ಮಂಗಳವಾರ, ಜೂನ್ 22, 2021
23 °C

ಪ್ರವೇಶಕ್ಕೆ ಪರಿಶಿಷ್ಟ ಸಮುದಾಯ ಆಗ್ರಹ: ಸಭೆ ವಿಫಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಂತೇಮರಹಳ್ಳಿ: ಪರಿಶಿಷ್ಟ ಸಮುದಾಯದ ಜನರಿಗೆ ದೇವಾಲಯಕ್ಕೆ ಪ್ರವೇಶಕ್ಕೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಬಾಣಹಳ್ಳಿಯ ಆದಿಶಕ್ತಿ ದೇವಸ್ತಾನದಲ್ಲಿ ಸೋಮವಾರ ನಡೆಯಬೇಕಾಗಿದ್ದ ಕೊಂಡೋತ್ಸವ ಮತ್ತು ಜಾತ್ರೆ ರದ್ದಾಗುವ ಸಂಭವವಿದೆ.ಬಾಣಹಳ್ಳಿ ಗ್ರಾಮದ ಎಲ್ಲಾ ಮುಖಂಡರು, ಸಂತೇಮರಹಳ್ಳಿಯ ಪೊಲೀಸ್ ಠಾಣೆಯಲ್ಲಿ ತಹಶೀಲ್ದಾರ್ ಸಮ್ಮುಖದಲ್ಲಿ ಶನಿವಾರ ಸೇರಿದ ಶಾಂತಿ ಸಭೆ ವಿಫಲಗೊಂಡಿದೆ. ಗ್ರಾಮದಲ್ಲಿ ಮತ್ತೊಮ್ಮೆ ಸಭೆ ಸೇರಿ ಪರಿಶಿಷ್ಟರನ್ನು ಮನವೊಲಿಸುವ ಪ್ರಯತ್ನ ನಡೆಯಲಿದೆ. ಗ್ರಾಮದಲ್ಲಿ ಮುಂಜಾಗೃತ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಗ್ರಾಮದಲ್ಲಿ ಬಿಗಿ ಪೊಲೀಸ್ ವ್ಯವಸ್ಥೆ ನಿಯೋಜಿಸಲಾಗಿದೆ. ಗ್ರಾಮದಲ್ಲಿ ಪ್ರತಿ ವರ್ಷದಂತೆ ಶಿವರಾತ್ರಿ ಮುಗಿದ ಒಂದು ವಾರಕ್ಕೆ ಸರಿಯಾಗಿ ಕೊಂಡೋತ್ಸವ ನಡೆಯುತ್ತದೆ. ದೇವಸ್ತಾನದಲ್ಲಿರುವ ಆದಿಶಕ್ತಿ ದೇವಿಗೆ ಸುಡುತ್ತಿರುವ ಕೆಂಡವನ್ನು ವಸ್ತ್ರಕ್ಕೆ ಸುರಿದು ನೇವ್ಯೆದ್ಯ ಮಾಡುವುದು ವಿಶೇಷ.ಗ್ರಾಮದಲ್ಲಿ ಒಂದೂವರೆ ಸಾವಿರ ಜನಸಂಖ್ಯೆ ಇದೆ. ಸವರ್ಣೀಯರು 210 ಕುಟುಂಬ, ಪರಿಶಿಷ್ಟ ಜಾತಿ 30, ದಾಸಾರಿಗಳು 60, ಪರಿಶಿಷ್ಟ ವರ್ಗ 20 ಕುಟುಂಬಗಳು ವಾಸ ಮಾಡುತ್ತಿದ್ದಾರೆ. ಪ್ರತಿ ವರ್ಷವು ಗ್ರಾಮದ ಎಲ್ಲಾ ವರ್ಗದವರು ಸೇರಿ ಹಬ್ಬವನ್ನು ವಿಜೃಂಬಣೆಯಿಂದ ಮಾಡುತ್ತಿದ್ದರು.ಈ ಭಾರಿ ನಡೆಯುವ ಹಬ್ಬಕ್ಕೆ ಪರಿಶಿಷ್ಟರನ್ನು ದೇವಸ್ಥಾನದ ಒಳಗೆ ಪ್ರವೇಶಿಸಿ ಆದಿಶಕ್ತಿ ದೇವಿಗೆ ಪೂಜೆ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ಪರಿಶಿಷ್ಟ ಜಾತಿ ಮುಖಂಡರು ಪೊಲೀಸ್ ಠಾಣೆಗೆ ಮನವಿ ಸಲ್ಲಿಸಿದ್ದರು.ಹಿಂದಿನ ಪದ್ಧತಿಯಂತೆ ಈ ವರ್ಷವು ಹಬ್ಬವನ್ನು ಮಾಡುತ್ತಿದ್ದೇವೆ, ಯಾವುದೇ ಕಾರಣಕ್ಕೂ ಪರಿಶಿಷ್ಟರನ್ನು ದೇವಾಲಯದ ಒಳಗಡೆ ಬಿಡುವುದಿಲ್ಲ ಎಂದು ಸವರ್ಣೀಯರು ಸಭೆಯಲ್ಲಿ ತಿಳಿಸಿದರು.`ಗ್ರಾಮದಲ್ಲಿರುವ ದೇವಸ್ಥಾನ ಸರ್ಕಾರಿ ಸ್ಥಳದಲ್ಲಿದೆ. ದೇವಸ್ಥಾನ ಕಟ್ಟಲು ನಾವು ಚಂದಾ ನೀಡಿದ್ದೇವೆ. ಕೊಂಡಕ್ಕೆ ಮರ ಕಡಿಯಲು ಬರುತ್ತೇವೆ. ಎಲ್ಲಾ ಕೆಲಸಗಳಿಗೂ ನಮ್ಮನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ.ಆದ್ದರಿಂದ ದೇವಸ್ಥಾನದ ಒಳಗಡೆಗೂ ಪ್ರವೇಶ ಮಾಡಲು ಅವಕಾಶ ನೀಡಬೇಕು~ ಎಂದು ಪರಿಶಿಷ್ಟಜಾತಿ ಮುಖಂಡರು ಒತ್ತಾಯಿಸಿದರು. ಗ್ರಾಮದಲ್ಲಿ ಒಮ್ಮತ ಮೂಡುವವರೆಗೂ ಹಬ್ಬ ಮುಂದೂಡಬೇಕು ಎಂದು ತಹಶೀಲ್ದಾರ್ ರಂಗಸ್ವಾಮಯ್ಯ ತಿಳಿಸಿದರು.ಸರ್ಕಲ್ ಇನ್ಸ್‌ಪೆಕ್ಟರ್ ನಿರಂಜನ್ ರಾಜೇ ಅರಸ್, ಉಪನಿರೀಕ್ಷಕ ಕುಮಾರಾರಾಧ್ಯ, ಶಿವಮಲ್ಲಪ್ಪ ಗ್ರಾಮದ ಮುಖಂಡರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.