ಭಾನುವಾರ, ಜೂನ್ 13, 2021
29 °C

ಪ್ರಜಾವಾಣಿ-ಪಾಲಿಕೆ ಜನಸ್ಪಂದನಕ್ಕೆ ಹರಿದುಬಂದ ಜನಸಾಗರ: ಸಮುದಾಯ-ಆಡಳಿತದ ಮುಖಾಮುಖಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಜಾವಾಣಿ-ಪಾಲಿಕೆ ಜನಸ್ಪಂದನಕ್ಕೆ ಹರಿದುಬಂದ ಜನಸಾಗರ: ಸಮುದಾಯ-ಆಡಳಿತದ ಮುಖಾಮುಖಿ

ಹುಬ್ಬಳ್ಳಿ: `ಕುಡಿಯಾಕ ಗಟಾರದ ನೀರ್ ಬಿಡ್ತಾರ. ಅಂಥಾ ನೀರ್ ಕುಡ್ದು ದನ-ಕರ ಸತ್ ಹೊಂಟಾವ. ನಾವೆಲ್ಲ ಕಾಯಂ ಪೇಷಂಟ್ ಆಗಿ ದವಾಖಾನಿ ಸೇರೋವ್ಹಂಗ ಆಗೈತಿ. ಗಟಾರ ತುಂಬ್ಕೊಂಡು ನಿಂತಾವ. ಮಕ್ಳು-ಮರಿ ಬಿದ್ರ ಏನ್ ಗತಿ. ಎಲ್ಲಾರೂ ಕುಂತೀರಿ. ಏನ್ ಮಾಡ್ತೀರಿ ನೋಡ್ರಿ~-ಕುರುಬರ ಓಣಿಯಿಂದ ಬಾಟಲಿಯಲ್ಲಿ ಕಪ್ಪು ನೀರು ಹಿಡಿದುಕೊಂಡು ಬಂದಿದ್ದ ನೀಲವ್ವ ಪರಣ್ಣವರ ಬಲು ಆಕ್ರೋಶದಿಂದ ಹೇಳಿದರು. ಜಲ ಮಂಡಳಿ ಅಧಿಕಾರಿಗಳು, ನೀರು ಪೂರೈಕೆ ಪೈಪ್ ಇಂದು ಒಡೆದಿದ್ದು, ಎರಡು ದಿನಗಳಲ್ಲಿ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು ಎಂದು ಅಷ್ಟೇ ತಣ್ಣಗೆ ಉತ್ತರಿಸಿದರು.ಲಿಂಗರಾಜನಗರದ ಸಮುದಾಯ ಭವನದಲ್ಲಿ ಮಂಗಳವಾರ `ಪ್ರಜಾವಾಣಿ~ ಮತ್ತು `ಡೆಕ್ಕನ್ ಹೆರಾಲ್ಡ್~ ಪತ್ರಿಕಾ ಸಮೂಹ ಮಹಾನಗರ ಪಾಲಿಕೆಯೊಂದಿಗೆ ಏರ್ಪಡಿಸಿದ್ದ `ಜನಸ್ಪಂದನ~ ಕಾರ್ಯಕ್ರಮದಲ್ಲಿ ಸಾವಿರಾರು ದೂರುಗಳು ಹರಿದುಬಂದವು. ಅಭೂತಪೂರ್ವ ಸ್ಪಂದನ ಸಿಕ್ಕಿತು. ಕೊಳಚೆ ಪ್ರದೇಶದ ರಹವಾಸಿಗಳಿಂದ ಪ್ರತಿಷ್ಠಿತ ಬಡಾವಣೆಗಳ ನಿವಾಸಿಗಳವರೆಗೆ ಎಲ್ಲರೂ ಅಲ್ಲಿ ನೆರೆದಿದ್ದರು. 25, 26, 27 ಮತ್ತು 35ರ ವಾರ್ಡ್‌ಗಳ ಜನ ಕಾರ್ಯಕ್ರಮದಲ್ಲಿ  ಪಾಲ್ಗೊಂಡಿದ್ದರು.ಕಾರ್ಯಕ್ರಮ ಕುರಿತು ಜನತೆಗೆ ಮಾಹಿತಿ ನೀಡಿದ ಮೂರೇ ದಿನಗಳಲ್ಲಿ ಆಯಾ ಬಡಾವಣೆಗಳಿಂದ ಸಾರ್ವಜನಿಕರು 269 ದೂರುಗಳು `ಪ್ರಜಾವಾಣಿ~ ಕಚೇರಿಗೆ ಬಂದಿದ್ದವು. 150 ದುಮ್ಮಾನುಗಳಿಗೆ ಜನ ಸ್ಥಳದಲ್ಲೇ ಪರಿಹಾರ ಪಡೆದರು. ಮಿಕ್ಕ ಸಮಸ್ಯೆಗಳಿಗೆ ಕಾಲಮಿತಿಯಲ್ಲಿ ಸ್ಪಂದಿಸುವ ಭರವಸೆಯೂ ಅಧಿಕಾರಿಗಳಿಂದ ಸಿಕ್ಕಿತು.ಬೇಡಿಕೆ ಈಡೇರಿಸಿರಾಜೀವನಗರದ ಪಿ.ಜಿ. ಭಟ್ 14 ವರ್ಷಗಳಿಂದ ನಾವು ಸಮಸ್ಯೆ ಎದುರಿಸುತ್ತಿದ್ದೇವೆ. ನಮ್ಮ ವನವಾಸ ಮುಗಿದಿದೆ. ಈಗಲಾದರೂ ಬೇಡಿಕೆ ಈಡೇರಿಸಬೇಕು ಎಂಬ ಮನವಿ ಮಾಡಿದರು. ರಸ್ತೆ, ಚರಂಡಿ ಯಾವೊಂದು ವ್ಯವಸ್ಥೆಯೂ ನಮ್ಮ ಪ್ರದೇಶದಲ್ಲಿ ಆಗಿಲ್ಲ ಎಂಬ ನೋವನ್ನೂ ತೋಡಿಕೊಂಡರು.ಇದಕ್ಕೆ ಧ್ವನಿಗೂಡಿಸಿದ ಪಾಲಿಕೆ ಸದಸ್ಯ ಶಿವು ಹಿರೇಕೆರೂರ, ತಮ್ಮ ವಾರ್ಡ್‌ಗೆ ಹೆಚ್ಚಿನ ನೆರವು ಕೊಡುವಂತೆ ಕೋರಿದರು. ರಾಜ್ಯ ಸರ್ಕಾರದ ವಿಶೇಷ ಅನುದಾನದಲ್ಲಿ ಅಗತ್ಯವಾದ ಹಣಕಾಸಿನ ವ್ಯವಸ್ಥೆ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಡಾ.ಕೆ.ವಿ. ತ್ರಿಲೋಕಚಂದ್ರ ತಿಳಿಸಿದರು.ಶೆಟ್ಟರ್ ಲೇಔಟ್‌ನ ವಿಜಯಕುಮಾರ್ ನಮ್ಮ ಬಡಾಣೆಯಲ್ಲಿ 20 ವರ್ಷಗಳಿಂದ ರಸ್ತೆಗಳಿಲ್ಲ. ಸಚಿವರು, ಸಂಸದರು, ಶಾಸಕರು, ಮೇಯರ್ ಸೇರಿದಂತೆ ಎಲ್ಲರನ್ನು ಭೇಟಿ ಮಾಡಿದ್ದರೂ ಪರಿಹಾರ ಸಿಗುತ್ತಿಲ್ಲ ಎಂದು ವಿಷಾದಿಸಿದರು. `ಈ ಭಾಗದಲ್ಲಿ ಅನಧಿಕೃತ ಪ್ರದೇಶಗಳೂ ಇರುವುದರಿಂದ ಅಲ್ಲಿ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಕಷ್ಟವಾಗಿದೆ. ಮಾನವೀಯ ದೃಷ್ಟಿಯಿಂದ ರಸ್ತೆ ನಿರ್ಮಿಸಲಾಗುವುದು~ ಎಂದು ಅಧಿಕಾರಿಗಳು ಸಮಾಧಾನ ಹೇಳಿದರು.ಶಕ್ತಿಕಾಲೊನಿ ಕೊಳಚೆ ಪ್ರದೇಶದಲ್ಲಿ ಕುಡಿಯುವ ನೀರು ಪೂರೈಕೆ ಆಗುತ್ತಿಲ್ಲ. ಬೀದಿ ದೀಪಗಳೂ ಉರಿಯುತ್ತಿಲ್ಲ ಎಂದು ಅಲ್ಲಿಯ ನಿವಾಸಿ ವೀಣಾ ಲದ್ವಾ ತಮ್ಮ ದುಮ್ಮಾನ ತೋಡಿಕೊಂಡರು. ಕೊಳಚೆ ಪ್ರದೇಶ ಅಭಿವೃದ್ಧಿ ಮಂಡಳಿಗೆ ಪತ್ರ ಬರೆಯಲಾಗಿದ್ದು, ಅವರಿಂದ ಅನುಮತಿ ಸಿಕ್ಕೊಡನೆ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುವುದು ಎಂದು ಜಲ ಮಂಡಳಿ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಪಿ. ಜಯರಾಂ ಉತ್ತರಿಸಿದರು.ಮಾರುತಿನಗರ ಕಲ್ಯಾಣ ಸೇವಾ ಕೇಂದ್ರದ ಪದಾಧಿಕಾರಿಗಳು ನೀರಿನ ಕರ ಬಾಕಿಯನ್ನು ಕಂತಿನಲ್ಲಿ ತುಂಬಲು ಅವಕಾಶ ನೀಡಬೇಕು ಎಂಬ ಬೇಡಿಕೆ ಇಟ್ಟರು. `ನಿಮ್ಮ ಬೇಡಿಕೆ ಈಡೇರಿಸಲು ಯಾವುದೇ ಸಮಸ್ಯೆ ಇಲ್ಲ. ಕಂತಿನಲ್ಲಿ ಬಾಕಿ ತುಂಬಲು ಅವಕಾಶ ಕಲ್ಪಿಸುತ್ತೇವೆ~ ಎಂದು ಜಯರಾಂ ಸಮಾಧಾನ ಹೇಳಿದರು.ನಿವೃತ್ತ ತಹಶೀಲ್ದಾರರಾದ ತಾಜ್‌ನಗರದ ನಿವಾಸಿ ಎ.ಎ. ಯಲ್ಲಾಪುರ, ಒಳಚರಂಡಿ ಸಂಪರ್ಕ ವ್ಯವಸ್ಥೆ ಸಮರ್ಪಕವಾಗಿ ಇಲ್ಲದ್ದರಿಂದ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿದೆ. ರಸ್ತೆಗಳ ಡಾಂಬರು ಕಿತ್ತು ವಿರೂಪಗೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಒಳಚರಂಡಿ ಕಾಮಗಾರಿಗೆ ಅಂದಾಜು ಪತ್ರಿಕೆ ಸಿದ್ಧಪಡಿಸಿ ಕೊಡಲಾಗಿದ್ದು, ಒಪ್ಪಿಗೆ ದೊರೆಯುವ ಹಂತದಲ್ಲಿದೆ. ರಸ್ತೆಗಳ ದುರಸ್ತಿಗೂ ಟೆಂಡರ್ ಕರೆಯಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.ಇಚ್ಛಾಶಕ್ತಿ ಕೊರತೆಹಲವು ವರ್ಷಗಳಿಂದ ಬಗೆಹರಿಯದ ಕೆಲ ಸಮಸ್ಯೆಗಳ ಕಾರಣ ಪ್ರೊ.ಬಿ.ಎಸ್. ಅಕ್ಕಿ ಬಲು ಸಿಟ್ಟಿನಿಂದ ಬಂದಿದ್ದರು. `ಹೊಸೂರಿನಿಂದ ವಿದ್ಯಾನಗರದವರೆಗೆ ಫುಟ್‌ಪಾತ್ ಇಲ್ಲ. ಜನ ಎಲ್ಲಿ ಓಡಾಡಬೇಕು; ಉಣಕಲ್ ಕ್ರಾಸ್‌ನಲ್ಲಿ ಜನ ರಸ್ತೆ ದಾಟಲು ಅಗತ್ಯವಾದ ವ್ಯವಸ್ಥೆ ಕಲ್ಪಿಸಲು ಇನ್ನೆಷ್ಟು ಅಪಘಾತಗಳು ಸಂಭವಿಸಬೇಕು~ ಎಂದು ಅವರು ಪ್ರಶ್ನಿಸಿದರು.

 

`ನಮ್ಮ ಬೇಡಿಕೆಗಳನ್ನು ಕೇಳುವವರೇ ಇಲ್ಲವಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಲೇ ನಮ್ಮ ಬೇಡಿಕೆಗಳು ಹಾಗೇ ಉಳಿದಿವೆ~ ಎಂದು ಅವರು ಹೇಳಿದಾಗ ಭರ್ತಿ ಕರಾಡತನ ಕೇಳಿಬಂತು.ಉಣಕಲ್ ಕ್ರಾಸ್ ಸಂಚಾರ ಅವ್ಯವಸ್ಥೆ ಸಾಯಿನಗರದ ಎಲ್.ಆರ್. ಕಟ್ಟಿಮನಿ ಅವರನ್ನೂ ಕಾಡಿತು. ಅವರೂ ಇದೇ ಪ್ರಶ್ನೆ ಎತ್ತಿದರು. `ಚತುಷ್ಪಥ ರಸ್ತೆ ಕಾಮಗಾರಿ ಆರಂಭವಾಗಿದ್ದು, ಫುಟ್‌ಪಾತ್ ಬೇಗ ನಿರ್ಮಾಣವಾಗುತ್ತದೆ. ಉಣಕಲ್ ಕ್ರಾಸ್‌ನಲ್ಲಿ ರಸ್ತೆ ದಾಟಲು ಸೂಕ್ತವಾದ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲಿಯವರೆಗೆ ಪೊಲೀಸರನ್ನು ನಿಯೋಜನೆ ಮಾಡಲು ಕೋರಲಾಗುತ್ತದೆ~ ಎಂಬ ಉತ್ತರ ಅಧಿಕಾರಿಗಳಿಂದ ಸಿಕ್ಕಿತು.ಕೆಲವು ಪ್ರದೇಶದ ಮಹಿಳೆಯರು ಬಹಳ ವರ್ಷಗಳಿಂದ ತಮ್ಮ ಸಮಸ್ಯೆ ಬಗೆಹರಿಯದ ಕಾರಣ ಆಕ್ರೋಶಗೊಂಡು ಬಂದಿದ್ದರು. ನಮ್ಮ ಬೀದಿಯಲ್ಲಿ ಗಟಾರ ಏಕೆ ಸ್ವಚ್ಛ ಮಾಡುವುದಿಲ್ಲ, ಕಸ ಬಳಿಯಲು ಏಕೆ ಬರುವುದಿಲ್ಲ ಎಂದು ಏರು ಧ್ವನಿಯಲ್ಲಿ ಕೇಳಿದರು. ಸ್ವಚ್ಛತೆ ವ್ಯವಸ್ಥೆಯನ್ನು ತಕ್ಷಣ ಮಾಡಲಾಗುವುದು ಎಂದು ಆರೋಗ್ಯಾಧಿಕಾರಿಗಳು ಉತ್ತರ ನೀಡಿದರು.ಹೆಚ್ಚಿನ ಸಂಖ್ಯೆಯ ದೂರುಗಳು ಬೀದಿದೀಪ ಮತ್ತು ಸ್ವಚ್ಛತೆಗೆ ಸಂಬಂಧಿಸಿದ್ದವು. ಅಧಿಕಾರಿಗಳು ಕಾರ್ಯಕ್ರಮಕ್ಕೆ ಬರುವ ಮುಂಚೆಯೇ ಹಲವೆಡೆ ದೀಪದ ವ್ಯವಸ್ಥೆ ಮಾಡಿ ಬಂದಿದ್ದರು. ಚರಂಡಿ ಕಟ್ಟಿಕೊಂಡಿದ್ದ ದೂರುಗಳಿಗೂ ಮಂಗಳವಾರವೇ ಸ್ಪಂದಿಸಿದ್ದ ಅಧಿಕಾರಿಗಳು ಸಮಸ್ಯೆಗೆ ಪರಿಹಾರ ಒದಗಿಸಿಯೇ ಬಂದಿದ್ದರು.ನೀರು ಪೂರೈಕೆಗೆ ಸಂಬಂಧಿಸಿದಂತೆ ಬಂದ ದೂರುಗಳಿಗೂ ತಕ್ಕಮಟ್ಟಿಗೆ ಪರಿಹಾರ ಸಿಕ್ಕಿತ್ತು. ಸ್ಥಳದಲ್ಲೇ ಮತ್ತೆ ನೂರಾರು ಹೊಸ ದೂರುಗಳು ದಾಖಲಾದವು. ದಶಕದ ಹಿಂದಿನ ಸಮಸ್ಯೆಗಳಿಗೂ `ಜನಸ್ಪಂದನ~ದಲ್ಲಿ ಮರುಜೀವ ಬಂದಿತ್ತು. ಎಲ್ಲ ದೂರುಗಳಿಗೆ ಸ್ಪಂದಿಸುವ ಭರವಸೆ ಆಯುಕ್ತರಿಂದ ದೊರೆಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.