲಕೃಷ್ಣೇಗೌಡರ ಪತ್ನಿ ಎಚ್.ಕವಿತಾ ಅವರು 50 ಲಕ್ಷ ರೂಪಾಯಿಗೆ ಖರೀದಿಸಿದ್ದಾರೆ. ಇದೇ ಜಮೀನನ್ನು ಎಂಟು ತಿಂಗಳ ನಂತರ ನಾಲ್ಕು ಕೋಟಿ ರೂಪಾಯಿಗೆ ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇದು ಅಕ್ರಮವಲ್ಲವೇ ಎಂದು ಅವರು ಪ್ರಶ್ನಿಸಿದರು.ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೇಲೆ ಹರಳೂರು ಗ್ರಾಮದಲ್ಲಿ 2.36 ಎಕರೆ ಡಿನೋಟಿಫೈ ಮಾಡಿ, ಅದರಲ್ಲಿ 33 ಗುಂಟೆ ಜಾಗವನ್ನು ಸಂಬಂಧಿಕರೇ ಖರೀದಿಸಿದ್ದಾರೆ. ಹತ್ತಿರದ ಸಂಬಂಧಿಯಾದ ಪಡುವಲಹಿಪ್ಪೆಯ ಅಣ್ಣೇಗೌಡರ ಪುತ್ರಿ ಮೇಘನಪ್ರಭು ಈ ಜಾಗವನ್ನು 93 ಲಕ್ಷ ರೂಪಾಯಿಗೆ ಖರೀದಿ ಮಾಡಿದ್ದಾರೆ ಎಂದು ದೂರಿದರು.ಉತ್ತರಹಳ್ಳಿಯ 6.12 ಎಕರೆ (ಸರ್ವೆ ನಂ 82) ಜಾಗವನ್ನು ಡಿನೋಟಿಫೈ ಮಾಡಿ ಅದರಲ್ಲಿ ಒಂದು ಎಕರೆ ಜಾಗವನ್ನು ದೇವೇಗೌಡರ ಹತ್ತಿರದ ಸಂಬಂಧಿ ಹಾಸನದ ಸೊಣ್ಣೇಗೌಡ ಜಿ.ಪಿ.ಎ ಪಡೆದು, ನಂತರ ಅದನ್ನು 8.3 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ.ಹರಳೂರಿನ 2.07 ಎಕರೆ (ಸರ್ವೆ ನಂ 100/2) ಜಾಗವನ್ನು ಡಿನೋಟಿಫೈ ಮಾಡಿ ಅದರಲ್ಲಿ 1.3 ಎಕರೆ ಜಾಗವನ್ನು ದೇವೇಗೌಡರ ಹತ್ತಿರದ ಸಂಬಂಧಿ ಹೊಳೆನರಸೀಪುರದ ಸರಸಮ್ಮ ಎಂಬುವರು ಖರೀದಿ ಮಾಡಿದ್ದಾರೆ. ನಂತರ ಅದನ್ನು ಅವರು 21.5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾರೆ ಎಂದು ವಿವರಿಸಿದರು. ಇದಲ್ಲದೆ, ಅಂತಿಮ ಅಧಿಸೂಚನೆ ನಂತರ 44.16 ಎಕರೆ ಡಿನೋಟಿಫೈ ಮಾಡಿದ್ದಾರೆ. ಐತೀರ್ಪು ಆಗಿರುವ 13 ಪ್ರಕರಣಗಳ ಒಟ್ಟು 90.24 ಎಕರೆ ಜಾಗವನ್ನು ಡಿನೋಟಿಫೈ ಮಾಡಿದ್ದಾರೆ ಎಂದು ದೂರಿದರು.ಈ ಎಲ್ಲ ಪ್ರಕರಣಗಳಲ್ಲಿಯೂ ಡಿನೋಟಿಫೈ ಮಾಡುವುದಕ್ಕೆ ನಗರಾಭಿವೃದ್ಧಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ವಿರೋಧ ವ್ಯಕ್ತಪಡಿಸಿದ್ದರು. ಆದರೂ ಕುಮಾರಸ್ವಾಮಿ ಡಿನೋಟಿಫೈ ಮಾಡಿ ಸರ್ಕಾರದ ಖಜಾನೆಗೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡಿದ್ದಾರೆ. ರೇವಣ್ಣ, ಕುಮಾರಸ್ವಾಮಿ ಅವರು ಲೆಕ್ಕ ಹಾಕುವ ಹಾಗೆ ಮಾಡಿದರೆ, ಈ ಡಿನೋಟಿಫೈ ಹಗರಣದಿಂದ ಸರ್ಕಾರದ ಬೊಕ್ಕಸಕ್ಕೆ 2000 ಕೋಟಿ ರೂಪಾಯಿ ನಷ್ಟ ಆಗಿರುತ್ತದೆ ಎಂದು ಹೇಳಿದರು.ತುಮಕೂರು ಗ್ರಾಮಾಂತರ ಶಾಸಕ ಸುರೇಶ್‌ಗೌಡ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು. ನಾಮ ಒಂದೇ ಇನ್ಶಿಯಲ್ ಹಲವು

ಬೆಂಗಳೂರು: ತೆರಿಗೆ ವಂಚಿಸುವ ಉದ್ದೇಶದಿಂದ ಕುಮಾರಸ್ವಾಮಿ ಒಡೆತನದ ಕಸ್ತೂರಿ ಮಾಧ್ಯಮ ಸಂಸ್ಥೆಯ ನಿರ್ದೇಶಕರ ಪಟ್ಟಿಯಲ್ಲಿ ತಮ್ಮ ಹೆಸರನ್ನು ವಿಭಿನ್ನ ರೀತಿಯಲ್ಲಿ ಕೊಟ್ಟು ಸರ್ಕಾರಕ್ಕೆ ವಂಚಿಸಿದ್ದಾರೆ ಎಂದು ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಬಿ.ಜೆ.ಪುಟ್ಟಸ್ವಾಮಿ ಶನಿವಾರ ಇಲ್ಲಿ ಆರೋಪ ಮಾಡಿದರು.ನಿರ್ದೇಶಕರ ಪಟ್ಟಿಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮಗ ಎಚ್.ಡಿ.ಕುಮಾರಸ್ವಾಮಿ ಎಂದೂ ನಮೂದಿಸಲಾಗಿದೆ. ಹಾಗೆಯೇ ಎಚ್.ಡಿ.ಕುಮಾರಸ್ವಾಮಿ ಮಗ ಎಚ್.ಕುಮಾರಸ್ವಾಮಿ; ಎಚ್.ಡಿ.ದೇವೇಗೌಡ ಮಗ ಡಿ.ಕುಮಾರಸ್ವಾಮಿ ಎಂದೂ ದಾಖಲಿಸಲಾಗಿದೆ. ಇವೆಲ್ಲವನ್ನೂ ಕಂಪೆನಿ ನೋಂದಣಿ ವೇಳೆ ಸಲ್ಲಿಸಬೇಕಿರುವ ಅರ್ಜಿ ನಮೂನೆ 32ರಲ್ಲಿ ಬರೆಯಲಾಗಿದೆ.ಮತ್ತೊಂದು ವಿಶೇಷವೆಂದರೆ, ಜೆ.ಪಿ.ನಗರದ ಕುಮಾರಸ್ವಾಮಿ ಮನೆಯ ವಿಳಾಸವೇ ಎಲ್ಲ ನಿರ್ದೇಶಕರ ವಿಳಾಸವಾಗಿದೆ. ಇದು ತೆರಿಗೆ ವಂಚನೆಗಾಗಿ ಮಾಡಿದ ಕುತಂತ್ರದ ಕೆಲಸ ಎಂದು ಪುಟ್ಟಸ್ವಾಮಿ ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.