ಗುರುವಾರ , ಮೇ 13, 2021
18 °C

ಪ್ರಜಾ ನ್ಯಾಯಾಲಯದಲ್ಲಿ ಹಿಕಾಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ನಕ್ಸಲೀಯರ ಒತ್ತೆಯಲ್ಲಿರುವ ಬಿಜೆಡಿ ಶಾಸಕ ಜಿನಾ ಹಿಕಾಕ ಅವರ ವಿಚಾರಣೆ `ಪ್ರಜಾ ನ್ಯಾಯಾಲಯ~ದಲ್ಲಿ ಗುರುವಾರ ಆರಂಭವಾಗಿದೆ. ಹಿಕಾಕ ಭವಿಷ್ಯವನ್ನು `ಪ್ರಜಾ ನ್ಯಾಯಾಲಯ~ವೇ ನಿರ್ಧರಿಸಲಿದೆ ಎಂದು ಬುಧವಾರ ಹೇಳಿದ್ದಂತೆಯೇ ನಕ್ಸಲೀಯರು ಈ ಕ್ರಮಕ್ಕೆ ಮುಂದಾಗಿರುವುದರಿಂದ ಅವರ ಬಿಡುಗಡೆಯ ಹಾದಿ ಇನ್ನಷ್ಟು ಕಗ್ಗಂಟಾಗಿ ಪರಿಣಮಿಸಿದೆ.ಶಾಸಕರ ಬಿಡುಗಡೆಗೆ ಪ್ರತಿಯಾಗಿ 13 ನಕ್ಸಲೀಯರನ್ನು ಆರೋಪಮುಕ್ತಗೊಳಿಸಲು ಒಡಿಶಾ ಸರ್ಕಾರ ಸಮ್ಮತಿಸಿದ್ದರೂ,  ಬೇಡಿಕೆ ಈಡೇರಿಕೆಗೆ ನೀಡಿದ್ದ ಗಡುವು ಕೊನೆಗೊಂಡ ಮರುದಿನವೇ ಬಂಡುಕೋರರು  ಅವರನ್ನು `ಪ್ರಜಾ ನ್ಯಾಯಾಲಯ~ದಲ್ಲಿ ಹಾಜರುಪಡಿಸಿದ್ದಾರೆ.ನಕ್ಸಲೀಯರ ಆಂಧ್ರ- ಒಡಿಶಾ ಗಡಿ ವಿಶೇಷ ವಲಯ ಸಮಿತಿ (ಎಒಬಿಎಸ್‌ಝಡ್‌ಸಿ) ಈ ಮೊದಲೇ ತಿಳಿಸಿದ್ದಂತೆ ಕೊರಾಟ್‌ಪುರ ಜಿಲ್ಲೆಯ ಕುಗ್ರಾಮವೊಂದರಲ್ಲಿ ಪ್ರಜಾ ನ್ಯಾಯಾಲಯ ಆರಂಭಗೊಂಡಿದ್ದು, ಅಲ್ಲಿ ನೆರೆದಿರುವ ಜನರು, ಅದರಲ್ಲೂ ಹೆಚ್ಚಾಗಿ ಆದಿವಾಸಿಗಳು ಹೇಳಿಕೆಗಳನ್ನು ದಾಖಲಿಸಲಿದ್ದಾರೆ ಎಂದು ಮಾವೊ ಪರ ನ್ಯಾಯವಾದಿ ನಿಹಾರ್ ರಂಜನ್ ಪಟ್ನಾಯಕ್ ತಿಳಿಸಿದ್ದಾರೆ. ಆದರೆ ಪ್ರಜಾ ನ್ಯಾಯಾಲಯದ ವಿಚಾರಣೆ ಮುಕ್ತಾಯಗೊಳ್ಳುವ ವೇಳೆಯನ್ನಾಗಲಿ ಅಥವಾ ಹಿಕಾಕ ಅವರ ಭವಿಷ್ಯವನ್ನು ಘೋಷಿಸುವ ವೇಳೆಯನ್ನಾಗಲಿ ಅವರು ಸ್ಪಷ್ಟಪಡಿಸಲಿಲ್ಲ. 

 

`ನಿರ್ಧಾರದಲ್ಲಿ ಬದಲಾವಣೆ ಇಲ್ಲ~

ಭುವನೇಶ್ವರ (ಪಿಟಿಐ): ನಕ್ಸಲೀಯರ ವಿರುದ್ಧ ಇರುವ ಪ್ರಕರಣಗಳನ್ನು ವಾಪಸ್ ಪಡೆದು, ಅವರ ಬಿಡುಗಡೆಗೆ ಅವಕಾಶ ಕಲ್ಪಿಸುವ ತನ್ನ ನಿರ್ಧಾರದಿಂದ ಹಿಂದೆ ಸರಿಯದಿರುವ ಇಂಗಿತವನ್ನು ಒಡಿಶಾ ಸರ್ಕಾರ ವ್ಯಕ್ತಪಡಿಸಿದೆ.

`ಸರ್ಕಾರದ ಈ ನಿರ್ಧಾರಕ್ಕೆ ಸುಪ್ರೀಂಕೋರ್ಟ್ ತಡೆ ನೀಡಿಲ್ಲ~ ಎಂದು ನವದೆಹಲಿಯಿಂದ ಹಿಂತಿರುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸ್ಪಷ್ಟಪಡಿಸಿದ್ದಾರೆ.

ಸರ್ಕಾರಕ್ಕೆ `ಸುಪ್ರೀಂ~ ನೋಟಿಸ್

ನವದೆಹಲಿ (ಪಿಟಿಐ): ಜಿನಾ ಹಿಕಾಕ ಅವರ ಬಿಡುಗಡೆಗೆ ಪ್ರತಿಯಾಗಿ ನಕ್ಸಲರನ್ನು ಬಿಡುಗಡೆಗೊಳಿಸುವ ನಿರ್ಧಾರದಿಂದ ಒಡಿಶಾ ಸರ್ಕಾರ ಹಿಂದೆ ಸರಿಯಬೇಕೆಂದು ಕೋರಿ ನಿವೃತ್ತ ಸೇನಾಧಿಕಾರಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಗುರುವಾರ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.ಎರಡು ವಾರಗಳೊಳಗೆ ಉತ್ತರಿಸುವಂತೆ ನ್ಯಾಯಮೂರ್ತಿಗಳಾದ ಟಿ.ಎಸ್.ಠಾಕೂರ್ ಮತ್ತು ಗ್ಯಾನ್ ಸುಧಾ ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠ ತಿಳಿಸಿದೆ.ನೋಟಿಸ್ ಜಾರಿಗೊಳಿಸಲು ಪೀಠ ಆರಂಭದಲ್ಲಿ ಅಸಮ್ಮತಿ ಸೂಚಿಸಿದರೂ, ಅರ್ಜಿದಾರ ಮೇಜರ್ ಜನರಲ್ ಗಗನ್‌ದೀಪ್ ಬಕ್ಷಿ ಪರ ವಕೀಲರ  ಒತ್ತಾಯದ ಮೇರೆಗೆ ಪಟ್ಟು ಸಡಿಲಿಸಿದ ಪೀಠ, ಬಳಿಕ ಆದೇಶ ನೀಡಲು ಸಮ್ಮತಿಸಿತು.ನಕ್ಸಲೀಯರ ಪರವಾಗಿ ಅವರ ಬೆಂಬಲಿಗರು ಜಾಮೀನು ಅರ್ಜಿ ಸಲ್ಲಿಸಿದರೂ ಸರ್ಕಾರ ಚಕಾರ ಎತ್ತಲಿಲ್ಲ ಎಂದು ಪ್ರಶ್ನೆಗಳಿಗೆ ಉತ್ತರಿಸುತ್ತಾ ಅರ್ಜಿದಾರದ ಪರ ವಕೀಲರು ತಿಳಿಸಿದರು.ಹಿಕಾಕ ಅವರ ಬಿಡುಗಡೆಗಾಗಿ ರಾಜ್ಯ ಸರ್ಕಾರ ಬುಧವಾರ ಐವರು ನಕ್ಸಲರನ್ನು ಬಿಡುಗಡೆ ಮಾಡಿದ್ದು, ಇಡೀ ಅಧ್ಯಾಯವೇ ಸರ್ಕಾರ ಮತ್ತು ನಕ್ಸಲೀಯರ ನಡುವಿನ ರಹಸ್ಯ ಒಪ್ಪಂದವಾಗಿದೆ ಎಂದು ಆರೋಪಿಸಿದರು.ಆದರೂ ಈ ವಿಷಯದಲ್ಲಿ ನ್ಯಾಯಾಲಯದ ಮಧ್ಯಪ್ರವೇಶಕ್ಕೆ ಅಷ್ಟೇನೂ ಅವಕಾಶವಿಲ್ಲ ಎಂದಾಗ, ಕನಿಷ್ಠ ನೋಟಿಸ್ ಅನ್ನಾದರೂ ಜಾರಿಗೊಳಿಸಿ ಎಂದು ವಕೀಲರು ವಿನಂತಿಸಿಕೊಂಡ ಹಿನ್ನೆಲೆಯಲ್ಲಿ ಪೀಠ ಸಮ್ಮತಿ ಸೂಚಿಸಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.