ಬುಧವಾರ, ಮೇ 18, 2022
27 °C

ಪ್ರತಿಭಟನಾಕಾರರ ಬಂಧನ; ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಲೆ ಏರಿಕೆಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಬುಧವಾರ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸುತ್ತಿದ್ದ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ ಸದಸ್ಯರನ್ನು ಪೊಲೀಸರು ಬಂಧಿಸಿ, ಬಳಿಕ ಬಿಡುಗಡೆ ಮಾಡಿದರು.ಆಹಾರ ಪದಾರ್ಥಗಳ ಮುಂಗಡ ವ್ಯಾಪಾರವನ್ನು ನಿಷೇಧಿಸಿ, ಕಾಳಸಂತೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಜನಪರ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಬೇಕು. ಅವೈಜ್ಞಾನಿಕ ಎಪಿಎಲ್, ಬಿಪಿಎಲ್ ಮಾನದಂಡಗಳನ್ನು ಕೈಬಿಟ್ಟು ಪಡಿತರ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಬೇಕು ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.ಗ್ರಾಮಾಂತರ ಪ್ರದೇಶಗಳಲ್ಲಿನ ಅಸಂಘಟಿತ ಕಾರ್ಮಿಕರಿಗೆ 6,000 ರೂಪಾಯಿ ಕನಿಷ್ಠ ಕೂಲಿಯನ್ನು ನಿಗದಿಪಡಿಸಬೇಕು. ಹಾಗೆಯೇ ನಗರ ಪ್ರದೇಶಗಳ ಕಾರ್ಮಿಕರಿಗೆ 10,000 ರೂಪಾಯಿ ವೇತನವನ್ನು ನೀಡಬೇಕು. ಮುಕ್ತ ರಫ್ತು ನೀತಿಗಳನ್ನು ರದ್ದು ಪಡಿಸಿ, ಕೃಷಿ ಮತ್ತು ಕೈಗಾರಿಕಾ ವಲಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ವಿದ್ಯುತ್ ಮತ್ತು ಸಾರಿಗೆ ದರಗಳನ್ನು ಕಡಿಮೆ ಮಾಡಬೇಕು. ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿಯನ್ನು ಕಲ್ಪಿಸಿಕೊಡಬೇಕು ಎಂದು ಅವರು ಒತ್ತಾಯಿಸಿದರು.ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುವ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳಾ ಮೀಸಲಾತಿ ಮಸೂದೆಯನ್ನು ಜಾರಿಗೆ ತರಲು ರಾಜಕೀಯ ಇಚ್ಛಾಶಕ್ತಿ ತೋರಬೇಕು. ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.ಸಂಘಟನೆು ಅಧ್ಯಕ್ಷೆ ಗೌರಮ್ಮ, ಜಿಲ್ಲಾಧ್ಯಕ್ಷೆ ಸುಬ್ಬಲಕ್ಷ್ಮಿ, ಕಾರ್ಯದರ್ಶಿ ಯಶೋಧಾ, ಉಪಾಧ್ಯಕ್ಷೆ ವಿಮಲಾ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.