ಶುಕ್ರವಾರ, ಜೂನ್ 18, 2021
24 °C

ಪೊಲೀಸರ ವಿರುದ್ಧ ನ್ಯಾಯಾಂಗ ನಿಂದನೆ: ವಕೀಲರ ಮನವಿಗೆ ಸಿಜೆ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಇದೇ 2ರಂದು ನಗರ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದ ಗಲಾಟೆ ಸಂದರ್ಭದಲ್ಲಿ ವಕೀಲರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು, ಅವರ ವಿರುದ್ಧ ಸ್ವಯಂ ಪ್ರೇರಿತವಾಗಿ ನ್ಯಾಯಾಂಗ ನಿಂದನೆ ದಾಖಲು ಮಾಡಬೇಕು ಎಂಬ ವಕೀಲರ ಮನವಿಗೆ ಸೋಮವಾರ ಮುಖ್ಯ ನ್ಯಾಯಮೂರ್ತಿಗಳು `ಗರಂ~ ಆದರು.

ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್.ಸುಬ್ಬಾರೆಡ್ಡಿ ಅವರು, ಚೆನ್ನೈ ವಕೀಲರ ಸಂಘದ ಅಧ್ಯಕ್ಷರನ್ನು ಕರೆದುಕೊಂಡು ಬಂದು ಬೆಳಿಗ್ಗೆ 10.30ಕ್ಕೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಕಲಾಪ ನಡೆಸುವ ಕೋರ್ಟ್ ಸಭಾಂಗಣಕ್ಕೆ ಹಾಜರಾದರು.

ಚೆನ್ನೈನಲ್ಲಿ ಕಳೆದ ವರ್ಷ ಇದೇ ರೀತಿ ಘಟನೆ ನಡೆದಾಗ, (ಪೊಲೀಸರ ವಿರುದ್ಧ) ಸ್ವಯಂ ಪ್ರೇರಿತವಾಗಿ ದೂರು ದಾಖಲು ಮಾಡಿಕೊಳ್ಳಲಾಗಿತ್ತು ಎಂದು ಚೆನ್ನೈ ವಕೀಲರ ಸಂಘದ ಅಧ್ಯಕ್ಷರು ಪೀಠಕ್ಕೆ ಮನವರಿಕೆ ಮಾಡಿಕೊಡಲು ಹೋದರು.

ಆಗ ಕೋಪಗೊಂಡ ನ್ಯಾ.ಸೇನ್, `ಇಲ್ಲಿಯ ಪರಿಸ್ಥಿತಿ ಬೇರೆ ರೀತಿ ಇದೆ. ಈ ರೀತಿ ಮನವಿ ನಮಗೆ ಬೇಕಿಲ್ಲ. ಮೊದಲು ಮುಷ್ಕರ ಹಿಂದಕ್ಕೆ ಪಡೆದು ಕೋರ್ಟ್ ಕಲಾಪಕ್ಕೆ ವಕೀಲರು ಹಾಜರಾಗಲಿ. ಆಮೇಲೆ ಮನವಿ ಸಲ್ಲಿಸಿ, ಆ ಬಗ್ಗೆ ವಿಚಾರಿಸೋಣ~ ಎಂದರು.

ಅದಕ್ಕೆ ವಕೀಲರು ಇನ್ನೇನೋ ಸಮಜಾಷಿ ಕೊಡಲು ಮುಂದಾದರು. ಆಗ ನ್ಯಾ.ಸೇನ್, `ನಿಮಗೆ ಏನು ಬೇಕೋ ಅದನ್ನು ಮಾಡಿ. ನಾವು ಏನು ಮಾಡಬೇಕೊ ಹಾಗೆ ಮಾಡುತ್ತೇವೆ~ ಎಂದು ಹೇಳಿದರು. ನಂತರ ವಕೀಲರು ಸಭಾಂಗಣ ಬಿಟ್ಟು ಹೊರನಡೆದರು.

ಘಟನೆ ನಡೆದ ದಿನ ಪೊಲೀಸರು ತಮ್ಮ ಅಧಿಕಾರ ಮೀರಿ ನ್ಯಾಯಾಲಯದ ಒಳಕ್ಕೆ ಪ್ರವೇಶ ಮಾಡಿದ್ದಾರೆ ಎನ್ನುವುದು ವಕೀಲರ ಆರೋಪ. ಈ ಮಧ್ಯೆ, ಸೋಮವಾರವೂ ಕೋರ್ಟ್ ಕಲಾಪವನ್ನು ವಕೀಲರು ಬಹಿಷ್ಕರಿಸಿದರು. ಇದರಿಂದ ಸಿವಿಲ್ ಕೋರ್ಟ್ ಕಾರ್ಯ ನಿರ್ವಹಿಸಲಿಲ್ಲ.

ಕೆಲವು ವಕೀಲರು ಕೋರ್ಟ್ ಕಲಾಪಕ್ಕೆ ಹಾಜರಾಗಲು ಹೋದರೂ ಅದಕ್ಕೆ ಇನ್ನು ಕೆಲವರು ಅಡ್ಡಿ ಮಾಡಿದರು ಎಂದು ಮೂಲಗಳು ತಿಳಿಸಿವೆ.

ಹೊಸ ಗೋಳು: ಭದ್ರತೆ ದೃಷ್ಟಿಯಿಂದ ಲೋಕಾಯುಕ್ತ ವಿಶೇಷ ಕೋರ್ಟನ್ನು ಬೇರೆಡೆ ಸ್ಥಳಾಂತರ ಮಾಡುವಂತೆ ಹೈಕೋರ್ಟನ್ನು ಕೆಲವು ವಕೀಲರು ಈ ಹಿಂದೆ ಕೋರಿದ್ದರು.

ಆ ಕೋರಿಕೆ ಮೇರೆಗೆ ಈಗ ನ್ಯಾಯಾಲಯವನ್ನು ಪರಪ್ಪನ ಅಗ್ರಹಾರಕ್ಕೆ ಸ್ಥಳಾಂತರ ಮಾಡಲಾಗಿದೆ. ಆದರೆ ವಕೀಲರು ಈಗ ಪುನಃ ತಮ್ಮ ಅಸಮಾಧಾನ ಹೊರಕ್ಕೆ ಹಾಕಿದ್ದಾರೆ. ಅದು ನಗರದಿಂದ ದೂರ ಇರುವ ಹಿನ್ನೆಲೆಯಲ್ಲಿ ಹೃದಯ ಭಾಗಕ್ಕೆ ಸ್ಥಳಾಂತರಿಸಬೇಕು ಎನ್ನುವುದು ಅವರ ಈಗಿನ ಮನವಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.