ಸೋಮವಾರ, ಏಪ್ರಿಲ್ 19, 2021
32 °C

ಪ್ರಶ್ನೆ ಉತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

* ಆಕಾಶ ಕೆ, ಗಂಗಾವತಿ

ನನ್ನ ವಯಸ್ಸು ಇಪ್ಪತ್ತೇಳು. ನಾನು ಹಳ್ಳಿಯ ವಾತಾವರಣದಲ್ಲಿ ಕಲಿತವನು. ಬಿಜಿನೆಸ್ ಮಾಡುತ್ತಾ ಬಿಬಿಎಂ ಮುಗಿಸಿಕೊಂಡಿದ್ದೇನೆ. ನನಗೆ ಸಿಎ ಮತ್ತು ಎಂಎಫ್‌ಎ ಮಾಡುವ ಆಸೆ ಇದೆ. ಮಾಹಿತಿ ನೀಡಿ. ಶಿಕ್ಷಣ ಮುಗಿಸಿದ ಮೇಲೆ ನನಗೆ ಉದ್ಯೋಗ ಸಿಗಬಹುದೇ?     ನೀವು ಬಯಸಿರುವ ಎರಡೂ ಕೋರ್ಸುಗಳನ್ನು ಮಾಡಿಕೊಳ್ಳಬಹುದು. ಆದರೆ ಸಿಎಗೆ ಹೆಚ್ಚಿನ ಸಮಯ ಹಿಡಿಯುತ್ತದೆ. ನಿಮ್ಮ ಆಯ್ಕೆಯ ಕೋರ್ಸುಗಳಿಗೆ ಸರ್ಕಾರಿ ಕ್ಷೇತ್ರಕ್ಕಿಂತ ಖಾಸಗೀ ಕ್ಷೇತ್ರದಲ್ಲಿ ಹೆಚ್ಚಿನ ಬೇಡಿಕೆ ಮತ್ತು ಸಂಭಾವನೆ ಇದೆ. ಅಲ್ಲಿ ನಿಮ್ಮ ವೃತ್ತಿಪರತೆಗೆ ವಯಸ್ಸಿಗಿಂತಲೂ ಹೆಚ್ಚಿನ ಮಹತ್ವ ನೀಡುತ್ತಾರೆ. ಆದ್ದರಿಂದ ಧೈರ್ಯವಾಗಿ ಮುಂದುವರಿಯಿರಿ.* ರಾಜ ಸಿ ದೊಡ್ಡಮನಿ, ವಿಜಾಪುರ

ನಾನು ರೇಷ್ಮೆ ಕೃಷಿಯಲ್ಲಿ ಜೆಓಸಿ ಮಾಡಿದ್ದು ಶೇ 76 ಅಂಕ ಗಳಿಸಿರುತ್ತೇನೆ. ಈಗ ಮತ್ತೆ ಬಿಎ ಫೈನಲ್ ಓದುತ್ತಿದ್ದೇನೆ. ನಾನು ಜೆಓಸಿ ಮೇಲೆ ಸ್ನಾತಕೋತ್ತರ ಕೋರ್ಸು ಮಾಡಬಹುದೇ? ರೇಷ್ಮೆ ಕೃಷಿಯಲ್ಲಿ ಯಾವ ಉಪಯುಕ್ತ ಕೋರ್ಸುಗಳನ್ನು ಮಾಡಬಹುದು?ನೀವು ಜೆಓಸಿ ಆಧಾರದ ಮೇಲೆ ರೇಷ್ಮೆ ಕೃಷಿಯ ಪದವಿಗೆ ಸೇರಬಹುದು. ನೇರವಾಗಿ ಸ್ನಾತಕೋತ್ತರ ಕೋರ್ಸು ಮಾಡಲಾಗುವುದಿಲ್ಲ. ಹೆಚ್ಚಿನ ತಿಳಿವಳಿಕೆಗಾಗಿ ಅಲ್ಪಾವಧಿ ತರಬೇತಿ, ಡಿಪ್ಲೊಮಾ ಸಹ ಲಭ್ಯವಿದೆ. ಕೃಷಿ ವಿವಿ, ರೇಷ್ಮೆ ಇಲಾಖೆ, ತಾಂತ್ರಿಕ ಶಿಕ್ಷಣ ಇಲಾಖೆಗಳಿಂದ ಮಾಹಿತಿ ಪಡೆದು ಕೊಳ್ಳಿ. ನಿಮಗೆ ಇಷ್ಟವಿದ್ದರೆ ಬಿಎ ಆಧಾರದ ಮೇಲೆ ಯಾವುದಾದರೂ ವಿಷಯದಲ್ಲಿ ಎಂಎ ಮಾಡಬಹುದು.

 

*ಹೇಮಾವತಿ, ಬೆಂಗಳೂರುನಾನು ಬಿಎ ಪದವೀಧರೆ. ನನಗೆ ಬ್ಯಾಂಕಿಂಗ್ ವ್ಯವಹಾರದಲ್ಲಿ ಆಸಕ್ತಿ ಇದೆ. ಕೆಲವರು ಇದಕ್ಕೆ ಬಿಕಾಂ ಓದಿದವರಿಗೆ ಆದ್ಯತೆ ಎನ್ನುತ್ತಾರೆ. ನಾನು ಮುಂದೆ ಯಾವ ಕೋರ್ಸನ್ನು ಓದಬೇಕು. ಯಾವುದಾದರೂ ಸ್ಪರ್ಧಾತ್ಮಕ ಪರೀಕ್ಷೆ ಬರೆಯಬೇಕಾದರೆ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಬೇಕು?ಬ್ಯಾಂಕುಗಳಲ್ಲಿ ಬಿಎ ಪದವಿ ಪಡೆದವರೂ ಸಹಾ ನೌಕರಿ ಗಳಿಸಬಹುದು. ಇತ್ತೀಚೆಗೆ ಬ್ಯಾಂಕಿಂಗ್ ಪರೀಕ್ಷೆಗೆ ತರಬೇತಿ ನೀಡುವ ಅನೇಕ ಸಂಸ್ಥೆಗಳಿವೆ. ಮಾರುಕಟ್ಟೆಯಲ್ಲಿ ಸಹಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬೇಕಾದ ಪುಸ್ತಕಗಳು ದೊರಕುತ್ತವೆ. ಇವುಗಳ ಸಹಾಯದಿಂದ ನೀವು ಪೂರ್ವ ಸಿದ್ಧತೆ ಮಾಡಿಕೊಳ್ಳಬಹುದು. ಅನೇಕ ಸಹಕಾರಿ ಬ್ಯಾಂಕುಗಳಲ್ಲಿ ಸಂಬಳ ಕಡಿಮೆ ಇದ್ದರೂ, ನೇಮಕಾತಿಗೆ ಸಾಕಷ್ಟು ಅವಕಾಶಗಳಿವೆ.* ಅಪೂರ್ವ

ನಾನು 9ನೇ ತರಗತಿ ಮುಗಿಸಿ ಹತ್ತನೇ ತರಗತಿಗೆ ಬಂದಿದ್ದೇನೆ. ಏಳನೆಯ ತರಗತಿ ವರೆಗೆ ಕನ್ನಡ ಮಾಧ್ಯಮದಲ್ಲಿ ಓದಿದ್ದು ನಂತರ ಹೇಗೋ ಪಾಸಾದೆ. ಈಗ ನಾನು ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಬೇಕಾದರೆ ಹೇಗೆ ಓದಬೇಕು ಸಲಹೆ ನೀಡಿ.

ಈಗ ಶೈಕ್ಷಣಿಕ ವರ್ಷ ಪ್ರಾರಂಭವಾಗಿದೆ. ಈಗಿನಿಂದಲೇ ಕ್ರಮವಾಗಿ ಅಂದಿನ ಪಾಠಗಳನ್ನು ಅಂದೇ ಓದುತ್ತಾ ಹೋಗಬೇಕು. ಅರ್ಥವಾಗದಿರುವ ಸಂಗತಿಗಳನ್ನು ಕಂಡುಕೊಂಡು ಅನುಮಾನ ಬಗೆಹರಿಸಿಕೊಳ್ಳಬೇಕು. ಪರೀಕ್ಷೆಗಳಲ್ಲಿ ಏಕೆ ಅಂಕಗಳನ್ನು ಕಳೆದುಕೊಂಡೆ ಎಂದು ಚಿಂತಿಸಿ ಸರಿಪಡಿಸಿಕೊಳ್ಳಬೇಕು. ಸಾಧ್ಯವಾದಷ್ಟು ಹೆಚ್ಚಿನ ಸಂಖ್ಯೆಯಲ್ಲಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಂಗ್ರಹಿಸಿ ಉತ್ತರಿಸುವ ಅಭ್ಯಾಸ ಮಾಡಬೇಕು. ಓದುವುದು, ಬರೆಯುವುದು, ತಿದ್ದುವುದು, ಪುನರ್ಮನನ ಮಾಡುವುದು ಜೊತೆ ಜೊತೆಯಾಗಿ ಸಾಗಬೇಕು.ಇನ್ನು ಕನ್ನಡ ಮಾಧ್ಯಮದಿಂದ ಬಂದವರು ಬೇರೆ ಬೇರೆ ವಿಷಯಗಳಿಗೆ ಬೇರೆ ಬೇರೆ ರೀತಿ ಗಮನ ನೀಡಿ ಕಲಿಯಬೇಕಾಗುತ್ತದೆ. ಉದಾಹರಣೆಗೆ ಇಂಗ್ಲಿಷ್‌ನಲ್ಲಿ ಭಾಷೆಯ ಮೇಲೆ ಹಿಡಿತ ಗಳಿಸುವ ಪ್ರಯತ್ನ ಅಗತ್ಯ. ಸಮಾಜ ವಿಜ್ಞಾನದಲ್ಲಿ ವೇಗವಾಗಿ ಬರೆಯುವ ಮತ್ತು ವಿಷಯ ವ್ಯಕ್ತಪಡಿಸುವ ಕೌಶಲ್ಯ ಅಗತ್ಯ. ವಿಜ್ಞಾನ, ಗಣಿತಗಳಲ್ಲಿ ಪಾರಿಭಾಷಿಕ ಪದಗಳ ಜ್ಞಾನ ಬೇಕೆ ಬೇಕು. ಇನ್ನು ಪ್ರಥಮ ಹಾಗೂ ತೃತೀಯ ಭಾಷೆಗಳು ಹೆಚ್ಚಿನ ಅಂಕ ಗಳಿಸಲು ಸಹಾಯಕವಾಗುತ್ತವೆ.*ನಾಗರಾಜ ಎಚ್, ಹಾವೇರಿನಾನು ಡಿಇಡಿ ಮುಗಿಸಿಕೊಂಡಿದ್ದೇನೆ. ಪತ್ರಿಕೋದ್ಯಮ ಆರಿಸಿಕೊಂಡು ಬಿಎ ಓದಬೇಕೆಂದಿದ್ದೇನೆ. ಇದು ಮುಕ್ತ ವಿವಿಗಳಲ್ಲಿ ಇದೆಯೇ? ಇದನ್ನೂ ಓದಿದರೆ ಸರ್ಕಾರಿ ಕೆಲಸಕ್ಕೆ ಸೇರಬಹುದೇ?ನೀವು ಪತ್ರಿಕೋದ್ಯಮ ಆರಿಸಿಕೊಂಡು ಬಿಎ ಕಲಿಯಬಹುದು. ಇದು ಮುಕ್ತ ವಿವಿಗಳಲ್ಲೂ ಲಭ್ಯವಿದೆ. ಇದನ್ನು ಕಲಿಯುವುದರಿಂದ ಸರ್ಕಾರಿ ಕೆಲಸಕ್ಕೆ ಸೇರಲು ಅಡ್ಡಿಯಿಲ್ಲ. ಆದರೆ ಖಾಸಗಿ ಕ್ಷೇತ್ರದಲ್ಲಿ ಅವಕಾಶಗಳು ಜಾಸ್ತಿ. ಇದು ನಿಮ್ಮ ವೃತ್ತಿ ಸಾಮರ್ಥ್ಯವನ್ನು ಅವಲಂಬಿಸಿದೆ.* ಅಮತಾ ಸಜ್ಜನ್, ಗಾಳಿಗೆರೆ, ಗುಬ್ಬಿ ತಾಲ್ಲೂಕು

ನಾನು ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ಆಯ್ಕೆ ಮಾಡಿಕೊಂಡು ಶೇ 86 ಅಂಕ ಗಳಿಸಿದ್ದೇನೆ. ನಮ್ಮ ತಂದೆ ತಾಯಿಗಳಿಗೆ ಗೌರವ ಮತ್ತು ಹೆಮ್ಮೆ ತರುವ ಕೆಲಸ ಪಡೆಯಲು ಯಾವ ಕೋರ್ಸಿಗೆ ಸೇರಬೇಕು?ನಿಮ್ಮ ಹಾಗೆಯೇ ಎಲ್ಲ ಮಕ್ಕಳು ಚಿಂತಿಸಲಿ ಎಂಬುದು ನನ್ನ ಅಭಿಲಾಷೆ. ನೀವು ಯಾವುದೇ ಕೆಲಸಕ್ಕೆ ಹೋಗಲಿ ನಿಷ್ಠೆಯಿಂದ, ಪ್ರಾಮಾಣಿಕತೆಯಿಂದ ದುಡಿದರೆ ಅದೇ ತಂದೆತಾಯಿಗಳಿಗೆ ಗೌರವ, ಹೆಮ್ಮೆ ತರುತ್ತದೆ. ಪ್ರಾಯಶಃ ಈಗಾಗಲೇ ನೀವು ನಿಮ್ಮ ಮುಂದಿನ ಕೋರ್ಸಿನ ಆಯ್ಕೆ ಮಾಡಿಕೊಂಡಿರ ಬಹುದು. ಅದು ಯಾವುದೇ ಇರಲಿ ಶ್ರದ್ಧೆಯಿಂದ ಅಭ್ಯಾಸ ಮುಂದುವರಿಸಿ.*ರಘು ಎಸ್, ವೈ ಎನ್ ಹೊಸಕೋಟೆಇಂಗ್ಲಿಷ್ ಎಂಎ ನಂತರ ಎಂಎಡ್, ಎಂಲ್ ಮಾಡಲು ಬೇಕಾದ ಅರ್ಹತೆಗಳೇನು? ಸೆಟ್, ನೆಟ್ ಪರೀಕ್ಷೆಯಿಂದ ಏನು ಪ್ರಯೋಜನ. ಇದಕ್ಕೆ ಬೇಕಾದ ಪುಸ್ತಕಗಳ ಬಗ್ಗೆ ಮಾಹಿತಿ ಕೊಡಿ.ಎಂಎಡ್, ಎಂಫಿಲ್ ಮಾಡಲು ವಿವಿಗಳು ಎಲ್ಲಾ ಮಾಹಿತಿ ಜತೆ ಪ್ರಕಟಣೆ ನೀಡುತ್ತವೆ. ಇದನ್ನು ವಿವಿಗಳ ವೆಬ್‌ಸೈಟ್ ಮೂಲಕವೂ ಪಡೆಯಬಹುದು. ಕೆಲವು ಖಾಸಗಿ ಕಾಲೇಜುಗಳಲ್ಲಿ ಎಂಎಡ್ ಲಭ್ಯವಿದ್ದು ಪ್ರವೇಶ ಸಿಗುವುದು ಅಂತಹ ಕಷ್ಟವೇನಿಲ್ಲ. ಯುಜಿಸಿ ಮಾನ್ಯತೆ ಪಡೆದ ಕಾಲೇಜುಗಳಲ್ಲಿ ಆಯ್ಕೆ ಆಗಲು ಸೆಟ್, ನೆಟ್ ಅಗತ್ಯ. ನೆಟ್ ಪರೀಕ್ಷೆ ಪಾಸಾದವರಿಗೆ ಇನ್ನೂ ಹೆಚ್ಚಿನ ಕೋರ್ಸುಗಳಲ್ಲಿ ಮುಂದುವರಿಯಲು ಅನುಕೂಲವಾಗುತ್ತದೆ.ಇದನ್ನು ರಾಷ್ಟ್ರಮಟ್ಟದಲ್ಲಿ ನಡೆಸಲಾಗುವುದು. ನೀವು ನಿಮ್ಮ ವಿಷಯದ ಪಠ್ಯಕ್ರಮವನ್ನು ಪಡೆದುಕೊಳ್ಳಿ. ಸದ್ಯಕ್ಕೆ ಈ ಪರೀಕ್ಷೆ ಬರೆಯುವವರು ಪಠ್ಯಕ್ರಮ ಅನುಸರಿಸಿ ಪುಸ್ತಕ, ಮಾಹಿತಿ ಹೊಂದಿಸಿಕೊಂಡು, ತಾವೇ ತಯಾರಾಗುವುದು ರೂಢಿಯಲ್ಲಿದೆ.* ವಿ. ಕುಮಾರ್, ಮಾಗಡಿನಾನು 1995ರಲ್ಲಿ ಏಳನೇ ತರಗತಿ ಮುಗಿಸಿ ಮುಂದೆ 2012ರಲ್ಲಿ ಖಾಸಗಿಯಾಗಿ ಹತ್ತನೆಯ ತರಗತಿ ಪಾಸು ಮಾಡಿಕೊಂಡಿದ್ದೇನೆ. ಈಗ ಕಲಾ ವಿಭಾಗದಲ್ಲಿ ದ್ವಿತೀಯ ಪಿಯುಸಿ ಕಲಿಯಬೇಕೆಂದಿದ್ದೇನೆ. ಮುಂದೆ ಲೋಕಸೇವಾ ಆಯೋಗದ ಪರೀಕ್ಷೆಗಳಿಗೆ ಬರೆಯಲು, ರಾಜ್ಯ ಸರ್ಕಾರದ ನೌಕರಿ ಗಳಿಸಲು ಅರ್ಹನಾಗಿದ್ದೇನೆಯೇ? ವ್ಯಾಸಂಗ ಪ್ರಮಾಣ ಪತ್ರ ಕಡ್ಡಾಯವೇ? ನೀವು ಖಾಸಗಿಯಾಗಿ ಹತ್ತನೆ ತರಗತಿ ಪರೀಕ್ಷೆಗೆ ಕಟ್ಟಿದ ಪ್ರೌಢಶಾಲೆಯಿಂದ ಬಾಹ್ಯ ಅಭ್ಯರ್ಥಿ ಎಂಬ ಟಿಸಿ ಪಡೆದುಕೊಳ್ಳಿ. ಮಂಡಲಿಯವರು ನೀಡಿರುವ ಪ್ರಮಾಣ ಪತ್ರ ಸಹ ಪಡೆದುಕೊಳ್ಳಿ. ಏಳನೆ ತರಗತಿವರೆಗೆ ಕಲಿತಿರುವ ಶಾಲೆಯ ಜೆರಾಕ್ಸ್ ಪ್ರತಿ ಅಥವಾ ದ್ವಿಪ್ರತಿ ಟಿಸಿ ಇಟ್ಟುಕೊಳ್ಳಿ. ಅದೇ ಶಾಲೆಯಿಂದ ವ್ಯಾಸಂಗ ಪ್ರಮಾಣಪತ್ರ ಪಡೆದುಕೊಳ್ಳಿ. ಇವುಗಳು ನಿಮಗೆ ಸರ್ಕಾರಿ ನೌಕರಿ ಪಡೆಯಲು ನೆರವಾಗುತ್ತದೆ. 

ಪ್ರಶ್ನೆ ಕಳಿಸಬೇಕಾದ ವಿಳಾಸ: ಸಂಪಾದಕರು, ಶಿಕ್ಷಣ ವಿಭಾಗ, ಪ್ರಜಾವಾಣಿ, 75 ಎಂಜಿ ರಸ್ತೆ,ಬೆಂಗಳೂರು 560001ಪ್ರಶ್ನೆಗಳನ್ನು ಇಮೇಲ್‌ನಲ್ಲೂ ಕಳಿಸಬಹುದು:shikshanapv@gmail.com

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.