ಶನಿವಾರ, ಜೂನ್ 19, 2021
28 °C
ಕಾಸರಗೋಡು ಅಂತರ್ಗತ ಕಣ್ಣಾನ್ನೂರು ಕ್ಷೇತ್ರ

ಪ್ರಥಮ ಲೋಕ ಸಭೆಯಲ್ಲಿ ಮೂಡಿಬಂದ ಕಮ್ಯೂನಿಸ್ಟ್ ಶಕ್ತಿ

ಸುರೇಶ್ ಎಡನಾಡು Updated:

ಅಕ್ಷರ ಗಾತ್ರ : | |

ಕಾಸರಗೋಡು: ಇಂದಿನ ಕಾಸರಗೋಡು ಜಿಲ್ಲೆಯನ್ನೊಳಗೊಂಡ ಪ್ರದೇಶ ಮೊದಲ ಲೋಕಸಭಾ ಚುನಾವಣಾ ಸಂದರ್ಭದಲ್ಲಿ ವಿಸ್ತಾರವಾದ ವ್ಯಾಪ್ತಿಯನ್ನು ಹೊಂದಿತ್ತು. ಇದನ್ನು ದಕ್ಷಿಣ ಕನ್ನಡ (ಸೌತ್ ಕೆನರಾ) ಎಂದೇ ಗುರುತಿಸಲಾಗಿತ್ತು. ಕನ್ನಡಿಗರ ಪಾಲಿಗೆ ‘ದಕ್ಷಿಣ ಕನ್ನಡ’ವಾಗಿದ್ದ ಕಾಸರಗೋಡು ಮಲಯಾಳಿಗರ ದೃಷ್ಟಿಯಲ್ಲಿ ‘ಉತ್ತರ ಮಲಬಾರ್’ ಆಗಿತ್ತು. ಆದರೆ ಮದ್ರಾಸ್‌ ಸಂಸ್ಥಾನದ ಆಡಳಿತದ ಕಾಲದಲ್ಲಿ ಕಾಸರಗೋಡು ‘ಕಣ್ಣಾನ್ನೂರು’ ಲೋಕಸಭಾ ಕ್ಷೇತ್ರದಲ್ಲಿ ಅಂತರ್ಗತವಾಗಿತ್ತು! ಒಂದರ್ಥದಲ್ಲಿ ಇದು ಕಾಸರಗೋಡಿನ ವ್ಯಾಪ್ತಿ ಎಷ್ಟಿತ್ತು ಎಂಬುದನ್ನು ಅನಾವರಣಗೊಳಿಸುತ್ತದೆ.ದಕ್ಷಿಣ ಕನ್ನಡದ ದಕ್ಷಿಣ ಕ್ಷೇತ್ರ ಮತ್ತು ಕಣ್ಣಾನ್ನೂರು ಕ್ಷೇತ್ರ ಇಂದಿನ ಕಾಸರಗೋಡು ಜಿಲ್ಲೆಯನ್ನು ಹಂಚಿಕೊಂಡಿತ್ತು. ಅಂದಿನಿಂದಲೇ ಇದ್ದ ಕಾಸರಗೋಡಿನ ತ್ರಿಶಂಕು ಸ್ಥಿತಿಯ ಶಾಪ ಅಥವಾ ದ್ವಂದ್ವ ಇನ್ನೂ ಬಗೆಹರಿದಿಲ್ಲ!ಜನರ ಕೈಗೆ ಅಧಿಕಾರ:

ಮದ್ರಾಸ್‌ ಸಂಸ್ಥಾನದ ಕಣ್ಣಾನ್ನೂರು ಕ್ಷೇತ್ರಕ್ಕೆ ನಡೆದ ಚುನಾವಣೆಯ ಸಂದರ್ಭದಲ್ಲಿ 3,64,218 ಮತದಾರರಿದ್ದರು. ಇವರಲ್ಲಿ 2,52,481 ಮಂದಿ ಮತದಾನ ಮಾಡಿದ್ದರು. 1957ರ ಮಾ.27ರಂದು ನಡೆದ ಈ ಮಹಾ ಚುನಾವಣೆಯಲ್ಲಿ ಒಟ್ಟು ಮತದಾರರ ಪೈಕಿ ಶೇ 69.32ರಷ್ಟು ಮತ ಚಲಾಯಿಸಿದ್ದರು.ಭಾರತದ ಇತಿಹಾಸದಲ್ಲಿ ನಡೆದ ಈ ಚುನಾವಣೆಯಲ್ಲಿ ಸಿಪಿಐ ಪಕ್ಷದ ಎ.ಕೆ.ಗೋಪಾಲನ್ ಮತ್ತು ಇಂಡಿಯನ್‌ ನ್ಯಾಷನಲ್ ಕಾಂಗ್ರೆಸ್ಸಿನ ಸಿ.ಕೆ.ಕೆ.ಗೋವಿಂದನ್ ನಾಯರ್ ಪ್ರಮುಖ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಅಂತಿಮ ಹಣಾಹಣಿಯಲ್ಲಿ ಎ.ಕೆ.ಗೋಪಾಲನ್‌ (ಸಿಪಿಐ) 1,66,299 ಮತಗಳನ್ನು ಗಳಿಸಿ ಗೋವಿಂದನ್‌ ನಾಯರ್ (79,270) ಅವರನ್ನು 87,029 ಮತಗಳ ಅಂತರ (ಶೇ 34.47)ದಿಂದ ಮಣಿಸಿದ್ದರು.ಇದೇ ಸಂದರ್ಭ ಎಂದರೆ 1951ರಲ್ಲಿ ಮದ್ರಾಸ್‌ ಸಂಸ್ಥಾನದ ವಿಧಾನಸಭಾ ಚುನಾವಣೆಯಲ್ಲಿ ಕಾಸರಗೋಡು ಮತ್ತು ಹೊಸದುರ್ಗದಲ್ಲಿ ಕ್ರಮವಾಗಿ 69,324 ಮತ್ತು 80,235 ಮತದಾರರಿದ್ದರು. ಆಗ ಮಲಬಾರ್ ಪ್ರದೇಶದಲ್ಲಿ 27 ವಿಧಾನಸಭಾ ಕ್ಷೇತ್ರಗಳಿತ್ತು.ಹಳೆಯ ತಲೆಮಾರಿನ ಅನೇಕ ಹಿರಿಯರನ್ನು ಪ್ರಥಮ ಲೋಕಸಭಾ ಚುನಾವಣೆಯ ಬಗ್ಗೆ ಪ್ರಸ್ತಾಪಿಸಿದಾಗ ಕಣ್ಣಾನ್ನೂರು ಕ್ಷೇತ್ರದ ಬಗ್ಗೆ ವಿಶೇಷ ನೆನಪು ಅವರಲ್ಲಿಲ್ಲ. ಆದರೆ ದ.ಕ. ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದ ಬೆನಗಲ್‌ ಶಿವರಾವ್‌ ಮತ್ತು ಕೆ.ಆರ್.ಕಾರಂತರ ಹಣಾಹಣಿ ಈಗಲೂ ನೆನಪಿದೆ. ನಾನು ಆಗ ಕಾಲೇಜು ವಿದ್ಯಾರ್ಥಿಯಾಗಿದ್ದೆ. ಮತದಾನದ ಹಕ್ಕು ನನಗಿರಲಿಲ್ಲ. ಇಂದಿನಂತೆ ಚುನಾವಣೆಯ ಥಳಕು ಬಳಕು ಅಂದು ಇರಲಿಲ್ಲ. ಆದರೆ ಬೆನಗಲ್‌ ಶಿವರಾವ್‌ ರಾಜ್ಯ ಪುನರ್ವಿಂಗಡಣೆ ಆಯೋಗದ ವಿರುದ್ಧ ನಿಲುವು ಹೊಂದಿದ್ದರೂ ಗೆಲುವು ಸಾಧಿಸಿದ್ದರು ಎನ್ನುತ್ತಾರೆ ಕಾಸರಗೋಡಿನ ಹಿರಿಯ ಭಾಷಾಂತರಕಾರ, ನಿವೃತ್ತ ಮುಖ್ಯಶಿಕ್ಷಕ ಎ.ನರಸಿಂಹ ಭಟ್. 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.