ಭಾನುವಾರ, ಜೂನ್ 20, 2021
25 °C

ಪುಟ್ಟ ವರದಿಗಾರರು ನಿಮ್ಮಲ್ಲಿಗೆ ಬಂದಿದ್ದರಾ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಟ್ಟ ವರದಿಗಾರರು ನಿಮ್ಮಲ್ಲಿಗೆ ಬಂದಿದ್ದರಾ?

ಬೆಂಗಳೂರು: ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯ ಬಾಲಕ ಕೃಷ್ಣನಿಗೆ ತನ್ನ ಶಾಲೆಯ ಕೆಲವು ಸಮಸ್ಯೆಗಳ ಬಗ್ಗೆ ಚಿಂತೆ ಕಾಡುತ್ತಿತ್ತು. `ನಮ್ಮೂರಿನ ಕೆಲವು ಮದ್ಯವ್ಯಸನಿಗಳು ರಾತ್ರಿ ವೇಳೆ ಹೆಂಡದ ಬಾಟಲಿಗಳನ್ನು ಶಾಲಾ ಆವರಣದಲ್ಲಿ ಎಸೆಯುತ್ತಾರೆ. ಬೆಳಿಗ್ಗೆ ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಇದು ಮುಜುಗರ ತರುತ್ತದೆ. ಇದನ್ನೆಲ್ಲ ಪೊಲೀಸರ ಬಳಿ ಹೇಳಬೇಕು~ ಎನ್ನುತ್ತ ಪತ್ರಿಕಾ ವರದಿಗಾರನೂ ಆಗಿರುವ ಕೃಷ್ಣ ಲಗುಬಗೆಯಿಂದ ಮುನ್ನಡೆದ!ಮದ್ಯ ವ್ಯಸನಿಗಳ ಕಾಟ ಮಾತ್ರವಲ್ಲ, ಮರಿಯಮ್ಮನಹಳ್ಳಿಯಲ್ಲಿ ಮಕ್ಕಳು ಎದುರಿಸುತ್ತಿರುವ ಅನೇಕ ಸಮಸ್ಯೆಗಳ ಕುರಿತು ಪೊಲೀಸರ ಜೊತೆ ಮಾತನಾಡುವ ಇರಾದೆಯನ್ನು ಕೃಷ್ಣ `ಪ್ರಜಾವಾಣಿ~ ಪ್ರತಿನಿಧಿಯ ಬಳಿ ವ್ಯಕ್ತಪಡಿಸಿದ. ಪೊಲೀಸರ ಬಳಿ ಕೇಳಲು ಪ್ರಶ್ನೆಯನ್ನೂ ಸಿದ್ಧಪಡಿಸಿಕೊಂಡಿದ್ದ. ವರದಿಗಾರನಾಗಿ ಕೆಲಸ ಮಾಡುವಾಗ ಬಾಯಾರಿಕೆಯಾದರೆ ಒಂದು ಬಾಟಲಿ ನೀರು ಮತ್ತು ಹಸಿವು ಇಂಗಿಸಿಕೊಳ್ಳಲು ಬಿಸ್ಕತ್ತು ಕೂಡ ಅವನ ಬ್ಯಾಗ್‌ನಲ್ಲಿ ಇತ್ತು.ಇದೇನು? ಶಾಲಾ ವಿದ್ಯಾರ್ಥಿ ಪತ್ರಿಕಾ ವರದಿಗಾರನೂ ಆಗಲು ಸಾಧ್ಯವೇ ಎಂಬ ಅನುಮಾನವೇ? ಅನುಮಾನ ಬೇಡ, ಶಾಲಾ ಬಾಲಕ ಕೃಷ್ಣ ಪತ್ರಿಕಾ ವರದಿಗಾರನೂ ಹೌದು. ಕೃಷ್ಣ ಮಾತ್ರವಲ್ಲ, ತುಮಕೂರು, ಚಾಮರಾಜ ನಗರ, ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಗಳಿಂದ ಬಂದಿರುವ ವಿವಿಧ ಶಾಲೆಗಳ ಒಟ್ಟು 36 ಮಕ್ಕಳು ಗುರುವಾರ ಪತ್ರಿಕಾ ವರದಿಗಾರರಾಗಿ ಕೆಲಸ ಮಾಡಿದ್ದಾರೆ!ಚೈಲ್ಡ್ ರೈಟ್ಸ್ ಟ್ರಸ್ಟ್ (ಸಿಆರ್‌ಟಿ), ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರ (ಕೆಸಿಆರ್‌ಒ) ಮತ್ತು `ಯುನಿಸೆಫ್~ ಜಂಟಿಯಾಗಿ ಬೆಂಗಳೂರಿನಲ್ಲಿ ಆಯೋಜಿಸಿರುವ `ವರದಿಗಾರರಾಗಿ ಮಕ್ಕಳು~ ಕಾರ್ಯಕ್ರಮದಲ್ಲಿ ಇವರು ಪಾಲ್ಗೊಂಡಿದ್ದಾರೆ.ಈ ಮಕ್ಕಳು ನಗರದಲ್ಲಿ ವರದಿಗಾರರಾಗಿ ಗುರುವಾರ ಸುತ್ತಾಟ ನಡೆಸಿದ್ದಾರೆ. ತಮ್ಮ ಸುತ್ತಾಟದಲ್ಲಿ ಕಂಡುಬಂದ ಕುತೂಹಲಕರ ಸಂಗತಿಗಳನ್ನು ಗಮನಿಸಿ ಗೋಡೆ ಪತ್ರಿಕೆಯನ್ನೂ ಸಿದ್ಧಪಡಿಸಲಿದ್ದಾರೆ.ಪತ್ರಿಕೆಗಳು ಶುಕ್ರವಾರ ಬೆಳಿಗ್ಗೆ 11 ಗಂಟೆಯ ನಂತರ ಇಲ್ಲಿನ ಮಿಷನ್ ರಸ್ತೆಯಲ್ಲಿರುವ ಎಸ್‌ಸಿಎಂ ಹೌಸ್‌ನಲ್ಲಿ ಪ್ರದರ್ಶನಕ್ಕೆ ಲಭ್ಯವಿರಲಿದೆ.ಚಾಮರಾಜ ನಗರದಿಂದ ಬಂದಿದ್ದ `ಪುಟಾಣಿ ವರದಿಗಾರ~ ಎಸ್. ರವಿಶಂಕರ್ ಕೂಡ ಸಾಕಷ್ಟು ಪ್ರಶ್ನೆಗಳನ್ನು ಬರೆದಿಟ್ಟುಕೊಂಡಿದ್ದ. ಶಾಲಾ ಮಕ್ಕಳಿಗಾಗಿ ಸರ್ಕಾರ ನಿರ್ಮಿಸಿರುವ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಉತ್ತರ ಪಡೆದುಕೊಳ್ಳುವ ಉದ್ದೇಶ ರವಿಶಂಕರ್‌ನದು.`ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳ ಜೊತೆ ಮಾತನಾಡಿ ಮಕ್ಕಳಿಗೆ ಅವರಿಂದ ಯಾವ ಸಹಾಯ ದೊರೆಯುತ್ತದೆ ಎಂಬ ಕುರಿತು ವರದಿ ಸಿದ್ಧಪಡಿಸಬೇಕು~ ಎಂದು `ಪ್ರಜಾವಾಣಿ~ಗೆ ತಿಳಿಸಿದ.ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ಮಕ್ಕಳು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಪ್ಪಾರಪೇಟೆ ಪೊಲೀಸ್ ಠಾಣೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಇಲಾಖೆ ಕಚೇರಿಗಳು, ಮೆಜೆಸ್ಟಿಕ್ ಪ್ರದೇಶ, ಕೃಷ್ಣರಾಜ ಮಾರುಕಟ್ಟೆ, ಕಬ್ಬನ್ ಪಾರ್ಕ್, ಬೆಂಗಳೂರು ನಗರ ರೈಲು ನಿಲ್ದಾಣಗಳಿಗೆ ಗುರುವಾರ ಭೇಟಿ ನೀಡಿದ್ದಾರೆ.ಕಾರ್ಯಕ್ರಮದ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ಸಿಆರ್‌ಟಿಯ ಕಾರ್ಯಕಾರಿ ನಿರ್ದೇಶಕ ವಾಸುದೇವ ಶರ್ಮ, `ಯುನಿಸೆಫ್‌ನವರು ರಾಯಚೂರು ಜಿಲ್ಲೆಯಲ್ಲಿ ಮಕ್ಕಳ ಸಮಸ್ಯೆಗಳ ಕುರಿತು ಮಕ್ಕಳೇ ವರದಿ ಸಿದ್ಧಪಡಿಸುವ ಕಾರ್ಯಕ್ರಮ ನಡೆಸಿದ್ದರು. ಅಲ್ಲದೆ, ಆಂಧ್ರಪ್ರದೇಶದಲ್ಲೂ ಕೆಲವೆಡೆ ಇಂಥ ಪ್ರಯೋಗಗಳು ನಡೆದಿವೆ.ಇದೇ ಮಾದರಿಯಲ್ಲಿ ನಾವೂ ಕೆಲವು ಜಿಲ್ಲೆಗಳಲ್ಲಿ ಈ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೇವೆ~ ಎಂದು ತಿಳಿಸಿದರು. `ಸಿವಿಕ್ ಬೆಂಗಳೂರು~ ಸಂಸ್ಥೆಯ ಮುಖ್ಯಸ್ಥೆ ಕಾತ್ಯಾಯಿನಿ ಚಾಮರಾಜ್, ಸಿಆರ್‌ಟಿಯ ನಾಗಸಿಂಹ ಜಿ. ರಾವ್ ಮತ್ತಿತರರು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡಿದ್ದರು.

`ಹಳ್ಳಿ ಮಟ್ಟದಲ್ಲಿ ಪತ್ರಿಕೆಗಳು~

ನಗರಕ್ಕೆ ಬಂದಿರುವ ಈ ಪುಟ್ಟ ವರದಿಗಾರರಲ್ಲಿ ಕೆಲವರು ತಮ್ಮ ಹಳ್ಳಿಯಲ್ಲಿ ಈಗಾಗಲೇ ಗೋಡೆ ಪತ್ರಿಕೆಗಳನ್ನು ಪ್ರಕಟಿಸಿ, ಸ್ಥಳೀಯ ಆಡಳಿತದ ಗಮನ ಸೆಳೆದಿದ್ದಾರೆ. ಪತ್ರಿಕೆಯನ್ನು ಮಕ್ಕಳು ಸಿದ್ಧಪಡಿಸಿದ್ದಾರೆ ಎಂಬ ಕಾರಣದಿಂದಲೇ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳು ಅದನ್ನು ಓದಿ, ಮಕ್ಕಳಿಗೆ ಆಗಬೇಕಾದ ಕೆಲಸವನ್ನು ತ್ವರಿತವಾಗಿ ಮಾಡಿಕೊಟ್ಟ ಉದಾಹರಣೆಗಳೂ ಇವೆ ಎಂದು ವಾಸುದೇವ ಶರ್ಮ ಹೇಳಿದರು.ಮಕ್ಕಳು ತಮ್ಮ ಹಳ್ಳಿಯ ಸಮಸ್ಯೆಗಳ ಕುರಿತು ಸಿದ್ಧಪಡಿಸಿರುವ ಗೋಡೆ ಪತ್ರಿಕೆಗಳಲ್ಲಿ ಕೆಲವನ್ನು ಎಸ್‌ಸಿಎಂ ಹೌಸ್‌ನಲ್ಲಿ ಗುರುವಾರ ಪ್ರದರ್ಶನಕ್ಕೆ ಇಡಲಾಗಿತ್ತು. ಜಾತಿ ಪದ್ಧತಿ, ಬಾಲ್ಯ ವಿವಾಹ, ನೀರಿನ ಸಮಸ್ಯೆ, ರಸ್ತೆ ದುರವಸ್ಥೆ... ಹೀಗೆ ಊರಿನ ವಿವಿಧ ಸಮಸ್ಯೆಗಳ ಕುರಿತು ಪುಟಾಣಿ ವರದಿಗಾರರು ತಮ್ಮ ಪತ್ರಿಕೆಯಲ್ಲಿ ಚರ್ಚಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.