ಗುರುವಾರ , ಮೇ 6, 2021
27 °C

ಪೆಟ್ರೋಲ್ ದರ ಏರಿಕೆಗೆ ಎಲ್ಲೆಡೆ ವ್ಯಾಪಕ ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ/ಐಎಎನ್‌ಎಸ್): ಪೆಟ್ರೋಲ್ ಬೆಲೆ ಏರಿಕೆಗೆ ರಾಷ್ಟ್ರಾದ್ಯಂತ ತೀವ್ರ ವಿರೋಧ ವ್ಯಕ್ತವಾಗಿದ್ದು, ವಿವಿಧ ರಾಜಕೀಯ ಪಕ್ಷಗಳು, ಸಂಘ ಸಂಸ್ಥೆಗಳು ಏರಿಸಿರುವ ಬೆಲೆ ಇಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿವೆ.ವಿರೋಧಿಗಳ ಜತೆ ಯುಪಿಎ ಮಿತ್ರ ಪಕ್ಷಗಳಾದ ತೃಣಮೂಲ ಕಾಂಗ್ರೆಸ್ ಮತ್ತು ಡಿಎಂಕೆ ಸಹ ಧ್ವನಿಗೂಡಿಸಿದ್ದು, ಬೆಲೆ ಏರಿಕೆ ನಿರ್ಧಾರಕ್ಕೆ ಮುನ್ನ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿವೆಯಲ್ಲದೆ, ಏರಿಸಿರುವ ಬೆಲೆಯನ್ನು ತಕ್ಷಣ ಇಳಿಸುವಂತೆ ಒತ್ತಾಯ ಮಾಡಿವೆ.ತೈಲ ಬೆಲೆ ನಿಯಂತ್ರಣ ಅಧಿಕಾರವನ್ನು ತೈಲ ಕಂಪೆನಿಗಳಿಂದ ಕಿತ್ತುಕೊಳ್ಳಬೇಕು. ನಿರಂತರ ಬೆಲೆ ಏರಿಕೆ ದೇಶದಲ್ಲಿ ಹಣದುಬ್ಬರಕ್ಕೆ ಕಾರಣವಾಗುತ್ತದೆ. ಹಾಗಾಗಿ ತೈಲ ಕಂಪೆನಿಗಳ ನಷ್ಟ ಸರಿದೂಗಿಸಲು ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದು ವಿರೋಧ ಪಕ್ಷಗಳು ಸಲಹೆ ಮಾಡಿವೆ.`ಆರ್ಥಿಕ ನೀತಿಯ ವೈಫಲ್ಯ~: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಆರ್ಥಿಕ ನೀತಿಗೆ ದಿಕ್ಕುದಿಸೆ ಇಲ್ಲ. ಆರ್ಥಿಕ ನೀತಿಯ ವೈಫಲ್ಯವೇ ನಿರಂತರ ಬೆಲೆ ಏರಿಕೆಗೆ ಕಾರಣ ಎಂದು ಬಿಜೆಪಿ ಹಿರಿಯ ಮುಖಂಡ ರಾಜನಾಥ ಸಿಂಗ್ ಆರೋಪಿಸಿದ್ದಾರೆ.ನಿರಂತರ ಬೆಲೆ ಏರಿಕೆ ಬಡವರು, ಮಧ್ಯಮವರ್ಗದವರ ಮೇಲೆ ಹೆಚ್ಚಿನ ಹೊರೆ ಬೀಳುವಂತೆ ಮಾಡಿದ್ದು, ಈ ಹಿಂದೆಯೂ ಬಿಜೆಪಿ ಪ್ರತಿಭಟನೆ ಮಾಡಿತ್ತು. ಈಗಲೂ ಸಹ ಸಂಸತ್ ಒಳಗೆ ಹಾಗೂ ಹೊರಗೆ ವಿಷಯ ಪ್ರಸ್ತಾಪಿಸುವುದಾಗಿ ಅವರು ತಿಳಿಸಿದರು.ಬಿಜೆಪಿ ಪ್ರತಿಭಟನೆ: ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ಬಿಜೆಪಿ, ಏರಿಕೆ ಮಾಡಿರುವ ಪೆಟ್ರೋಲ್ ದರವನ್ನು ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯ ಮಾಡಿತು.ಸಾಮಾನ್ಯ ಜನರ ಜೀವನದ ಜತೆ ಯುಪಿಎ ಸರ್ಕಾರ ಆಟವಾಡುತ್ತಿದ್ದು, ಅವರ ಜೀವನವನ್ನು ಸಂಕಷ್ಟಕ್ಕೆ ಈಡು ಮಾಡಿದೆ ಎಂದು ದೆಹಲಿ ವಿಧಾನ ಸಭೆ ವಿರೋಧ ಪಕ್ಷದ ನಾಯಕ ವಿ.ಕೆ.ಮಲ್ಹೋತ್ರ ಆರೋಪಿಸಿದರು.

2010 ಜೂನ್‌ನಿಂದ ಈವರೆಗೆ ಹತ್ತು ಬಾರಿ ತೈಲ ಬೆಲೆ ಏರಿಕೆ ಮಾಡಿದ್ದು, ಜನಸಾಮಾನ್ಯರು ಜೀವನ ನಿರ್ವಹಿಸುವುದು ಕಷ್ಟವಾಗಿದೆ ಎಂದರು.ಸಿಪಿಎಂ ಒತ್ತಾಯ: ಲೀಟರ್ ಪೆಟ್ರೋಲ್‌ಗೆ 3.14 ರೂಪಾಯಿ ಏರಿಕೆ ಮಾಡಿರುವುದನ್ನು ತಕ್ಷಣ ವಾಪಾಸ್ ಪಡೆಯಬೇಕು ಎಂದು ಸಿಪಿಎಂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ. ಜತೆಗೆ ಪೆಟ್ರೋಲ್ ಬೆಲೆ ನಿಯಂತ್ರಣ ಅಧಿಕಾರವನ್ನು ಸರ್ಕಾರ ತೈಲ ಕಂಪೆನಿಗಳ ಕೈಯಿಂದ ಕಿತ್ತುಕೊಳ್ಳಬೇಕು ಎಂದು ಪಕ್ಷದ ಪಾಲಿಟ್‌ಬ್ಯೂರೊ ಸಲಹೆ ಮಾಡಿದೆ. ನಿರಂತರ ತೈಲಬೆಲೆ ಏರಿಕೆ ದೇಶದಲ್ಲಿ ಹಣದುಬ್ಬರ ಏರಿಕೆಗೆ ಕಾರಣವಾಗಿದೆ ಎಂದೂ ಪಕ್ಷ ಹೇಳಿದೆ.ಜನಸಾಮಾನ್ಯರಿಗೆ ಹೊರೆ (ನವದೆಹಲಿ ವರದಿ): ಪೆಟ್ರೋಲ್ ದರ ಏರಿಕೆ ಹಣದುಬ್ಬರಕ್ಕೆ ಕಾರಣವಾಗುತ್ತದೆ, ಅಲ್ಲದೆ ಜನ ಸಾಮಾನರ ಮೇಲೆ ಇನ್ನಷ್ಟು ಹೊರೆಯಾಗುತ್ತದೆ ಎಂದು ತೃಣಮೂಲ ಕಾಂಗ್ರೆಸ್ ಮುಖಂಡ ಹಾಗೂ ರೈಲ್ವೆ ಸಚಿವ ದಿನೇಶ್ ತ್ರಿವೇದಿ ಹೇಳಿದ್ದಾರೆ. ನಷ್ಟ ಅನುಭವಿಸುತ್ತಿರುವ ತೈಲ ಕಂಪೆನಿಗಳ ನಷ್ಟವನ್ನು ಸರಿದೂಗಿಸಲು ಕೇಂದ್ರ ಸರ್ಕಾರ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು ಎಂದೂ ಅವರು ಸಲಹೆ ಮಾಡಿದ್ದಾರೆ.ಬೆಲೆ ಏರಿಕೆ ಮೊದಲು ಸಂಪರ್ಕಿಸಿಲ್ಲ (ಕೋಲ್ಕತ್ತ ವರದಿ): ಕೇಂದ್ರದ ಯುಪಿಎ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆಗೆ ಮುನ್ನ ಸಂಪರ್ಕ ಮಾಡಿರಲಿಲ್ಲ ಎಂದು ಯುಪಿಎ ಅಂಗ ಪಕ್ಷ ತೃಣಮೂಲ ಕಾಂಗ್ರೆಸ್ ಆರೋಪಿಸಿದೆ.

 8ನೇ ಪುಟ ನೋಡಿಪಕ್ಷದ ಮುಖಂಡ ಹಾಗೂ ಬಂದರು ಖಾತೆ ರಾಜ್ಯ ಸಚಿವ ಮುಕುಲ್ ರಾಯ್ ಅವರು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿ ಪಕ್ಷದ ಅಸಮಾಧಾನವನ್ನು ನಿವೇದನೆ ಮಾಡಿದರು. ಕಾಂಗ್ರೆಸ್‌ನ ಏಕಪಕ್ಷೀಯ ನಿರ್ಧಾರದಿಂದ ಪಕ್ಷಕ್ಕೆ ಅಸಮಾಧಾನವಾಗಿದೆ ಎಂದು ಹೇಳಿರುವ ಅವರು, ಸರ್ಕಾರ ತಕ್ಷಣ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದರು.ಬೆಲೆ ಇಳಿಸಲು ಒತ್ತಾಯ (ಚೆನ್ನೈ ವರದಿ): ಯುಪಿಎ ಮಿತ್ರ ಪಕ್ಷವಾಗಿರುವ ಡಿಎಂಕೆ ಪೆಟ್ರೋಲ್ ಬೆಲೆ ಏರಿಕೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಜನಸಾಮಾನ್ಯರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು ತಕ್ಷಣ ಏರಿಸಿರುವ ಬೆಲೆ ಇಳಿಸುವಂತೆ ಒತ್ತಾಯ ಮಾಡಿದೆ.ಜಯಲಲಿತಾ ಖಂಡನೆ: ಪೆಟ್ರೋಲ್ ಬೆಲೆ ಏರಿಕೆಯನ್ನು ತಮಿಳುನಾಡು ಮುಖ್ಯಮಂತ್ರಿ ಜೆ.ಜಯಲಲಿತಾ ಖಂಡಿಸಿದ್ದಾರೆ. ಕೇಂದ್ರ ಸರ್ಕಾರ ತಕ್ಷಣ ಏರಿಸಿರುವ ಪೆಟ್ರೋಲ್ ಬೆಲೆ ಇಳಿಕೆ ಮಾಡಬೇಕು ಎಂದು ಒತ್ತಾಯ ಮಾಡಿದ್ದಾರೆ.ಪ್ರತಿಭಟನೆ (ಲಖನೌ ವರದಿ): ಪೆಟ್ರೋಲ್ ಬೆಲೆ ಏರಿಕೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಸಮಾಜವಾದಿ ಪಕ್ಷದ ನೂರಾರು ಕಾರ್ಯಕರ್ತರು ಪೊಲೀಸರೊಂದಿಗೆ ಸಂಘರ್ಷಕ್ಕೆ ಇಳಿದರು. ಬೃಹತ್ ರ‌್ಯಾಲಿ ನಡೆಸಿ ರಾಜ್ಯ ವಿಧಾನ ಸಭೆ ಮುಂಭಾಗದಲ್ಲಿ ಸಮಾವೇಶಗೊಂಡು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿ ಕಾರ್ಯಕರ್ತರೂ ಸಹ ರಾಜ್ಯದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿದರು.ತ್ರಿಪುರಾದಲ್ಲಿಯೂ ಪ್ರತಿಭಟನೆ (ಅಗರ್ತಲಾ ವರದಿ): ತ್ರಿಪುರಾದ ಎಡರಂಗದ ಸರ್ಕಾರ ಪೆಟ್ರೋಲ್ ಬೆಲೆ ಏರಿಕೆಯನ್ನು ಖಂಡಿಸಿದ್ದು, ಕೇಂದ್ರ ಸರ್ಕಾರ ತಕ್ಷಣ ಬೆಲೆ ಏರಿಕೆಯನ್ನು ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿದೆ.ಆಡಳಿತಾರೂಢ ಸಿಪಿಎಂ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ವೈಫಲ್ಯವೇ ತೈಲ ಬೆಲೆ ನಿರಂತರ ಏರಿಕೆ ಆಗಲು ಕಾರಣವಾಗಿದೆ ಎಂದು ಪಕ್ಷ ಆರೋಪಿಸಿದೆ. ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು 59 ಬಾರಿ ಬೆಲೆ ಏರಿಕೆ ಮಾಡಿವೆ ಎಂದು ಸಾರಿಗೆ ಮತ್ತು ಇಂಧನ ಸಚಿವ ಮಾಣಿಕ್ ಡೇ ಅಂಕಿಅಂಶ ನೀಡಿದರು.ಪರಿಸರ ಮಾಲಿನ್ಯಕ್ಕೆ ಪೂರಕ (ನವದೆಹಲಿ ವರದಿ): ಕೇಂದ್ರ ಸರ್ಕಾರ ನಿರಂತರವಾಗಿ ಪೆಟ್ರೋಲ್ ಬೆಲೆ ಏರಿಕೆ ಮಾಡುವ ಮೂಲಕ ಡೀಸೆಲ್ ಕಾರುಗಳಿಗೆ ಬೇಡಿಕೆ ಹೆಚ್ಚುವಂತೆ ಮಾಡಲಾಗುತ್ತಿದೆ ಎಂದು ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್‌ಮೆಂಟ್ (ಸಿಎಸ್‌ಇ) ಸರ್ಕಾರೇತರ ಸಂಸ್ಥೆ ಆರೋಪಿಸಿದೆ.ಡೀಸೆಲ್ ಕಾರುಗಳ ಬಳಕೆಯಿಂದ ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತದೆ ಎಂದು ಈ ಸಂಸ್ಥೆ ಆತಂಕ ವ್ಯಕ್ತಪಡಿಸಿದ್ದು, ಪೆಟ್ರೋಲ್ ದರ ಇಳಿಸುವಂತೆ ಒತ್ತಾಯಿಸಿದೆ.ರಾಹುಲ್, ಪ್ರಧಾನಿ ಭೇಟಿ

ನವದೆಹಲಿ (ಪಿಟಿಐ):
ಪೆಟ್ರೋಲ್ ಬೆಲೆ ಏರಿಕೆಗೆ ಸಂಬಂಧಿಸಿದಂತೆ ದೇಶದಾದ್ಯಂತ ಪ್ರತಿಭಟನೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ  ಕಾಂಗ್ರೆಸ್ ಯುವ ಮುಖಂಡ ರಾಹುಲ್ ಗಾಂಧಿಯವರು ಶುಕ್ರವಾರ ಸಂಜೆ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.