ಬುಧವಾರ, ಮೇ 19, 2021
26 °C

ಪ್ರಾಚೀನ ಕಾವ್ಯ ಈಗಲೂ ಪ್ರಸ್ತುತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ಪಂಪನಿಂದ ಹಿಡಿದು ಮುದ್ದಣನವರೆಗಿನ ಕಾವ್ಯ ಅಪ್ರಸ್ತುತ ಎನ್ನುವವರು ಇದ್ದಾರೆ. ಆದರೆ ಪ್ರಾಚೀನ ಕಾವ್ಯಗಳ ಪ್ರಸ್ತುತತೆ ಈಗಲೂ ಉಳಿದಿದೆ~ ಎಂದು ಕೇಂದ್ರ ಕಾರ್ಪೊರೇಟ್ ಸಚಿವ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.ಬಿ.ಎನ್.ಇ.ಎಸ್. ಕಾಲೇಜು, ಕೇಂದ್ರ ಸಾಹಿತ್ಯ ಅಕಾಡೆಮಿಯೊಂದಿಗೆ ನಗರದ ಯವನಿಕಾ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ `ರತ್ನಾಕರವರ್ಣಿ- ಪ್ರಸ್ತುತತೆ ಮತ್ತು ಇತಿವೃತ್ತ~ ರಾಜ್ಯಮಟ್ಟದ ಎರಡು ದಿನಗಳ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.`ಟಾಲ್‌ಸ್ಟಾಯ್‌ನ ಕೃತಿಗಳಿಗೂ ಕುವೆಂಪು ಕೃತಿಗಳಿಗೂ ವ್ಯತ್ಯಾಸವಿದೆ. ಕುವೆಂಪು ರಾಮಾಯಣ ದರ್ಶನಂ ರಚಿಸುವಾಗ ಅವರ ಮೇಲೆ ಸ್ವಾತಂತ್ರ್ಯ ಹೋರಾಟ, ರಾಮಕೃಷ್ಣ ಪರಮಹಂಸ, ಗಾಂಧೀಜಿ, ರವೀಂದ್ರನಾಥ ಟ್ಯಾಗೋರರ ಪ್ರಭಾವವಿತ್ತು. ಹೀಗಾಗಿ ಕಾವ್ಯದ ಜತೆಗೆ ಕವಿಯ ಸುತ್ತಲಿನ ಪರಿಸ್ಥಿತಿ ಏನಿತ್ತು ಎಂಬುದು ಕೂಡ ಮುಖ್ಯವಾಗುತ್ತದೆ~ ಎಂದರು.`ಕಥಾವಸ್ತು ಎಂಬುದು ಸರಳ ರೇಖೆ. ಕವಿಯ ಪ್ರತಿಭೆ ಮಾತ್ರ ಕಥೆಯನ್ನು ಸೃಜನಶೀಲವಾಗಿ ಹೆಣೆಯುತ್ತದೆ. ಸಹಜ ಉಸಿರಾಟದಂತೆ ಕಾವ್ಯ ರಚನೆಯಾಗಬೇಕು. ವಸ್ತು ಯಾವುದೇ ಇರಲಿ ಕವಿಯ ಪ್ರತಿಭೆ ಮತ್ತು ಅದನ್ನು ನಿರ್ವಹಿಸಿದ ರೀತಿ ಮುಖ್ಯವಾಗುತ್ತದೆ. ಕವಿಯಿಂದ ಕಥಾವಸ್ತುವಿಗೆ ಹೊಸ ಬೆಳಕು ಶಕ್ತಿ ದೊರೆಯುತ್ತದೆ~ ಎಂದು ತಿಳಿಸಿದರು.`ಪಂಪ, ರನ್ನ, ಪೊನ್ನರಿಗೆ ಜೈನಧರ್ಮ ಅಗತ್ಯವಾಗಿತ್ತು. ಆದರೆ ರತ್ನಾಕರವರ್ಣಿಯ ಕಾಲಕ್ಕೆ ಜೈನಧರ್ಮವೇ ಬಂಧನವಾಗಿತ್ತು. ಕನ್ನಡದಲ್ಲಿ ನಡೆದ ಭಕ್ತಿ ಚಳವಳಿ ಇದಕ್ಕೆ ಕಾರಣ ಇರಬಹುದು.ರತ್ನಾಕರವರ್ಣಿಯಂತಹರು ರಚಿಸಿದ ಕೃತಿಗಳನ್ನು ಓದುವುದರಿಂದ ಆ ಕಾಲದ ಜೀವನ ತತ್ವ ಅರಿವಾಗುತ್ತದೆ. ಈ ಬಗ್ಗೆ ವಿಮರ್ಶೆಗಳು ಹೆಚ್ಚಾಗಿ ನಡೆಯುವುದರಿಂದ ಪ್ರಾಚೀನ ಕಾವ್ಯಗಳ ಪ್ರಸ್ತುತತೆಯ ಮಹತ್ವ ಅರಿವಾಗುತ್ತದೆ~ ಎಂದು ಹೇಳಿದರು.`ರತ್ನಾಕರವರ್ಣಿ ಛಂದಸ್ಸಿಗೆ ಹೆಚ್ಚು ಘನತೆ ತಂದುಕೊಟ್ಟ ಕವಿ. ಆತನಿಂದ ಭಾಷೆಗೆ ಹೊಸ ಪ್ರೇರಣೆ ದೊರೆಯಿತು. ಆತನ ಕೃತಿ ಭರತೇಶ ವೈಭವದಲ್ಲಿ ಇಡೀ ಯಕ್ಷಗಾನದ ಲಯವೇ ತುಂಬಿದೆ. ಆತನನ್ನು ಶೃಂಗಾರ, ವೈರಾಗ್ಯಗಳ ಸಮನ್ವಯದ ಕವಿ ಎನ್ನುತ್ತಾರೆ ಯೋಗ- ಭೋಗಗಳ ಸಾಂಗತ್ಯದ ಮೂಲಕ ಕಾವ್ಯ ರಚಿಸಿದ ಆತನ ಕವಿತಾ ಶಕ್ತಿ ಅದ್ಭುತವಾದುದು. ಆತನ ಕಾವ್ಯವನ್ನು ಓದದವರು ಕನ್ನಡಿಗರೇ ಅಲ್ಲ~ ಎಂದರು.`ಕನ್ನಡಿಗರು ಮೊದಲು ಕನ್ನಡ, ಕರ್ನಾಟಕದ ಬಗ್ಗೆ ಅರಿಯಬೇಕು. ಆಗ ಇಂಗ್ಲಿಷ್ ಕಷ್ಟವಾಗುವುದಿಲ್ಲ. ಒಂದು ವಿಷಯದ ಬಗ್ಗೆ ಮೊದಲು ಏಕಾಗ್ರತೆ ವಹಿಸೋಣ. ನಂತರ ಉಳಿದದ್ದರ ವಿಚಾರ~ ಎಂದು ತಿಳಿಸಿದರು.ವಿಮರ್ಶಕ ಡಾ.ಎಚ್.ಎಸ್.ರಾಘವೇಂದ್ರರಾವ್, `ರತ್ನಾಕರ ವರ್ಣಿಯನ್ನು ಕೇವಲ ಯೋಗ ಭೋಗದ ಕವಿ ಎಂದೇ ಅಧ್ಯಯನ ಮಾಡಲಾಗುತ್ತಿದೆ. ಇಷ್ಟೇ ಆದರೆ ಅದು ಆತನಿಗೆ ಮಾಡಿದ ಅವಮಾನ. ವಿವಿಧ ಆಯಾಮಗಳೊಂದಿಗೆ ಕೃತಿಯನ್ನು ಅಧ್ಯಯನ ಮಾಡಬೇಕಿದೆ~ ಎಂದರು.  `ಪ್ರಾಚೀನ ಕಾವ್ಯಗಳು ಹೊಸ ಬಗೆಯ ಓದಿಗೆ ಸಿದ್ಧವಾಗಬೇಕು. ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರಕಿಸಿಕೊಟ್ಟಿರುವುದೇ ಈ ಕಾರಣಕ್ಕೆ. ಹಳೆಯ ಹಾದಿಯಲ್ಲೇ ರಮಿಸುವುದು ಬೇಡ. ಯಾವುದನ್ನೂ ಓದದೆ ಹೊಗಳುವುದೂ ಬೇಡ. ಓದದ ಹೊಗಳಿಕೆ ಅಪಾಯಕ್ಕೆ ದಾರಿ ಮಾಡಿಕೊಡುತ್ತದೆ~ ಎಂದು ಅವರು ಕಿವಿಮಾತು ಹೇಳಿದರು. `ರತ್ನಾಕರವರ್ಣಿ ಭರತನನ್ನು ಚಕ್ರವರ್ತಿಗಿಂತ ಹೆಚ್ಚಾಗಿ ಒಬ್ಬ ಮನುಷ್ಯನಂತೆ ಕಂಡ. ತನ್ನ ಕಾವ್ಯದ ನಾಯಕನನ್ನು ಆಳು, ತಂದೆ, ಮಗ, ಒಡೆಯ ಹೀಗೆ ವೈವಿಧ್ಯಮಯವಾಗಿ ಚಿತ್ರಿಸಿದ. ಕುಟುಂಬದ ಚೌಕಟ್ಟಿನೊಳಗೆ ಧರ್ಮವನ್ನು ಕಂಡು ಪರಾಕ್ರಮದಿಂದ ಧರ್ಮವನ್ನು ಬಿಡಿಸಲು ಯತ್ನಿಸಿದ~ ಎಂದು ವೆುಚ್ಚುಗೆ ವ್ಯಕ್ತಪಡಿಸಿದರು.`ಬಾಹುಬಲಿ ಮನುಕುಲದ ಆದರ್ಶವಾದರೆ ಭರತ ಅದರ ವಾಸ್ತವ ರೂಪ. ರತ್ನಾಕರವರ್ಣಿಯ ಕಾವ್ಯದ ಭರತನು ಕನ್ನಡಿಯಲ್ಲಿ ಕಂಡ ನಾವು ನೀವೇ ಆಗಿದ್ದಾನೆ. ಆತನ ಕೃತಿಯನ್ನು ಹಸನಾದ ಕುಟುಂಬ ಜೀವನಕ್ಕೆ ಒಡ್ಡಿದ ಕಲಾತ್ಮಕ ಪ್ರತಿಮೆ ಎನ್ನಬಹುದು. ಭರತೇಶ ವೈಭವವು ಕರಾವಳಿಯ ಅದರಲ್ಲೂ ತುಳುನಾಡಿನ ಬದುಕನ್ನು ಹಿಡಿದಿಟ್ಟಿರುವ ಭಂಡಾರವೇ ಆಗಿದೆ. ಆಡುಮಾತಿನಲ್ಲಿ ಕಾವ್ಯವನ್ನು ಕಟ್ಟಿಕೊಟ್ಟಿದ್ದಾನೆ~ ಎಂದು ಅವರು ಹೇಳಿದರು.ಕವಿ ಡಾ.ಜಿ.ಎಸ್.ಸಿದ್ಧಲಿಂಗಯ್ಯ, ಸಂಶೋಧಕ ಡಾ. ಹಂಪ ನಾಗರಾಜಯ್ಯ, ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್, ಬಿಎಸ್‌ಎನ್‌ಎಲ್ ಸಂಸ್ಥೆ ಅಧ್ಯಕ್ಷ ಬಿ.ಎಸ್.ಅಶ್ವತ್ಥನಾರಾಯಣ, ಕಾಲೇಜಿನ ಗೌರವ ಕಾರ್ಯದರ್ಶಿ ಪ್ರೊ. ಕೆ.ಇ.ರಾಧಾಕೃಷ್ಣ, ಕೋಶಾಧ್ಯಕ್ಷ ಬಿ.ವಿ.ಕುಮಾರ್, ಪ್ರಾಂಶುಪಾಲ ಪ್ರೊ.ಎಂ.ಎಸ್.ಕೃಷ್ಣಮೂರ್ತಿ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

`ನ್ಯಾ.ಶಿವರಾಜ್ ಪಾಟೀಲ್ ಮೊದಲೇ ಅರಿಯಬೇಕಿತ್ತು~
`ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಅವರಿಗೆ ಲೋಕಾಯುಕ್ತ ಅಧಿಕಾರ ಸ್ವೀಕರಿಸುವಾಗಲೇ ಎಲ್ಲಾ ಸಂಗತಿಗಳ ಬಗ್ಗೆ ಅರಿವಿರಬೇಕಿತ್ತು. ಅತ್ಯಂತ ಗೌರವದಿಂದ ಕಾಣುವ ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಅವರ ನಂತರ ಪಾಟೀಲ್ ಲೋಕಾಯುಕ್ತರಾಗಿದ್ದರು. ಅವರು ಅಧಿಕಾರ ಕಳೆದುಕೊಂಡದ್ದು ದುರದೃಷ್ಟಕರ~ ಎಂದು ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.ಕಾರ್ಯಕ್ರಮದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸಚಿವ ಯೋಗೀಶ್ವರ್ ಭಾಗಿಯಾಗಿದ್ದಾರೆ ಎನ್ನಲಾದ ಮೆಗಾಸಿಟಿ ಹಗರಣದ ಬಗ್ಗೆ ಕೇಳಿದ ಪ್ರಶ್ನೆಗೆ, `ಹಗರಣದ ಕುರಿತು ಗಂಭೀರ ವಂಚನೆಯಾಗಿದೆ ಎಂದು ತನಿಖಾ ಸಂಸ್ಥೆ ವರದಿ ನೀಡಿದೆ.ಕಾನೂನಿನ ಪ್ರಕಾರ ಕ್ರಮ ಜರುಗುತ್ತದೆ. ಅವರನ್ನು ಅರಣ್ಯ ಸಚಿವರ ಸ್ಥಾನದಲ್ಲಿ ಮುಂದುವರಿಸುವುದು ರಾಜ್ಯ ಸರ್ಕಾರ ಹಾಗೂ ಬಿಜೆಪಿ ಪಕ್ಷಕ್ಕೆ ಬಿಟ್ಟ ವಿಚಾರ~ ಎಂದರು.`ಕೊಪ್ಪಳದಲ್ಲಿ ಸಹಜ ಚುನಾವಣೆ ನಡೆದರೆ ಕಾಂಗ್ರೆಸ್ ನೂರು ಪಾಲು ಗೆಲ್ಲುತ್ತದೆ. ರಾಜ್ಯ ಸರ್ಕಾರ ಹಣ ಅಧಿಕಾರ ಪ್ರಯೋಗ ಮಾಡಿರುವುದರಿಂದ ಪಕ್ಷ ಹೋರಾಟ ನಡೆಸಬೇಕಿರುವುದು ಅನಿವಾರ್ಯ~ ಎಂದು ಹೇಳಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.