ಗುರುವಾರ , ಮೇ 28, 2020
27 °C

ಪ್ರಸಿದ್ಧ ಚಲನಚಿತ್ರಗಳ ಪ್ರದರ್ಶನ ಉದ್ಘಾಟನಾ ಸಮಾರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಾಗರ: ಹಿಂಸೆ ಹಾಗೂ ಸಂಕುಚಿತತೆಗೆ ಕಾರಣವಾಗುವ ರಾಷ್ಟ್ರೀಯತೆಯ ವಾದವನ್ನು ರವೀಂದ್ರನಾಥ್ ಟ್ಯಾಗೋರ್ ತಿರಸ್ಕರಿಸಿದ್ದರು ಎಂದು ಸಾಹಿತಿ ಡಾ.ಕೆ. ಮರುಳಸಿದ್ದಪ್ಪ ಹೇಳಿದರು.‘ಚರಕ ಉತ್ಸವ’ದ ಅಂಗವಾಗಿ ಗಾಂಧಿ ಮಂದಿರದಲ್ಲಿ ಒಡನಾಟ ಹಾಗೂ ಚರಕ ಸಂಸ್ಥೆ ನಾಲ್ಕು ದಿನಗಳ ಕಾಲ ಏರ್ಪಡಿಸಿರುವ ರವೀಂದ್ರನಾಥ ಟಾಗೋರರ ಕೃತಿಗಳನ್ನು ಆಧರಿಸಿದ ಪ್ರಸಿದ್ಧ ಚಲನಚಿತ್ರಗಳ ಪ್ರದರ್ಶನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ಟಾಗೋರ್ ಕೇವಲ ಸಾಹಿತಿ ಮಾತ್ರವಲ್ಲ. ಅವರು ಶಿಕ್ಷಣದ ಬಗ್ಗೆ ಆಳವಾದ ಅಧ್ಯಯನ ನಡೆಸಿದ ವ್ಯಕ್ತಿ. ಶಾಂತಿನಿಕೇತನ ಸ್ಥಾಪಿಸುವ ಮೂಲಕ ಆದರ್ಶ ಶಿಕ್ಷಣದ ಕ್ರಮವನ್ನು ಭಾರತಕ್ಕೆ ಪರಿಚಯಿಸಿದವರು. ಬದುಕು ಹಾಗೂ ಶಿಕ್ಷಣ ಬೇರೆ ಬೇರೆಯಲ್ಲ. ಶಿಕ್ಷಣ ಎಂದರೆ ಕೇವಲ ಮಾಹಿತಿ ನೀಡುವುದಷ್ಟೇ ಅಲ್ಲ. ಅದು ವ್ಯಕ್ತಿತ್ವ ರೂಪಿಸುವುದಕ್ಕೆ ಸಂಬಂಧಪಟ್ಟದ್ದು, ಎಂಬುದನ್ನು ತೋರಿಸಿಕೊಟ್ಟದ್ದು ಟಾಗೋರ್‌ರ ಹೆಗ್ಗಳಿಕೆಯಾಗಿದೆ ಎಂದರು.ಅಭಿವೃದ್ಧಿಯ ಪರಿಕಲ್ಪನೆ ಹೇಗೆ ಹಿಂಸೆ ಹಾಗೂ ತಾರತಮ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಟಾಗೋರ್ ಬಹಳ ಹಿಂದೆಯೆ ತಮ್ಮ ನಾಟಕಗಳ ಮೂಲಕ ಸಮರ್ಥವಾಗಿ ಚಿತ್ರಿಸಿದ್ದಾರೆ. ಗಾಂಧಿ ಹಾಗೂ ಟಾಗೋರ್‌ರ ಚಿಂತನೆ ನಡುವೆ ಅನೇಕ ಸಾಮ್ಯತೆಗಳಿವೆ. ಸಣ್ಣ ಸಣ್ಣ ಸಮುದಾಯಗಳು ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡೆ ಅವುಗಳ ಮೂಲಕವೇ ಸದೃಢ ಭಾರತ ರೂಪುಗೊಳ್ಳಬೇಕೆಂದು ಟಾಗೋರ್‌ರು ಕನಸು ಕಂಡಿದ್ದರು ಎಂದು ಹೇಳಿದರು.ಕನ್ನಡ ನವೋದಯ ಸಾಹಿತ್ಯದ ಮೇಲೆ ಟಾಗೋರ್‌ರ ಪ್ರಭಾವ ಗಾಢವಾಗಿದೆ. ಮಾಸ್ತಿ, ಬೇಂದ್ರೆ, ಕುವೆಂಪು ಅವರ ಬರವಣಿಗೆಗಳಲ್ಲಿ ಟಾಗೋರ್‌ರ ಚಿಂತನೆಯ ನೆರಳನ್ನು ಕಾಣಬಹುದು ಎಂಬುದನ್ನು ಉದಾಹರಣೆ ಸಹಿತ ಅವರು ವಿವರಿಸಿದರು.ಕುವೆಂಪು ಹಾಗೂ ಟಾಗೋರ್‌ರ ಚಿಂತನೆಗಳಲ್ಲಿ ಅನೇಕ ಸಮಾನ ಅಂಶಗಳಿವೆ. ಇಬ್ಬರಿಗೂ ನಿಸರ್ಗ, ಅಧ್ಯಾತ್ಮ, ಜಾತ್ಯತೀತತೆ ಮುಖ್ಯವಾಗಿತ್ತು. ಕಲೆಗಿಂತ ಅನುಭಾವ ದೊಡ್ಡದು ಎಂದು ಇಬ್ಬರೂ ನಂಬಿದ್ದರು. ಪುರಾಣವನ್ನು ಮರು ವ್ಯಾಖ್ಯಾನಿಸಿ ಹೊಸ ಅರ್ಥದಲ್ಲಿ ನೋಡಬೇಕು, ಸ್ತ್ರೀಯರಿಗೆ ಹೆಚ್ಚಿನ ಸ್ವಾತಂತ್ರ್ಯ ಇರಬೇಕು ಎನ್ನುವುದು ಕೂಡ ಇಬ್ಬರ ನಿಲುವು ಆಗಿತ್ತು ಎಂದು ಹೇಳಿದರು.ಟಾಗೋರ್‌ರಿಗೆ ದೇಶಭಕ್ತಿ ಹಾಗೂ ಮಾನವೀಯತೆಯ ನಡುವೆ ಆಯ್ಕೆ ಬಂದರೆ ಮೊದಲು ಮಾನವೀಯತೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಜಾತಿಪದ್ದತಿ, ಮೂಢನಂಬಿಕೆ  ಹೇಗೆ ಶೋಷಣೆಗೆ ದಾರಿ ಮಾಡಿಕೊಡುತ್ತದೆ ಎಂಬ ಹೊಳಹುಗಳನ್ನು ಟಾಗೋರ್‌ರ ಬರಹದಲ್ಲಿ ಕಾಣಬಹುದು. ಕರ್ನಾಟಕ ರಾಜಕೀಯವಾಗಿ ಮಾತ್ರವಲ್ಲದೆ ಸಾಂಸ್ಕೃತಿಕವಾಗಿಯೂ ಮೂಲಭೂತವಾದದತ್ತ ಹೊರಳುತ್ತಿರುವ ಈ ಹೊತ್ತಿನಲ್ಲಿ ಟಾಗೋರ್‌ರ ಚಿಂತನೆ ಹೆಚ್ಚು ಪ್ರಸ್ತುತ ಎಂದರು.ಹಿಂದಿ ಕವಿ ರವೀಂದ್ರ ತ್ರಿಪಾಠಿ ಮಾತನಾಡಿ, ಜೀವನದ ಸಣ್ಣ ಸಣ್ಣ ಸಂಗತಿಗಳಲ್ಲೂ ಸೊಬಗು ಇದೆ ಎಂಬ ತತ್ವವನ್ನು ಸಾರಿದವರು ಟಾಗೋರ್ ಎಂದು ಹೇಳಿದರು.

ಒಡನಾಟದ ಅಧ್ಯಕ್ಷ ಸಾಹಿತಿ ಡಾ.ನಾ.ಡಿಸೋಜ, ಮೈಸೂರು ಫಿಲಂ ಸೊಸೈಟಿಯ ಮುದ್ದುಕೃಷ್ಣ ಹಾಜರಿದ್ದರು.  ನಂತರ ಟಾಗೋರ್‌ರನ್ನು ಕುರಿತ ಸಾಕ್ಷ್ಯಚಿತ್ರ ಹಾಗೂ ಸತ್ಯಜಿತ್‌ರೇ ನಿರ್ದೇಶನದ ‘ದೇವಿ’ ಚಲನಚಿತ್ರ ಪ್ರದರ್ಶನಗೊಂಡಿತು. ಶುಕ್ರವಾರ ಸಂಜೆ ಬಿಮಲ್‌ರಾಯ್ ನಿರ್ದೇಶನದ ‘ಕಾಬೂಲಿವಾಲ’ ಚಿತ್ರ ಪ್ರದರ್ಶನ ನಡೆಯಲಿದೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.