ಮಂಗಳವಾರ, ಮಾರ್ಚ್ 9, 2021
23 °C

ಪೊಲೀಸ್‌ ಇಲಾಖೆಗೆ 2000 ಗೃಹ ರಕ್ಷಕರ ನಿಯುಕ್ತಿ

ಸಿದ್ದಯ್ಯ ಹಿರೇಮಠ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್‌ ಇಲಾಖೆಗೆ 2000 ಗೃಹ ರಕ್ಷಕರ ನಿಯುಕ್ತಿ

ಬಳ್ಳಾರಿ: ರಾಜ್ಯದಾದ್ಯಂತ 7000ಕ್ಕೂ ಅಧಿಕ ಕಾನ್‌ಸ್ಟೆಬಲ್ ಹುದ್ದೆಗಳು ಖಾಲಿ ಇರುವುದರಂದ ಎದುರಾಗಿರುವ ಸಮಸ್ಯೆ ನಿವಾರಣೆಗಾಗಿ ಪೊಲೀಸ್ ಇಲಾಖೆಯು ಗೃಹ ರಕ್ಷಕರ ‘ಎರವಲು’ ಸೇವೆಯನ್ನು ಪಡೆಯಲು ನಿರ್ಧರಿಸಿದ್ದು, ಇದೇ 1ರಿಂದ ಒಟ್ಟು 2000 ಗೃಹರಕ್ಷಕರನ್ನು  ಪೊಲೀಸ್‌ ಸೇವೆಗೆ ನಿಯುಕ್ತಿಗೊಳಿಸಲಾಗಿದೆ.ಹೈದರಾಬಾದ್‌– ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಒದಗಿ ಸುವ ನಿಟ್ಟಿನಲ್ಲಿ  ಸಂವಿಧಾನದ 371ನೇ (ಜೆ) ಕಲಮಿಗೆ ತಿದ್ದುಪಡಿ ತಂದಿರು ವುದರಿಂದ, ಈ ಭಾಗದ ಯುವಕರಿಗೆ ವಿಶೇಷ ಮೀಸಲಾತಿ ನೀಡಿ ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಬೇಕಿದ್ದು, ಪ್ರಕ್ರಿಯೆ ವಿಳಂಬವಾಗಿದೆ.ಹೊಸದಾಗಿ ಕಾನ್‌ಸ್ಟೆಬಲ್‌ಗಳನ್ನು ನೇಮಕ ಮಾಡಿಕೊಂಡು, ಅಗತ್ಯ ತರಬೇತಿ ನೀಡಲು ಕನಿಷ್ಠ ಒಂದರಿಂದ ಒಂದೂವರೆ ವರ್ಷ ಕಾಲಾವಕಾಶ ಬೇಕಿದ್ದು, ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಗೃಹರಕ್ಷಕರ ಸೇವೆಯನ್ನು ಪಡೆಯಲು ನಿರ್ಧರಿಸಲಾಗಿದೆ ಎಂದು ಪೊಲೀಸ್‌ ಇಲಾಖೆ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.1000 ಜನ ಗೃಹ ರಕ್ಷಕರ ಸೇವೆಯನ್ನು ಬೆಂಗಳೂರಿನಲ್ಲಿಯೇ ಪಡೆಯಲು ತೀರ್ಮಾನಿಸಲಾಗಿದ್ದು, ಇನ್ನುಳಿದ 1000 ಹುದ್ದೆಗಳನ್ನು ರಾಜ್ಯ ದಾದ್ಯಂತ ಹಂಚಿಕೆ ಮಾಡಲಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ 40 ಜನ ಗೃಹರಕ್ಷಕರನ್ನು ಪೊಲೀಸ್‌ ಸೇವೆಗೆ ನೀಡಲಾಗಿದೆ ಎಂದು ಕರ್ನಾಟಕ ಗೃಹರಕ್ಷಕ ದಳದ ಕಮಾಂಡಂಟ್‌ ಜನರಲ್ ಆಗಿರುವ ಡಿಜಿಪಿ ಸಿ.ಓಂಪ್ರಕಾಶ್‌ ತಿಳಿಸಿದ್ದಾರೆ.ಜಿಲ್ಲೆಯಲ್ಲಿ ಒಟ್ಟು 1100 ಜನರು ಗೃಹರಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಅವರಲ್ಲಿ  474 ಸಿಬ್ಬಂದಿಯನ್ನು ಈಗಾಗಲೇ  ಬಳ್ಳಾರಿಯ ವಿಮ್ಸ್‌ ಆಸ್ಪತ್ರೆ, ಕುಡತಿನಿಯಲ್ಲಿರುವ ಬಿಟಿ ಪಿಎಸ್‌ ಹಾಗೂ ಇತರ ಕಡೆ ‘ವಾಚ್‌ ಅಂಡ್‌ ವಾರ್ಡ್’  ಕೆಲಸಕ್ಕೆ ನಿಯುಕ್ತಿಗೊ ಳಿಸಲಾಗಿದೆ. ನಿತ್ಯ 8 ಗಂಟೆಗಳ ಅವಧಿಯ ಕೆಲಸಕ್ಕೆ ರೂ. 250 ಸಂಬಳ ದೊರೆಯುತ್ತಿರುವುದು ಗೃಹರಕ್ಷಕರಿಗೆ ಸಾಕಷ್ಟು ನೆರವಾಗಿದೆ ಎಂದು ಬಳ್ಳಾರಿಯ ಗೃಹರಕ್ಷಕ ದಳದ ಸಮಾ ದೇಷ್ಟ ಎಂ.ಎ. ಶಕೀಬ್‌ ಹೇಳಿದ್ದಾರೆ.ಮೊದಲು ಕೇವಲ ಹಬ್ಬ, ಜಾತ್ರೆ, ಉತ್ಸವ ಮತ್ತು ಚುನಾವಣೆ ಸಂದರ್ಭ ಬಂದೋಬಸ್ತ್‌ಗಾಗಿ ಮಾತ್ರ ಸೀಮಿತ ವಾಗಿದ್ದ ಗೃಹರಕ್ಷಕರ ಸೇವೆ ಯನ್ನು ಒಂದೂವರೆ ವರ್ಷದಿಂದ ಭದ್ರತಾ ಕಾರ್ಯಕ್ಕೂ ನಿಯುಕ್ತಿಗೊಳಿಸುವ ಮೂಲಕ ಅವರ ಜೀವನ ನಿರ್ವಹಣೆಗೆ ನೆರವು ನೀಡಲಾಗಿದೆ. ಸೆಕ್ಯೂರಿಟಿ ಏಜೆನ್ಸಿಗಳ ಸೇವೆಗೆ ಬದಲು, ತರಬೇತಿ ಪಡೆದಿರುವ ಗೃಹರಕ್ಷಕರಿಂದ ಚಾಕ ಚಕ್ಯತೆಯ ಸೇವೆಯು ಈ ಮೂಲಕ ಸಮಾಜಕ್ಕೆ ದೊರೆಯುವಂತಾಗಿದೆ ಎಂದು ಅವರು ಸಂತಸ ವ್ಯಕ್ತಪಡಿ ಸಿದ್ದಾರೆ.ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 163 ಪೊಲೀಸ್ ಕಾನ್‌ಸ್ಟೆಬಲ್‌ ಹುದ್ದೆಗಳು ಖಾಲಿ ಇದ್ದು, ಪ್ರಾರಂಭಿಕ ಹಂತವಾಗಿ 40 ಜನ ಗೃಹರಕ್ಷಕರ ಸೇವೆ ಪಡೆಯಲು ಪೊಲೀಸ್‌ ಇಲಾಖೆ ಮುಂದೆ ಬಂದಿದೆ. ರಾತ್ರಿ ಪಹರೆ, ಸಂಚಾರ ನಿಯಂತ್ರಣ, ಕಾನೂನು, ಸುವ್ಯವಸ್ಥೆ ಕಾಪಾಡುವ ಕೆಲಸಕ್ಕೆ ಅವರನ್ನು ಬಳಸಿಕೊಳ್ಳ ಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಚೇತನ್‌ಸಿಂಗ್‌ ರಾಠೋಡ ತಿಳಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.