ಹತ್ತು ತಿಂಗಳ ಹಿಂದೆ ನಮ್ಮ ಮನೆಯ ಹಿತ್ತಲಿನಲ್ಲಿ ಮೂರು ದಿನಗಳ ಕಾಲ ಸರ್ವೆ ನಡೆಸಿದ್ದವು ಎರಡು ಮುದ್ದು ಹಕ್ಕಿಗಳು (ರೆಡ್ ಬ್ರೆಸ್ಟೆಡ್ ಬುಲ್ಬುಲ್). ಅವು ಗೂಡು ಕಟ್ಟುತ್ತವೇನೋ ಎಂಬ ಆಸೆಯಿಂದ ಹುಲ್ಲುಹರಡಿ, ಹತ್ತಿ ಹರವಿ, ನೀರು, ಕಡಲೆ, ಕಾಳು ಎಲ್ಲಾ ಕಾಣುವ ಹಾಗೆ ಇಟ್ಟು ಆತಂಕದಿಂದ, ಆಸೆಯಿಂದ ಕಾದಿದ್ದೆ.

ಆದರೆ ಅವು ಜಾಗವನ್ನು ರಿಜೆಕ್ಟ್ ಮಾಡಿ, ನನ್ನ ನೊಯ್ಯಿಸಿ ಹಾರಿಹೋಗಿದ್ದವು. ಗೂಡು ಕಟ್ಟಲೇ ಇಲ್ಲ ಪುಟ್ಟ ಹಕ್ಕಿಗಳು ಎಂದು ಬೇಸರಗೊಂಡಿದ್ದೆ, ದುಃಖಿಸಿದ್ದೆ. ಎಮೋಷನಲ್ ಫೂಲ್ ಎಂದು ಬೈಯಿಸಿಕೊಂಡಿದ್ದೆ. ದಿನಗಳು ಉರುಳಿದ್ದವು. ತಿಂಗಳುಗಳಾಗಿದ್ದವು.

ಯುಗಾದಿ ಹಬ್ಬಕ್ಕೆ ಎರಡು ದಿನ ಇವೆ ಎನ್ನುವಾಗ ಮನೆಯ ಸುತ್ತಾ ಕೊಂಚ ಕ್ಲೀನ್ ಮಾಡಿಸುವ ಎಂದುಕೊಂಡು ಕಾಂಪೌಂಡು ಸುತ್ತು ಹಾಕಿದಾಗ ಮನೆಯ ಬಲಕ್ಕಿರುವ ದೊಡ್ಡ ಪಾಮ್ ಗಿಡ, ಅದರ ಪಕ್ಕಕ್ಕಿರುವ ಪುಟ್ಟ ಪುಟ್ಟ ಅಲಂಕಾರಿಕ ಗಿಡಗಳ ನಡುವೆ ಏನೋ ಕುಪ್ಪಳಿಸಿದಂತೆ ಕಾಣಿಸಿ ಮೊದಲು ಬೆಚ್ಚಿಬಿದ್ದೆ.

ಬಗ್ಗಿ ನೋಡಿದರೆ ಕಂಡಿದ್ದು ಎರಡು ಪುಟ್ಟ ಬೂದು ಬಣ್ಣದ ಹಕ್ಕಿಗಳು! ಪುಟ್ಟವು ಅಂದರೆ ಅಷ್ಟು ಪುಟ್ಟವು. ಎಲೆ ಮೇಲೆ ಕೂತರೆ ಎಲೆ ಅಲುಗಾಡದಷ್ಟು ಹಗುರ! ಮೊಟ್ಟೆಯೊಡೆದು ಹೊರಬಂದು ಎಷ್ಟು ದಿನಗಳಾಗಿದ್ದವೋ... ಸ್ವಪ್ರಯತ್ನದಿಂದ ಹಾರಲು ಕಲಿಯುತ್ತಿರುವ ಎಳೇ ರೆಕ್ಕೆಗಳ, ಪುಟ್ಟ ಸೊಟ್ಟ ಕಾಲ್ಗಳ ಮರಿಗಳು... ಸಂತಸದಿಂದ ಎದೆ ಬಿರಿಯಿತು.
ಕೊಂಚ ಅತ್ತ ಕಡೆ ಇದ್ದ ಪುಟ್ಟ ಮಾವಿನ ಮರದಲ್ಲಿ ಹಕ್ಕಿಯೊಂದೇ ಕುಳಿತು ಕೂಗುತ್ತಿತ್ತು. ಹತ್ತು ತಿಂಗಳ ಹಿಂದೆ ಹಿತ್ತಲಿನಲ್ಲಿ ಸರ್ವೆ ನಡೆಸಿದ ಹಕ್ಕಿಯಂತೇ ಕಂಡಿತು ನನಗೆ. ಓ... ಹಿತ್ತಲು ಇಷ್ಟವಾಗಲಿಲ್ಲ... ಈ ಕಡೆ ಹಸಿರು ಹೆಚ್ಚಿದೆ, ಗಿಡಗಳು ದಟ್ಟವಾಗಿವೆ ಎಂದು ಇಲ್ಲಿ ಗೂಡು ಕಟ್ಟಿದೆ... ಮೊಟ್ಟೆ ಇಟ್ಟು, ಮರಿ ಮಾಡಿದೆ.

ರೀ... ರೀ... ನನ್ನ ಕೂಗಿಗೆ ಇವರು ಬರಲಿಲ್ಲ. ಮರದ ಮೇಲಿದ್ದ ಪಕ್ಷಿ ಹಾರಿಹೋಯಿತು.

ಏನಾಯಿತು? ಬಿದ್ಯಾ?... ಇವರು ನಿಧಾನವಾಗಿ ಪಕ್ಕದ ಬಾಗಿಲು ತೆರೆದುಕೊಂಡು ಆಚೆ ಬಂದಾಗ ಅವರತ್ತ ದುರುಗುಟ್ಟಿದೆ.

ಆಹಾ... ಬಿದ್ಯಾ... ಅಂತ ಎಷ್ಟು ನಿಧಾನವಾಗಿ ಬರ್ತಾ ಇದೀರಿ!... ಇಲ್ಲಿ... ಬನ್ನಿ... ಬಗ್ಗಿ ನೋಡಿ... ಹಕ್ಕಿ ಮರಿಗಳಿವೆ ನೋಡಿ... ಇಲ್ಲೆಲ್ಲೊ ಗೂಡಿರಬೇಕು... ಪುಟ್ಟ ಹಕ್ಕಿ ಗೂಡು ಕಟ್ಟಿ ಮರಿ ಮಾಡಿದೆ. ಆ ಮಾವಿನ ಮರದ ಮೇಲೆ ತಾಯಿ ಹಕ್ಕಿ ಇರಬೇಕು, ಕೂತಿತ್ತು. ಈಗ ಹಾರಿಹೋಯಿತು. ಮರಿಹಕ್ಕಿಗಳು ಇಲ್ಲಿ ಆ ಎಲೆಗಳ ನಡುವೆ ಮುದುಡಿ ಕುಳಿತಿವೆ... ನೋಡಿ... ಕಾಣಿಸ್ತಾ...

ಹೂಂ... ಕಾಣಿಸ್ತು... ನನ್ನಷ್ಟೇ ಆಸಕ್ತಿಯಿಂದ, ಕುತೂಹಲದಿಂದ ಬಗ್ಗಿ ನೋಡಿದರೂ, ಮರುಕ್ಷಣ ಎದ್ದು, ನನ್ನ ಕೈ ಹಿಡಿದು ಒಳಗೆ ನಡೆದರು.

ಬಿಡಿ... ಮರಿಗಳ್ನ ನೋಡೋಣ ಕೊಸರಿಕೊಂಡೆ. ಬಾಯ ಮೇಲೆ ಬೆರಳಿಟ್ಟು ಹುಶ್ಶ್ ಎಂದರು. ಗಲಾಟೆ ಮಾಡಬೇಡ, ಮರಿಗಳು ಹೆದರಿಕೊಳ್ತವೆ. ಅಮ್ಮ ಹಕ್ಕಿ ಬರೋದಿಲ್ಲ...

ಇಬ್ಬರೂ ಒಳಬಂದೆವು. ಕಿಟಕಿಯ ಸಂದಿಯಿಂದ, ಬಾಗಿಲ ಮರೆಯಿಂದ ನೋಡುತ್ತಾ ನಿಂತೆವು.

ಗಿಡದ ಬುಡದಲ್ಲಿ, ಎಲೆಗಳ ಮರೆಯಲ್ಲಿ ಇದ್ದ ಮರಿಗಳ ಬಳಿ ಬಂದ ತಾಯಿ ಹಕ್ಕಿ ಏನೋ ತಿನ್ನಿಸಿ ಹಾರಿಹೋಯಿತು. ಸಣ್ಣ ಹುಳ, ಪುಟ್ಟ ಕೆಂಪು ಹಣ್ಣು. ಹೂವಿನ ಪಳಕೆ, ಒಂದಾ ಎರಡಾ... ನಾವು ನಿಂತ ಅರ್ಧ ಗಂಟೆಯಲ್ಲಿ ನಾಲ್ಕು ಬಾರಿ ಬಂದು ಎರಡೂ ಮರಿಗಳಿಗೆ ತಿನ್ನಿಸಿ ಹೋಯಿತು ತಾಯಿ ಹಕ್ಕಿ.

ಎರಡೂ ಮರಿಗಳು ನೋಡಲು ಒಂದೇ ತರಹ ಇದ್ದವು. ತಾಯಿ ಬಂದರೆ ಎರಡೂ ರೆಕ್ಕೆ ಅರಳಿಸಿ, ಕೊಕ್ಕು ಹಿಗ್ಗಿಸಿ ತಿನ್ನಿಸು ಎಂದು ಗಲಾಟೆ ಮಾಡುತ್ತಿದ್ದವು. ತಿನ್ನಿಸಿದ್ದು ಯಾವುದಕ್ಕೆ, ತಿನ್ನಿಸಬೇಕಾಗಿರುವುದು ಯಾವ ಮರಿಗೆ ಎಂದು ತಾಯಿಗೆ ಗೊಂದಲವುಂಟಾದರೆ ಎಂಬ ನನ್ನ ಪ್ರಶ್ನೆಗೆ ಇವರು ನಕ್ಕರು.

ಗೊಂದಲ ಏನೂ ಇರಲ್ಲ... ನೀನು ಆಚೆ ಹೋಗಬೇಡ ಸುಮ್ಮನಿರು. ಆಮೇಲೆ ತಾಯಿಹಕ್ಕಿ ಹೆದರಿಕೊಂಡು ಮರಿಗಳನ್ನು ಕರೆದುಕೊಂಡು ಹೋಗಿಬಿಡುತ್ತೆ ಎಂದು ನನ್ನ ಹೆದರಿಸಿದರು.

ನೀನು ಹೆಚ್ಚು ಸಡಗರ ತೋರಿದ್ದಕ್ಕೆ ಗೂಡು ಕಟ್ಟಲಿಲ್ಲ ಎಂದು ಕಳೆದ ಬಾರಿ ಅನ್ನಿಸಿಕೊಂಡಿದ್ದಕ್ಕೆ ಈ ಬಾರಿ ಬರೀ ಕಿಟಕಿಯಿಂದ ನೋಡುವುದಷ್ಟಕ್ಕೆ ನನ್ನ ಚಟುವಟಿಕೆಯನ್ನು ಸೀಮಿತಗೊಳಿಸಿಕೊಂಡೆ.

ಯುಗಾದಿ ಹಬ್ಬದ ದಿನ ಮಧ್ಯಾಹ್ನ ಅಡಿಗೆ ಮುಗಿಸಿ ಒಬ್ಬಟ್ಟು ಮಾಡಲು ಶುರು ಹಚ್ಚಿಕೊಂಡೆ, ಜೋರಾಗಿ ಹಕ್ಕಿಯ ಕಲರವ ಕೇಳಿಸಿತು. ಜೊತೆಗೆ ಇತ್ತೀಚೆಗೆ ಬೆಂಗಳೂರಿನಲ್ಲಿ ಕಾಗೆಯ ಕೂಗಿನಷ್ಟೇ ಸಾಮಾನ್ಯವಾಗಿರುವ ಹದ್ದಿನ ಕೂಗು!

ಎಲ್ಲರೂ ಪಕ್ಕದ ಬಾಗಿಲು ತೆರೆದು ಹೊರಗೆ ಧಾವಿಸಿದೆವು. ಹದ್ದು, ತಾಯಿ ಹಕ್ಕಿ ಎರಡೂ ಹಾರಿಹೋದವು. ಪುಟ್ಟ ಬೂದು ಮರಿ ನೆಲದ ಟೈಲಿನ ಮೇಲೆ ಕುಸಿದುಬಿದ್ದಿತ್ತು.

ಮರಿಯನ್ನು ಎತ್ತಿಕೊಂಡು ಹೋಗಲು ಬಂದ ಹದ್ದಿನೊಂದಿಗೆ ಹೋರಾಡಿದ ತಾಯಿ ಪಕ್ಕದ ಮನೆಯ ಟ್ಯಾಂಕಿನ ಮೇಲೆ ಕುಳಿತಿತ್ತು. ಹದ್ದು ಹಾರಿಹೋಯಿತು. ಮರಿ ಹೋಗೇಬಿಟ್ಟಿದ್ಯ... ಎಂಬ ಆತಂಕ ನಮಗೆ. ತಲೆ, ಕಾಲು ಎಲ್ಲವೂ ಒಳಗೆ ಸೇರಿಕೊಂಡು ಒಂದು ಚೆಂಡಿನಂತೆ, ಗಾಳಿಹೋದ ಬಲೂನಿನಂತೆ ಬಿದ್ದಿತ್ತು ಮರಿಹಕ್ಕಿ. ಆದರೆ ಸತ್ತಿಲ್ಲ ಎಂಬ ಆಶಯ, ನಂಬಿಕೆ.

ಒಳಗೆ ಬಂದರೆ ಹದ್ದು ತಿರುಗಿ ಬಂದು ಎತ್ತಿಕೊಂಡು ಹೋಗಿಬಿಟ್ಟರೆ ಎಂದು ಅಲ್ಲೇ ಕಾವಲು ನಿಂತ್ವಿ... ನಂತರ ಅನ್ನಿಸಿತು... ನಾವೆಲ್ಲಾ ನಿಂತಿರುವುದು ನೋಡಿ ಆ ತಾಯಿ ಹಕ್ಕಿ ಬರದಿದ್ದರೆ... ಎಂದು...

ಹದ್ದು ಬಂದರೆ ಓಡಿಸಲು, ತಾಯಿ ಬಂದರೆ ಸುಮ್ಮನಿರಲು ನಿರ್ಧರಿಸಿ ಒಳಗೆ ಬಂದು ಬಾಗಿಲ ಬಳಿಯೇ ಕೂತಿದ್ದಾಯಿತು ಎರಡೂ ಬರಲಿಲ್ಲ... ಒಮ್ಮೆ ಕಾಲೂರಿ ಏಳಲು ಪ್ರಯತ್ನಿಸಿ ತಿರುಗಿ ಕುಸಿಯಿತು ಮರಿ ಹಕ್ಕಿ. ಸತ್ತಿಲ್ಲ ಎಂಬ ಧೈರ್ಯ. ಆದರೆ ಹಾರಲು, ನಿಲ್ಲಲು ಆಗುತ್ತಿಲ್ಲವಲ್ಲ ಅದಕ್ಕೆ ಎಂಬ ಬೇಸರ.

ಒಮ್ಮೆ ಬಂದ ತಾಯಿ ಹಕ್ಕಿ ಈ ಮರಿಯ ಕಡೆ ತಿರುಗಿಯೂ ನೋಡಲಿಲ್ಲ. ಮತ್ತೊಂದು ಮರಿಯನ್ನು ಹಂತ ಹಂತವಾಗಿ ಹೇಗೆ ಬರುವುದು ಎಂದು ತೋರಿಸಿಕೊಡುತ್ತಾ ಮಾವಿನ ಮರದ ದಟ್ಟ ಎಲೆಗಳ ನಡುವೆ ಕರೆದುಕೊಂಡು ಹೋಯಿತು.

ಪಾಪಾ... ಈ ಮರಿಯನ್ನು ನೋಡುತ್ತಲೇ ಇಲ್ಲವಲ್ಲ ಎಂಬ ಆತಂಕ ಶುರುವಾಯಿತು ನಮಗೆ. ಪುಟ್ಟ ಬಟ್ಟಲಲ್ಲಿ ನೀರಿಟ್ಟೆವು, ಒಣದ್ರಾಕ್ಷಿಯನ್ನು ಸೀಳಿ ಜೇನಿನಲ್ಲಿ ಅದ್ದಿ ಇಟ್ಟೆವು. ಸಮೀಪ ಹೋದರೂ ಇದ್ದಲ್ಲೇ ಇತ್ತು ಮರಿ... ಒಮ್ಮೆ ತಲೆ ಎತ್ತಿ ನೋಡಿತು... ಕೊಕ್ಕೆಯನ್ನು ಕೊಂಚ ಆಡಿಸಿತು.

ಕೊಕ್ಕಿನಿಂದ ಏನನ್ನೂ ತೆಗೆದುಕೊಂಡು ತಿಂದು ರೂಢಿಯಿಲ್ಲದ ಮರಿ ಹಕ್ಕಿ, ಕೊಕ್ಕು ಅಗಲಿಸಿದರೆ ತುತ್ತಿಡುತ್ತಿದ್ದ ತಾಯಿ ಹಕ್ಕಿ ತಿರುಗಿಯೂ ನೋಡುತ್ತಿಲ್ಲ.

ಆ ಮರಿ ಹಕ್ಕಿಗೆ ಹಾರಲು ಆಗದು, ತಾಯಿ ಹಕ್ಕಿಗೆ ಎತ್ತಿಕೊಂಡು ಹೋಗಲು ಆಗದು. ಬಿದ್ದ, ಹಾರಲು ಆಗದ ಮರಿಗೆ ತಿನ್ನಿಸುವುದೂ ದಂಡ ಎಂಬಂತೆ ದೂರವೇ ಉಳಿಯಿತು ತಾಯಿ ಹಕ್ಕಿ.

ಈ ಗಲಾಟೆಯಲ್ಲಿ ಒಬ್ಬಟ್ಟು ಕೆಟ್ಟದಾಗಿ ಆಯಿತು (ಎಂದಿನಂತೆ!). ಕೆಟ್ಟಿದ್ದಕ್ಕೆ ಹೇಳಿಕೊಳ್ಳಲು ಒಂದು ಕಾರಣ ಸಿಕ್ಕಿತು.

ಒಮ್ಮೆ ಬಂದ ತಾಯಿ ಹಕ್ಕಿ ಕೊಂಚ ದೂರ ಕುಳಿತು ಏನೋ ಹೇಳಿತು. ಮರಿ ಹಕ್ಕಿ ಸಣ್ಣ ದನಿಯಲ್ಲಿ ಉತ್ತರಿಸಿತು. ಅಷ್ಟೇ... ಸಂಜೆ ಆರು ಗಂಟೆಯಾಯಿತು. ಹೋದ ತಾಯಿ ಹಕ್ಕಿ ಬರಲೇ ಇಲ್ಲ... ರಾತ್ರಿಯೆಲ್ಲಾ... ಏನು ಮಾಡುವುದು ಎಂಬ ಚಿಂತೆ. ಶೂ ಡಬ್ಬದಲ್ಲಿ ಹತ್ತಿ ತುಂಬಿಸಿ ಗೂಡು ಸಿದ್ಧಮಾಡಿದಳು ಮಗಳು.

ಆದರೆ ಅದರ ಹೊಟ್ಟೆಗೆ ಹಾಕುವುದು ಹೇಗೆ? ಒಮ್ಮೆ ನಾವು ಮುಟ್ಟಿಬಿಟ್ಟರೆ ಆ ತಾಯಿ ಹಕ್ಕಿ ಈ ಮರಿಯನ್ನು ನಿರಾಕರಿಸಿಬಿಟ್ಟರೆ ಎಂಬ ಆತಂಕ... ಆದರೆ ಕತ್ತಲಾವರಿಸಿತ್ತು. ವಿಧಿಯಿಲ್ಲದೆ ಆ ಮರಿ ಹಕ್ಕಿಯನ್ನು ಹೂವಿನಂತೆ ಎತ್ತಿಕೊಂಡು ಒಳಗೆ ಕರೆದುಕೊಂಡು ಬಂದು ಮನೆಯಲ್ಲಿರುವ ಪುಟ್ಟ ಕೋಣೆಯಲ್ಲಿ ಬಿಟ್ಟೆವು.

ತಿರುಗಿ ನೀರು, ದ್ರಾಕ್ಷಿ, ಅಂಜೂರದ ತುಂಡು ಎಲ್ಲಾ ಇಟ್ಟು ಬಾಗಿಲು ಹಾಕಿದೆವು. ರಾತ್ರಿ ಮಲಗುವ ತನಕ ಒಬ್ಬರಲ್ಲ ಒಬ್ಬರು ಇಣುಕಿ ನೋಡುತ್ತಿದ್ದೆವು. ನಾವು ಇಟ್ಟ ಜಾಗದಲ್ಲೇ ಕುಳಿತಿತ್ತು ಮರಿ ಹಕ್ಕಿ.

ಬೆಳಗ್ಗೆ ಬೇಗ ಎದ್ದು ಚಿಕ್ಕ ಕೋಣೆಯ ಬಾಗಿಲು ತೆರೆದು ನೋಡಿದೆವು. ಮರಿ ಹಕ್ಕಿ ನೆನ್ನೆ ರಾತ್ರಿ ಕುಳಿತಲ್ಲೇ ಕುಳಿತಿತ್ತು. ಬಳಿ ಹೋದಾಗ ಕೊಂಚ ಕುಪ್ಪಳಿಸಿತು. ಸಧ್ಯ ಬದುಕಿದೆಯಲ್ಲ ಎಂದು ನಿಟ್ಟುಸಿರುಬಿಟ್ಟೆವು.

ತಿರುಗಿ ಪುಟ್ಟ ಬುಟ್ಟಿಯಲ್ಲಿ ಹಕ್ಕಿಯನ್ನು ಇಟ್ಟುಕೊಂಡು, ನನ್ನ ರೈಟಿಂಗ್ ಪ್ಯಾಡಿನಿಂದ ಮುಚ್ಚಿ ಹೊರಗೆ ಕರೆದುಕೊಂಡು ಬಂದು ಬುಟ್ಟಿ ಕೆಳಗಿಟ್ಟು ರೈಟಿಂಗ್ ಪ್ಯಾಡಿನ ಮುಚ್ಚಳ ತೆಗೆಯುವಷ್ಟರಲ್ಲಿ ಅಲ್ಲೇ ಎಲ್ಲೋ ಇದ್ದ ತಾಯಿ ಹಕ್ಕಿ ನಮ್ಮ ತಲೆಯ ಮೇಲೆಯೇ ಹಾರಿಹೋಗಿ ಪಾಮ್ ಗಿಡದ ಮೇಲೆ ಕುಳಿತುಕೊಂಡಿತು.

ಅರೆಕ್ಷಣವೂ ವೇಸ್ಟ್ ಮಾಡದೆ ಮರಿ ವಡ್ಡುವಡ್ಡಾಗಿ ರೆಕ್ಕೆ ಬಡಿಯುತ್ತಾ ಹಾರಿ ಪಾಮ್ ಗಿಡದ ಬುಡದ ಎಲೆಯ ಮೇಲೆ ಕುಳಿತುಕೊಂಡಿತು. ಕೊಕ್ಕಿನಲ್ಲಿ ಆಗಲೇ ಒಂದು ಹುಳ ಹಿಡಿದುಕೊಂಡು ಬಂದಿದ್ದ ತಾಯಿ ಹಕ್ಕಿ ಮರಿಗೆ ತಿನ್ನಿಸಿತು.

ತಂದೆ ಹಕ್ಕಿ (ಕೊಂಚ ಹೆಚ್ಚು ಬಣ್ಣ) ತಾಯಿ ಹಕ್ಕಿ ನಮ್ಮ ಇರುವನ್ನು ಲೆಕ್ಕಿಸದೆ ಸರದಿಯ ಮೇಲೆ ಬಂದು ಮರಿ ಹಕ್ಕಿಗೆ ಉಣ್ಣಿಸಿದವು. ಹಿಂದಿನ ದಿನ ಮಧ್ಯಾಹ್ನದಿಂದ ಅದನ್ನು ಉಪವಾಸ ಕೆಡವಿದ್ದರ ಬಗ್ಗೆ ಪಶ್ಚಾತ್ತಾಪವಿದ್ದಂತೆ!

ಕೊಟ್ಟಾಗಲೆಲ್ಲಾ ಇಸಿದುಕೊಂಡು ಅರ್ಧ ತಿಂದು, ಅರ್ಧ ಉಗಿದು ಚಿಂವ್ಗುಟ್ಟುತ್ತಿತ್ತು ಮರಿಹಕ್ಕಿ. ನಮಗೆ ಸಂತಸ, ಜೊತೆಗೆ ಆತಂಕ. ನೆಟ್ಟಗೆ ಹಾರಲು ಬರದ ಮರಿಹಕ್ಕಿ ಮರೆಯಾಗಿ ಕೂರದೆ ಗಿಡದ ಮೇಲಿನ ಟೊಂಗೆಯ ಮೇಲೆ ಕುಳಿತುಕೊಂಡಿತ್ತು. ತಿನ್ನಿಸುವುದಷ್ಟೇ ಕೆಲಸ ಎಂಬಂತೆ ತಾಯಿ ತಿನ್ನಿಸುತ್ತಿತ್ತು.

ಅದರ ಭಾಷೆಯಲ್ಲಿ ಮರೆಯಲ್ಲಿ ಕುಳಿತುಕೋ ಎಂದು ಮರಿಗೆ ಹೇಳಬಾರದೆ ಆ ತಾಯಿ ಹಕ್ಕಿ ಎಂದು ರೇಗಿತು. ಮಾವಿನ ಮರದವರೆಗೆ ಈ ಮರಿ ಹಕ್ಕಿ ಹೋದರೆ ಕೊಂಚ ಭದ್ರ. ಆದರೆ ಹೋಗಬೇಕಲ್ಲ...! ಹೋಗುವ ದಾರಿ ತೋರಿ ಎರಡು ಮೂರು ಬಾರಿ ಹಾರಿದವು ತಾಯಿ, ತಂದೆ ಹಕ್ಕಿ.

ಆದರೆ ಮರಿಹಕ್ಕಿಗೆ ಗೊತ್ತಾಗಲಿಲ್ಲ. ಎಲ್ಲೆಲ್ಲೊ ಹಾರಿ, ಅಲ್ಲಲ್ಲೇ ಕುಳಿತುಕೊಳ್ಳುತ್ತಿತ್ತು. ಅಲ್ಲೇ ಹೊರಗೆ ಕುಳಿತು ಹದ್ದೋ, ಕಾಗೆಯೋ ಬಂದರೆ ಓಡಿಸುವ ಹೊಣೆಯನ್ನು ನಾವೆಲ್ಲಾ ಸಂತೋಷದಿಂದ ಹಂಚಿಕೊಂಡು ಕಾವಲು ಕಾದ್ವಿ.

ಹದ್ದು ಬಂದರೆ ಪಕ್ಕದ ಮನೆಯ ಛಾವಣಿಯ ಮೇಲೂ ಕುಳಿತುಕೊಳ್ಳದ ಹಾಗೆ ಕೈಬೀಸಿ, ಕಿರುಚಿ ಗಲಾಟೆ ಎಬ್ಬಿಸಿ ಓಡಿಸುತ್ತಿದ್ವಿ. ಯಾರಾದರೂ ಗಮನಿಸಿದ್ದರೆ ನಮ್ಮ ಬಗ್ಗೆ ಏನೆಂದುಕೊಂಡರೋ ಏನೋ...

`ಕಲ್ಲು, ಕೋಲು ಬೀಸಬೇಡಿ. ಆಮೇಲೆ ಪಕ್ಕದ ಮನೆಯ ಕಿಟಕಿಯ ಗಾಜು ಒಡೆದರೆ ಕಷ್ಟ~ ಎಂದು ಎಚ್ಚರಿಕೆ ನೀಡಿದೆ ಮಕ್ಕಳಿಗೆ.

ಕೊನೆಗೂ ಮಧ್ಯಾಹ್ನದ ವೇಳೆಗೆ ಹಾರುತ್ತಾ ಮಾವಿನ ಮರದ ಮರೆಗೆ ಹೋಯಿತು ಮರಿಹಕ್ಕಿ. ನಮಗೆಲ್ಲಾ ಏನೋ ಸಾಧಿಸಿದ ಹೆಮ್ಮೆ. ಇನ್ನೊಂದು ಮರಿಯೂ ಅಲ್ಲೇ ಇರುವುದು ನೋಡಿ ನೆಮ್ಮದಿ. `ಎಲೆಯ ಮರೆಯಲ್ಲೇ ಇರು, ಇನ್ನೂ ಒಂದೆರಡು ದಿನ~ ಎಂದು ಮರಿಗಳಿಗೆ ಬುದ್ಧಿ ಹೇಳಿ ಒಳ ಬಂದೆ.

ಮಾರನೇ ದಿನ ಬೆಳಗ್ಗೆ ಪಕ್ಕದ ಬಾಗಿಲು ತೆರೆದು ಹೊರಗೆ ಹೋದೆ. ಮೇಲಿನ ಟೊಂಗೆಯ ಮೇಲೆ ತಾಯಿ, ತಂದೆ ಹಕ್ಕಿ ಕುಳಿತಿದ್ದವು. ಮರಿಗಳೆರಡೂ ಎಲೆಯಿಂದ ಎಲೆಗೆ, ಗಿಡದಿಂದ ಗಿಡಕ್ಕೆ ಹಾರಾಡುತ್ತಿದ್ದವು.

ನೆಮ್ಮದಿಯಿಂದ ಒಳಬಂದು, ಬಾಗಿಲು ತೆರೆದಿಟ್ಟುಕೊಂಡು, ಡೈನಿಂಗ್ ಟೇಬಲ್ ಮೇಲೆ ದಿನಪತ್ರಿಕೆಗಳನ್ನು ಹರಡಿಕೊಂಡು, ಬಿಸಿ ಕಾಫಿ ಹೀರುತ್ತಾ, ಪೇಪರ್ ಓದುತ್ತಾ ಕುಳಿತೆ.
ನೋಡು ನೋಡುತ್ತಿದ್ದಂತೆ ಪುಟ್ಟ ಮರಿ ಹಕ್ಕಿ ಸರ್ರನೆ ಹಾರುತ್ತಾ ಮನೆಯೊಳಗೆ ಬಂದು ದೇವರ ಕೋಣೆ ಹೊಕ್ಕು ಮಂಟಪದ ಮೇಲೆ ಕುಳಿತುಕೊಂಡಿತು!.

ದಿನಾ ಬೆಳಗ್ಗೆ ಗಾಳಿ ಬರಲಿ ಎಂದು ಆ ಬಾಗಿಲ ತೆರೆದೇ ಕೂರುವುದು ನಾನು. ಈವರೆಗೂ ಒಂದು ಚಿಟ್ಟೆ ಕೂಡ ಒಳಬಂದಿಲ್ಲ... ಈಗ ಈ ಹಕ್ಕಿ... ಎಲ್ಲರನ್ನೂ ಕೂಗಿದೆ. ಗಾಬರಿಯಿಂದ ಮಗಳೆದ್ದು ಓಡಿಬಂದಳು.

ನಮ್ಮ ಮರಿಹಕ್ಕಿ ನೋಡು... ದೇವರ ಮನೆಯೊಳಗೆ ಬಂದು ಕುಳಿತಿದೆ... ಎಂದೆ. ಇಬ್ಬರಿಗೂ ಗಾಬರಿ. ಕಿರಿ ಮಗಳು ಕಣ್ಣುಜ್ಜುತ್ತಾ ಎದ್ದು ಬಂದಳು.
ಅದನ್ನು ಹೊರಗೆ ಕಳಿಸುವುದು ಹೇಗೆ? ನನ್ನ ಪ್ರಶ್ನೆಗೆ ನನ್ನ ಕಿರಿಮಗಳು ನನ್ನ ದುರುಗುಟ್ಟಿದಳು.

ಪಾಪಾ...! ಅದೇ ಒಳಗೆ ಬಂದಿದೆ. ಹೊರಗೆ ಯಾಕೆ ಕಳಿಸಬೇಕು?
ಅವಳ ಪ್ರಶ್ನೆಗೆ ನನ್ನಲ್ಲಿ ಉತ್ತರವಿರಲಿಲ್ಲ. ನಾವು ಚಿಕ್ಕವರಿದ್ದಾಗ ನಮ್ಮ ಮನೆಯ ಹಾಲಿನಲ್ಲಿ ಇದ್ದ ದೇವರಪಟದ ಹಿಂದೆ ಗುಬ್ಬಚ್ಚಿಗಳು ಗೂಡು ಕಟ್ಟುತ್ತಿದ್ದವು. ಹುಲ್ಲು, ಕಡ್ಡಿ, ಕಸ ಬಿದ್ದಿದ್ದರೆ ಗುಡಿಸುತ್ತಿದ್ದೆವು ಅಷ್ಟೇ. ಗೂಡು ಕಿತ್ತುಹಾಕಬೇಕೆಂಬ ಆಲೋಚನೆಯೇ ಬರುತ್ತಿರಲಿಲ್ಲ.

ಗುಬ್ಬಚ್ಚಿಗಳು ಒಳಗೆ ಬಂದು ಹೋಗಲು ಯಾವುದೇ ಅಡ್ಡಿ ಇರಲಿಲ್ಲ.
ಮಂಟಪದ ಮೇಲಿಂದ ನೆಲಕ್ಕೆ ಕುಪ್ಪಳಿಸಿತು ಮರಿ ಹಕ್ಕಿ. ನೋಡು ನೋಡುತ್ತಾ ಗಾಬರಿಯಾಯಿತು ನನಗೆ.

ಮೊದಲು ದೇವರ ಮನೆಯಿಂದ ನಂದಾದೀಪ ತೆಗೆಯಬೇಕು... ಆ ಪೆದ್ದು ಮರಿ ಹಕ್ಕಿ ದೀಪದ ಹತ್ತಿರ ಹೋದ್ರೆ ಸುಟ್ಟೇ ಹೋಗತ್ತೆ... ಹೇಗೆ ಹಾರಬೇಕು, ಎಲ್ಲಿ ಹಾರಬೇಕು ಅಂತ ಗೊತ್ತೇ ಇಲ್ಲವಲ್ಲ ಅದಕ್ಕೆ... ಎಂದು ಆತಂಕ ವ್ಯಕ್ತಪಡಿಸಿದಾಗ ಮಗಳು ನಂದಾದೀಪವನ್ನು ದೇವರ ಮನೆಯಿಂದ ಹೊರತಂದು ಅಡಿಗೆಮನೆಯಲ್ಲಿ ಇಟ್ಟಳು.

ಕೊಂಚ ಹಾರಲು ಬಂದಿದೆ. ಆದರೆ ನೆಟ್ಟಗೆ ಕಂಟ್ರೋಲ್ ಬಂದಿಲ್ಲ ಮರಿ ಹಕ್ಕಿಗೆ ನಮಗೆ ಅದನ್ನು ಹಿಡಿದುಕೊಳ್ಳಲೂ ಆಗುವುದಿಲ್ಲ. ಹೊರಗೆ ಹೋಗಲು ಅದಕ್ಕೆ ತಿಳಿಯೊಲ್ಲ.

ಮನೆಯೊಳಗೆಲ್ಲಾ ಹಾರಿ ಯಾವ ಮೂಲೆ, ಯಾವ ಅಟ್ಟ ಸೇರುವುದೋ... ಕೋಣೆಗಳ ಬಾಗಿಲು ಹಾಕಿದೆವು. ಹಾಲಿನಲ್ಲಿ ತಿರುಗುತ್ತಿದ್ದ ಫ್ಯಾನ್ ಆರಿಸಿದೆವು. ಆ ಮೊಂಡು ಮೊದ್ದು ಹಕ್ಕಿ ದೇವರ ಮನೆ ಬಿಟ್ಟು ಬರುವ ಯೋಚನೆಯೇ ಇಲ್ಲದೆ ಅಲ್ಲೇ ಕುಪ್ಪಳಿಸುತ್ತಾ, ಸುತ್ತಲೂ ನೋಡುತ್ತಾ ಸೆಟಲ್ ಆದಂತೆ ಕಂಡಿತು!

ಕ್ಷಣಗಳು ನಿಮಿಷಗಳಾದವಷ್ಟೇ... ಆದರೆ ಗಂಟೆಗಳೇ ಕಳೆದಂತೆ ಭಾಸವಾಗುತ್ತಿತ್ತು ನಮಗೆ.

ಇರಲಿ ಬಿಡಮ್ಮ... ಬೇಕಾದಾಗ ಹೊರಗೆ ಹೋಗುತ್ತೆ... ಚಿಕ್ಕ ಮಗಳ ಉವಾಚ...
ಮರಿ ಹಕ್ಕಿಗೆ ಏನನ್ನಿಸಿತೋ ಏನೋ... ಇದ್ದಕ್ಕಿದ್ದ ಹಾಗೆ ಹಾರಿ ಬಂದು ಡೈನಿಂಗ್ ಟೇಬಲ್ ಮೇಲೆ ಕುಳಿತು ಚಿಂವ್ಗುಟ್ಟಿತು... `ತಿಂಡಿ ಏನು?~ ಎಂಬಂತೆ ತಲೆ ತಿರುಗಿಸಿ ನಮ್ಮನ್ನೆಲ್ಲಾ ನೋಡಿತು ಬೇರೆ.

ಒಂದು ದಿನದಲ್ಲಿ ಎಂಥಾ ಚೇತರಿಕೆ...! ನನಗೋ ಆತಂಕ... ಇಲ್ಲಿಂದ ಇನ್ನೆಲ್ಲಿಗೆ ಹಾರತೋ ಅದು ಅಂತ. ನೋಡು ನಿಮ್ಮಮ್ಮ ಹೊರಗೆ ಕೂಗ್ತಾ ಇದಾಳೆ... ತಿಂಡಿ ತಂದಿದಾಳೆ. ಆ ಕಡೆ ಬಾಗಿಲಿದೆ ನೋಡು... ಹೋಗು... ಎಂದೆ.

ನನ್ನ ಮಕ್ಕಳು ನಗಲಾರಂಭಿಸಿದರು. ಅದಕ್ಕೇನು ಅರ್ಥವಾಗುತ್ತೆ!... ನೀನೋ... ನಿನ್ನ ಸಲಹೆಯೋ!... ಯಾರು ಸಿಕ್ಕರೂ ಸರಿಯೇ... ಸಲಹೆ ಕೊಡಲು ಶುರು ಮಾಡ್ತಿಯಲ್ಲ!. ಮಗಳು ಮಾತು ಮುಗಿಸುವ ಮುನ್ನವೇ ಪುಟ್ಟ ಮರಿ ಹಕ್ಕಿ ನನ್ನ ಮಾತು ಅರ್ಥವಾದಂತೆ ಹಾರಿ ಬಾಗಿಲಿಂದಾಚೆ ಹೋಯಿತು.

ನಮಗೆ ಥ್ಯಾಂಕ್ಸ್ ಹೇಳಲು ಬಂದಿತ್ತು. ಹಾಗೇ ದೇವರಿಗೆ ನಮಸ್ಕಾರ ಮಾಡಿ ಹೋಯಿತು... ನೀನು ಸುಮ್ಮನೆ ಆತಂಕಪಡ್ತಿ... ಮಗಳು ತಿರುಗಿ ಮಲಗಲು ಹೋದಳು.
ಆ ಪುಟ್ಟ ಹಕ್ಕಿಯ ಸಂಸಾರ ಇನ್ನೂ ನಮ್ಮ ಮನೆಯಂಗಳದಲ್ಲಿ ಹಾರಾಡಿಕೊಂಡಿವೆ.

ಮರಿಗಳು ಚೆಂದಾಗಿ ಹಾರುತ್ತವೆ. ಬೆಳಗ್ಗೆ ಸಂಜೆ ಹೊರಗೆ ಹೋಗಿ ಅವು ಎಲ್ಲಿ ಇವೆ ಎಂದು ಹುಡುಕಿ ಮಾತಾಡಿಸಿ ಬರುತ್ತೇನೆ. ಮರಿ ಹಕ್ಕಿಗಳಿಗೂ, ತಾಯಿ ತಂದೆ ಹಕ್ಕಿಗಳಿಗೂ ಹೆಚ್ಚು ವ್ಯತ್ಯಾಸವಿಲ್ಲ ಈಗ, ಗಾತ್ರದಲ್ಲಿ.

ಅಂದರೆ ನನ್ನ ಅಂಗಳ ಬಿಟ್ಟು ಅವು ಹಾರಿಹೋಗುವ ದಿನವೂ ದೂರವಿಲ್ಲ. ಪ್ರತೀ ಸಂಜೆ ಹಕ್ಕಿಗಳನ್ನು ನೋಡಿದಾಗ ಸಮಾಧಾನ ಬೆಳಗ್ಗೆ ಕಾಣದಿದ್ದರೆ ಆತಂಕ, ನಿರಾಶೆ ಮತ್ತೆ ಸಂಜೆ ಕಂಡಾಗ ನಿರಾತಂಕ, ನೆಮ್ಮದಿ.

ನನ್ನ ಅಂಗಳದಿಂದ ಹಾರಿಹೋದರೂ ತಿರುಗಿ ಮೊಟ್ಟೆ ಇಡುವ ಕಾಲ ಬಂದಾಗ ಇಲ್ಲಿಗೇ ಬರುವುದೇನೋ... ಸಣ್ಣ ಸಣ್ಣ ಗಿಡಗಳನ್ನು ಕಿತ್ತು, ದೊಡ್ಡದಾಗಿ, ಗುಪ್ಪಾಗಿ ಬೆಳೆಯುವ ಗಿಡಗಳನ್ನು ಹಾಕಲು ಮಾಲಿಗೆ ಹೇಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.