ಗುರುವಾರ , ಮೇ 26, 2022
28 °C

ಪ್ರತ್ಯೇಕ ಅಪಘಾತ: ಐದು ಮಂದಿ ಸಾವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಬಳ್ಳಾರಿ ರಸ್ತೆ, ಬನ್ನೇರುಘಟ್ಟ ರಸ್ತೆ ಹಾಗೂ ಐಟಿಪಿಎಲ್ ರಸ್ತೆಯಲ್ಲಿ ಶನಿವಾರ ಸಂಭವಿಸಿದ ಪ್ರತ್ಯೇಕ ಅಪಘಾತಗಳಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ.ಬಳ್ಳಾರಿ ರಸ್ತೆಯ ಕನ್ನಮಂಗಲ ಗೇಟ್ ಬಳಿ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಟಾಟಾ ಸುಮೊ ಮತ್ತು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಮೂರು ಮಂದಿ ಸಾವನ್ನಪ್ಪಿದ್ದು, ಏಳು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.ಹುಣಸಮಾರನಹಳ್ಳಿ ಸಮೀಪದ ಭಾರತಿನಗರ ನಿವಾಸಿಗಳಾದ ಫಾರೂಕ್ ಅಬ್ದುಲ್ಲಾ (20), ಅವರ ಸಂಬಂಧಿಕರಾದ ಕಾಸಯ್ಯ (54) ಹಾಗೂ ಟಾಟಾ ಸುಮೊ ಚಾಲಕ ದೇವನಹಳ್ಳಿ ನಿವಾಸಿ ಉಮೇಶ್ (26) ಮೃತಪಟ್ಟವರು.ಫಾರೂಕ್ ಅವರ ತಾಯಿ ಕಾಜೋಲ್ (40), ಸಂಬಂಧಿಕರಾದ ಹಜರತ್ (20), ಸಾದಿಕ್ (21), ಮೌಲಾನಾ ಬಾಷಾ (35), ಅವರ ಪತ್ನಿ ದೊರಸಾನಮ್ಮ (28), ಮಕ್ಕಳಾದ ಮುಬಿನಾ ತಾಜ್ (4) ಹಾಗೂ ಮನೀಷಾ (1) ಎಂಬುವರು ಗಾಯಗೊಂಡಿದ್ದಾರೆ.ಕಾಸಯ್ಯ ಅವರು ಅಂಚೆ ಇಲಾಖೆಯಲ್ಲಿ ಉದ್ಯೋಗಿಯಾಗಿದ್ದರು. ಫಾರೂಕ್ ಖಾಸಗಿ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದರು. ಬಾಷಾ ಮತ್ತು ಹಜರತ್ ಅವರು ಗಾರೆ ಕೆಲಸ ಮಾಡುತ್ತಾರೆ. ಫಾರೂಕ್ ಅವರ ತಂದೆ ದೊಡ್ಡ ಮೌಲಾನಾ ಬಾಷಾ ಅವರು ಸೌದಿ ಅರೇಬಿಯಾದಲ್ಲಿದ್ದು, ಅವರಿಗೆ ಮಾಹಿತಿ ನೀಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಪ್ರತಿ ವರ್ಷವೂ ಕಾಜೋಲ್ ಮತ್ತು ಸಂಬಂಧಿಕರು ಆಂಧ್ರಪ್ರದೇಶದ ವಾರಂಗಲ್ ಜಿಲ್ಲೆಯ ಸೀತಾರಾಮಪುರದ ದರ್ಗಾಕ್ಕೆ ಹೋಗುತ್ತಿದ್ದರು. ಅಂತೆಯೇ ಅವರು ಸಂಬಂಧಿಕರೊಂದಿಗೆ ಅ. 13ರಂದು ಆ ದರ್ಗಾಕ್ಕೆ ಹೋಗಿದ್ದರು. ಅಲ್ಲಿಂದ ಅವರು ಬೆಂಗಳೂರಿಗೆ ವಾಪಸ್ ಬರುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.ಚಾಲಕ ಉಮೇಶ್ ಅವರು ಮುಂದೆ ಚಲಿಸುತ್ತಿದ್ದ ಲಾರಿಗೆ ವಾಹನ ಗುದ್ದಿಸಿದ್ದಾರೆ. ಟಾಟಾ ಸುಮೊದ ಮುಂದಿನ ಸೀಟಿನಲ್ಲಿ ಕುಳಿತಿದ್ದ ಫಾರೂಕ್ ಮತ್ತು ಕಾಸಯ್ಯ ಅವರು ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಗಾಯಾಳು ಉಮೇಶ್ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮೃತಪಟ್ಟರು ಎಂದು ಪೊಲೀಸರು ಹೇಳಿದ್ದಾರೆ.ಲಾರಿ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ದೇವನಹಳ್ಳಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆಡುಗೋಡಿ: ಬೈಕ್ ಸವಾರನೊಬ್ಬ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಸಾವನಪ್ಪಿರುವ ಘಟನೆ ಬನ್ನೇರುಘಟ್ಟ ರಸ್ತೆಯ ಡೇರಿ ವೃತ್ತದ ಬಳಿ ನಡೆದಿದೆ.ಹಳೆ ವಿಮಾನ ನಿಲ್ದಾಣ ರಸ್ತೆಯ ಎನ್‌ಎಎಲ್ ವಸತಿ ಸಮುಚ್ಚಯ ನಿವಾಸಿ ಎಂ.ಸಿ.ದೇವಯ್ಯ ಎಂಬುವರ ಪುತ್ರ ಎಂ.ಡಿ.ಚಂಗಪ್ಪ (31) ಮೃತಪಟ್ಟವರು. ಐದು ತಿಂಗಳ ಹಿಂದೆಯಷ್ಟೇ ಅವರ ವಿವಾಹವಾಗಿತ್ತು.ಖಾಸಗಿ ಕಂಪೆನಿಯಲ್ಲಿ ಉದ್ಯೋಗಿಯಾಗಿದ್ದ ಚಂಗಪ್ಪ ಅವರು ಕೆಲಸ ಮುಗಿಸಿಕೊಂಡು ಬೆಳಗಿನ ಜಾವ ನಾಲ್ಕು ಗಂಟೆ ಸುಮಾರಿಗೆ ಮನೆಗೆ ಬರುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಅವರ ತಲೆ ಮತ್ತು ಹೊಟ್ಟೆಗೆ ತೀವ್ರ ಪೆಟ್ಟಾಗಿ ಅಸ್ವಸ್ಥಗೊಂಡಿದ್ದರು. ಸ್ಥಳೀಯರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಬೆಳಿಗ್ಗೆ ಆರು ಗಂಟೆ ಸುಮಾರಿಗೆ ಅವರು ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.ಅವರು ಹೆಲ್ಮೆಟ್ ಧರಿಸದ ಕಾರಣ ತಲೆಗೆ ತೀವ್ರ ಪೆಟ್ಟಾಗಿ ಹೆಚ್ಚು ರಕ್ತ ಸ್ರಾವವಾಗಿತ್ತು. ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಸಂಬಂಧಿಕರಿಗೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆಡುಗೋಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವೈಟ್‌ಫೀಲ್ಡ್: ಐಟಿಪಿಎಲ್ ರಸ್ತೆಯ ಬಿಗ್ ಬಜಾರ್ ಜಂಕ್ಷನ್ ಬಳಿ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನೊಬ್ಬ ಸಾವನ್ನಪ್ಪಿದ್ದಾನೆ.ಹೂಡಿ ನಿವಾಸಿ ಪ್ರತಾಪ್ (27) ಮೃತಪಟ್ಟವರು. ಮೂಲತಃ ಮಂಡ್ಯ ಜಿಲ್ಲೆಯ ಪ್ರತಾಪ್ ಅವರು ಕೊರಿಯರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅವರು ಬೆಳಿಗ್ಗೆ ಒಂಬತ್ತು ಗಂಟೆ ಸುಮಾರಿಗೆ ಬೈಕ್‌ನಲ್ಲಿ ಕೆಲಸಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.ಲಾರಿ ಚಾಲಕ ಪ್ರತಾಪ್ ಅವರ ಬೈಕ್ ಅನ್ನು ಹಿಂದಿಕ್ಕುವ ಯತ್ನದಲ್ಲಿ ಅವರಿಗೆ ವಾಹನ ಗುದ್ದಿಸಿದ್ದಾನೆ. ವಾಹನದಿಂದ ಕೆಳಗೆ ಬಿದ್ದ ಅವರ ತಲೆ ಮೇಲೆ ಅದೇ ಲಾರಿಯ ಹಿಂದಿನ ಚಕ್ರ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ವೈಟ್‌ಫೀಲ್ಡ್ ಸಂಚಾರ ಠಾಣೆ ಪೊಲೀಸರು ಲಾರಿ ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರಕರಣ ದಾಖಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.