ಭಾನುವಾರ, ಮೇ 9, 2021
19 °C

ಪ್ರಜಾವಾಣಿ ವಿಶೇಷ ಸಂಚಿಕೆ: ಓದುಗರ ಪ್ರತಿಕ್ರಿಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂಚಲನ ತಂದ ಪ್ರಯೋಗ

`ಪ್ರಜಾವಾಣಿ~ ವಿಶೇಷ ಸಂಚಿಕೆಗೆ ಓದುಗರಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪತ್ರಿಕೋದ್ಯಮಕ್ಕೆ ಹೊಸ ಆಯಾಮವನ್ನೇ ನೀಡಿದ ಈ  ದಿಟ್ಟ ಪ್ರಯತ್ನ ನವ ಪತ್ರಿಕೋದ್ಯಮದ ದಿಕ್ಸೂಚಿಯಂತಿದ್ದು, ಸಂಚಲನವನ್ನು ಹುಟ್ಟು ಹಾಕಿದೆ. ಪ್ರಜ್ಞಾವಂತ ಓದುಗರಿಂದ ಬಂದ ಪ್ರತಿಕ್ರಿಯೆಗಳ ಮೊದಲ ಕಂತು ಇಲ್ಲಿದೆ.ಅರ್ಥಪೂರ್ಣ 
`ಪ್ರಜಾವಾಣಿ~ಯ ಇಂದಿನ ಸಂಚಿಕೆ ಬಹಳ ಇಷ್ಟವಾಯಿತು. ಸಂಚಿಕೆಗೆ ಉತ್ತಮ ಲೇಖನಗಳನ್ನು ಆಯ್ಕೆ ಮಾಡಲಾಗಿದೆ. ಅತಿಥಿ ಸಂಪಾದಕ ದೇವನೂರ ಮಹಾದೇವ ಅವರ ಲೇಖನ, ಪತ್ರಿಕೆಯ ಸಂಪಾದಕರಾದ ಕೆ.ಎನ್. ಶಾಂತಕುಮಾರ್ ಅವರ ಸಂಪಾದಕರ ಮಾತು ತುಂಬಾ ಅರ್ಥಪೂರ್ಣವಾಗಿತ್ತು. ದಿನಪತ್ರಿಕೆ ಈ ರೀತಿ ಬಂದಾಗ ತುಂಬಾ ಸಂತೋಷ ಆಗುತ್ತದೆ~.

ಪ್ರೊ. ಯು.ಆರ್. ಅನಂತಮೂರ್ತಿ

ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು
ಈ ಕೆಲಸ `ಪ್ರಜಾವಾಣಿ ಮಾತ್ರ ಮಾಡಲು ಸಾಧ್ಯ


ಒಳ್ಳೆಯ ಕೆಲಸ ಮಾಡಿದ್ದೀರಿ. ಇಂಥ ವಿಶೇಷ ಸಂಚಿಕೆಯನ್ನು `ಪ್ರಜಾವಾಣಿ~ ಮಾತ್ರ ಮಾಡಲು ಸಾಧ್ಯ. ಇದರಿಂದ ನಮ್ಮನ್ನು ಯಾರೂ ಕರೆದುಕೊಂಡು ಹೋಗದ ದಾರಿಯಲ್ಲಿ ಹೋಗಿದ್ದೀರಿ. ಈ ದಾರಿಯ ಪರಿಚಯ ನಮಗೆ ಈಗಾಗಲೇ ಆಗಬೇಕಿತ್ತು. ದುರ್ದೈವದಿಂದ ಇದುವರೆಗೆ ಯಾರೂ ಮಾಡಿಲ್ಲ. ಹಿಂದುಳಿದವರು ಎನ್ನುವುದು ಹೋಗಬೇಕು, ಮುಂದುವರಿದವರಾಗಬೇಕು.

 ಡಾ. ಪಾಟೀಲ ಪುಟ್ಟಪ್ಪ, ಹುಬ್ಬಳ್ಳಿ

ವಿಧಾನಾತ್ಮಕ ಹಾಗೂ ರಚನಾತ್ಮಕ ಸಂಚಿಕೆ 
ಸಂಚಿಕೆ ಅದ್ಭುತವಾಗಿದೆ. ಬಹಳ ಒಳ್ಳೆಯ ಕಲ್ಪನೆ. ಸದ್ದಿಲ್ಲದೆ ಮಾಡಿದ್ದೀರಿ. ವಿಧಾನಾತ್ಮಾಕವಾಗಿ ಹಾಗೂ ರಚನಾತ್ಮಕವಾಗಿ ಸಂಚಿಕೆ ರೂಪಿಸಿದ್ದೀರಿ. ದಲಿತರ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಮಸ್ಯೆಗಳ ಕುರಿತು ತಲಸ್ಪರ್ಶಿಯಾಗಿ ವಿವೇಚನೆ ಮಾಡಿದ ಲೇಖನಗಳನ್ನು ಪ್ರಕಟಿಸಿದ್ದು ದೊಡ್ಡ ಸಾಧನೆ. ಹೀಗಾಗಿ ಕಾದಿಡಲೇಬೇಕಾದ ಸಂಚಿಕೆ ಇದು. ಈ ಸಾಧನೆಗಾಗಿ ಪ್ರಜಾವಾಣಿ ಸಂಪಾದಕರನ್ನು ಹಾಗೂ ಸಿಬ್ಬಂದಿಗೆ ಹಾರ್ದಿಕ ಅಭಿನಂದನೆಗಳು.

 ಡಾ.ಚೆನ್ನವೀರ ಕಣವಿ, ಧಾರವಾಡಸಾರ್ಥಕ ಪ್ರಯತ್ನ......

`ಶನಿವಾರದ ಪ್ರಜಾವಾಣಿ ಸಂಚಿಕೆ ರಾಜ್ಯದ ಪತ್ರಿಕೆಗಳ ಚರಿತ್ರೆಯಲ್ಲಿ ಮರೆಯಲಾಗದ ಹಾಗೂ ಮರೆಯಬಾರದ ಮೈಲಿಗಲ್ಲು. ಇದೊಂದು ಹೊಚ್ಚ ಹೊಸ ಅಧ್ಯಾಯದ ಅನಾವರಣ. ಇಂತಹ ಅರ್ಥಪೂರ್ಣ ಮತ್ತು ಸಾರ್ಥಕ ಪ್ರಯತ್ನಕ್ಕಾಗಿ ದೇವನೂರು ಮಹಾದೇವ ಅವರನ್ನು ಹಾಗೂ ಪ್ರಜಾವಾಣಿ ಬಳಗವನ್ನು ಅಭಿನಂದಿಸಲು ಹೆಮ್ಮೆಪಡುತ್ತೇವೆ. ಕೆ.ಎನ್.ಶಾಂತಕುಮಾರ್ ಅವರ ಸಂಪಾದಕೀಯ  ಮೆಲುಕು ಹಾಕುವಂತಿವೆ. ಒಟ್ಟಾರೆ ಇದು ಜೋಪಾನವಾಗಿ ಕಾದಿರಿಸಿ ಆಗಾಗ ಓದಬೇಕಾದ ಅಪರೂಪದ ಸಂಚಿಕೆ~

ಪ್ರೊ.ಹಂಪ ನಾಗರಾಜಯ್ಯ, ಪ್ರೊ.ಕಮಲಾ ಹಂಪನಾದಿಟ್ಟ ಸಂಪಾದಕ


`ಪ್ರಜಾವಾಣಿ~ -ಪತ್ರಿಕೋದ್ಯಮದಲ್ಲಿ ಒಂದು ದಿಟ್ಟ ಹೆಜ್ಜೆ ಇಟ್ಟಿದೆ. ವೈಚಾರಿಕ ಪ್ರಖರತೆಯ ಪತ್ರಿಕೆಯಾಗಿ ದಲಿತ ದನಿಗೆ ವೇದಿಕೆ ಕಲ್ಪಿಸಿರುವುದು ನಿಜಕ್ಕೂ ಜಾಣ್ಮೆಯ ವಿಚಾರ. ಕಾಳಜಿಗಳ ಮರುಶೋಧ ಎಂಬ ಸಂಪಾದಕರ ಮಾತಿನಲ್ಲಿ ತಮ್ಮ ಕಾಳಜಿಯನ್ನು ದಿಟ್ಟವಾಗಿ ಹೇಳಿಕೊಂಡಿದ್ದಾರೆ. ಕನ್ನಡ ಪತ್ರಿಕೋದ್ಯಮಕ್ಕೆ ಹೊಸ ತಿರುವು ನೀಡಿದ ಪ್ರಜಾವಾಣಿ ಸಂಪಾದಕ ಕೆ.ಎನ್.ಶಾಂತಕುಮಾರ್ ಅವರಿಗೆ ನಿಜಕ್ಕೂ ಅಭಿನಂದನೆಗಳು

ಸಾವಿತ್ರಿ ಮುಜುಂದಾರ ಕೊಪ್ಪಳ`ಪ್ರಜಾವಾಣಿ~ ಐತಿಹಾಸಿಕ ಸಾಧನೆ

ಕನ್ನಡ ಪತ್ರಿಕೆಗಳ ಸಮಗ್ರ ಇತಿಹಾಸದಲ್ಲಿ `ಪ್ರಜಾವಾಣಿ~ ದಿನಪತ್ರಿಕೆಯು ಶನಿವಾರ ರೂಪುಗೊಂಡಂತಹ ಪರಿ ಐತಿಹಾಸಿಕ ಮತ್ತು ಅಭೂತಪೂರ್ವವಾಗಿದೆ. ಕಾಲಕ್ಕೆ ತಕ್ಕ ರೀತಿಯಲ್ಲಿ ಸ್ಪಂದಿಸುವ ಮನೋಭಾವ ಉಳ್ಳಂತಹ `ಪ್ರಜಾವಾಣಿ~ಬಳಗದವರು ಇಂದು ಸಂದರ್ಭೋಚಿತವಾದ ರೀತಿಯಲ್ಲಿ ಪತ್ರಿಕೆ ಪ್ರಕಟಗೊಂಡಿದೆ.

ಡಾ. ಹನುಮಣ್ಣ ನಾಯಕ ದೊರೆಕುಲಪತಿ, ಡಾ. ಗಂಗೂಬಾಯಿ ಹಾನಗಲ್ ಸಂಗೀತ ವಿವಿ ಮೈಸೂರು.ಚೊಲೋ ಸಂಚಿಕೆ ಅದ 
ಅಂಬೇಡ್ಕರ ಜಯಂತಿ ಅಂಗವಾಗಿ ದಲಿತ ಲೇಖಕ ದೇವನೂರ ಮಹಾದೇವ ಅವರನ್ನು ಅತಿಥಿ ಸಂಪಾದಕರನ್ನಾಗಿ ಮಾಡಿದ್ದು ಯೋಗ್ಯವಾದುದು. ಅವರು ಸಮರ್ಥವಾಗಿ ನಿರ್ವಹಿಸಿದ್ದಾರೆ. ಅಂಬೇಡ್ಕರರ ಕುರಿತು ಭಿನ್ನವಾದ ಮಾಹಿತಿ ಸಿಗುತ್ತದೆ. ದಲಿತರು ತಮ್ಮ ಕಷ್ಟ-ಸುಖಗಳನ್ನು ಹಂಚಿಕೊಳ್ಳಲು ವೇದಿಕೆಯಾಗಿದೆ. ಆದರೆ ದಲಿತರ ಉದ್ಧಾರಕ್ಕಾಗಿ ಕರ್ನಾಟಕ ಮೂಲದ ಅವರ್ಣೀಯರು ಮತ್ತು ಸವರ್ಣೀಯರು ಮಾಡಿದ ಕೆಲಸವನ್ನು ದಾಖಲಿಸಿದ್ದರೆ ಇನ್ನೂ ಚೊಲೋ ಆಗುತ್ತಿತ್ತು. 

 ಡಾ.ಎಂ.ಎಂ. ಕಲಬುರ್ಗಿ, ಧಾರವಾಡಪ್ರಜಾವಾಣಿ `ಸಂಬಂಜ~ ದೊಡ್ಡದು

`ಪ್ರಜಾವಾಣಿ~ ಹಾಗೂ ದಲಿತರ `ಸಂಬಂಜ~ ನಿಜಕ್ಕೂ ದೊಡ್ಡದು. 70ರ ದಶಕದಿಂದ ಪತ್ರಿಕೆ ದಲಿತ ಪರ ಚಳವಳಿಗೆ ಸ್ಪಂದಿಸುತ್ತ ಬಂದಿದೆ. `ಸಮಾನತೆ ಕನಸನ್ನು ಮತ್ತೆ ಕಾಣುತ್ತ~.. ಮಾನವತೆಗಾಗಿ, ನೊಂದವರಿಗಾಗಿ ದನಿ ಎತ್ತಬೇಕಾದ ದಿನ ಇದಾಗಿದೆ. ಇಂತಹ ಮಹತ್ವದ ದಿನಂದದು ದಲಿತ ಪರವಾಗಿ ವಿಶೇಷ ಸಂಚಿಕೆ ತಂದಿರುವುದು ಇಡೀ ರಾಜ್ಯದ ದಲಿತ ಸಮುದಾಯಕ್ಕೆ ಸಂತಸ ಉಂಟುಮಾಡಿದೆ. ಪತ್ರಿಕೆಯ ಸಾಮಾಜಿಕ ಜವಾಬ್ದಾರಿ, ಕಳಕಳಿಯಿಂದ ಮಾತ್ರ ಇಂತಹ ಕೆಲಸ ಸಾಧ್ಯ. 

 ಜನಾರ್ದನ (ಜನ್ನಿ), ರಂಗಕರ್ಮಿಕ್ರಾಂತಿ


ಐತಿಹಾಸಿಕ ಮತ್ತು ಅತ್ಯಂತ ಮಹತ್ವಪೂರ್ಣ ಯಶಸ್ವಿಪ್ರಯತ್ನಕ್ಕೆ ಅಭಿನಂದನೆಗಳು. ಇದು ಅಬ್ಬರ ಇಲ್ಲದ ಕ್ರಾಂತಿಯೇ ಸರಿ.

ರೂಪ ಹಾಸನ, ಹಾಸನದಲಿತ ಪ್ರಜ್ಞೆಯ ಪ್ರತೀಕ

ಕನ್ನಡನಾಡಿಗೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರನ್ನು ವಿಶಿಷ್ಟವಾಗಿ ಪರಿಚಯ ಮಾಡಿಕೊಡುವಲ್ಲಿ `ಪ್ರಜಾವಾಣಿ~ ಅದ್ಭುತ ಕಾರ್ಯ ಮಾಡಿದೆ. ದಲಿತ ಪ್ರಜ್ಞೆಯನ್ನು ಮೂಡಿಸುವಂತಹ ಮಹತ್ಕಾರ್ಯ ಇದಾಗಿದೆ. ಅದರಲ್ಲೂ ಅತಿಥಿ ಸಂಪಾದಕ ಸ್ಥಾನಕ್ಕೆ ಅತ್ಯಂತ ಸೂಕ್ತ ವ್ಯಕ್ತಿಯನ್ನು ಆಯ್ಕೆ ಮಾಡಿರುವುದು ಅಭಿನಂದನೀಯ. ಅಂಬೇಡ್ಕರರ 121ನೇ ಜಯಂತಿಗೆ `ಪ್ರಜಾವಾಣಿ~ಯು ಸಾಮಾಜಿಕ ಕಳಕಳಿ ಮತ್ತು ನ್ಯಾಯವನ್ನು ಪ್ರತಿನಿಧಿಸಿದೆ. ಸರ್ಕಾರ, ಮತೀಯಶಕ್ತಿಗಳು, ಪ್ರತಿಗಾಮಿ ಶಕ್ತಿಗಳಿಗೆ ಈ ಮೂಲಕ ಸೂಕ್ತ ಎಚ್ಚರಿಕೆಯನ್ನೂ ನೀಡಿದಂತಾಗಿದೆ. 

 ಡಾ. ಜೆ. ಸೋಮಶೇಖರ್ನಿರ್ದೇಶಕರು.

ಮೈಸೂರು ವಿವಿ ಡಾ. ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರಪುಸ್ತಕವಾಗಿ ಹೊರಬರಲಿ

ಏಪ್ರಿಲ್ 14ರ ಸಂಚಿಕೆಯನ್ನು ಮೆಟ್ರೋ ಸೇರಿ  ಕಾಳಜಿಗಳ ಮರುಶೋಧವನ್ನಾಗಿ  ಸಮಾನತೆಯ ಕನಸನ್ನು ಕಾಣುತ್ತಾ  ಹೊರತಂದಿದ್ದೀರಿ. ಸಮಾಜದ ಒಡಲಿನ ಅಂತರಾಳದಲ್ಲಿ ಎಲ್ಲ ತರದ ತಾರತಮ್ಯಗಳಿಂದ ಉಂಟಾಗಿರುವ ಮನುಷ್ಯ ನಿರ್ಮಿತ ಕಂದಕಗಳನ್ನು ತೋರಿಸುವಲ್ಲಿ  `ಪ್ರಜಾವಾಣಿ~ ಸುಮುಖ ಪಾತ್ರವಹಿಸಿದ್ದಕ್ಕೆ ನಿಮಗೆ ಅಭಿನಂದನೆಗಳು. ಇಂತಹ ಒಂದು ಸಂಗ್ರಹ ಯೋಗ್ಯವಾದ ಸಂಚಿಕೆಯನ್ನು ತಂದ ಪತ್ರಿಕೆಯ ಸಾಮಾಜಿಕ ಇಚ್ಛಾಶಕ್ತಿಗೆ  ಮತ್ತೊಮ್ಮೆ ಧನ್ಯವಾದಗಳು. ದೇವನೂರ ಮಹಾದೇವ  ವಿದ್ಯಾವಂತ ಮನಸ್ಸುಗಳ ಆಳದೊಳಗೆ ಬೇರೂರುವ ಅಗ್ರ ಲೇಖನ ಬರೆದಿದ್ದಾರೆ.ನಮ್ಮನ್ನೆಲ್ಲಾ ಮರುಶೋಧ ಮಾಡಿಕೊಳ್ಳಲು ಹಚ್ಚಿದ ನಿಮ್ಮ ಪತ್ರಿಕೆಗೆ, ದೇವನೂರ ಮಹಾದೇವ ಅವರಿಗೆ ಕೃತಜ್ಞತೆ ಅರ್ಪಿಸಿಬೇಕಾದದ್ದು ನಮ್ಮ ಕರ್ತವ್ಯ. ಅಂದಹಾಗೆ, ಏಪ್ರಿಲ್ 14ರ ಪೂರ್ಣ ಪತ್ರಿಕೆಯನ್ನು ಪುಸ್ತಕವನ್ನಾಗಿ ಮಾಡಿ ಹಂಚಿದರೆ ಒಳ್ಳೆಯದಲ್ಲವೇ.

 ಡಾ. ಕೆ.ಈ. ರಾಧಾಕಷ್ಣ,  ಬೆಂಗಳೂರುಸಂಪಾದಕೀಯ ಚೆನ್ನಾಗಿದೆ

ಮುಖಪುಟ ಹಾಗೂ ಒಳಪುಟದಲ್ಲಿರುವ ಸಂಪಾದಕೀಯಗಳು ತುಂಬ ಚೆನ್ನಾಗಿವೆ. ದೇವನೂರ ಮಹಾದೇವ ಸಂಪಾದಕರು ಎಂದಾಗ ಕುತೂಹಲವಿತ್ತು. ಲೇಖನಗಳು ಉತ್ತಮವಾಗಿ ಮೂಡಿ ಬಂದಿವೆ. ಇದೇ ರೀತಿ ವಿಶೇಷ ಸಂಚಿಕೆಗಳು ಮೂಡಿ ಬರಲಿ.

 ಪ್ರೊ.ಅರವಿಂದ ಮಾಲಗತ್ತಿ, ಸಾಹಿತಿಸಂಪಾದಕರಿಗೆ ಅಭಿನಂದನೆ

ಶನಿವಾರದ ಪತ್ರಿಕೆ ನೋಡಿ ಹೇಳಲಾರದಷ್ಟು ಸಂತೋಷವಾಯಿತು. ಬಹುಶಃ ಇಂತಹದೊಂದು ಬೆಳವಣಿಗೆಯನ್ನು ನಾವೆಲ್ಲಾ ಕಾಯುತ್ತಿದ್ದೆವು. ಅದನ್ನು `ಪ್ರಜಾವಾಣಿ~ಯ ಮೂಲಕ ಸಾಕಾರಗೊಳಿಸಿದ್ದಕ್ಕೆ ಸಂಪಾದಕರಾದ ಕೆ.ಎನ್.ಶಾಂತಕುಮಾರ್ ಅವರಿಗೆ ನನ್ನೆಲ್ಲ ದಲಿತ ಸಹೋದರರ ಪರವಾಗಿ ಅಭಿನಂದನೆಗಳು.ಕಳೆದ 2 ದಶಕಗಳಿಂದ ಅನಾಥವಾದಂತಿದ್ದ ದಲಿತರ ಚಿಂತನೆ, ಹೋರಾಟ  ಬದ್ಧತೆಯನ್ನು ಮತ್ತೊಮ್ಮೆ ಎಚ್ಚರಿಸುವ ಸಂಚಿಕೆ. ದಲಿತ ಸಮುದಾಯದ ಏಕೈಕ ಐಕಾನ್ ದೇವನೂರರನ್ನು ಅತಿಥಿ ಸಂಪಾದಕರನ್ನಾಗಿಸಿದ್ದು ಬಹುದೊಡ್ಡ ಬೆಳವಣಿಗೆ. ಅವರ ಸಂಪಾದಕೀಯ ಅರ್ಥಪೂರ್ಣ. ಬಹುಶಃ `ಪ್ರಜಾವಾಣಿ~ಯಿಂದ ಮಾತ್ರವೇ ಇದು ಸಾಧ್ಯ. ಸಮಾನತೆ ಕನಸನ್ನು ಕಾಣುವ ಯುವ ಜನತೆಗೆ ಸಂಚಿಕೆ ಮತ್ತಷ್ಟು ಹುರುಪು, ಭರವಸೆಗಳನ್ನು ಹುಟ್ಟಿಸಿದೆ. 

 ನಾಗರಾಜ್ ಹೆತ್ತೂರು, ಹಾಸನಅಭಿನಂದನೆ

ಭಾಳ ಚೊಲೋ ಪ್ರಯತ್ನ. ಇನ್ನ್ಯಾವುದೋ ದಿನ ವಿಶೇಷ ಸಂಚಿಕೆ ಮಾಡೋದ್ ಬ್ಯಾರೆ; ಅಂಬೇಡ್ಕರ್ ಹೆಸರಿನ್ಯಾಗ ವಿಶೇಷ ಸಂಚಿಕೆ ಮಾಡೋದ್ ಬ್ಯಾರೆ. ಎಲ್ಲಾರು ಮಾಡಬೇಕಾಗಿದ್ದು; ಪ್ರಜಾವಾಣಿ ಮಾತ್ರ ಮಾಡಬಹುದಾದದ್ದು. ಅಭಿನಂದನೆಗಳು.

 ಪ್ರೊ. ಆರ್.ವಿ. ಹೊರಡಿ, ಧಾರವಾಡ

 

ಜವಾಬ್ದಾರಿ ಮೆರೆದ ಪತ್ರಿಕೆ

ದೇವನೂರು ಮಹದೇವ ಅವರ ಅತಿಥಿ ಸಂಪಾದಕತ್ವದಲ್ಲಿ ಶನಿವಾರದ `ಪ್ರಜಾವಾಣಿ~ ಪತ್ರಿಕೆ ಅತ್ಯಂತ ವೈಚಾರಿಕವಾಗಿದ್ದು, ಇದೊಂದು ಹೊಸ ರೀತಿಯ ಪ್ರಯೋಗ. ದೇವನೂರು ಮಹದೇವ ಅವರಂಥವರಿಗೆ ಅತಿಥಿ ಸಂಪಾದಕ ಸ್ಥಾನ ಕೊಟ್ಟು ಪತ್ರಿಕೆ ತನ್ನ ಜವಾಬ್ದಾರಿ ಮೆರೆದಿದೆ.

ಜಂಬಣ್ಣ ಅಮರಚಿಂತ,ಹಿರಿಯ ಸಾಹಿತಿ, ರಾಯಚೂರುಅಪರೂಪದ ಪ್ರಯೋಗ

ಬಹಳ ಅಪರೂಪದ ಪ್ರಯೋಗ. ಸಂವೇದನಾಶೀಲರು, ಪ್ರಗತಿಪರ ಚಿಂತಕರ ಪ್ರತಿರೂಪವಾಗಿರುವ ದೇವನೂರ ಮಹಾದೇವ ಸಂಪಾದಕರಾಗಿದ್ದು ಇಡೀ ಕರ್ನಾಟಕದ ಜನತೆ ಹೆಮ್ಮೆ ಪಡುವಂತಹದ್ದು. ರಾಜಿ ಮಾಡಿಕೊಳ್ಳದ, ಯಾವತ್ತಿಗೂ ಆಸೆ ಪಡದ ದೇವನೂರರ ಸಂಪಾದಕೀಯ ಅದ್ಭುತವಾಗಿದೆ. ಇಂತಹ ವಿಶೇಷ ಸಂಚಿಕೆ ಮತ್ತೆ ಬರಲಿ. 

-ಕಾಳೇಗೌಡ ನಾಗವಾರ, ಸಾಹಿತಿದಲಿತರ ವಾಸ್ತವ ಸ್ಥಿತಿಗೆ ಬೆಳಕು

ಪ್ರಸ್ತುತ ದಲಿತರ ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಸ್ಥಿತಿಗತಿ ಏನಿದೆ ಎನ್ನುವುದನ್ನು `ಪ್ರಜಾವಾಣಿ~ ಪತ್ರಿಕೆ `ದಲಿತ ವಿಶೇಷ~ ಸಂಚಿಕೆಯ ಮೂಲಕ ತೆರೆದಿಟ್ಟಿದೆ.

ಎಸ್.ಎಂ. ಜನವಾಡಕರ್,ಸಾಹಿತಿ,  ಬೀದರ್`ಪ್ರಜಾವಾಣಿ~ ದಿಟ್ಟ ಹೆಜ್ಜೆ

ಡಾ. ಅಂಬೇಡ್ಕರ್ ಅವರ ಜಯಂತಿ ಪ್ರಯುಕ್ತ `ಪ್ರಜಾವಾಣಿ~ ಪತ್ರಿಕೆ `ದಲಿತ ವಿಶೇಷ~ ಸಂಚಿಕೆ ಹೊರ ತಂದಿರುವುದು ಉತ್ತಮ ಬೆಳವಣಿಗೆಯಾಗಿದೆ. ಮುದ್ರಣ ಮಾಧ್ಯಮದಲ್ಲಿ `ಪ್ರಜಾವಾಣಿ~ ಇಂತಹದ್ದೊಂದು ದಿಟ್ಟ ಹೆಜ್ಜೆ ಇರಿಸುವ ಮೂಲಕ ದಲಿತರು ಹಾಗೂ ಶೋಷಿತ ಸಮುದಾಯಕ್ಕೆ ಧ್ವನಿ ನೀಡುವ ಪತ್ರಿಕೆ ಒಂದಿದೆ ಎಂಬ ಸಂದೇಶ ನೀಡಿದೆ. 

 ವಿಠಲದಾಸ್ ಪ್ಯಾಗೆ,  ಬೀದರ್ ದಮನಿತರ ಪರ ಕಾಳಜಿ ನಿರಂತರವಾಗಿರಲಿ 
ದೇವನೂರರ ಸಂಪಾದಕತ್ವದಲ್ಲಿ ಬಂದ ಸಂಚಿಕೆಯ ಕಾಳಜಿ-ಆಶಯ ಹಿಡಿದು ನಿಲ್ಲಿಸಿದವು. ಇದು ಅಂಬೇಡ್ಕರ್ ಜಯಂತಿಗಷ್ಟೇ ಸೀಮಿತವಾಗದೇ ಶೋಷಿತರ, ದಲಿತ-ದಮನಿತರ ಪರವಾಗಿನ ಕಾಳಜಿಯೊಂದು ನಿರಂತರವಾಗಿ ಮಾಧ್ಯಮಗಳಲ್ಲಿ ಹರಿಯುತ್ತಿರಬೇಕು. ಅವರನ್ನು ಜಾಗೃತಗೊಳಿಸುವ ಕೆಲಸ ನಡೆಯಬೇಕು.ಹರಿಜನ ಮಕ್ಕಳನ್ನು ಕರೆದುಕೊಂಡು ಮದುವೆ ಮತ್ತಿತರ ಸಮಾರಂಭಗಳಿಗೆ ಕರೆದುಕೊಂಡ ಹೋದ ನನ್ನ ತಂದೆಯನ್ನು  (ಸರದಾರ ವೀರನಗೌಡ ಪಾಟೀಲ) ಸಮಾಜದವರು ಬಹಿಷ್ಕರಿಸಿದ್ದರು. ಊಟಕ್ಕೆ ಕುಳಿತ ದಲಿತ ಮಕ್ಕಳೊಂದಿಗೇ ಎಬ್ಬಿಸಿ ಕಳಿಸಿದ್ದರು.ಗಾಂಧೀಜಿ ಆರಂಭಿಸಿದ ಹರಿಜನೋದ್ಧಾರ ಆಂದೋಲನ ದೇಶವನ್ನು ವ್ಯಾಪಿಸಿದಾಗ ಹರಿಜನ ಬಾಲಿಕಾಶ್ರಮ ಕಟ್ಟಿದ ನನ್ನ ತಂದೆಯವರು ಸಾಕಷ್ಟು ಅವಮಾನಗಳನ್ನು ಅನುಭವಿಸಬೇಕಾಯಿತು. ದೇವಸ್ಥಾನ ಪ್ರವೇಶಕ್ಕೆ ನಿಷೇಧ ಹೇರಿದಾಗ, ಪಟ್ಟು ಬಿಡದೇ ಧರಣಿ ಕುಳಿತು ದಲಿತ ಮಕ್ಕಳೊಂದಿಗೆ ದೇವಾಲಯವನ್ನು ಪ್ರವೇಶಿಸಿದರು. ಇವತ್ತಿಗೂ ಬಹುತೇಕ ಕಡೆ ಇಂಥದೇ ಪರಿಸ್ಥಿತಿ ಇದ್ದು, ಇಂಥ ಅಸಮಾನತೆಯನ್ನು ನಿವಾರಿಸುವಲ್ಲಿ ಮಾಧ್ಯಮಗಳ ಜವಾಬ್ದಾರಿ ಬಹಳ ದೊಡ್ಡದಿದೆ.

ಅಮಲಾ ಕಡಗದ,ಸಾಮಾಜಿಕ ಕಾರ್ಯಕರ್ತರು, ಹುಬ್ಬಳ್ಳಿಗಮನಾರ್ಹ ಪ್ರಯೋಗ

ದೇವನೂರು ಮಹದೇವ ಅವರ ಅತಿಥಿ ಸಂಪಾದಕತ್ವದಲ್ಲಿ ರೂಪಿಸಿರುವ ಸಂಚಿಕೆ ವಿಶಿಷ್ಟ. ಹೊಸ ರೀತಿಯ ಪ್ರಯೋಗ ಗಮನಾರ್ಹ. ಪ್ರಜಾವಾಣಿ ಪತ್ರಿಕೆಯು ಆಗಾಗ ಇಂಥ ಪ್ರಯೋಗ ಮಾಡುವ ಮೂಲಕ ತನ್ನ ಸಮಾಜ ಕಾಳಜಿಯನ್ನು ವ್ಯಕ್ತಪಡಿಸುತ್ತ ಬಂದಿದೆ.

ದಸ್ತಗೀರಸಾಬ್ ದಿನ್ನಿ, ಉಪನ್ಯಾಸಕರು, ಸಾಹಿತಿ,

 

ವೈಚಾರಿಕತೆ ಹೆಚ್ಚಿಸುವ ಸಂಚಿಕೆ

ದೇವನೂರು ಮಹಾದೇವನವರ ಅತಿಥಿ ಸಂಪದಾಕತ್ವದಲ್ಲಿ ಪ್ರಕಟಗೊಂಡಿರುವ `ಪ್ರಜಾವಾಣಿ~ ವಿಶೇಷ ಸಂಚಿಕೆಯು ಪ್ರತಿ ಒಬ್ಬ ಓದುಗನನ್ನು ಆತ್ಮಾವಲೋಕನಕ್ಕೆ ಒಡ್ಡುವ, ಜಾತಿಯ ಅಹಂಕಾರ, ಕೀಳರಿಮೆಯಿಂದ ಬಿಡುಗಡೆಗೊಳಿಸುವ ಹಾಗೂ ವೈಚಾರಿಕ ಪ್ರಜ್ಞೆಯನ್ನು ವಿಸ್ತರಿಸುವ ಮಹತ್ವದ ಸಂಚಿಕೆಯಾಗಿದೆ.

-ಡಾ. ಅಪ್ಪಗೆರೆ ಸೋಮಶೇಖರ್

ಪ್ರಾಧ್ಯಾಪಕರು, ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಗುಲ್ಬರ್ಗಸ್ವಾಗತಾರ್ಹ ಪ್ರಯತ್ನ

`ಪ್ರಜಾವಾಣಿ~ಯ ಪ್ರಯತ್ನ ಅತ್ಯಂತ ಸ್ವಾಗತಾರ್ಹವಾದದ್ದು. ಲೇಖನಗಳೂ ಅತ್ಯಂತ ಸಕಾಲಿಕವಾಗಿವೆ. ದಲಿತರು ಎದುರಿಸುತ್ತಿರುವ ಸಮಸ್ಯೆಯೇ ದೇಶದ ಅತಿ ದೊಡ್ಡ ಸಮಸ್ಯೆ. ಅದನ್ನು ಪರಿಹರಿಸಲು ಸಮಾಜ ಇನ್ನಾದರೂ ಮುಂದಾಗಬೇಕಿದೆ.

ಪ.ಮಲ್ಲೇಶ್ , ಹಿರಿಯ ಸಮಾಜವಾದಿನಿಜವಾದ ಗೌರವ

ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ನಿಜವಾದ ಪರಿ ಇದು. ಸಂದಿಗ್ದ ಸಾಮಾಜಿಕ ಪರಿಸ್ಥಿತಿಯಲ್ಲಿ `ಪ್ರಜಾವಾಣಿ~ಯ ವಿಶೇಷ ಸಂಚಿಕೆ ಅತ್ಯಂತ ಸಕಾಲಿಕ. ಬೇರೆ ಬೇರೆ ಪಲ್ಲಟಗಳು ಮತ್ತು ತಲ್ಲಣಗಳ ಸಂದರ್ಭದಲ್ಲಿಯೂ ಇಂತಹ ಪ್ರಯತ್ನ ಮಾಡಬೇಕು.

ಡಾ.ಬಿ.ವಿ.ರಾಜಾರಾಂ ರಂಗಾಯಣ ನಿರ್ದೇಶಕವಿಶಿಷ್ಟ ಪ್ರಯತ್ನ

`ಪ್ರಜಾವಾಣಿ~ವಿಶೇಷ ಸಂಚಿಕೆ ಒಂದು ವಿಶಿಷ್ಟ ಪ್ರಯತ್ನ. ಅಂಬೇಡ್ಕರ್ ಜನ್ಮ ದಿನಾಚರಣೆಯ ನೆಪದಲ್ಲಿ ಈ ನೆಲದ ದಲಿತರ ಒಟ್ಟಾರೆ ಸ್ಥಿತಿಯ ಬಗ್ಗೆ ತಿಳಿಸಿಕೊಟ್ಟಿದ್ದು ಮಹತ್ವಪೂರ್ಣ ಮತ್ತು ಸಕಾಲಿಕ.

ರಾಜಶೇಖರ ಕದಂಬ, ಹಿರಿಯ ರಂಗಕರ್ಮಿ`ಜಯಂತಿಗೆ ಅರ್ಥ ತಂದಿದೆ~

ಅತಿಥಿ ಸಂಪಾದಕ ದೇವನೂರು ಮಹಾದೇವ ಅವರ ನೇತೃತ್ವದಲ್ಲಿ ಮೂಡಿ ಬಂದಿರುವ ಏ.14ರ `ಪ್ರಜಾವಾಣಿ~ ವಿಶೇಷ ಸಂಚಿಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಜಯಂತಿಗೆ ನಿಜವಾದ ಅರ್ಥ ಕಲ್ಪಿಸಿದೆ. ವಿಶೇಷ ಸಂಚಿಕೆ ಅದ್ಭುತವಾಗಿ ಮೂಡಿಬಂದಿದ್ದು, ತುಂಬಾ ಖುಷಿ ಕೊಟ್ಟಿದೆ. ನಿಜವಾದ ದಲಿತ ಮತ್ತು ಜನಪರ ಕಾಳಜಿಯನ್ನು `ಪ್ರಜಾವಾಣಿ~ ಮತ್ತೊಮ್ಮೆ ಪ್ರದರ್ಶಿಸಿದೆ.

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಮಾದಾರ ಗುರುಪೀಠಚಿತ್ರದುರ್ಗಸೃಜನಶೀಲ ಮನಸ್ಸು

`ಪ್ರಜಾವಾಣಿ~ಯ ಮೂಲಕ ಇಂದು ಸೃಜನಶೀಲ ಮನಸ್ಸೊಂದು ಕೆಲಸ ಮಾಡಿದೆ. ಅಂಬೇಡ್ಕರ್ ಜಯಂತಿಯನ್ನು ಭಾರತದ ಸಂದರ್ಭದಲ್ಲಿ ಹೇಗೆ ಆಚರಿಸಬಹುದು ಎಂದು ತೋರಿಸಿಕೊಡುವ ಮೂಲಕ ಈ ಸೃಜನಶೀಲ ಮನಸ್ಸು ಪ್ರಕಟವಾಗಿದೆ. ಮೂಡಿಬಂದ ಹಲವು ಲೇಖನಗಳು ಸಕಾಲಿಕ ಮಾತ್ರವಲ್ಲ, ವಿವೇಕ ಮೂಡಿಸುವಂತೆ ಇವೆ.

ಬಿ.ಎ.ವಿವೇಕ ರೈ, ಹಿರಿಯ ಸಾಹಿತಿಕನ್ನಡಿಗರ ಕಣ್ಣು ತೆರೆಸಿದೆ

ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರತೆಯ ಶೀರ್ಷಿಕೆಯಲ್ಲಿ ಸಿದ್ಧಗೊಳಿಸಿದ ವಿಶೇಷ ಸಂಚಿಕೆಯನ್ನು ರೂಪಿಸಿದ್ದಕ್ಕೆ ಅಭಿನಂದನೆಗಳು. ಈ ದೇಶ ಸ್ವಾತಂತ್ರ್ಯವನ್ನು ಪಡೆದು 65 ವರ್ಷಗಳಾದರೂ ಅತೀವ ಅಮಾನುಷವಾದ ಜಾತಿ ವ್ಯವಸ್ಥೆಯನ್ನು ನಿರ್ಬೀಜಗೊಳಿಸಲಾಗದ ಸ್ಥಿತಿ ಈಗಲೂ ಇದೆ ಎನ್ನುವುದಕ್ಕೆ ದರ್ಪಣವಾಗಿದೆ ಈ ಸಂಚಿಕೆ. ಕನ್ನಡಿಗರ ಕಣ್ಣು ತೆರೆಸಿ, ಕರುಳು ಕತ್ತರಿಸುವ ರೀತಿಯಲ್ಲಿ ಸಂಚಿಕೆ ರೂಪಿಸಿದ್ದಾರೆ.

ಡಾ.ಕೆ.ಎಸ್. ಶರ್ಮಾ, ಹೋರಾಟಗಾರರು, ಹುಬ್ಬಳ್ಳಿ`ಪ್ರಜಾವಾಣಿ~ ಕರ್ನಾಟಕದ ಅಂತಃಸಾಕ್ಷಿ 
ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನದ ಅಂಗವಾಗಿ ವಿಶೇಷ ಸಂಚಿಕೆ ರೂಪಿಸಿದ್ದಕ್ಕಾಗಿ `ಪ್ರಜಾವಾಣಿ~ಗೆ ತುಂಬು ಹೃದಯದ ಕೃತಜ್ಞತೆಗಳು. ಏಕೆಂದರೆ ಭಾರತದಲ್ಲಿ ಒಂದು ಸಾರ್ವತ್ರಿಕ ಅಭಿಪ್ರಾಯವಿದೆ. ಪತ್ರಿಕೆಗಳು ಬ್ರಾಹ್ಮಣವಾದದ ವಕ್ತಾರರಂತೆ ಕಾರ್ಯನಿರ್ವಹಿಸುತ್ತಿವೆ ಎನ್ನುವುದು. ಇಂತಹ ಸಂದರ್ಭದಲ್ಲಿ ಸಂಪೂರ್ಣ ಪತ್ರಿಕೆಯೇ ಬಾಬಾಸಾಹೇಬರ ವಿಚಾರಗಳನ್ನು ಪ್ರತಿಪಾದಿಸುವ ಲೇಖನಗಳಿಂದ ತುಂಬಿರುವುದು ನನ್ನಂಥವರಿಗೆ ಹಬ್ಬದೂಟ ಉಣಿಸಿದಂತಾಗಿದೆ.

ದತ್ತಾತ್ರೇಯ ಇಕ್ಕಳಕಿ, ಪ್ರಕಾಶಕರು, ಗುಲ್ಬರ್ಗ

ಜೋಪಾನ

ಈ ದಿನದ ಪ್ರಜಾವಾಣಿಯನ್ನು ಜೋಪಾನವಾಗಿ ರಕ್ಷಿಸಿಟ್ಟಿದ್ದೇನೆ.  

 ಬಸವರಾಜ ನಾಯಕ್‌ಬೆಂಗಳೂರುಪತ್ರಿಕೆಯ ಜವಾಬ್ದಾರಿ ಹೆಚ್ಚಾಗಿದೆ

ವಿಶೇಷ ಸಂಚಿಕೆಯಿಂದ ಮಾಧ್ಯಮಗಳ ಸಾಮಾಜಿಕ ಬದ್ಧತೆಗೆ ಹೊಸ ಆಯಾಮವೇ ಸೃಷ್ಟಿಯಾಗಿದೆ. ನಮಗಂತೂ ಈ ಪ್ರಯತ್ನ ಬೆರಗನ್ನೇ ಹುಟ್ಟಿಸಿದೆ. ಪ್ರಜಾವಾಣಿಯ ಸಾಮಾಜಿಕ ಬದ್ಧತೆಯಿಂದ ಕನ್ನಡ ಪತ್ರಿಕೋದ್ಯಮದಲ್ಲಿ ಹೊಸ ಇತಿಹಾಸ ಆರಂಭವಾಗಿದೆ.

ಕೃಪಾಕರ ಸೇನಾನಿ,ವನ್ಯಜೀವಿ ಸಂಶೋಧಕರು`ದಲಿತ ವಾಣಿ~

 `ಪ್ರಜಾವಾಣಿ~ `ದಲಿತವಾಣಿ~ಯಾಗಿ ಮೂಡಿ ಬಂದಿರುವುದು ಸಂತೋಷ ತಂದಿದೆ.  `ಪ್ರಜಾವಾಣಿ~ ಬಯಸಿದ ಹಾಗೆ ಸಮಾನತೆ ಕನಸು ನನಸಾಗಬೇಕು. `ಪ್ರಜಾವಾಣಿ~ ಕೈಗೊಂಡಿರುವ ಈ ಕೆಲಸ ಅತ್ಯಂತ ಶ್ಲಾಘನೀಯ.

ಅತಿಥಿ ಸಂಪಾದಕರಾಗಿ ದಲಿತ ಪ್ರಜ್ಞೆಯ ಪ್ರತೀಕವಾದ ದೇವನೂರು ಮಹಾದೇವ ಅವರನ್ನು ಆಯ್ಕೆ ಮಾಡಿರುವುದು ಸಹ ಆ ಸ್ಥಾನದ ಗೌರವ ಹೆಚ್ಚಿಸಿದ್ದು,  ಸಾಮಾಜಿಕ ನ್ಯಾಯದ ಪ್ರತಿರೂಪದ ಈ ಸಂಚಿಕೆ ಸಂಗ್ರಹಿಸಿಡಲು ಯೋಗ್ಯವಾಗಿದೆ.

 ಬಿ.ಎಲ್. ವೇಣು, ಸಾಹಿತಿ ಚಿತ್ರದುರ್ಗಹೋರಾಟಗಾರರ ಲೇಖನ ಬೇಕಿತ್ತು


ವಿಶೇಷ ಸಂಚಿಕೆ ಬಹಳ ಚೆನ್ನಾಗಿ ಬಂದಿದೆ. ಶೈಕ್ಷಣಿಕ ತಜ್ಞರ ಲೇಖನಗಳ ಜೊತೆಗೆ ಹೋರಾಟಗಾರರ ಲೇಖನಗಳನ್ನೂ ಬಳಸಬೇಕಿತ್ತು. ಅಂಬೇಡ್ಕರ್ ದಿನಾಚರಣೆಯನ್ನು ಗಮನದಲ್ಲಿ ಇಟ್ಟುಕೊಂಡು ವಿಶೇಷ ಸಂಚಿಕೆ ಹೊರತಂದಿರುವುದು ಶ್ಲಾಘನೀಯ. ಅಂಬೇಡ್ಕರ್ ಜೊತೆಗೆ ಪರಿಶಿಷ್ಟ ಪಂಗಡ, ಬುಡಕಟ್ಟು ಜನಾಂಗ ಹಾಗೂ ಶೋಷಿತ ವರ್ಗದವರನ್ನು ಗಮನದಲ್ಲಿ ಇಟ್ಟುಕೊಂಡು ಮಾಡಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು. ಮುಂದೆಯೂ ವಿಶೇಷ ಸಂಚಿಕೆಗಳು ಬರಲಿ.

ಡಾ.ಆರ್.ಬಾಲಸುಬ್ರಹ್ಮಣ್ಯಂ, ವಿವೇಕಾನಂದ ಯೂತ್ ಮೂವ್‌ಮೆಂಟ್ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.