ಶನಿವಾರ, ಮೇ 15, 2021
25 °C

ಪೂರೈಕೆಯಲ್ಲಿ ಅಡಚಣೆ: ತೈಲ ಕಂಪೆನಿಗಳ ಎಚ್ಚರಿಕೆ:ನಷ್ಟ ಭರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಪೆಟ್ರೋಲ್ ದರ ಹೆಚ್ಚಿಸಲು ಬಿಡಿ ಅಥವಾ ದಿನನಿತ್ಯ ಆಗುತ್ತಿರುವ ರೂ 48 ಕೋಟಿ ನಷ್ಟವನ್ನು ಭರಿಸಿ. ಇಲ್ಲದಿದ್ದರೆ  ಕಚ್ಚಾ ತೈಲ ಖರೀದಿಸಲು ಹಣವಿಲ್ಲದೆ ಪೆಟ್ರೋಲ್ ಪೂರೈಕೆಯಲ್ಲಿ ಅಡಚಣೆ ಆಗಲಿದೆ ಎಂದು ತೈಲ ಕಂಪೆನಿಗಳು ಸರ್ಕಾರಕ್ಕೆ ಬೆದರಿಕೆ ಹಾಕಿವೆ.`ಕಚ್ಚಾ ತೈಲ ಮಾರುಕಟ್ಟೆ ದರ ದಿನೇ ದಿನೇ ಏರಿಕೆ ಆಗುತ್ತಿದ್ದು, ಪರಿಸ್ಥಿತಿ ಕೈಮೀರುತ್ತಿದೆ. ಪ್ರತಿ ಲೀಟರ್ ಪೆಟ್ರೋಲ್ ಮಾರಾಟಕ್ಕೆ ರೂ 7.67  ನಷ್ಟ ಅನುಭವಿಸುತ್ತಿದ್ದೇವೆ. ಶೇ 20ರಷ್ಟು ಮಾರಾಟ ತೆರಿಗೆಯನ್ನೂ ಸೇರಿದರೆ ಪ್ರತಿ ಲೀಟರ್‌ಗೆ ರೂ 9.20 ನಷ್ಟವಾಗುತ್ತದೆ~ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಅಧ್ಯಕ್ಷ ಆರ್.ಎಸ್. ಬುಟೊಲಾ ಸುದ್ದಿಗಾರರಿಗೆ ತಿಳಿಸಿದ್ದಾರೆ.`ಕಚ್ಚಾ ತೈಲ ಆಮದಿಗೆ ಶೇ 93ರಷ್ಟು ಖರ್ಚಾಗುತ್ತದೆ.  ಪೆಟ್ರೋಲ್ ಮಾರಾಟ ದರ ಹೆಚ್ಚಿಸಿ ಬಂಡವಾಳ ಕ್ರೋಡೀಕರಣ ಮಾಡಿಕೊಳ್ಳದಿದ್ದರೆ ಕಚ್ಚಾ ತೈಲ ಆಮದು ಮಾಡಿಕೊಳ್ಳುವುದೇ ಕಷ್ಟವಾಗುತ್ತದೆ. ಕಚ್ಚಾ ತೈಲವೇ ಆಮದಾಗದಿದ್ದರೆ ಸ್ವಾಭಾವಿಕವಾಗಿಯೇ ಪೆಟ್ರೋಲ್ ಪೂರೈಕೆಯಲ್ಲಿ ಕೊರತೆ ಉಂಟಾಗುತ್ತೆ~ ಎಂದು ಅವರು ಹೇಳಿದರು.ಐಒಸಿ ಸೇರಿದಂತೆ ಸರ್ಕಾರಿ ಸ್ವಾಮ್ಯದ ಭಾರತ್ ಪೆಟ್ರೋಲಿಯಂ, ಹಿಂದೂಸ್ತಾನ ಪೆಟ್ರೋಲಿಯಂ ಕಂಪೆನಿಗಳು ಪ್ರತಿದಿನ ರೂ 48 ಕೋಟಿಗಳಷ್ಟು ನಷ್ಟ ಅನುಭವಿಸುತ್ತಿವೆ. 2010ರ ಜೂನ್‌ನಲ್ಲೇ ತೈಲ ಮಾರಾಟ ಬೆಲೆ ನಿಯಂತ್ರಣ ಅಧಿಕಾರವನ್ನು ಕಂಪೆನಿಗಳ ವಿವೇಚನೆಗೆ ಬಿಟ್ಟಿದ್ದರೂ ಸರ್ಕಾರ ರಾಜಕೀಯ ಕಾರಣಗಳಿಗಾಗಿ ದರ ಏರಿಸದಂತೆ ಹಸ್ತಕ್ಷೇಪ ಮಾಡುತ್ತಿದೆ. ಇದರಿಂದ ತೈಲ ಕಂಪೆನಿಗಳಿಗೆ ಭಾರಿ ನಷ್ಟ ಉಂಟಾಗುತ್ತಿದೆ ಎನ್ನಲಾಗಿದೆ.`ತೈಲ ಮಾರಾಟ ವಹಿವಾಟಿನಲ್ಲಿ ನಾವು ವಿಚಿತ್ರ ಸನ್ನಿವೇಶವನ್ನು ಎದುರಿಸುತ್ತಿದ್ದೇವೆ. ಕೇಂದ್ರ ಸರ್ಕಾರ ಪ್ರತಿ ಲೀಟರ್ ಪೆಟ್ರೋಲ್ ಮಾರಾಟಕ್ಕೆ ಅಬಕಾರಿ ಸುಂಕವಾಗಿ ರೂ 14.78 ಸಂಗ್ರಹಿಸುತ್ತಿದೆ. ರಾಜ್ಯ ಸರ್ಕಾರಗಳು ರೂ 10ರಿಂದ 20ರ ವರೆಗೆ ಕರ ಸಂಗ್ರಹಣೆ ಮಾಡುತ್ತಿವೆ. ಆದರೆ, ಆದಾಯ ಸಂಗ್ರಹಿಸಲು ತೈಲ ಕಂಪೆನಿಗಳಿಗೆ ಮಾತ್ರ ಬಿಡುತ್ತಿಲ್ಲ~ ಎಂದು ಬುಟೊಲಾ ತಿಳಿಸಿದರು.ನಷ್ಟ ಸರಿದೂಗಿಸಲು ಪೆಟ್ರೋಲ್ ದರ ಏರಿಕೆ ಮಾಡಲು ಬಿಡಿ ಅಥವಾ ನಷ್ಟ ಭರಿಸಿ ಇಲ್ಲವೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನಾದರೂ ಕಡಿಮೆ ಮಾಡಿ ಎಂಬುದು ಸರ್ಕಾರಿ ಸ್ವಾಮ್ಯದ ತೈಲೋತ್ಪನ್ನ ಮಾರಾಟ ಕಂಪೆನಿಗಳ ಬೇಡಿಕೆ.`ಈ ಬೇಡಿಕೆಯನ್ನು ಒಪ್ಪದಿದ್ದರೆ. ನಮಗೆ ಪೆಟ್ರೋಲ್ ದರ ಏರಿಕೆ ಮಾಡದೆ ಬೇರೆ ದಾರಿಯೇ ಇಲ್ಲ ಎಂದು ನಾವು ಸರ್ಕಾರಕ್ಕೆ ಸ್ಪಷ್ಟವಾಗಿ ತಿಳಿಸಿದ್ದೇವೆ. ಆದರೆ, ಇದಕ್ಕೆ ಸರ್ಕಾರದಿಂದ ಈವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ~ ಎಂದು ಬುಟೊಲಾ ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.