ಭಾನುವಾರ, ಜೂನ್ 13, 2021
20 °C

ಪ್ರತ್ಯೇಕ ಪ್ರಕರಣ: 4 ಮಂದಿ ಆತ್ಮಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹೆಬ್ಬಾಳ, ಜ್ಞಾನಭಾರತಿ ಹಾಗೂ ಮಡಿವಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ನಾಲ್ಕು ಮಂದಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಕೌಟುಂಬಿಕ ಕಲಹದಿಂದ ಮನನೊಂದ ಮಹಿಳೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿಯವರಾದ ರೂಪಾ (28) ಆತ್ಮಹತ್ಯೆ ಮಾಡಿಕೊಂಡವರು. ಮೂರು ವರ್ಷದ ಹಿಂದೆ ಮಡಿವಾಳ ಸಂಚಾರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ ಈರಣ್ಣ ಅವರನ್ನು ವಿವಾಹವಾಗಿದ್ದ ರೂಪಾ, ಪಿಐಎಲ್ ಲೇಔಟ್‌ನ ಚೋಳನಾಯಕನಹಳ್ಳಿಯಲ್ಲಿ ವಾಸವಾಗಿದ್ದರು. ಬೆಳಿಗ್ಗೆ ಪತಿಯೊಂದಿಗೆ ಜಗಳವಾಡಿದ ಅವರು, ಪತಿ ಕೆಲಸಕ್ಕೆ ಹೋದ ನಂತರ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮತ್ತೊಂದು ಪ್ರಕರಣ: ಸಾಲಬಾಧೆಯಿಂದ ಮನನೊಂದು ವ್ಯಕ್ತಿಯೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.

ನಾಗರಬಾವಿ ಸಮೀಪದ ಮಾನಸ ನಗರ ನಿವಾಸಿ ಮಹೇಶ್(38) ಆತ್ಮಹತ್ಯೆ ಮಾಡಿಕೊಂಡವರು.ಹೋಟೆಲ್ ನಡೆಸುತ್ತಿದ್ದ ಅವರು ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಬೆಳಿಗ್ಗೆ ವಾಯುವಿಹಾರಕ್ಕೆ ಹೋಗುವುದಾಗಿ ಹೆಂಡತಿ ಬಳಿ ಹೇಳಿ ಹೋದವರು, ನಾಗರಬಾವಿ ವೃತ್ತ ಸಮೀಪದ ಪ್ರಾಥಮಿಕ ಶಾಲಾ ಆವರಣದಲ್ಲಿನ ಹೊಂಗೆ ಮರಕ್ಕೆ ಹಗ್ಗದಿಂದ ನೇಣು ಬಿಗಿದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು.ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಕ್ಕೆ ಒಪ್ಪಿಸಲಾಯಿತು ಎಂದು ಪೊಲೀಸರು ಮಾಹಿತಿ ನೀಡಿದರು. ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮತ್ತೊಂದು ಪ್ರಕರಣ: ಕೂಲಿ ಕೆಲಸ ಮಾಡುತ್ತಿದ್ದ ಮಹಿಳೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿವಾಳ ಠಾಣೆ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.ಪಶ್ಚಿಮ ಬಂಗಾಳ ಮೂಲದ ಮಮತಾ (20) ಆತ್ಮಹತ್ಯೆ ಮಾಡಿಕೊಂಡವರು. 3 ವರ್ಷದ ಹಿಂದೆ ಪ್ರದೀಪ್ ಅವರೊಂದಿಗೆ ಮದುವೆಯಾಗಿದ್ದರು. ದೇವರ ಚಿಕ್ಕನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ಕಟ್ಟಡದಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಅವರು ಅಲ್ಲಿಯೇ ವಾಸಿಸುತ್ತಿದ್ದರು. ಬೆಳಿಗ್ಗೆ 11 ಗಂಟೆಗೆ ಕಟ್ಟಡದಲ್ಲಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದರು. ಮಡಿವಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೈಕಲ್‌ಗಾಗಿ ಆತ್ಮಹತ್ಯೆ: ತಾಯಿ ಸೈಕಲ್ ಕೊಡಿಸಲಿಲ್ಲ ಎಂದು ವಿದ್ಯಾರ್ಥಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಡಿವಾಳ ಸಮೀಪದ ಹೊಂಗಸಂದ್ರದಲ್ಲಿ ಗುರುವಾರ ರಾತ್ರಿ ನಡೆದಿದೆ. ಬಿಟಿಎಲ್ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದ ಸಂದೀಪ್(16) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸೈಕಲ್ ಕೊಡಿಸುವಂತೆ ತಾಯಿ ಶಕುಂತಲಾ ಅವರ ಬಳಿ ಪದೇಪದೇ ಕೇಳುತ್ತಿದ್ದ. ಸೈಕಲ್ ಕೊಡಿಸದ ಹಿನ್ನೆಲೆಯಲ್ಲಿ ಬೇಸರಗೊಂಡ ಅವನು, ರಾತ್ರಿ ಮನೆಯಲ್ಲಿಯೇ ನೇಣು ಹಾಕಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದರು.`ಪ್ರತಿದಿನ ನನ್ನ ತಾಯಿ 200 ರಿಂದ 300 ರೂಪಾಯಿ ಖರ್ಚು ಮಾಡುತ್ತಾರೆ. ಆದರೆ ನನಗೆ ಸೈಕಲ್ ಕೊಡಿಸುತ್ತಿಲ್ಲ. ಆದ್ದರಿಂದ ಆತ್ಮಹತ್ಯೆ ಮಾಡಿಕೊಳ್ಳತ್ತಿದ್ದೇನೆ~ ಎಂದು ಪತ್ರ ಬರೆದಿಟ್ಟಿದ್ದಾನೆ ಎಂದು ಪೊಲೀಸರು ಹೇಳಿದರು.  ದರೋಡೆ ಯತ್ನ: ಬಂಧನ: ಮಹಿಳೆಯೊಬ್ಬರ ಚಿನ್ನದ ಸರ ದೋಚಿ ಪರಾರಿಯಾಗುತ್ತಿದ್ದ ಇಬ್ಬರು ದುಷ್ಕರ್ಮಿಗಳನ್ನು ಬೆನ್ನಟ್ಟಿ ಹಿಡಿದ ಸಾರ್ವಜನಿಕರು, ಆರೋಪಿಗಳನ್ನು ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಗುರುವಾರ ಶೇಷಾದ್ರಿಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬನಶಂಕರಿ ನಿವಾಸಿ ಸಿದ್ಲಿಂಗ (19) ಹಾಗೂ ಹೆಬ್ಬಾಳ ನಿವಾಸಿ ಪ್ರದೀಪ (21) ಬಂಧಿತ ಆರೋಪಿಗಳು. ಬೆಳಿಗ್ಗೆ 11 ಗಂಟೆಗೆ ಶೇಷಾದ್ರಿಪುರ ಸಮೀಪದ ಸೆಂಟ್ ಥಾಮಸ್ ಶಾಲೆಯ ಬಳಿ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ವಸುಧಾ ಕೃಷ್ಣ ಕುಮಾರ್ (64) ಎಂಬುವರಿಂದ ಸರ ಕಿತ್ತುಕೊಂಡು ಪರಾರಿಯಾಗುತ್ತಿದ್ದ ವೇಳೆ ಸಾರ್ವಜನಿಕರು ಅವರನ್ನು ಹಿಡಿದು ಠಾಣೆಗೆ ಒಪ್ಪಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.ಶೆಡ್‌ಗೆ ಬೆಂಕಿ: ಪೇಯಿಂಟ್‌ಗೆ ಮಿಶ್ರಣ ಮಾಡುವ ರಾಸಾಯನಿಕ ವಸ್ತುವನ್ನು ಸಂಗ್ರಹಿಸಿಟ್ಟಿದ್ದ ಶೆಡ್‌ಗೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ವಸ್ತುಗಳು ಸುಟ್ಟು ಹೋದ ಘಟನೆ ರಾಜಗೋಪಾಲನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ಸಂಭವಿಸಿದೆ.ಲಗ್ಗೆರೆ ಮುಖ್ಯರಸ್ತೆಯ ಸುಮನಹಳ್ಳಿಯಲ್ಲಿ ವರದರಾಜು ಎಂಬುವರಿಗೆ ಸೇರಿದ ಶೆಡ್‌ನಲ್ಲಿ ಸಂಜೆ 5.30ಕ್ಕೆ ಬೆಂಕಿ ಕಾಣಿಸಿಕೊಂಡಿತು.ಕೂಡಲೇ ಐದು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಎರಡು ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ಪೊಲೀಸರು ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.