ಸೋಮವಾರ, ಏಪ್ರಿಲ್ 19, 2021
32 °C

ಪೊಲೀಸರಿಂದ ವಿಳಂಬ: ಖೇಮ್ಕಾ ಆಪಾದನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಂಡೀಗಡ (ಪಿಟಿಐ): 15 ದಿನಗಳಲ್ಲಿ ಎರಡು ಬೆದರಿಕೆ ಕರೆಗಳು ಬಂದಿದ್ದರೂ ಪೊಲೀಸರು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ಭೂ ಹಗರಣದ ತನಿಖೆಗೆ ಆದೇಶಿಸಿ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿರುವ ಹಿರಿಯ ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ  ಆಪಾದಿಸಿದ್ದಾರೆ.ಈ ಮಧ್ಯೆ ಶುಕ್ರವಾರ ರಾತ್ರಿ ಹರಿಯಾಣ ಪೊಲೀಸರು ಬೆದರಿಕೆ ಕರೆ ಮಾಡಿದ್ದ ಒಬ್ಬನನ್ನು ಬಂಧಿಸಿದ್ದಾರೆ. ದೂರವಾಣಿ ಕರೆಗಳನ್ನು ಪರಿಶೀಲನೆ ಮಾಡಿದ ನಂತರ ಉಮೈದ್ ಸಿಂಗ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಪಂಚಕುಲಾ ವಿಭಾಗದ ಡಿಸಿಪಿ ಪರುಲ್ ಕುಶ್ ಜೈನ್ ತಿಳಿಸಿದ್ದಾರೆ. ಹರಿಯಾಣ ಗೃಹ ಮಂಡಳಿಯ ಆಡಳಿತಾಧಿಕಾರಿಯಾಗಿದ್ದಾಗ ಖೇಮ್ಕಾ ಅವರು ಉಮೈದ್ ಸಿಂಗ್‌ನನ್ನು ಸೇವೆಯಿಂದ ವಜಾ ಮಾಡಿದ್ದರು. ಸಿಂಗ್ ಗುಡಗಾಂವ್ ನಿವಾಸಿಯಾಗಿದ್ದು, ಅಲ್ಲಿಯೇ ಆತನನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಜೈನ್ ತಿಳಿಸಿದ್ದಾರೆ.ಇದಕ್ಕೂ ಮೊದಲು ಹೇಳಿಕೆ ನೀಡಿರುವ ಖೇಮ್ಕಾ ಅವರು, `ಪೊಲೀಸರು ದೂರವಾಣಿ ಕರೆಗಳನ್ನು ಪರಿಶೀಲಿಸಲು ವಿಳಂಬ ಮಾಡಿ ವೃತ್ತಿಪರತೆ ಪಾಲಿಸುವುದರಲ್ಲಿ ವಿಫಲರಾಗಿದ್ದಾರೆ~ ಎಂದು ಆಪಾದಿಸಿದ್ದರು.ಬೆದರಿಕೆ ಕರೆ ಬಂದಿರುವ ಹಿನ್ನೆಲೆಯಲ್ಲಿ ಭದ್ರತೆ ಒದಗಿಸುವಂತೆ ಕೋರುತ್ತೀರಾ ಎಂದು ಕೇಳಿದಾಗ, ಭದ್ರತೆ ಪಡೆಯುವುದರಿಂದ ಇಂತಹ ಬೆದರಿಕೆ ಕರೆಗಳು ನಿಲ್ಲುತ್ತದೆ ಎಂದು ನಾನು ಭಾವಿಸುವುದಿಲ್ಲ ಎಂದು ಖೇಮ್ಕಾ ತಿಳಿಸಿದ್ದಾರೆ.ಖೇಮ್ಕಾ ದೂರು ನೀಡಿದ ನಂತರ ಪೊಲೀಸರು ಐಪಿಸಿ ಕಲಂ 506 (ಕ್ರಿಮಿನಲ್ ಬೆದರಿಕೆ) ಮತ್ತು ಕಲಂ 509 (ಮಹಿಳೆಯ ಮರ್ಯಾದೆಗೆ ಧಕ್ಕೆ ತರುವ ಕೃತ್ಯ) ಪ್ರಕಾರ ಎಫ್‌ಐಆರ್ ದಾಖಲಿಸಿದ್ದಾರೆ. ನಂತರ ಸೈಬರ್ ತಜ್ಞರ ನೆರವಿನಿಂದ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಿದ್ದಾರೆ.ಕರೆ ಮಾಡಿದ ವ್ಯಕ್ತಿಯು ತೀರಾ ಕೆಟ್ಟ ಭಾಷೆ ಬಳಸಿದ್ದ ಎಂದು ಪಂಚಕುಲಾ ಪೊಲೀಸ್ ಠಾಣೆಯ ಅಧಿಕಾರಿ ನುಪೂರ್ ಬಿಷ್ಣೋಯಿ ಹೇಳಿದ್ದಾರೆ.ಖೇಮ್ಕಾ ಅವರಿಗೆ ಅಪರಿಚಿತ ವ್ಯಕ್ತಿಯಿಂದ ಬೆದರಿಕೆ ಕೆರೆ ಬಂದಿದೆ ಎಂದು 15 ದಿನಗಳ ಹಿಂದೆಯೇ ಖೇಮ್ಕಾ ಅವರ ಸ್ನೇಹಿತ ಮತ್ತು ಖ್ಯಾತ ವಕೀಲ ಅನುಪಮ್ ಗುಪ್ತ ತಿಳಿಸಿದ್ದರು. ವಾದ್ರಾ ಮತ್ತು ಡಿಎಲ್‌ಎಫ್ ಭೂ ಹಗರಣ ಬಹಿರಂಗಗೊಂಡ ನಂತರ ಈ ಭೂ ವ್ಯವಹಾರದ ತನಿಖೆ ನಡೆಸುವಂತೆ ಖೇಮ್ಕಾ ಅವರು ಅಧಿಕಾರಿಗಳಿಗೆ ಆದೇಶಿಸಿದ್ದರು.ಈ ಹಿನ್ನೆಲೆಯಲ್ಲಿ ಭೂ ಹಿಡುವಳಿ ಮತ್ತು ಭೂ ದಾಖಲೆಯ ಮಹಾ ನಿರ್ದೇಶಕ  ಸ್ಥಾನದಿಂದ ಅವರನ್ನು ಹರಿಯಾಣ ಬೀಜ ಅಭಿವೃದ್ಧಿ ನಿಗಮಕ್ಕೆ ವರ್ಗಾಯಿಸಲಾಗಿದೆ.ನಂತರ ಹರಿಯಾಣದ ನಾಲ್ವರು ಜಿಲ್ಲಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿ, ವಾದ್ರಾ ಯಾವುದೇ ರೀತಿಯ ಭೂ ಅವ್ಯವಹಾರ ನಡೆಸಿಲ್ಲ ಎಂದು ತಿಳಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.