ಮಂಗಳವಾರ, ಜೂನ್ 15, 2021
21 °C

ಪೊನ್ನಂಪೇಟೆ: ಪ್ರಗತಿ ಪರಿಶೀಲನಾ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗೋಣಿಕೊಪ್ಪಲು: ವಿರಾಜಪೇಟೆ ತಾಲ್ಲೂಕಿನಲ್ಲಿ ಬಸವ ವಸತಿ ಯೋಜನೆ ಮತ್ತು ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದಿಂದ ಸಾವಿರಾರು ಮನೆಗಳನ್ನು ನಿರ್ಮಿಸಲು ಅವಕಾವಿದ್ದರೂ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧ್ಯವಾಗಿಲ್ಲ ಎಂದು ವಿಧಾನಸಭಾ ಅಧ್ಯಕ್ಷ ಕೆ.ಜಿ.ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.ಪೊನ್ನಂಪೇಟೆ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಸೋಮವಾರ ನಡೆದ ಬಸವ ವಸತಿ ಯೋಜನೆ ಪ್ರಗತಿ ಪರಿಶೀಲನಾ ಸಭೆಯ ಅಧಕ್ಷತೆ ವಹಿಸಿ ಅವರು ಮಾತನಾಡಿದರು.  2010ರಿಂದ 2012 ರವರಗೆ 6,463 ಮನೆಗಳನ್ನು ನಿರ್ಮಿಸಲು ಸರ್ಕಾರದ ಆಡಳಿತಾತ್ಮಕ ಒಪ್ಪಿಗೆ ದೊರೆತಿದೆ.

 

ಮಾ.31ರೊಳಗೆ ಎಲ್ಲ ಗ್ರಾಮ ಪಂಚಾಯಿತಿಗಳು ಕಡ್ಡಾಯವಾಗಿ ಈ ಯೋಜನೆಯ ಅರ್ಹ ಫಲಾನುಭವಿಗಳ ಪಟ್ಟಿ ಅಂತಿಮಗೊಳಿಸಿ ಸಲ್ಲಿಸಬೇಕು ಎಂದು ಪಿಡಿಒ ಅವರಿಗೆ ಸೂಚಿಸಿದರು. 2010ರಲ್ಲಿ  ಎರಡು ಸಾವಿರ ಮನೆ, 2011ರಿಂದ 2012ರ ಫೆಬ್ರುವರಿವರೆಗೆ 4,463 ಮನೆಗಳನ್ನು ತಾಲ್ಲೂಕಿನಲ್ಲಿ ನಿರ್ಮಿಸಲು ನಿಗಮ ಒಪ್ಪಿಗೆ ನೀಡಿರುವುದು ಸಾಮಾನ್ಯ ವಿಚಾರವಲ್ಲ. ಇದನ್ನು ಅಧಿಕಾರಿಗಳು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಈಗಾಗಲೆ 929 ಮನೆಗಳ ನಿರ್ಮಾಣಕ್ಕೆ ನಿಗಮ ಒಪ್ಪಿಗೆ ನೀಡಿದೆ. 1,889 ಫಲಾನುಭವಿಗಳ ಪಟ್ಟಿಯನ್ನು ಎಲ್ಲ ಗ್ರಾಮ ಪಂಚಾಯಿತಿಗಳು ಸಿದ್ಧಪಡಿಸಿ ಕಳಿಸಿಕೊಡಬೇಕು ಎಂದು ಸೂಚಿಸಿದರು.ಕಾನೂನು ನೆಪ ಹೇಳಿ ಬಡವರಿಗೆ  ತೊಂದರೆ ನೀಡಿದರೆ ಅಂತಹ ಅಧಿಕಾರಿಗಳ ಮೇಲೆ ಮುಲಾಜಿಲ್ಲದೆ ಕ್ರಮ ಕೈಗೊಳಲಾಗುವುದು. ಬಸವ ವಸತಿ ಯೋಜನೆಯಡಿ ಖಾಸಗಿ ಜಾಗದಲ್ಲಿ ಯಾವುದೇ ಮನೆ ನಿರ್ಮಿಸಲು ಅವಕಾಶವಿಲ್ಲ. ಆದರೆ ಅರ್ಹ ಫಲಾನುಭವಿಗಳಿಗೆ ಮನೆ ನಿರ್ಮಿಸಲು ಆರ್‌ಟಿಸಿ ದಾಖಲೆ ನೆಪ ಹೇಳಿ ಅರ್ಜಿಯನ್ನು ತಿರಸ್ಕರಿಸಬಾರದು.

 

ಮತದಾರರ ಗುರುತಿನ ಚೀಟಿ ನೀಡಿದರೂ ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡಬೇಕು ಎಂದು ಹೇಳಿದರು. ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಹೆಸರಿನಲ್ಲಿ ಇರುವ ಕಂದಾಯ ಭೂಮಿಯನ್ನು ಒಂದು ತಿಂಗಳ ಒಳಗಾಗಿ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಹೆಸರಿಗೆ ವರ್ಗಾಯಿಸಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಾಗಿ ಆದೇಶಿಸಿದರು.

 

ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಶೌಚಾಲಯ ನಿರ್ಮಿಸಿಕೊಡಬೇಕು. ಕಾಮಗಾರಿಯ ಹಣವನ್ನು ಫಲಾನುಭವಿಗಳಿಗೆ ನೀಡಬಾರದು ಎಂದು ತಿಳಿಸಿದರು.   ಜಿಲ್ಲಾ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ್ ರಾವ್ ಮಾತನಾಡಿ, ಶೌಚಾಲಯ ನಿರ್ಮಾಣಕ್ಕೆ ಸಂಬಂಧಿಸಿದಂತೆ 43 ಲಕ್ಷ ರೂಪಾಯಿ ಬಾಕಿ ಉಳಿದಿದೆ. ಡಿಸೆಂಬರ್ ಅಂತ್ಯದೊಳಗೆ ನಿಗಿದಿತ ಗುರಿ  ಸಾಧಿಸುವ ಯೋಜನೆ ರೂಪಿಸಲಾಗಿದೆ ಎಂದರು.ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಕೃಷ್ಣಪ್ಪ ಕೋಡಿಪಾಳ್ಯ ಮಾತನಾಡಿ ವಸತಿ ಮತ್ತು ನಿವೇಶನ ಒದಗಿಸುವ ಬಗ್ಗೆ ತಹಶೀಲ್ದಾರ್, ಕಂದಾಯ ಅಧಿಕಾರಿ, ಗ್ರಾಮ ಲೆಕ್ಕಿಗರು ಮತ್ತು ಪಿಡಿಒಗಳ ಸಭೆ ಕರೆದು ಕಾರ್ಯಯೋಜನೆ ರೂಪಿಸಲಾಗುವುದು ಎಂದು ಹೇಳಿದರು. ತಾ.ಪಂ. ಅಧ್ಯಕ್ಷ ಎಚ್.ಕೆ.ದಿನೇಶ್, ಜಿ.ಪಂ. ಸದಸ್ಯ ಬಾಂಡ್ ಗಣಪತಿ, ತಾ.ಪಂ. ಸದಸ್ಯ ಅರುಣ್ ಭೀಮಯ್ಯ, ಕಾರ್ಯನಿರ್ವಹಣಾಧಿಕಾರಿ ಕಾಂತ್‌ರಾಜ್ ಇತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.