ಗುರುವಾರ , ಮೇ 19, 2022
23 °C

ಪೊಲೀಸರಿಗೆ ಕಡಿಮೆ ವೆಚ್ಚದ ಮನೆ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸರಿಗೆ ಕಡಿಮೆ ವೆಚ್ಚದ ಮನೆ..

ಬೆಂಗಳೂರು:  ಆಧುನಿಕ ತಂತ್ರಜ್ಞಾನ ಬಳಸಿ ಕಡಿಮೆ ವೆಚ್ಚದಲ್ಲಿ ಪೊಲೀಸ್ ಸಿಬ್ಬಂದಿಗೆ ಹಂತ-ಹಂತವಾಗಿ ವಸತಿಗೃಹಗಳನ್ನು ನಿರ್ಮಿಸಿಕೊಡಲು ಸರ್ಕಾರ ಬದ್ಧವಾಗಿದೆ ಎಂದು ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಶುಕ್ರವಾರ ಇಲ್ಲಿ ಭರವಸೆ ನೀಡಿದರು.ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮವು ಆಸ್ಟ್ರೇಲಿಯಾದ `ಪರ್ಲ್ಸ್ ಮೈ ಹೋಮ್~ ಸಂಸ್ಥೆಯ ಸಹಯೋಗದಲ್ಲಿ ರಾಜಾಜಿನಗರ ಅಗ್ನಿಶಾಮಕ ಅಧಿಕಾರಿಗಳ ಕಾಲೋನಿಯಲ್ಲಿ ಅಗ್ನಿಶಾಮಕ ಅಧಿಕಾರಿಗಳಿಗೆ ನಿರ್ಮಿಸಿರುವ ಎರಡು ಮಾದರಿ ವಸತಿಗೃಹಗಳನ್ನು ಉದ್ಘಾಟಿಸಿದ ನಂತರ ಅವರು ಮಾತನಾಡಿದರು.`ಕರ್ನಾಟಕದಲ್ಲಿ ಹೊಸ ತಂತ್ರಜ್ಞಾನ ಬಳಕೆಯ ಶಕೆ ಆರಂಭವಾಗಿದೆ. ಆಧುನಿಕ ತಂತ್ರಜ್ಞಾನದ `ನಮ್ಮ ಮೆಟ್ರೊ~ ಲೋಕಾರ್ಪಣೆಗೊಂಡ ಮರು ದಿನವೇ ಅತ್ಯಾಧುನಿಕ ತಂತ್ರಜ್ಞಾನದ ನೆರವಿನಿಂದ ಕೇವಲ 17 ದಿನಗಳಲ್ಲೇ ನಿರ್ಮಿಸಿದ ಎರಡು ವಸತಿಗೃಹಗಳನ್ನು ಉದ್ಘಾಟಿಸಲಾಗಿದೆ.ಇಂತಹ ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಹೈಟೆಕ್ ಹಾಗೂ ಮಾಹಿತಿ ತಂತ್ರಜ್ಞಾನ ನಗರಕ್ಕೆ ಒಳ್ಳೆಯ ಗೌರವ ಸಿಕ್ಕಂತಾಗಿದೆ~ ಎಂದರು.50 ಹೊಸ ಅಗ್ನಿಶಾಮಕ ಠಾಣೆಗಳ ಸ್ಥಾಪನೆ

ರಾಜ್ಯದಲ್ಲಿ 50 ಹೊಸ ಅಗ್ನಿಶಾಮಕ ಠಾಣೆಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದೆ. ಅಲ್ಲದೆ, ಠಾಣೆಗಳ ಸಮೀಪದಲ್ಲಿಯೇ ಸಿಬ್ಬಂದಿಗಳಿಗಾಗಿ ವಸತಿಗೃಹಗಳನ್ನು ಕೂಡ ನಿರ್ಮಿಸಲಾಗುವುದು ಎಂದು ಗೃಹ ಸಚಿವ ಆರ್. ಅಶೋಕ ಪ್ರಕಟಿಸಿದರು.ಹೊಸ ಅಗ್ನಿಶಾಮಕ ಠಾಣೆಗಳ ಬಳಿಯೇ ಇನ್ನು ಮುಂದೆ ಸಿಬ್ಬಂದಿಗೂ 12 ವಸತಿಗೃಹಗಳನ್ನು ನಿರ್ಮಿಸಲಾಗುವುದು. ಇದರಿಂದ ಅಗ್ನಿ ಅನಾಹುತಗಳು ಸಂಭವಿಸುವ ಸಂದರ್ಭಗಳಲ್ಲಿ ತಕ್ಷಣ ಸಿಬ್ಬಂದಿ ಸ್ಥಳಕ್ಕೆ ಧಾವಿಸಲು ಅನುಕೂಲವಾಗಲಿದೆ ಎಂದರು.ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯಿದ್ದಾರೆ. ಈಗಾಗಲೇ 39 ಸಾವಿರ ವಸತಿಗೃಹಗಳನ್ನು ನಿರ್ಮಿಸಿದ್ದರೂ, ಇನ್ನೂ 40 ಸಾವಿರ ವಸತಿಗೃಹಗಳಿಗೆ ಬೇಡಿಕೆಯಿದೆ. ಇಷ್ಟು ಸಂಖ್ಯೆಯ ವಸತಿಗೃಹಗಳನ್ನು ನಿರ್ಮಿಸಲು ಹಲವು ದಶಕಗಳೇ ಹಿಡಿಯಬಹುದು. ಹೀಗಾಗಿ, ಹೊಸ ತಂತ್ರಜ್ಞಾನ ಬಳಸಿ ಕಡಿಮೆ ವೆಚ್ಚ ಹಾಗೂ ಕಡಿಮೆ ಅವಧಿಯಲ್ಲಿ ಹೆಚ್ಚು ವಸತಿಗೃಹಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.ಕರ್ನಾಟಕ ರಾಜ್ಯ ಪೊಲೀಸ್ ಗೃಹ ನಿರ್ಮಾಣ ನಿಗಮದ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಕುಚ್ಚಣ್ಣ ಶ್ರೀನಿವಾಸನ್ ಸ್ವಾಗತಿಸಿದರು.ಪರ್ಲ್ಸ್ ಮೈ ಹೋಂ ಸಂಸ್ಥೆಯ ಸಿಇಒ ಮಾರ್ಕ್ ವಿನ್‌ಫೀಲ್ಡ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಧಾನ ಪರಿಷತ್ ಸದಸ್ಯ ರಾಮಚಂದ್ರಗೌಡ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಎಂ. ಜಾಮದಾರ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ನೀಲಂ ಅಚ್ಯುತರಾವ್, ಸಿಐಡಿ ಡಿಜಿಪಿ ಶಂಕರ್ ಬಿದರಿ, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾನಿರ್ದೇಶಕ ಎ.ಆರ್. ಇನ್‌ಫ್ಯಾಂಟ್, ಬಿಬಿಎಂಪಿ ಸದಸ್ಯ ಗಂಗಬೈರಯ್ಯ ಉಪಸ್ಥಿತರಿದ್ದರು.17 ದಿನಗಳಲ್ಲಿ 2 ಮಾದರಿ ವಸತಿಗೃಹಗಳ ನಿರ್ಮಾಣ!

ಆಸ್ಟ್ರೇಲಿಯಾದ `ಪರ್ಲ್ಸ್ ಮೈ ಹೋಮ್~ ಸಂಸ್ಥೆಯು ಆಧುನಿಕ ತಂತ್ರಜ್ಞಾನದ ನೆರವಿನಿಂದ ಕೇವಲ 17 ದಿನಗಳಲ್ಲಿ ಅಗ್ನಿಶಾಮಕ ಅಧಿಕಾರಿಗಳಿಗಾಗಿ ಎರಡು ಮಾದರಿ ವಸತಿಗೃಹಗಳನ್ನು ನಿರ್ಮಿಸಿರುವುದು ಭಾರತದಲ್ಲಿಯೇ ಮೊದಲು.ಭೂಕಂಪ, ಪ್ರವಾಹದಂತಹ ಪ್ರಾಕೃತಿಕ ವಿಪತ್ತುಗಳಿಗೆ ಸಿಲುಕಿದರೂ ಈ ಕಟ್ಟಡಗಳಿಗೆ ಹಾನಿಯಾಗದು.

ಫೈಬರ್ ಮಾದರಿಯ ಈ ವಸತಿಗೃಹಗಳನ್ನು ಆಸ್ಟ್ರೇಲಿಯಾದಲ್ಲಿ ಶಾಲೆ, ಆಸ್ಪತ್ರೆ ಹಾಗೂ ವಾಣಿಜ್ಯ ಉದ್ದೇಶಗಳಿಗೆ ಬಳಸಲಾಗುತ್ತಿದೆ ಎಂದು ಸಂಸ್ಥೆಯ ಸಿಇಒ ಮಾರ್ಕ್ ವಿನ್‌ಫೀಲ್ಡ್ ಮಾಹಿತಿ ನೀಡಿದರು.

ಎರಡು ವಸತಿಗೃಹಗಳ ಅಂದಾಜು ವೆಚ್ಚ 22 ಲಕ್ಷ ರೂಪಾಯಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.