ಭಾನುವಾರ, ಮೇ 9, 2021
27 °C

ಪ್ರಧಾನಿ ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಗತ್ತು ಎದುರಿಸುತ್ತಿರುವ ಮತ್ತು ಮುಂದೆ ಎದುರಿಸಲಿರುವ ಬಹು ಮುಖ್ಯ ಸಮಸ್ಯೆಗಳನ್ನು ಪ್ರಧಾನಿ ಮನಮೋಹನ ಸಿಂಗ್ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮಹಾಧಿವೇಶನದಲ್ಲಿ ನಿಚ್ಚಳವಾಗಿ ಬಿಡಿಸಿಟ್ಟಿದ್ದಾರೆ. ಮುಖ್ಯವಾಗಿ ಆರ್ಥಿಕ ಅಸ್ಥಿರತೆ ಮತ್ತು ಭಯೋತ್ಪಾದನೆ ಸವಾಲುಗಳು ಜಗತ್ತನ್ನು ಎಂಥ ಅಪಾಯದತ್ತ ಕೊಂಡೊಯ್ಯಬಲ್ಲವು ಎಂಬುದನ್ನು ಪ್ರಸ್ತಾಪಿಸಿರುವ ಅವರು ಈ ಸಂದರ್ಭದಲ್ಲಿ ವಿಶ್ವಸಂಸ್ಥೆ ವಹಿಸಬೇಕಾದ ಪಾತ್ರ ಎಂಥದು ಎಂಬುದನ್ನು ನಿಖರವಾಗಿ ಗುರುತಿಸಿದ್ದಾರೆ. ಅಭಿವೃದ್ಧಿಗೆ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯೇ ಮಾದರಿ ಎಂದು ಪ್ರತಿಪಾದಿಸುತ್ತ ಬಂದ `ದೊಡ್ಡಣ್ಣಗಳು~ ಇದೀಗ ಮಂಡಿಯೂರಿದ್ದಾರೆ. ತಾನು ಹೇಳಿದ್ದೇ ಸರಿ ಎಂದು ಯಾರ ಮಾತನ್ನೂ ಲೆಕ್ಕಿಸದೆ ತಮಗೆ ಮಣಿಯದ ದೇಶಗಳ ಮೇಲೆ ಮಿಲಿಟರಿ ದಾಳಿ ನಡೆಸಿದ ಯುದ್ಧಕೋರರು ಮುಖಭಂಗಕ್ಕೆ ಈಡಾಗಿ ಮಾನ ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ. ಈ ಅನುಭವಗಳಿಂದ ಕಲಿಯಬೇಕಾದ ಪಾಠಗಳನ್ನು ಮನಮೋಹನಸಿಂಗ್ ಅವರು ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಒತ್ತಿ ಹೇಳಿದ್ದಾರೆ.ಆರ್ಥಿಕ ಕುಸಿತ ಸಹಜವಾಗಿ ದೇಶಗಳು ರಕ್ಷಣಾತ್ಮಕ ದಾರಿ ತುಳಿಯಲು ಕಾರಣವಾಗಬಹುದು. ದೇಶ ದೇಶಗಳ ನಡುವೆ ನಿರ್ಬಂಧಗಳು ಜಾರಿಗೆ ಬರಬಹುದು. ಈ ಸವಾಲನ್ನು ಎದುರಿಸಲು ಅಗತ್ಯವಾದ ಮಾರ್ಗೋಪಾಯಗಳನ್ನು ಹುಡುಕುವ ಬಗ್ಗೆ ವಿಶ್ವಸಂಸ್ಥೆ ವೇದಿಕೆಯಾಗಬೇಕು. ಭಯೋತ್ಪಾದನೆ ವಿರುದ್ಧದ ಯುದ್ಧ ಈಗ ಪೂರ್ವಗ್ರಹಪೀಡಿತವಾಗಿದೆ. ಉದಾಹರಣೆಗೆ ತಾಲಿಬಾನ್ ಭಯೋತ್ಪಾದಕರ ವಿರುದ್ಧ ಆಫ್ಘಾನಿಸ್ತಾನದಲ್ಲಿ ಅಮೆರಿಕ ಯುದ್ಧಕ್ಕೆ ಇಳಿದಿದೆ. ಆದರೆ ಭಾರತದಲ್ಲಿ ಭಯೋತ್ಪಾದನೆಗೆ ಪ್ರಚೋದನೆ ನೀಡುತ್ತಿರುವ, ಅಷ್ಟೇ ಏಕೆ, ಭಯೋತ್ಪಾದಕರಿಗೆ ಎಲ್ಲ ರೀತಿಯ ನೆರವು ನೀಡುತ್ತಿರುವ ಪಾಕಿಸ್ತಾನದ ವಿರುದ್ಧ ಅಮೆರಿಕ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ. ಇಂಥ ಧೋರಣೆ ಅಂತ್ಯವಾಗಬೇಕು ಎಂದು ಪ್ರಧಾನಿ ಅವರು ಹೇಳಿರುವುದು ಸರಿಯಾಗಿಯೇ ಇದೆ. ವಾಸ್ತವ ಸ್ಥಿತಿಯನ್ನು  ಜಗತ್ತಿನ ಮುಂದಿಟ್ಟಿದೆ.ಬದುಕು ಮತ್ತು ಭವಿಷ್ಯವನ್ನು ರೂಪಿಸಿಕೊಳ್ಳುವ ಸ್ವಾತಂತ್ರ್ಯ, ಹಕ್ಕು ಆಯಾ ದೇಶಗಳ ಜನರದ್ದು. ಯಾವುದೇ ದೇಶದ ಜನರಿಗೆ `ನೀವೇ ಹೀಗೇ ಇರಬೇಕು, ಇದೇ ಮಾಡಬೇಕು, ಹೀಗೆಯೇ ಆಡಳಿತ ನಡೆಸಬೇಕು~ ಎಂದು ಬೇರೊಂದು ದೇಶ ಹೊರಗಿನಿಂದ ಮಿಲಿಟರಿ ದಾಳಿ ಮಾಡುವ ಮೂಲಕ ಪಾಠ ಕಲಿಸಲು ಹೋಗುವ ಪರಿಪಾಠ ಅಪಾಯಕಾರಿ ಎಂದು ಇರಾಕ್, ಆಫ್ಘಾನಿಸ್ತಾನ ಮತ್ತು ಲಿಬಿಯಾ ಮೇಲಿನ ಮಿಲಿಟರಿ ಕಾರ್ಯಾಚರಣೆಗಳ ಹಿನ್ನೆಲೆಯಲ್ಲಿ ಪ್ರಧಾನಿ ಧೈರ್ಯದಿಂದ ಹೇಳಿದ್ದಾರೆ.ಶಾಂತಿ ಮತ್ತು ಅಭಿವೃದ್ಧಿ ಸಾಧಿಸುವ ತನ್ನ ಸ್ಥಾಪಿತ ಗುರಿಗೆ ವಿಶ್ವಸಂಸ್ಥೆ ಮರಳಬೇಕಾಗಿದೆ ಎಂಬ ಅವರ ಆಗ್ರಹ ಮಹತ್ವದ್ದಾಗಿದೆ. ವಿಶ್ವಸಂಸ್ಥೆ ಅದರ ಹೆಸರಿಗೆ ತಕ್ಕಂತೆ ಇಡೀ ವಿಶ್ವದ ಪ್ರಾತಿನಿಧಿಕ ಸಂಸ್ಥೆಯಾಗಿಲ್ಲ. ಅದು ಕೆಲವೇ ಬಲಿಷ್ಠ ದೇಶಗಳ ಹಿಡಿತದಲ್ಲಿದೆ. ಅದನ್ನು ವಿಶ್ವದ ನಿಜವಾದ ಪ್ರಾತಿನಿಧಿಕ ಸಂಸ್ಥೆಯನ್ನಾಗಿ ಮಾಡಲು ಸುಧಾರಣೆಗಳನ್ನು ಬೇಗ ತರಬೇಕಾದ ಅಗತ್ಯ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ.ಜಗತ್ತು ಪ್ರಸ್ತುತ ಎದುರಿಸುತ್ತಿರುವ ಸವಾಲುಗಳಿಗೆ ಉತ್ತರ ಕಂಡುಕೊಳ್ಳಲು ವಿಶ್ವಸಂಸ್ಥೆಯನ್ನು ಒಂದು ಸಂಘಟಿತ ವೇದಿಕೆಯನ್ನಾಗಿ ರೂಪಿಸಿ ಬಲಗೊಳಿಸಬೇಕಾದುದು ಅನಿವಾರ್ಯ. ಪ್ರಧಾನಿ ಅವರು ಈ ನಿಟ್ಟಿನಲ್ಲಿ ನೀಡಿರುವ ಸಲಹೆ ವಿಶ್ವಸಂಸ್ಥೆಯ ಬಲವರ್ಧನೆಯಲ್ಲಿ ಮಹತ್ವದ್ದಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.