ಭಾನುವಾರ, ಜೂನ್ 20, 2021
28 °C

ಪ್ರಶಸ್ತಿಗಳಿಸಿದ್ದು ಮರೆಯಲಾರದ ಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಬ್ರಿ: ಕ್ರೀಡಾಪಟು ತಾನು ದೇಶಕ್ಕಾಗಿ ಆಡಿ ಪ್ರಶಸ್ತಿ ಪಡೆಯುವ ಅನುಭವ ಅವರ ಜೀವನದಲ್ಲಿ ಮರೆಯಲಾರದ ಕ್ಷಣ. ಅಂತಹ ಅಪೂರ್ವ ಕ್ಷಣ ನನ್ನ ಪಾಲಿಗೆ ಒದಗಿರುವುದೇ ಅದೃಷ್ಟ ಎಂದು ಅಂತರರಾಷ್ಟ್ರೀಯ ಕಬಡ್ಡಿ ಆಟಗಾರ್ತಿ, ಭಾರತ ತಂಡದ ನಾಯಕಿ ಮಮತಾ ಪೂಜಾರಿ ಹೇಳಿದರು.ಭಾರತ ತಂಡ ವಿಶ್ವಕಪ್ ಕಬಡ್ಡಿಯ ಫೈನಲ್ ಪಂದ್ಯದಲ್ಲಿ ಇರಾನ್ ತಂಡವನ್ನು ಸೋಲಿಸಿ ಪ್ರಶಸ್ತಿ ಗಳಿಸಿದ ಬಳಿಕ ಮೊದಲ ಬಾರಿಗೆ ಹುಟ್ಟೂರಿಗೆ ಆಗಮಿಸಿ ಅಜೆಕಾರಿನಲ್ಲಿ ಉಡುಪಿ ಜಿಲ್ಲಾ ಕಬಡ್ಡಿ ಅಸೋಷಿಯೇಶನ್, ತಾಲ್ಲೂಕು ಕಬಡ್ಡಿ ಸಂಸ್ಥೆ, ಅಜೆಕಾರು ನಾಗರಿಕರ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ  ಅವರು ಮಾತನಾಡಿದರು.ಓರ್ವ ಸಾಮಾನ್ಯ ವಿದ್ಯಾರ್ಥಿನಿಯಾಗಿ ಮುನಿಯಾಲು ಪದವಿಪೂರ್ವ ಕಾಲೇಜಿನಲ್ಲಿ ವಾಲಿಬಾಲ್ ಕ್ರೀಡೆಯಲ್ಲಿ ಕಾಲೇಜನ್ನು ಪ್ರತಿನಿಧಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಬಡ್ಡಿಯತ್ತ ಆಕರ್ಷಿತಳಾಗಿದ್ದಾರೆ. ಬಳಿಕ ಇಂದು ದೇಶಕ್ಕಾಗಿ ಪ್ರಶಸ್ತಿ ತರುವಂತಾಯಿತು. ದೇಶಕ್ಕಾಗಿ ಗಳಿಸಿದ ಪ್ರಶಸ್ತಿಯಲ್ಲಿ ಕಾಲೇಜಿ ನಲ್ಲಿ ಕಬಡ್ಡಿ ತರಬೇತುದಾರರಾಗಿದ್ದ ರಮೇಶ್ ಸುವರ್ಣ ಅವರ ಪರಿಶ್ರಮವೂ ಅಡಗಿದೆ ಎಂದರು.ಪಂದ್ಯಾಟ ವೇಳೆ ದೇಶದ ಅಸಂಖ್ಯ ಅಭಿಮಾನಿಗಳ ಬೆಂಬಲವೇ ಪ್ರಬಲ ಇರಾನ್ ತಂಡವನ್ನು ಸೋಲಿಸಿ ಪ್ರಶಸ್ತಿ ಗಳಿಸಲು ಪ್ರಮುಖ ಕಾರಣವೆಂದರು. ಈ ಸಾಧನೆಯನ್ನು ಮುಂದಿನ 2014ರ ವಿಶ್ವಕಪ್ ಹಾಗೂ ಏಷ್ಯಾಡ್‌ನಲ್ಲೂ ಮುಂದುವರಿಸುವುದಾಗಿ ಹೇಳಿದರು. 2020ರ ಒಲಿಂಪಿಕ್ಸ್‌ಗೆ ಕಬಡ್ಡಿ ಕ್ರೀಡೆ ಸೇರ್ಪಡೆಗೊಳ್ಳುವ ನಿರೀಕ್ಷೆಯಿದ್ದು, ಆ ವೇಳೆಗೆ ಕಾರ್ಕಳದ ಕ್ರೀಡಾಪಟುಗಳು ಭಾರತವನ್ನು ಪ್ರತಿನಿಧಿಸುವಂತಾಗಬೇಕು. ಸರ್ಕಾರ ಕಬಡ್ಡಿ ಕ್ರೀಡೆ, ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು ಎಂದರು.ಮಂಗಳೂರು ಅರಣ್ಯ ಇಲಾಖೆ ವ್ಯವಸ್ಥಾಪಕ ಎಳ್ಳಾರೆ ಸದಾಶಿವ ಪ್ರಭು ಮಾತನಾಡಿ, ದೇಶದ ಹೆಸರನ್ನು ವಿಶ್ವದಾದ್ಯಂತ ಪಸರಿಸಿದ ಮಮತಾ ಪೂಜಾರಿ ಅವರ ಸಾಧನೆ ಅಸಾಮಾನ್ಯ. ರಮೇಶ್ ಸುವರ್ಣ ಹಳ್ಳಿಯ ಪ್ರತಿಭೆಯನ್ನು ಹೊರತಂದು ಇಂದು ವಿಶ್ವಕ್ಕೆ ಪರಿಚಯಿಸಿದ್ದಾರೆ. ಸುವರ್ಣ ಅವರ ಕಠಿಣ ಪರಿಶ್ರಮಕ್ಕೆ ಇಂದು ಪ್ರಶಸ್ತಿ ಗಳಿಸುವುದರೊಂದಿಗೆ ಫಲ ಸಿಕ್ಕಂತಾಗಿದೆ ಎಂದರು.ಉಡುಪಿ ಜಿಲ್ಲಾ ಕಬಡ್ಡಿ ಸಂಸ್ಥೆಕಾರ್ಯದರ್ಶಿ ರಾಜೇಂದ್ರ ಸುವರ್ಣ ಮಾತನಾಡಿ, ಕಬಡ್ಡಿಯಲ್ಲಿ ರ‌್ಯಾಂಕಿಂಗ್ ಪದ್ಧತಿ ಇರುತ್ತಿದ್ದರೆ ಮಮತಾ ಪೂಜಾರಿ ಅವರೇ ಮೊದಲ ಸ್ಥಾನದಲ್ಲಿರುತ್ತಿದ್ದರು ಎಂದರು.

ಉಡುಪಿ ಜಿಲ್ಲಾ ಕಬಡ್ಡಿ ಸಂಸ್ಥೆಉಪಾಧ್ಯಕ್ಷ ಆರೂರು ತಿಮ್ಮಪ್ಪ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಮುನಿಯಾಲು  ಉದಯ ಕುಮಾರ್ ಶೆಟ್ಟಿ, ವಿಜಯ ಶೆಟ್ಟಿ, ತರಬೇತುದಾರ ರಮೇಶ್ ಸುವರ್ಣ, ಪ್ರವೀಣ್ ಶೆಟ್ಟಿ, ಪುಷ್ಪರಾಜ್ ಶೆಟ್ಟಿ, ರಾಮಕೃಷ್ಣ ಹೆಗ್ಡೆ, ಜಿಯಾನಂದ ಹೆಗ್ಡೆ, ನಂದಕುಮಾರ್ ಹೆಗ್ಡೆ, ಯುವಜನ ಮತ್ತು ಕ್ರೀಡಾ ಇಲಾಖೆ ಮಾಜಿ ನಿರ್ದೇಶಕ ಕರುಣಚಂದ್ರ, ಸದಾನಂದ ನಾಯಕ್ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.