ಭಾನುವಾರ, ಜನವರಿ 19, 2020
27 °C

ಪ್ರತ್ಯೇಕ ಪ್ರಕರಣ: ಶಿಕ್ಷಕಿ ಸೇರಿ ಮೂವರ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದ ಮಹಾಲಕ್ಷ್ಮಿಲೇಔಟ್, ಪೀಣ್ಯ ಮತ್ತು ಹನುಮಂತನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ಶಾಲಾ ಶಿಕ್ಷಕಿ ಸೇರಿದಂತೆ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿಕ್ಷಕಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾಲಕ್ಷ್ಮಿಲೇಔಟ್ ಸಮೀಪದ ಶಂಕರನಗರದಲ್ಲಿ ನಡೆದಿದೆ.ರಾಜಾಜಿನಗರದ ಖಾಸಗಿ ಪ್ರೌಢ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದ ಶಾಂತಾ (42) ಆತ್ಮಹತ್ಯೆ ಮಾಡಿಕೊಂಡವರು. ತಮಿಳುನಾಡು ಮೂಲದ ಅವರು ಪತಿಯಿಂದ ವಿಚ್ಛೇದನ ಪಡೆದು ಶಂಕರನಗರದ ಬಾಡಿಗೆ ಮನೆಯಲ್ಲಿ ಒಬ್ಬರೇ ವಾಸವಾಗಿದ್ದರು. ಅವರ ಇಬ್ಬರು ಮಕ್ಕಳು ತಮಿಳುನಾಡಿನಲ್ಲಿರುವ ಸಂಬಂಧಿಕರ ಮನೆಯಲ್ಲಿ ನೆಲೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಸೋಮವಾರ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ ಶಾಂತಾ ನೇಣು ಹಾಕಿಕೊಂಡಿದ್ದಾರೆ. ಅವರು ಮನೆಯಿಂದ ಹೊರಗೆ ಬಾರದ ಕಾರಣ ಅನುಮಾನಗೊಂಡ ನೆರೆಹೊರೆಯವರು ಠಾಣೆಗೆ ಮಂಗಳವಾರ ಮಾಹಿತಿ ನೀಡಿದರು. ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಹೋಗಿ ಪರಿಶೀಲಿಸಿದಾಗ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಯಿತು ಎಂದು ಪೊಲೀಸರು ಹೇಳಿದ್ದಾರೆ.`ನನ್ನ ಸಾವಿಗೆ ನಾನೇ ಕಾರಣ~ ಎಂದು ಅವರು ಪತ್ರ ಬರೆದಿಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಮಹಾಲಕ್ಷ್ಮಿಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೀಣ್ಯ: ನವೀನ್ (20) ಎಂಬ ಯುವಕ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೀಣ್ಯ ಬಳಿಯ ಟಿ.ದಾಸರಹಳ್ಳಿಯಲ್ಲಿ ಮಂಗಳವಾರ ನಡೆದಿದೆ.ಮೂಲತಃ ತಿಪಟೂರಿನ ನವೀನ್ ಎಂ.ಜಿ.ರಸ್ತೆಯ ಬಾರ್ ಒಂದರಲ್ಲಿ ಕೆಲಸ ಮಾಡುತ್ತಿದ್ದರು. ಅವರು ತಾಯಿ ಮತ್ತು ಸಹೋದರನ ಜತೆ ನೆಲಗದರನಹಳ್ಳಿಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಅವರ ಚಿಕ್ಕಮ್ಮ ಸುಧಾ ಎಂಬುವರು ಟಿ.ದಾಸರಹಳ್ಳಿಯಲ್ಲಿ ನೆಲೆಸಿದ್ದಾರೆ. ಸುಧಾ ಅವರ ಮನೆಗೆ ಬಂದಿದ್ದ ನವೀನ್ ಅಲ್ಲಿಯೇ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಪೀಣ್ಯ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಹನುಮಂತನಗರ: ವಿದ್ಯಾಪೀಠ ವೃತ್ತದ ಬಳಿಯ ವಿನಾಯಕನಗರ ನಿವಾಸಿ ಮಹದೇವಪ್ಪ ಎಂಬುವರ ಪುತ್ರ ಮಹೇಶ್ (22) ಅವರು ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಮಹೇಶ್ ಶಿವಾಜಿನಗರದ ಹೂವಿನ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಕುಟುಂಬ ಸದಸ್ಯರೆಲ್ಲ ಮಂಗಳವಾರ ನಸುಕಿನಲ್ಲಿ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಅವರು ಮನೆಯಲ್ಲೇ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಅಸ್ವಸ್ಥರಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಮಧ್ಯಾಹ್ನದ ವೇಳೆಗೆ ಅವರು ಮೃತಪಟ್ಟರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹನುಮಂತನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಚಿನ್ನಾಭರಣ ಕಳವು

ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬ್ಯಾಗ್‌ನಲ್ಲಿದ್ದ ಸುಮಾರು 3.50 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ಶಿವಾಜಿನಗರದ ಸಮೀಪ ಮಂಗಳವಾರ ನಡೆದಿದೆ.ಕಾವಲ್‌ಬೈರಸಂದ್ರ ನಿವಾಸಿ ಮುಕ್ತಾ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಆಭರಣಗಳಿಗೆ ಪಾಲಿಷ್ ಮಾಡಿಸುವ ಉದ್ದೇಶಕ್ಕಾಗಿ ಅವರು ಕಮರ್ಷಿಯಲ್‌ಸ್ಟ್ರೀಟ್‌ನ ಚಿನ್ನಾಭರಣ ಮಳಿಗೆಗೆ ಬರುತ್ತಿದ್ದ ಸಂದರ್ಭದಲ್ಲಿ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಮುಕ್ತಾ ಅವರು ಸುಮಾರು 150 ಗ್ರಾಂ ಆಭರಣಗಳನ್ನು ವ್ಯಾನಿಟಿ ಬ್ಯಾಗ್‌ನಲ್ಲಿ ಇಟ್ಟುಕೊಂಡು ಬೆಳಿಗ್ಗೆ 10 ಗಂಟೆ ಸುಮಾರಿಗೆ ಬಿಎಂಟಿಸಿ ಬಸ್‌ನಲ್ಲಿ ಕಾವಲ್‌ಬೈರಸಂದ್ರದಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುತ್ತಿದ್ದರು. ಮಾರ್ಗ ಮಧ್ಯೆ ಅವರು ಬಸ್‌ನಲ್ಲಿ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಕಿಡಿಗೇಡಿಗಳು ಅವರ ಬ್ಯಾಗ್ ತೆರೆದು ಆಭರಣಗಳನ್ನು ಕಳವು ಮಾಡಿದ್ದಾರೆ. ಅವರು ಶಿವಾಜಿನಗರ ಬಸ್ ನಿಲ್ದಾಣದಲ್ಲಿ ಇಳಿದು ಬ್ಯಾಗ್ ಪರಿಶೀಲಿಸಿದಾಗ ಆಭರಣಗಳು ಕಳವಾಗಿರುವುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಕಿಡಿಗೇಡಿಗಳು ಚಿನ್ನದ ಸರ, ಓಲೆ ಹಾಗೂ ಬಳೆಗಳನ್ನು ಕಳವು ಮಾಡಿದ್ದಾರೆ. ಕಳವಾಗಿರುವ ಆಭರಣಗಳ ಮೌಲ್ಯ ಸುಮಾರು 3.50 ಲಕ್ಷ ರೂಪಾಯಿ ಎಂದು ಮುಕ್ತಾ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಕಮರ್ಷಿಯಲ್‌ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತಿಕ್ರಿಯಿಸಿ (+)