ಬುಧವಾರ, ಮೇ 12, 2021
24 °C

ಪುತ್ತೂರು ಜಾತ್ರಾ ಸಂತೆಗೆ ಧರ್ಮ ಗ್ರಹಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ತೂರು: ಪುತ್ತೂರು ಸೀಮೆಯ ಇತಿಹಾಸ ಪ್ರಸಿದ್ಧ ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಗದ್ದೆಯಲ್ಲಿ ವ್ಯಾಪಾರ ನಡೆಸಲು ಈ ವರ್ಷ ಪ್ರಥಮ ಬಾರಿಗೆ ಅನ್ಯ ಧರ್ಮೀಯರಿಗೆ ಅವಕಾಶ ನಿರಾಕರಿಸಲಾಗಿದೆ. ಈ ರೀತಿಯಾಗಿ  ಜಾತ್ರೆಗೆ `ಧರ್ಮ~ದ ತಡೆಗೋಡೆ ನಿರ್ಮಿಸಿರುವುದು ವಿವಾದಕ್ಕೆ ಕಾರಣವಾಗಿದೆ. ಪುತ್ತೂರು ಸೀಮೆಯ ಜನತೆಗೆ ಮಹಾಲಿಂಗೇಶ್ವರನೇ ಆರಾಧ್ಯ ದೇವರು. ಈ ದೇವಾಲಯದಲ್ಲಿ ಇದೇ 10ರಂದು ಧ್ವಜಾರೋಹಣದೊಂದಿಗೆ ಆರಂಭಗೊಳ್ಳುವ 9 ದಿನಗಳ ಪುತ್ತೂರು ಜಾತ್ರೆ ಒಂದು ರೀತಿ ನಾಡಹಬ್ಬವಿದ್ದಂತೆ. ಇಲ್ಲಿ ಜಾತಿ, ಮತ ಭೇದವಿಲ್ಲದೆ ಎಲ್ಲಾ ಧರ್ಮೀಯರು ಸೇರುತ್ತಾರೆ.ಕೊನೆಯ ದಿನ, ಇದೇ 17ರಂದು ನಡೆಯುವ ಬ್ರಹ್ಮರಥೋತ್ಸವ ಮತ್ತು ಬೆಡಿ (ಸುಡು ಮದ್ದು) ಪ್ರದರ್ಶನದ ವೇಳೆ ಜಿಲ್ಲೆ ಮಾತ್ರವಲ್ಲದೆ ಹೊರಜಿಲ್ಲೆಗಳ ಲಕ್ಷಾಂತರ ಮಂದಿ ಭಾಗವಹಿಸುತ್ತಾರೆ. ಆದರೆ ಈ ವರ್ಷ ಅನ್ಯ ಧರ್ಮೀಯರಿಗೆ ಸಂತೆ ವ್ಯಾಪಾರ ನಡೆಸಲು ಅವಕಾಶ ನಿರಾಕರಿಸಿರುವುದು ಜಾತ್ರೆಯ ವಿಶೇಷಕ್ಕೆ ಕಳಂಕ ಲೇಪಿಸಿದೆ ಎನ್ನುವ ಮಾತು ಕೇಳಿಬಂದಿದೆ.ಈವರೆಗೆ ಜಾತ್ರಾ ಗದ್ದೆಯಲ್ಲಿ ಎಲ್ಲಾ ಧರ್ಮಿಯರಿಗೆ ಸಂತೆ ವ್ಯಾಪಾರ ನಡೆಸಲು ಅವಕಾಶವಿತ್ತು. ದೂರದ ಊರುಗಳ ಕೆಲವು ಮುಸ್ಲಿಂ ಸಮುದಾಯದವರು ಸೇರಿದಂತೆ ಅನ್ಯ ಧರ್ಮದ ವ್ಯಾಪಾರಿಗಳು ಬಂದು ಸಂತೆ ಏಲಂನಲ್ಲಿ ಭಾಗವಹಿಸಿ ವ್ಯಾಪಾರ ನಡೆಸುತ್ತಿದ್ದರು. ಇದು ಇಲ್ಲಿ ಹಲವು ವರ್ಷಗಳಿಂದ ರೂಢಿಯಲ್ಲಿತ್ತು. ಆದರೆ ಈ ವರ್ಷ ಸಂತೆ ಏಲಂ ಬಗ್ಗೆ ಸ್ಪಷ್ಟ ಪ್ರಕಟಣೆ ನೀಡದೆ ಕೊನೇ ಕ್ಷಣದಲ್ಲಿ ಅನ್ಯ ಧರ್ಮೀಯರನ್ನು ಸಂತೆ ವ್ಯಾಪಾರದಿಂದ ಹೊರಗಿಡುವ ಕೆಲಸ ನಡೆದಿರುವುದು ಈ ವ್ಯಾಪಾರಿಗಳ ಅಸಮಾಧಾನಕ್ಕೆ ಕಾರಣವಾಗಿದೆ.ಸಂತೆ ವ್ಯಾಪಾರದಿಂದ ಅನ್ಯ ಧರ್ಮೀಯರನ್ನು ಹೊರಗಿಡುವ ಕುರಿತು ಯಾವುದೇ ಮಾಹಿತಿ ನೀಡಲಾಗಿಲ್ಲ. ದೇವಾಲಯದ ಸಭಾಭವನದಲ್ಲಿ ಅಳವಡಿಸಲಾಗಿದ್ದ ಪ್ರಕಟಣೆಯಲ್ಲಿ ಮಾತ್ರ ಹಿಂದೂಗಳಿಗೆ ಹೊರತುಪಡಿಸಿ ಉಳಿದ ಮಂದಿ ಏಲಂನಲ್ಲಿ ಭಾಗವಹಿಸುವಂತಿಲ್ಲ ಎಂದು ಪೆನ್ನಿನಲ್ಲಿ ಬರೆಯಲಾಗಿತ್ತು. ಉಳಿದ ನಿಯಮಗಳನ್ನು ಗಣಕೀಕರಣದ ಮೂಲಕ ಮುದ್ರಿಸಲಾಗಿತ್ತು .ಇದು ಸರಿಯೇ ಎಂಬುದು ಸಂತೆ ವ್ಯಾಪಾರದ ಏಲಂನಲ್ಲಿ ಭಾಗವಹಿಸಲು ಬಂದಿದ್ದ ದೂರದ ಊರುಗಳ ವ್ಯಾಪಾರಿಗಳ ಅಳಲು.`ಪತ್ರಿಕೆಗಳಲ್ಲಿ ನೀಡಿದ ಪ್ರಕಟಣೆಯಲ್ಲಿ ಈ ವಿಚಾರ ಇರಲಿಲ್ಲ. ನಾವು ಇಲ್ಲಿಗೆ ಬಂದ ಬಳಿಕ ಈ ವಿಚಾರ ನಮಗೆ ತಿಳಿಯಿತು ಎಂದು ಕಳೆದ ಹಲವು ವರ್ಷಗಳಿಂದ ಪುತ್ತೂರು ಜಾತ್ರಾ ಸಂತೆಯಲ್ಲಿ ವ್ಯಾಪಾರ ಮಾಡಿರುವ ವ್ಯಾಪಾರಿಗಳು ಹೇಳುತ್ತಾರೆ. ನಾವೇನು ತಪ್ಪು ಮಾಡಿದ್ದೇವೆ~ ಎಂದು ಪ್ರಶ್ನಿಸುತ್ತಿದ್ದಾರೆ.ಸ್ಪಷ್ಟನೆ:ಧಾರ್ಮಿಕ ದತ್ತಿ ಇಲಾಖೆಯ ಕಾಯ್ದೆಯಡಿ ದೇವಾಲಯದ ಜಾಗದಲ್ಲಿ ಹಿಂದೂಯೇತರರಿಗೆ ಬಾಡಿಗೆಗೆ ಸ್ಥಳ ನೀಡಲು ಅವಕಾಶವಿಲ್ಲ. ಆದ್ದರಿಂದ ಅನ್ಯ ಧರ್ಮದವರಿಗೆ ಸಂತೆ ವ್ಯಾಪಾರದ ಏಲಂನಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಲಾಗಿದೆ ಎಂದು ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ನನ್ಯ ಅಚ್ಚುತ ಮೂಡಿತ್ತಾಯ ಸ್ಪಷ್ಟನೆ ನೀಡಿದ್ದಾರೆ.ಕಳೆಗುಂದಲಿದೆಯೆ ಸಂತೆ?:
ಪುತ್ತೂರು ಜಾತ್ರಾ ಗದ್ದೆಯಲ್ಲಿ ಪ್ರತೀ ವರ್ಷ ಮುಸ್ಲಿಂ ವ್ಯಾಪಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ವ್ಯಾಪಾರ ಮಾಡುತ್ತಿದ್ದು, ಈ ಬಾರಿ  ಅನ್ಯಧರ್ಮೀಯರನ್ನು ವ್ಯಾಪಾರದಿಂದ ಹೊರಗಿಟ್ಟಿರುವುದರಿಂದ ಸಂತೆ ಗದ್ದೆ ಕಳೆಗುಂದುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಈ ನಿರಾಕರಣೆ ನೀತಿಯಿಂದಾಗಿ ಅನ್ಯ ಧರ್ಮೀಯರು  ಜಾತ್ರಾ ಸಂಭ್ರಮದಿಂದಲೂ ದೂರ ಉಳಿಯುವ ಸಾಧ್ಯತೆಯೇ ಹೆಚ್ಚಿದೆ. ಈ ಧರ್ಮದ ತಡೆಗೋಡೆಯಿಂದ ಜಾತ್ರಾ ಮೆರಗಿಗೆ ಗ್ರಹಣ ಆವರಿಸದಿರಲಿ ಎಂಬುದು ಭಕ್ತ ಸಮುದಾಯದ ಆಶಯವಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.