ಶನಿವಾರ, ಮೇ 21, 2022
23 °C

ಪುರಸಭೆ ಸಾಮಾನ್ಯ ಸಭೆಯಲ್ಲಿ ಚರ್ಚೆ- ಗೊಂದಲ ಬಸ್ ನಿಲ್ದಾಣ ಸ್ಥಳಾಂತರ: ಆಡಳಿತ ಪಕ್ಷದಲ್ಲೇ ಭಿನ್ನಮತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ಪಟ್ಟಣದ ಈಗಿರುವ ಬಸ್ ನಿಲ್ದಾಣ ಸ್ಥಳಾಂತರಿಸುವ ಬಗ್ಗೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಶನಿವಾರ ಗೊಂದಲಮಯ ವಾತಾವರಣ ಉಂಟಾಯಿತು.

ಜಿಲ್ಲಾಧಿಕಾರಿ ಅವರು ಅಧ್ಯಕ್ಷರೊಂದಿಗೆ ಚರ್ಚಿಸಿ ಬಂಡೀಮಠ ಬಸ್ ನಿಲ್ದಾಣದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸುವ ಬಗ್ಗೆ ಮತ್ತು ಈಗಿರುವ ಬಸ್ ನಿಲ್ದಾಣದಲ್ಲಿ ದುರಸ್ತಿ ಕಾರ್ಯ ನಡೆಸಲು ಬಂಡೀಮಠಕ್ಕೆ ನಿಲ್ದಾಣ ಸ್ಥಳಾಂತರಿಸುವ ಬಗ್ಗೆ ವಿಷಯ ಮಂಡನೆಯಾಯಿತು. ಆಗ ಸದಸ್ಯ ಶುಭದ ರಾವ್ ಮಾತನಾಡಿ ಬಸ್ ಸ್ಥಳಾಂತರದ ಬಗ್ಗೆ ಜನರಲ್ಲಿ ಗೊಂದಲವಿದೆ. ಬಸ್ ನಿಲ್ದಾಣ ಸ್ಥಳಾಂತರ ಸಮಂಜಸವಲ್ಲ. ಸ್ಥಳಾಂತರಕ್ಕೆ ನನ್ನ ಪ್ರಬಲ ವಿರೋಧವಿದೆ.ಏಕೆಂದರೆ ಜನರಿಗೆ ಬೇಕಾಗುವ ಎಲ್ಲ ವ್ಯವಸ್ಥೆಗಳೂ ಈಗಿನ ನಿಲ್ದಾಣದಲ್ಲಿವೆ. ಶಾಲಾ ಕಾಲೇಜುಗಳಿಗೆ, ಆಸ್ಪತ್ರೆಗೆ, ಮಾರುಕಟ್ಟೆಗೆ ಈಗಿರುವ ಬಸ್ ನಿಲ್ದಾಣ ಎಲ್ಲ ಬಗೆಯಲ್ಲೂ ಅನುಕೂಲವಾಗಿದೆ ಎಂದರು. ಈಗ ಜನರು ರಸ್ತೆ ವಿಸ್ತರಣೆಗೆ ಒಪ್ಪಿದ್ದಾರೆ. ಹೀಗಿರುವಾಗ ಬಸ್ ನಿಲ್ದಾಣ ಸ್ಥಳಾಂತರಿಸುವುದರಿಂದ ರಸ್ತೆ ವಿಸ್ತರಣೆಗೆ ತೊಂದರೆಯಾಗುವ ಸಾಧ್ಯತೆಗಳಿವೆ ಎಂದರು.ಈಗಿನ ಬಂಡೀಮಠದ ಬಸ್ ನಿಲ್ದಾಣದಲ್ಲಿ ಧರ್ಮಸ್ಥಳಕ್ಕೆ ಸಾಗುವ 120ರಿಂದ 125 ಬಸ್‌ಗಳನ್ನೂ, ಮುಂಬೈ ಕಡೆ ತೆರಳುವ ಬಸ್‌ಗಳನ್ನೂ, ಬೆಂಗಳೂರು ಬಸ್‌ಗಳನ್ನೂ ನಿಲ್ಲಿಸುವ ವ್ಯವಸ್ಥೆಮಾಡಿ, ಹಂತಹಂತವಾಗಿ ಬಸ್ ನಿಲ್ದಾಣ ಸ್ಥಳಾಂತರ ಮಾಡಬಹುದು ಎಂದರು.ಸದಸ್ಯ ಅಶ್ಫಕ್ ಅಹಮದ್ ಮಾತನಾಡಿ ಬಂಡೀಮಠ ಬಸ್ ನಿಲ್ದಾಣ ಕಾರ್ಕಳದ ಹೃದಯ ಭಾಗದಲ್ಲಿರುವುದರಿಂದ ಅಲ್ಲಿಗೆ ಬಸ್ ನಿಲ್ದಾಣ ಸ್ಥಳಾಂತರಿಸುವುದರಿಂದ ಪುರಸಭೆಯ ಗೌರವ ಹೆಚ್ಚಲಿದೆ. ಬಂಡಿಮಠ ಬಸ್ ನಿಲ್ದಾಣ ಇಡೀ ತಾಲ್ಲೂಕಿನ ಜನರಿಗೆ ಸಂಬಂಧಿಸಿದ್ದು. ಶೇ 90ರಷ್ಟು ಮಂದಿ ಗ್ರಾಮೀಣ ಪ್ರದೇಶದವರು ಅದನ್ನು ಉಪಯೋಗಿಸುವರು. ತಾಲ್ಲೂಕು ಕಚೇರಿ, ನೆಮ್ಮದಿ ಕೇಂದ್ರ ಎಲ್ಲರಿಗೂ ಅಲ್ಲೇ ಸೂಕ್ತವಾಗಲಿದೆ. ಸಾಲ್ಮರ, ಜೋಡುರಸ್ತೆ, ಕಾಬೆಟ್ಟು, ಬಂಗ್ಲೆಗುಡ್ಡೆ ಭಾಗದ ಎಲ್ಲರಿಗೂ ಅದು ಮಧ್ಯದಲ್ಲಿದೆ. ಆದಷ್ಟು ಬೇಗ ಸ್ಥಳಾಂತರಿಸಿ ಎಂದರು.  ಈ ಕುರಿತು ಪ್ರತಿಪಕ್ಷದವರ ಅಭಿಪ್ರಾಯ ಏನು? ಎಂದು ಪ್ರಶ್ನಿಸಿದಾಗ ರವೀಂದ್ರ ಮೊಯಿಲಿ ಮಾತನಾಡಿ ನಿಮ್ಮಲ್ಲೇ ಗೊಂದಲವಿರುವುದರಿಂದ ನಾವೇನು ಹೇಳಲಿ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನವೀನಚಂದ್ರ ಹೆಗ್ಡೆ ನೂತನ ಬಸ್ ನಿಲ್ದಾಣದಲ್ಲಿ ನೀರು, ಶೌಚಾಲಯ ಹಾಗೂ ತಾತ್ಕಾಲಿಕ ಶೆಡ್‌ಗಳ ನಿರ್ಮಾಣವೇ ಮೊದಲಾದ ಮೂಲಸೌಕರ್ಯ ಆಗುವ ತನಕ ಸ್ಥಳಾಂತರ ಸರಿಯಲ್ಲ ಎಂದರು. ಇದಕ್ಕೆ ಸುರೇಶ ಮಡಿವಾಳ ದನಿಗೂಡಿದರು.ಪುರಸಭಾ ವ್ಯಾಪ್ತಿಯ ಕಾಳಿಕಾಂಬ ಐದು ಸೆಂಟ್ಸ್ ಕಾಲೊನಿಗೆ “ರವೀಂದ್ರ ಕಾಲನಿ’ ಎಂಬ ಹೆಸರನ್ನಿಡುವ ಕುರಿತು ಯುವಶಕ್ತಿ ಯೂತ್ ಕ್ಲಬ್ ಮನವಿಯ ಪ್ರಸ್ತಾಪ ಚರ್ಚೆಯಾಯಿತು. ಪುರಸಭಾಧ್ಯಕ್ಷೆ ಪ್ರತಿಮಾ ಮೋಹನ್ ಪ್ರತಿಕ್ರಿಯಿಸಿ ತುಂಬಾ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿ ಬೇರೆ ಬೇರೆ ಹೆಸರನ್ನು ಇಡಲು ಅರ್ಜಿ ಸಲ್ಲಿಸಿದ್ದಾರೆ. ಎಲ್ಲರ ಅರ್ಜಿಗಳನ್ನು ಮಾನ್ಯ ಮಾಡುವುದು ಸಾಧ್ಯ. ಮಾತ್ರವಲ್ಲ ಬೇರೆ ಬೇರೆ ಹೆಸರುಗಳನ್ನು ಇಡುವುದರಿಂದ ಗೊಂದಲ ಏರ್ಪಡುತ್ತದೆ ಎಂದರು. ಪಟ್ಟಣದ ಹನುಮಾನ್ ಗ್ಯಾರೇಜ್ ಎದುರು, ದಾನಶಾಲೆಯ ಹೇಮಚಂದ್ರದ ಮನೆ ಎದುರು, ತೆಳ್ಳಾರು ರಸ್ತೆಯ ಮಹಾಲಸಾ ಹೊಟೇಲ್ ಎದುರು ರಸ್ತೆಯ ಅಪಾಯಕಾರಿಯಾಗಿರುವ ಹೊಂಡಗಳನ್ನು ಮುಚ್ಚಬೇಕು. ಮಸ್ತಕಾಭಿಷೇಕ ಸಂದರ್ಭ ದಾನಶಾಲೆ ಕೂಡು ರಸ್ತೆಗೆ ಹಾಕಿರುವ ಕಾಂಕ್ರೀಟ್ ಎದ್ದು ಹೋಗಿವೆ. ಅದನ್ನು ಬೇಗ ದುರಸ್ತಿಗೊಳಿಸಬೇಕು ಎಂದು ಸದಸ್ಯ ಪ್ರಕಾಶ ಒತ್ತಾಯಿಸಿದರು. ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷೆ ಭರವಸೆ ನೀಡಿದರು.ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಉಪಾಧ್ಯಕ್ಷೆ ಪ್ರೇಮಾ ಆಚಾರ್ಯ, ಮಾಜಿ ಅಧ್ಯಕ್ಷ ಸುಭೀತ್ ಎನ್.ಆರ್., ದಯಾನಂದ ಮೊಯಿಲಿ, ಜ್ಯೋತಿ ಶೆಟ್ಟಿ ಚರ್ಚೆಯಲ್ಲಿ ಪಾಲ್ಗೊಂಡರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.