ಶುಕ್ರವಾರ, ಫೆಬ್ರವರಿ 26, 2021
28 °C
ಹೊಸೂರು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಯೋಜನೆ ಉದ್ಘಾಟನೆ

ಪುತ್ರನ ಸ್ಮರಣೆಗೆ ‘ಈ’ ಲ್ಯಾಬ್‌ ಅರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುತ್ರನ ಸ್ಮರಣೆಗೆ ‘ಈ’ ಲ್ಯಾಬ್‌ ಅರ್ಪಣೆ

ಹುಬ್ಬಳ್ಳಿ: ಶಾಲೆಯ ಆವರಣ ಸಂಭ್ರಮದಲ್ಲಿ ಮುಳುಗಿತ್ತು. ಎಲ್ಲರ ಮುಖದಲ್ಲೂ ಸಂತಸವಿತ್ತು. ಆದರೂ ಅವರ ಮನದಲ್ಲಿ ದುಗುಡ ತುಂಬಿತ್ತು. ಇದೆಲ್ಲದಕ್ಕೂ ವೇದಿಕೆಯಾದದ್ದು ನಗರದ ಹೊಸೂರಿನಲ್ಲಿರುವ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಸ್ಮಾರ್ಟ್‌ ತರಗತಿ ಆಧಾರಿತ ಇ–ಲ್ಯಾಬ್‌ ಉದ್ಘಾಟನೆ ಸಮಾರಂಭ.ಶಾಲೆ ಅತ್ಯಾಧುನಿಕ ಕಲಿಕಾ ಉಪ­ಕರ­ಣ­ವನ್ನು ಗಳಿಸಿದ್ದಕ್ಕೆ ಸಂಭ್ರಮ ಅಲೆದಾಡಿತ್ತು. ಆದರೆ ಆನಂದ ವಿ.­ಹಳೇಮನಿ–ಸುವರ್ಣಾ ದಂಪತಿ ಅದನ್ನು ಅಕಾಲದಲ್ಲಿ ತೀರಿಹೋದ ಪುತ್ರನ ಹೆಸರಿನಲ್ಲಿ ಕೊಡುಗೆಯಾಗಿ ನೀಡಿದ್ದು ಬೇಸರದ ವಾತಾವರಣಕ್ಕೆ ಕಾರಣವಾಗಿತ್ತು.ಹೊಸೂರಿನ ಆನಂದ ಹಳೇಮನಿ ಅವರ ಪುತ್ರ ವೀರಣ್ಣ ಹಳೇಮನಿ 2014ರ ಸೆಪ್ಟೆಂಬರ್‌ 27ರಂದು ಅನಾರೋಗ್ಯದಿಂದ ತೀರಿಹೋಗಿದ್ದ. ಆಗ ಆತನಿಗೆ ಎಂಟು ವರ್ಷ ವಯಸ್ಸಾಗಿತ್ತು. ಪುತ್ರಶೋಕದಿಂದ ಹೊರಬರುವ ಶ್ರಮದ ನಡುವೆ ಆತನ ಹೆಸರು ಅಮರವಾಗಿ ಉಳಿಯುವಂತೆ ಮಾಡಲು ಆನಂದ-ಸುವರ್ಣಾ ದಂಪತಿ ಬಯಸಿದರು. ಇದರ ಫಲ ಇ–ಲ್ಯಾಬ್‌.ಹೊಸೂರು ಶಾಲೆಯಲ್ಲಿ ಆನಂದ ಅವರು ಕಲಿತಿದ್ದರು. ಈಗ ಅವರು ಗ್ರಾನೈಟ್‌ ಉದ್ಯಮದಲ್ಲಿ ತೊಡಗಿಕೊಂ­ಡಿ­ದ್ದಾರೆ. ₹ 2 ಲಕ್ಷಕ್ಕೂ ಹೆಚ್ಚು ವೆಚ್ಚ ಮಾಡಿ ತಾವು ಕಲಿತ ಶಾಲೆಗೆ ಮಗನ ಹೆಸರಿ­ನಲ್ಲಿ ಸ್ಮಾರ್ಟ್‌್ ಕಲಿಕಾ ಸಾಮಗ್ರಿ ಒದಗಿಸಿದ್ದಾರೆ. ಬಂಗಾರಂಥ ಮನಸ್ಸು ಬೇಕು: ಇ–ಲ್ಯಾಬ್‌ ಉದ್ಘಾಟಿಸಿದ ಗದಗ ಹೊಸಳ್ಳಿ ಸಂಸ್ಥಾನಮಠದ ಅಭಿನವ ಬೂದೀಶ್ವರ ಸ್ವಾಮೀಜಿ ‘ಬಂಗಾರದಂಥ ಮನಸ್ಸು ಇರು­ವ­ವರು ಮಾತ್ರ ದಾನ ಮಾಡ­ಬಲ್ಲರು. ಸರ್ಕಾರಿ ಶಾಲೆಗೆ ಹೋಗುವ ಮಕ್ಕಳಲ್ಲಿರುವ ಸಾಮರ್ಥ್ಯ ಸಂಪೂರ್ಣವಾಗಿ ಹೊರಬರಬೇಕಾದರೆ ಭಾಷೆ ಮತ್ತು ತಂತ್ರಜ್ಞಾನದ ಸದುಪ­ಯೋಗ ಪಡೆಯಬೇಕು. ಇದನ್ನು ಕಲ್ಪಿ­ಸಲು ಸಮಾಜದಲ್ಲಿರುವ ಶ್ರೀಮಂತ ಮನಸ್ಸುಗಳು ಮುಂದಾಗಬೇಕು’ ಎಂದು ಸಲಹೆ ನೀಡಿದರು.ಮುಖ್ಯ ಅತಿಥಿಯಾಗಿದ್ದ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಜಗದೀಶ ಶೆಟ್ಟರ್‌ ‘ನನ್ನ ಕ್ಷೇತ್ರದ ಸರ್ಕಾರಿ ಶಾಲೆಗಳಲ್ಲಿ ಸ್ಮಾರ್ಟ್‌ ತರಗತಿಗಳನ್ನು ಸ್ಥಾಪಿಸುವುದಕ್ಕಾಗಿ ಮೊದಲ ಘಟ್ಟದಲ್ಲಿ ₹ 5 ಲಕ್ಷ ಅನುದಾನ ಒದಗಿಸಲಾಗಿದೆ. ಐದು ಶಾಲೆಗಳಲ್ಲಿ ಶೀಘ್ರ ಸೌಲಭ್ಯವನ್ನು ಅಳವಡಿಸಲಾಗುವುದು. ಉಳಿದ ಶಾಲೆಗಳಿಗೆ ಒಟ್ಟು ₹ 20 ಲಕ್ಷ ಬಿಡುಗಡೆ ಮಾಡಲಾಗುವುದು’ ಎಂದರು.‘ಸರ್ಕಾರಿ ಶಾಲೆಗಳಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ನಗರದ ಶಾಲೆಗಳಿಗೆ ಶುದ್ಧ ನೀರು ಮತ್ತು ಶೌಚಾಲಯಗಳನ್ನು ಒದಗಿಸಬೇಕು’ ಎಂದು ಹೇಳಿದ ಅವರು ‘ಹೈದರಾಬಾದ್ ಕರ್ನಾಟಕ ಭಾಗದ ಯಾದಗಿರಿ, ಕೊಪ್ಪಳ, ರಾಯಚೂರು ಮತ್ತಿತರ ಜಿಲ್ಲೆಗಳಲ್ಲಿ ಶೈಕ್ಷಣಿಕ ಕ್ಷೇತ್ರ ತೀರಾ ಹಿಂದುಳಿದಿದೆ’ ಎಂದರು.‘ಅಭಿವೃದ್ಧಿಗಾಗಿ ಸರ್ಕಾರ ಬಿಡುಗಡೆ ಮಾಡಿದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಹೈದರಾಬಾದ್‌ –ಕರ್ನಾಟಕ ಅಭಿವೃದ್ಧಿ ಮಂಡಳಿಗೆ ಸರ್ಕಾರ ಬಿಡುಗಡೆ ಮಾಡಿದ ₹ 2700 ಕೋಟಿಯಲ್ಲಿ ಕೇವಲ ₹ 2500 ಕೋಟಿ ಮಾತ್ರ ಬಳಕೆಯಾಗಿದೆ. ಇಂಥ ಮನಸ್ಥಿತಿಯಲ್ಲಿ ಅಭಿವೃದ್ಧಿ ಅಸಾಧ್ಯ’ ಎಂದು ಅವರು ಹೇಳಿದರು.ಮೇಯರ್‌ ಅಶ್ವಿನಿ ಮಜ್ಜಗಿ, ಉಪಮೇಯರ್‌ ಸ್ಮಿತಾ ಜಾಧವ, ಪಾಲಿಕೆ ಸದಸ್ಯೆ ಲೀನಾ ಮಿಸ್ಕಿನ್‌, ಮಾಜಿ ಸದಸ್ಯ ಶಿವು ಹಿರೇಕೆರೂರ, ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ಎಸ್‌.ಬಿ.ಕೊಡ್ಲಿ, ಬಿ.ಇ.ಒ. ಉಮೇಶ ಬೊಮ್ಮಕ್ಕನವರ, ಶಹರ ವಲಯ ಪ್ರೌಢ ವಿಜ್ಞಾನ ವಿಭಾಗದ ಬಿ.ಆರ್‌.ಪಿ. ಸಂಜೀವ ಕುಮಾರ ಭೂಶೆಟ್ಟಿ ಇದ್ದರು.***

ಸರ್ಕಾರಿ ಶಾಲೆಯಲ್ಲಿ ಶುಲ್ಕ ಇಲ್ಲ. ಆದರೆ ಸೌಲಭ್ಯಗಳೂ ಇರುವುದಿಲ್ಲ. ಇದನ್ನು ತಪ್ಪಿಸುವುದಕ್ಕಾಗಿ ಇದೊಂದು ಸಣ್ಣ ಕೊಡುಗೆ.

-ಆನಂದ ವಿ.ಹಳೇಮನಿ,
ಸಾಮಗ್ರಿ ದಾನ ಮಾಡಿದವರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.