ಶನಿವಾರ, ಮೇ 15, 2021
25 °C

ಪ್ರತ್ಯೇಕ ಕಾಲಾವಧಿಯ ಕೂಗು!

ಪ್ರಮೋದ್ ಜಿ.ಕೆ. Updated:

ಅಕ್ಷರ ಗಾತ್ರ : | |

ಐಪಿಎಲ್‌ಗೆ ಪ್ರತ್ಯೇಕ ಕಾಲಾವಧಿ ಬೇಕಾ? ಇದಕ್ಕೆ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ `ಹೌದು~ ಎನ್ನುವ ಉತ್ತರ ಕೊಟ್ಟಿದ್ದಾರೆ.ಫ್ರಾಂಚೈಸ್ಸಿಗಳ ಹಿತಾಸಕ್ತಿಗೆ ಆಟಗಾರರು ಬಲಿಯಾಗಬೇಕೆ? ದುಡ್ಡಿಗಾಗಿ ಆಡುವುದು ಮುಖ್ಯವೇ? ದೊಡ್ಡ ಇತಿಹಾಸವಿರುವ   ಟೆಸ್ಟ್, ಏಕದಿನ ಕ್ರಿಕೆಟ್‌ಗಿಂತ ಐಪಿಎಲ್‌ಗೆ ಪ್ರತ್ಯೇಕ ಕಾಲಾವಧಿ ಮೀಸಲಿಡುವುದು ಎಷ್ಟರ ಮಟ್ಟಿಗೆ ಸರಿ? ಅಂತರರಾಷ್ಟ್ರೀಯ ಆಟಕ್ಕಿಂತ ಈ ಚುಟುಕು ಆಟಕ್ಕೆ ಹೆಚ್ಚು ಪ್ರಾಮುಖ್ಯತೆಯಾ?ರಿಕಿ ಹೇಳಿಕೆಯಿಂದ ಈ ಪ್ರಶ್ನೆಗಳು ಹುಟ್ಟಿಕೊಂಡಿವೆ. ಕ್ರಿಕೆಟ್ ಜಗತ್ತಿನ ಒಂದಷ್ಟು ಮಂದಿಗೆ ಚಿಂತಿಸುವಂತೆ ಮಾಡಿವೆ. ಇದಕ್ಕವರು ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿಯ ನಿದರ್ಶನ  ನೀಡಿದ್ದಾರೆ. ಕಿವೀಸ್ ಮಂಡಳಿ ಐಪಿಎಲ್ ನಡೆಯುವ ವೇಳೆ ಯಾವುದೇ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವುದಿಲ್ಲ. ಎಲ್ಲಾ ಕ್ರಿಕೆಟ್ ಮಂಡಳಿಗಳು ಚರ್ಚೆ ಮಾಡಿ `ಪ್ರತ್ಯೇಕ ಕಾಲಾವಧಿ~  ನಿರ್ಧಾರ ಮಾಡಬೇಕು ಎನ್ನುವುದು ಆಸ್ಟ್ರೇಲಿಯಾದ ಆಟಗಾರನ ಮನದ ಇಂಗಿತ.ಆಗುವ ಲಾಭವೇನು: ಐಪಿಎಲ್‌ಗೆ `ಪ್ರತ್ಯೇಕ ಕಾಲಾವಧಿ~ಯ ಕೂಗು ಜಾರಿಗೆ ಬಂದರೆ ಆಗುವ ಲಾಭವೇನು. ಇದು ಸಹಜವಾಗಿ ಮೂಡುವ ಪ್ರಶ್ನೆ. ಇದಕ್ಕೆ ಈ ಸಲದ ಪುಣೆ ವಾರಿಯರ್ಸ್ ತಂಡವನ್ನು ಉದಾಹರಿಸಬಹುದು.ಅನಾರೋಗ್ಯದಿಂದ ಬಳಲಿದ ಯುವರಾಜ್ ಸಿಂಗ್ ಬದಲು ಆಸ್ಟ್ರೇಲಿಯಾ ತಂಡದ ನಾಯಕ ಮೈಕಲ್  ಕ್ಲಾರ್ಕ್ ಪುಣೆ ತಂಡದಲ್ಲಿ ಸ್ಥಾನ ಪಡೆದರು. ಆದರೆ, ಕ್ಲಾರ್ಕ್ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡುತ್ತಿದ್ದಾರೆ.ಆದ್ದರಿಂದ ಅವರು ಅರ್ಧದಷ್ಟು ಐಪಿಎಲ್ ಮುಗಿದ ಮೇಲೆ ತಂಡಕ್ಕೆ ಲಭ್ಯ. ಇದೇ ಸ್ಥಿತಿ ಶ್ರೀಲಂಕಾದ ಆ್ಯಂಜೆಲೋ ಮ್ಯಾಥ್ಯೂಸ್ ಅವರದ್ದು. ಪುಣೆ ತಂಡದ ಈ ಆಟಗಾರನೂ ಇಂಗ್ಲೆಂಡ್ ವಿರುದ್ಧದ     ಟೆಸ್ಟ್‌ನಲ್ಲಿ ಆಡುತ್ತಿದ್ದಾರೆ.ಪ್ರತ್ಯೇಕ ಕಾಲಾವಧಿ ಮೀಸಲಿಟ್ಟರೆ, ಈ ಸಂಕಷ್ಟ ತಪ್ಪಿಸಬಹುದು. ಅಷ್ಟೇ ಅಲ್ಲ ಕೋಟಿ, ಕೋಟಿ ಬಹುಮಾನ ತಂದುಕೊಡುವ ಚುಟುಕು ಆಟದ `ಕುಬೇರ~ನಾಗುವ ಅವಕಾಶ ಗಿಟ್ಟಿಸಿಕೊಳ್ಳಬಹುದು.ಪ್ರತ್ಯೇಕ ಕಾಲಾವಧಿ ನಿಗದಿಯಾದರೆ,  ಶಾರೂಖ್, ನೀತಾ ಅಂಬಾನಿ, ವಿಜಯ್ ಮಲ್ಯ ಅವರಂಥಹ ಕೋಟಿ ಕೋಟಿ ಒಡೆಯರಿಗೆ ಇನ್ನಷ್ಟು `ಹೊಳಪು~ ಬರುತ್ತದೆ. ಜೊತೆಗೆ ಅವರ ಖಜಾನೆಯೂ ಭರ್ತಿ! ಇದರಿಂದ ಜಗತ್ತಿನ ಶ್ರೀಮಂತ ಕ್ರಿಕೆಟ್ ಮಂಡಳಿ ಬಿಸಿಸಿಐ ಮಡಿಲಿಗೆ ಹರಿದು ಬರುವ ಹಣಕ್ಕಂತೂ ಲೆಕ್ಕವೇ ಇಲ್ಲ.`ರಿಕಿ ಪಾಂಟಿಂಗ್ ಅವರ ಹೇಳಿಕೆಯನ್ನು ನಾನು ಬೆಂಬಲಿಸುತ್ತೇನೆ. ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಪಾಲ್ಗೊಳ್ಳಬೇಕು. ಎಲ್ಲಾ ಕ್ರಿಕೆಟ್ ಸಂಸ್ಥೆಗಳು ಈ ಕುರಿತು ಚರ್ಚೆ ನಡೆಸಬೇಕು~ ಎನ್ನುತ್ತಾರೆ ಮಾಜಿ ಅಂತರರಾಷ್ಟ್ರೀಯ  ಕ್ರಿಕೆಟಿಗ ವೆಂಕಟೇಶ್ ಪ್ರಸಾದ್.ತೊಂದರೆಯೇನು: ರಿಕಿ ಹೇಳಿಕೆಯನ್ನು ಗಮನಿಸಿದರೆ, ಊಟಕ್ಕೆ ಉಪ್ಪಿನಕಾಯಿ ಅಗತ್ಯವೋ? ಉಪ್ಪಿನಕಾಯಿಯೇ ಊಟವೋ? ಎನ್ನುವ ಪ್ರಶ್ನೆ ಮೂಡುತ್ತದೆ.

ಐಪಿಎಲ್‌ಗಾಗಿಯೇ ದೇಶದ ತಂಡವನ್ನು ತೊರೆದವರು ಇದ್ದಾರೆ. ಶ್ರೀಲಂಕಾದ ವೇಗಿ ಲಸಿತ್ ಮಾಲಿಂಗ ದೇಶಕ್ಕಾಗಿ ಆಡು ಎಂದರೆ, `ಅಬ್ಬಾ ಗಾಯ...~ ಎನ್ನುತ್ತಾರೆ.ಆದರೆ, ಐಪಿಎಲ್ ಎಂದಾಕ್ಷಣ ಎಲ್ಲೋ ಹುದುಗಿ ಹೋಗಿರುವ ಉತ್ಸಾಹದ ಬಲ ಹಾಗೂ ತೋಳ್ಬಲದಿಂದ ಎದುರಾಳಿ ಬ್ಯಾಟ್ಸ್‌ಮನ್‌ನ ಕಣ್ಣು ಕುಕ್ಕುವಂತೆ ಬೌಲಿಂಗ್ ಮಾಡುತ್ತಾರೆ.

ವೆಸ್ಟ್ ಇಂಡೀಸ್‌ನ ಆಜಾನುಬಾಹು ಆಟಗಾರ ಕ್ರಿಸ್ ಗೇಲ್ ಚುಟುಕು ಕ್ರಿಕೆಟ್‌ನ ಬ್ಯಾಟಿಂಗ್ `ದೊರೆ~. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿರುವ ಈ ಆಟಗಾರನ ಬ್ಯಾಟಿಂಗ್ `ರೌದ್ರವಾತಾರ~ ನೋಡಲು ಕ್ರಿಕೆಟ್ ಅಭಿಮಾನಿಗಳು ಮುಗಿ ಬೀಳುತ್ತಾರೆ.ಆದರೆ, ತವರಿನಲ್ಲಿ ಆತನ ಪರಿಸ್ಥಿತಿ ಏನಾಗಿದೆ ನೋಡಿ. ವಿಂಡೀಸ್ ತಂಡದಲ್ಲಿಯೇ ಸಾಕಷ್ಟು ವರ್ಷ ಆಡಿ, ಅಲ್ಲಿಂದಲೇ  ಬೆಳೆದು ಕೀರ್ತಿ, ಹಣ, ಅಭಿಮಾನಿಗಳ ಬಳಗವನ್ನು ಪಡೆದ ಗೇಲ್ ಈಗ ತಮ್ಮ ದೇಶದ ತಂಡದಲ್ಲಿ ಆಡಲು ಅವಕಾಶವಿಲ್ಲದೇ ಪರಿತಪಿಸುತ್ತಿದ್ದಾರೆ.ಪ್ರಮುಖ ಆಟಗಾರರಾದ ವಿರಾಟ್ ಕೊಹ್ಲಿ, ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಮಹೇಂದ್ರ ಸಿಂಗ್ ದೋನಿ ಅವರು ಐಪಿಎಲ್‌ನಲ್ಲಿ ಆಡುತ್ತಾರೆ. ಇದರಲ್ಲಿ ಯಾರಾದರೂ ಗಾಯಗೊಂಡರೆ, ಮುಂಬರುವಸರಣಿಯಲ್ಲಿ ಮತ್ಯಾರನ್ನು ನೆಚ್ಚಿಕೊಳ್ಳುವುದು? ಐಪಿಎಲ್‌ಗೆ ನೀಡುವ ಕಾಳಜಿ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಏಕಿಲ್ಲ?ಐಪಿಎಲ್ ಊಟಕ್ಕೆ ಬೇಕಾದ ಉಪ್ಪಿನಕಾಯಿ ಮಾತ್ರ. ಅದುವೇ ಊಟವಲ್ಲ. ದೇಶವನ್ನು ಪ್ರತಿನಿಧಿಸುವುದಕ್ಕೆ ಮೊದಲ ಆದ್ಯತೆ ನೀಡಬೇಕು. ಚುಟುಕು ಆಟಕ್ಕೆ ದೇಶಿಯ ಹಾಗೂ ಕೌಂಟಿ ಕ್ರಿಕೆಟ್‌ನಲ್ಲಿ ಆಡುವ ಆಟಗಾರರಿಗೆ ಆದ್ಯತೆ ನೀಡಬೇಕು.ಇದರಲ್ಲಿಬಿಸಿಸಿಐನ ಸ್ವಾರ್ಥವೂ ಇದೆ. ಕೆಲ ತಿಂಗಳ ಹಿಂದೆ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ ನಡೆದಾಗ ಭಾರತದ ಯಾವ ಆಟಗಾರರೂ ಪಾಲ್ಗೊಂಡಿರಲಿಲ್ಲ. ಆದರೆ, ಭಾರತದಲ್ಲಿ ನಡೆಯುವ ಐಪಿಎಲ್‌ಗೆ `ಪ್ರತ್ಯೇಕ ಕಾಲಾವಧಿ~ಯ ಕೂಗು ಎಷ್ಟು ಸೂಕ್ತ?

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.