ಶುಕ್ರವಾರ, ಮೇ 14, 2021
27 °C

ಪ್ರೇರಕ ಶಿಕ್ಷಕರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಗಸ್ಟ್ 7ನೇ ತಾರೀಖು (2009) ಕೋಲಾರ ನಗರದ ಹೊರವಲಯದಲ್ಲಿರುವ ಕೆರೆಯಂಗಳವೊಂದರಲ್ಲಿ  ಭಾರತೀಯ ವಾಯುಸೇನೆಯ ಮಹತ್ವಾಕಾಂಕ್ಷೆಯ ಪ್ರಯೋಗವೊಂದು ಯಶಸ್ಸು ಕಂಡಿತ್ತು. ಅದು  ಎಂ.ಎ.ವಿ (ಮಿನಿ ಏರ್ ವೆಹಿಕಲ್)ಎಂದು ಕರೆಯಲ್ಪಡುವ ಪುಟ್ಟ ವಿಮಾನದ ಹಾರಾಟದ ಪ್ರಯೋಗ. ಪುಟ್ಟವಿಮಾನದ ಹಾರಾಟ ಇಂದು ಅಪರೂಪವೇನಲ್ಲ ಎನಿಸಬಹುದು. ಆದರೆ ಇದು ಆಟದ ವಿಮಾನವಾಗಿರಲಿಲ್ಲ.ಪ್ರಕೃತಿ ವಿಕೋಪಗಳಾದ ಭೂಕಂಪ,ಪ್ರವಾಹ ಇತ್ಯಾದಿಗಳಷ್ಟೆ ಅಲ್ಲದೆ ದೇಶದ ರಕ್ಷಣೆಗೆ ಅತ್ಯವಶ್ಯವಾದ ಶತ್ರು ನೆಲೆಗಳ ಮೇಲೆ ಗೂಢಚಾರಿಕೆಯನ್ನು ಯಶಸ್ವಿಯಾಗಿ ನಡೆಸಿ ಛಾಯಾಚಿತ್ರಗಳನ್ನು ತೆಗೆದುಕೊಂಡು ಯಶಸ್ವಿಯಾಗಿ ಮರಳಿ ತನ್ನ ಮಾತೃನೆಲೆಗೆ ಹಿಂದಿರುಗಬಲ್ಲ ಚಾಲಕ ರಹಿತ ವಿಮಾನ.ಈ ವಿಮಾನದ ರೂವಾರಿ ಲೆಫ್ಟಿನೆಂಟ್ ಜನರಲ್ ಡಾ ವಿ.ಜೆ.ಸುಂದರಂ ರವರು. ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನೇ ಬಳಸಿ ದೇಶದ ಕ್ಷಿಪಣಿ ಕಾರ್ಯಕ್ರಮವನ್ನು ಜಾಗತಿಕ ಮಟ್ಟಕ್ಕೆ ಒಯ್ದು ನಿಲ್ಲಿಸಿದ ಡಾ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಭಾರತೀಯ ಕ್ಷಿಪಣಿ ಕಾರ್ಯಕ್ರಮದ ಹುದ್ದೆಯಿಂದ ನಿವೃತ್ತರಾಗುವಾಗ ತಮ್ಮ ಸ್ಥಾನಕ್ಕೆ ಸೂಚಿಸಿದ್ದು ಮತ್ತು ನೇಮಿಸಿದ್ದು ಇದೇ ಲೆ:ಜ: ವಿ.ಜೆ.ಸುಂದರಂ ರವರನ್ನು..!ತಮ್ಮ ಯಶಸ್ವಿ ಪ್ರಯೋಗದ ನಂತರ ಇವರು ಸೀದಾ ಹೊರಟಿದ್ದು ಕೋಲಾರದ ಮೆಥೋಡಿಸ್ಟ್ ಶಾಲೆಗೆ. ಅವರು ತಮ್ಮ ಸಂತಸವನ್ನು ಪ್ರಥಮವಾಗಿ ಹಂಚಿಕೊಳ್ಳಲು ಬಯಸಿದ್ದು 65 ವರ್ಷಗಳ ಹಿಂದೆ ಅದೇ ಶಾಲೆಯಲ್ಲಿ  ತಮಗೆ ಶಿಕ್ಷಕಿಯಾಗಿದ್ದ ತಾರಾ ಟೀಚರ್‌ರವರೊಂದಿಗೆ. ಅವರಿಗೆ ಗೊತ್ತಿತ್ತು ಆ ಟೀಚರ್ ಅಲ್ಲಿರುವುದಿಲ್ಲವೆಂದು. ಆದರೆ ಅವರಿಗೆ ಬೇಕಿದ್ದುದು ತಮ್ಮನ್ನು ಗಾಢವಾಗಿ ಪ್ರಭಾವಿಸಿದ್ದ ತಾರಾ ಟೀಚರ್ ಎಲ್ಲಿರಬಹುದೆಂಬ ಸುಳಿವು..!1944ರ ಒಂದು ದಿನ ಕೋಲಾರ ಜಿಲ್ಲೆಯ  ಕೆ ಜಿ ಎಫ್ ನಲ್ಲಿ  ಬ್ರಿಟಿಷ್ ಪೋಲಿಸರು ಸ್ವಾತಂತ್ರ್ಯ ಹೋರಾಟಗಾರರ ಒಂದು ಗುಂಪಿನ ಮೇಲೆ ಲಾಠಿಚಾರ್ಜ್ ಮಾಡಿದ್ದರು. ಆ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದವರಲ್ಲಿ ಮುಂದೆ ಕರ್ನಾಟಕದ ಮುಖ್ಯಮಂತ್ರಿಯಾದ  ಕೆ.ಚೆಂಗಲರಾಯರೆಡ್ಡಿಯವರೂ ಒಬ್ಬರು. ಮರುದಿನ ಎಲ್ಲ ಪತ್ರಿಕೆಗಳಲ್ಲೂ ಇದು ಸುದ್ದಿಯಾಗಿತ್ತು.ಕೋಲಾರದ ಮೆಥೋಡಿಸ್ಟ್ ಶಾಲೆಯಲ್ಲಿ 4ನೇ ತರಗತಿಗೆ ಪಾಠ ಮಾಡುತ್ತಿದ್ದ ತಾರಾ ಎಂಬ ಶಿಕ್ಷಕಿಯ ಮೇಲೆ ಈ ಘಟನೆ ಎಷ್ಟೊಂದು ಪರಿಣಾಮ ಬೀರಿತ್ತೆಂದರೆ, ಅಂದು ತನ್ನ ತರಗತಿಯ ಮಕ್ಕಳಿಗೆ ಇದನ್ನು ಹೇಳುತ್ತಾ ಹೇಳುತ್ತಾ ತುಂಬಾ ಭಾವುಕರಾಗಿ  `ಬಹುಶಃ ಸ್ವತಂತ್ರ ಭಾರತದ ಪೊಲೀಸರೋ,ಮಿಲಿಟರಿಯವರೋ ಆಗಿದ್ದರೆ ನಮ್ಮ ನಾಯಕರುಗಳಿಗೆ ಇಂತಹ ಸ್ಥಿತಿ ಬರುತ್ತಿರಲಿಲ್ಲ.

 

ಮುಂದೆ ನೀವೆಲ್ಲ ಪೊಲೀಸ್ ಇಲಾಖೆಗೋ, ಮಿಲಿಟರಿಗೋ ಸೇರಿ ದೇಶಸೇವೆ ಮಾಡಬೇಕು~ ಎಂದು ಹೇಳಿದ್ದರಂತೆ. ಆ ತರಗತಿಯಲ್ಲಿ ಕುಳಿತಿದ್ದ ಜಗದೀಶ ಎಂಬ ಬಾಲಕನನ್ನು ಈ ಮಾತುಗಳು ತುಂಬಾ ಪ್ರಭಾವಿಸಿವೆ.  ಮುಂದೆ ಕಾರಣಾಂತರಗಳಿಂದ ಈ ಬಾಲಕ ತನ್ನ  ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸ್ಕಾಟ್‌ಲ್ಯಾಂಡಿನಲ್ಲಿ ಮುಂದುವರೆಸಬೇಕಾಗಿ ಬಂದಿದೆ.  ಆಗ `ನನ್ನನ್ನು ಕಾಪಾಡಿದ್ದು ತಾರಾ ಟೀಚರ್ ಕಲಿಸಿದ ಇಂಗ್ಲಿಷ್~ ಎಂದು ಆ ಬಾಲಕ ಜಗದೀಶ್ ಅಂದರೆ ಇಂದಿನ ಲೆ:ಜ: ಡಾ ವೇಳ್ಳಚೆರಿ ಜಗದೀಶ್ ಸುಂದರಂ ನೆನೆಯುತ್ತಾರೆ.

 

ನಂತರ ಮೈಸೂರು ವಿಶ್ವವಿದ್ಯಾಲಯದಲ್ಲಿ  ಬಿ.ಎಸ್‌ಸಿ  ಪದವಿ ಪಡೆದು ಅಲ್ಲಿಯೇ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಬಿ.ಇ., ಪದವಿ ಪಡೆದಿದ್ದಾರೆ. ಆ ನಂತರ ಏರೋನಾಟಿಕಲ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದು 1957ರಲ್ಲಿ  ಭಾರತೀಯ ಸೇನೆಗೆ ಸೇರಿದ್ದಾರೆ.1968ರಲ್ಲಿ ಡಿ.ಆರ್.ಡಿ.ಎಲ್ (ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್‌ಮೆಂಟ್ ಲ್ಯಾಬೊರೇಟರಿ)ಗೆ ಸೇರಿ ರಕ್ಷಣಾ ತಂತ್ರಜ್ಞಾನದಲ್ಲಿ ದೇಶ ಸ್ವಾವಲಂಬನೆ ಸಾಧಿಸುವಲ್ಲಿ ಬಹಳ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. 1979ರಲ್ಲಿ ದೇಶ ಪ್ರಯೋಗಿಸಿದ ಮೊದಲ ಕ್ಷಿಪಣಿಯ ವಿನ್ಯಾಸ ಮತ್ತು ನಿರ್ವಹಣೆಗಾಗಿ ಮರುವರ್ಷ ಇವರಿಗೆ ಭಾರತ ಸರ್ಕಾರ `ವಿಶಿಷ್ಟ ಸೇವಾ ಪದಕ~  ನೀಡಿ ಗೌರವಿಸಿದೆ.1984ರಲ್ಲಿ ಭಾರತೀಯ ವಿಜ್ಞಾನ ಮಂದಿರದಿಂದ ಡಾಕ್ಟರೆಟ್ ಪದವಿಯನ್ನೂ ಪಡೆದಿದ್ದಾರೆ. ಹೀಗೆ ದೇಶದ ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಎತ್ತರದ ಸಾಧನೆಗಳನ್ನು ಮಾಡಿದ ವ್ಯಕ್ತಿಯೊಬ್ಬರು ತನ್ನ ಕನಸೊಂದು ಸಾಕಾರಗೊಂಡಾಗ, ಬಾಲ್ಯಕಾಲದ ಶಿಕ್ಷಕಿಯೊಬ್ಬರನ್ನು ಹುಡುಕಿಕೊಂಡು ಹೊರಟರು ಎನ್ನುವುದೇ ಎಲ್ಲಾ ಶಿಕ್ಷಕರನ್ನೂ ರೋಮಾಂಚಿತರನ್ನಾಗಿಸದೆ..?ಸುಂದರಂರವರು ಕೊನೆಗೂ ತಮ್ಮ ಶಿಕ್ಷಕಿಯನ್ನು ಹುಡುಕಿದ್ದಾರೆ. ಅವರ ಮುಂದೆ ನಿಂತು ತಮ್ಮ ಸಾಧನೆಗಳನ್ನು ಹೇಳಿಕೊಂಡಿದ್ದಾರೆ. ಎಲ್ಲದಕ್ಕೂ ಪ್ರೇರಣೆಯಾದ ಆ ಶಿಕ್ಷಕಿಯ ವ್ಯಕ್ತಿತ್ವವನ್ನು ನಮ್ರತೆಯಿಂದ ಸ್ಮರಿಸಿದ್ದಾರೆ. ಈಗ ತೊಂಬತ್ತು ದಾಟಿರುವ ತಾರಾ ಟೀಚರ್‌ಗೆ 68 ವರ್ಷಗಳ ಹಿಂದಿನ ಘಟನೆಗಳು ಅಷ್ಟಾಗಿ ನೆನಪಿಲ್ಲ. ಆದರೆ ತಮ್ಮ ವಿದ್ಯಾರ್ಥಿಗಳನ್ನು ನೆನಪಿಸಿಕೊಳ್ಳುತ್ತಾರೆ. `ನನ್ನ ಜೀವನದಲ್ಲಿ ನನ್ನ  ಸ್ಟೂಡೆಂಟ್ಸ್ ನನಗೆ ತುಂಬಾ ಅಸಾಧಾರಣ ಅನ್ನಿಸುವಂತಹ ಅನುಭವಗಳನ್ನು ಕೊಟ್ಟಿದ್ದಾರೆ. ಯಾರೋ ಎಲ್ಲಿಂದಲೋ ಬರ‌್ತಾರೆ..,ನಾನು ನಿಮ್ಮ ಸ್ಟೂಡೆಂಟು ಅಂತಾರೆ..,ನಾನಿಂಥದನ್ನು ಸಾಧಿಸಲು ನೀವೇ ಪ್ರೇರಣೆ.. ನಿಮ್ಮದೇ ಮಾರ್ಗದರ್ಶನ ಅಂತಾರೆ...ಓಹ್...ವಾಸ್ತವವಾಗಿ ನಾನೇನೂ ಮಾಡಿಲ್ಲ, ಎಲ್ಲವೂ ಅವರವರದೇ ಸಾಧನೆ..ಆದರೆ ಎಲ್ಲ ಕ್ರೆಡಿಟ್ಟೂ ನನಗೆ ಕೊಡ್ತಾರೆ.. ಇದು `ಮಿರಾಕಲ್~ ಅಲ್ಲವೇ..!?`ಆ ವಯೋವೃದ್ಧ ಕಂಗಳಲ್ಲಿ ಎಲ್ಲರನ್ನೂ ಸ್ವಂತ ಮಕ್ಕಳಂತೆ ನೋಡುವ ಮಾತೆಯ ಮಮತೆ ಈಗಲೂ ಕಾಣುತ್ತದೆ.ಸುಂದರಂ ಹೇಳುತ್ತಾರೆ.. `ಪ್ರಪಂಚದ ಅನೇಕ ದೇಶಗಳನ್ನು ಸುತ್ತಿದೆ, ಎಷ್ಟೋ ದೇಶಗಳ ಜನರೊಂದಿಗೆ ಒಡನಾಡಿದೆ.ಎಲ್ಲ ಕಡೆಯೂ ನಾನು ನೆನಪಿಸಿಕೊಳ್ಳುತ್ತಿದ್ದುದು ತಾರಾ ಟೀಚರ್‌ರವರನ್ನ .ಅವರು ಕಲಿಸಿದ ಇಂಗ್ಲಿಷಿಗೆ..ಕಲಿಸುತ್ತಿದ್ದ ರೀತಿಗೆ ಮತ್ತು ತಮ್ಮ ಶಿಸ್ತಿನ ಜೀವನದಿಂದ ನಮಗೆ ಮಾದರಿಯಾಗಿದ್ದಕ್ಕೆ.~  ಇದು ಶಿಕ್ಷಕರಿಗೆ ಮಾತ್ರ ಸಿಗುವ ಅವಕಾಶ. ಕೇವಲ ತನ್ನ ಸ್ವಂತ ಬುದ್ಧಿಮತ್ತೆ, ಕ್ರಿಯಾಶೀಲತೆ, ಮತ್ತು ಪ್ರಾಮಾಣಿಕತೆಗಳಿಂದ ಅದ್ಭುತಗಳನ್ನು ಸಾಧಿಸುವ ವ್ಯಕ್ತಿಗಳಿಗೆ ಪ್ರೇರಣೆಯಾಗಬಹುದಾದ ಅವಕಾಶ..!ಇಂದಿನ ತೀರಾ ನಿರಾಶಾದಾಯಕ, ಸಂಕೀರ್ಣ ವ್ಯವಸ್ಥೆಯೊಳಗೂ ಇಂತಹದೊಂದು ಅವಕಾಶ ಎಲ್ಲರಿಗೂ ಇದ್ದೇ ಇರುತ್ತದೆ ಎನ್ನುವುದಕ್ಕೆ ಬೆಂಗಳೂರು ಮಹಾನಗರದೊಳಗಿರುವ ಶ್ರಿರಾಂಪುರದಲ್ಲಿರುವ ನಿವೃತ್ತ ಶಿಕ್ಷಕಿ ಬಿ.ವಿ. ಸುಭದ್ರಮ್ಮನವರು ಒಂದು ಜೀವಂತ ಉದಾಹರಣೆ. ಮೂಲತಃ ಶಿಕ್ಷಕಿಯಾದರೂ ಇವರು ಲೇಖಕಿಯೂ ಹೌದು.ಕನ್ನಡದ ಸಾಕಷ್ಟು ಪತ್ರಿಕೆಗಳಲ್ಲಿ ಇವರು ಬರೆದಿರುವ ಬರಹಗಳಿಗಿಂತ ಇವರು ಹೆಚ್ಚು ಆಪ್ತರೆನಿಸುವುದು ತಮ್ಮ ಸರಳತೆಯಿಂದ ಮತ್ತು ಜ್ಞಾನವನ್ನು ಎಲ್ಲರಿಗೂ ಹಂಚಬೇಕೆಂಬ ಪ್ರಾಮಾಣಿಕ ಕಳಕಳಿಯಿಂದ.ಸುಮಾರು ಮೂವತ್ತು ವರ್ಷಗಳ ಕಾಲ ಅನುದಾನಿತ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ದುಡಿದು ಆ ಅವಧಿಯಲ್ಲೇ ಗಣಿತ,ವಿಜ್ಞಾನ ಮತ್ತು ಭೂಗೋಳದ ಪರಿಕಲ್ಪನೆಗಳನ್ನು ಸರಳವಾಗಿ ಮಕ್ಕಳಿಗೆ ಅರ್ಥೈಸಲು ಪೂರಕವಾದ ಸಾಕಷ್ಟು ಉಪಕರಣಗಳನ್ನು ಸಿದ್ಧಪಡಿಸಿ ಹೆಸರಾದವರು. ಇವರು ಹೇಳಿಕೊಳ್ಳುವಂತೆ ಅವು ಕಲಿಕೋಪಕರಣಗಳಲ್ಲ. ಬದಲಿಗೆ ಗಣಿತ,ವಿಜ್ಞಾನ ಮತ್ತು ಭೂಗೋಳದ ಆಟಿಕೆಗಳು..!        

ಇವರ ಕ್ರಿಯಾಶೀಲತೆಯನ್ನು ಗುರುತಿಸಿ ಡಿ.ಎಸ್.ಇ.ಆರ್.ಟಿ, ಎನ್.ಸಿ.ಇ.ಆರ್.ಟಿ,  ಆಕಾಶವಾಣಿ ಮತ್ತು ದೂರದರ್ಶನಗಳು ಇವರ ಸೇವೆಯನ್ನು ಬಳಸಿಕೊಂಡಿವೆ.ಸುಭದ್ರಮ್ಮನವರ ಹೆಚ್ಚುಗಾರಿಕೆಯೆಂದರೆ ನಿವೃತ್ತರಾದರೂ ಮನೆಯಲ್ಲಿಯೇ ಒಂದು ಸ್ವಯಂ ಸೇವಾ ವಿಜ್ಞಾನ ಘಟಕವೊಂದನ್ನು ಮಾಡಿಕೊಂಡು ಆಸಕ್ತಿಯಿಂದ ಬರುವ ಎಲ್ಲ ಮಕ್ಕಳಿಗೂ ಉಚಿತವಾಗಿ ಪಾಠ ಮಾಡುತ್ತಿರುವುದು..! ಶ್ರೀರಾಂಪುರದ ಸ್ಲಂ ಮಕ್ಕಳಿಗೆ ಸ್ವಯಂಪ್ರೇರಿತರಾಗಿ ಗಣಿತ, ವಿಜ್ಞಾನದ ಪಾಠ ಮಾಡುವುದು ಇವರ ಪ್ರತಿನಿತ್ಯದ ಕಾಯಕ.ಗಣಿತವನ್ನು ಸುಲಭವಾಗಿ ಕಲಿಸಲು ಪ್ರಕೃತಿಯಲ್ಲೇ ದೊರೆಯುವ ಎಲೆ, ಕಡ್ಡಿ, ಬೀಜ ಮುಂತಾದವುಗಳನ್ನೇ ಬಳಸಿ ಗಣಿತದ ಕೆಲ ಕ್ಲಿಷ್ಟ ಪರಿಕಲ್ಪನೆಗಳನ್ನು ಅಬಾಲವೃದ್ಧರಾದಿಯಾಗಿ ಎಲ್ಲರೂ ಸುಲಭವಾಗಿ ಗ್ರಹಿಸಬಹುದಾದ ` ಪ್ರಕೃತಿಯಲ್ಲಿ ಗಣಿತ~  ಎಂಬ ವಿಸ್ಮಯಕಾರಕವಾದ ಸರಳವಿಧಾನವನ್ನು ಪ್ರಚಾರಕ್ಕೆ ತಂದ ಇವರಿಗೆ ಡಿ.ಎಸ್.ಇ.ಆರ್.ಟಿ,  ಎನ್.ಸಿ.ಇ.ಆರ್.ಟಿ,   ಮತ್ತು ಐ.ಎ.ಪಿ.ಟಿ (ಇಂಡಿಯನ್ ಅಸೋಸಿಯೇಷನ್ ಫಾರ್ ಫಿಸಿಕ್ಸ್ ಟೀಚರ್ಸ್)ಯಿಂದಲೂ, ಲಂಡನ್ನಿನ  ಕಾಮನ್‌ವೆಲ್ತ್ ಅಸೋಸಿಯೇಷನ್ ಫಾರ್ ಸೈನ್ಸ್, ಟೆಕ್ನಾಲಜಿ, ಮ್ಯಾಥ್ಸ್ ಅಂಡ್ ಎಂಜಿನಿಯರಿಂಗ್ ನಿಂದಲೂ ಪ್ರಶಸ್ತಿಗಳು ಲಭಿಸಿವೆ.

 

ಇಳಿ ವಯಸ್ಸಿನಲ್ಲೂ ಹೊಸ ಹೊಸ ವಿಷಯಗಳನ್ನು ಕಲಿಯುತ್ತಾ, ಅದನ್ನು ತನ್ನ ಸುತ್ತಲಿನ ಮಕ್ಕಳಿಗೆ ಆದಷ್ಟೂ ಸರಳವಾಗಿ ವಿವರಿಸಲು ಯತ್ನಿಸುತ್ತಾ ಚೇತೋಹಾರಿಯಾಗಿ ಬದುಕುತ್ತಿರುವ ಸುಭದ್ರಮ್ಮನವರು ನಮಗೆ ಮಾದರಿಯಾಗಬೇಕಲ್ಲವೆ..?`ಪಠ್ಯಪುಸ್ತಕದಲ್ಲಿನ ಪರಿಕಲ್ಪನೆಗಳು ಒಣ. ನಾವು ಅವುಗಳಿಗೆ ಜೀವ ತುಂಬಬೇಕೆಂದರೆ ಅವುಗಳನ್ನು ಅರ್ಥೈಸುವ ಪರ್ಯಾಯ ಮಾರ್ಗಗಳನ್ನು ಪ್ರಕೃತಿಯಲ್ಲೇ ಹುಡುಕಬೇಕು.ಸಿಕ್ಕೇ ಸಿಗುತ್ತದೆ. ಜೀವವಿಲ್ಲದ ಕಲಿಕೆ ಎಂದರೆ ಅದೊಂದು ಸಮಯ ವ್ಯರ್ಥ ಮಾಡುವ ಕಸರತ್ತು ಅಷ್ಟೆ. ಬಾಯಿಪಾಠ ಮಾಡು, ಒಪ್ಪಿಸು, ಪರೀಕ್ಷೆಯಲ್ಲಿ ಬರೆ, ಮಾರ್ಕ್ಸ್ ತಗೊ ಇದಿಷ್ಟೇ ಎಲ್ಲ ಶಾಲೆಗಳ ಹಣೆಬರಹ. ಇದೊಂದು ನ್ಯಾಷನಲ್ ವೇಸ್ಟ್~  ಎನ್ನುತ್ತಾರೆ ಸುಭದ್ರಮ್ಮನವರು.ಇಷ್ಟೇ ಅಲ್ಲ ಪರೀಕ್ಷೆಯಲ್ಲಿ ಏನು ಬರೆಯಬೇಕು ಅನ್ನುವುದರ ತಾಲೀಮೂ ಪರೀಕ್ಷೆಗೆ ಮುಂಚೆಯೇ ನಡೆಯುತ್ತದೆ. ಹಾಗಿದ್ದೂ ಏನೂ ಬರೆಯದ ಮಕ್ಕಳನ್ನು ಸ್ಟಾಫ್ ರೂಮಿನಲ್ಲಿ ಕೂರಿಸಿ, ಬರೆಸಿ, ಮಾರ್ಕ್ಸ್ ನೀಡಿ ಮುಂದೆ ತಳ್ಳುವ ಅದ್ಭುತ ವ್ಯವಸ್ಥೆಯೂ ನಮ್ಮಲ್ಲಿದೆ ..! ಇಲ್ಲಿ ಮೋಸಹೋಗುವವರು ಯಾರು... ಮೋಸ ಮಾಡುತ್ತಿರುವವರು ಯಾರು ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ ಅಲ್ಲವೆ.ಏನೂ ಮಾಡದೆ ಕೇವಲ ಮಾಧ್ಯಮಗಳಲ್ಲಿ ಮಿಂಚುವ ಹಂಬಲದ ಹಲವಾರು ಶಿಕ್ಷಕರನ್ನು ಕಂಡಾಗ ಈ ಇಬ್ಬರು ಶಿಕ್ಷಕಿಯರು ನೆನಪಾಗುತ್ತಾರೆ. ಕನಿಷ್ಠ ಶಿಕ್ಷಕರ ದಿನಾಚರಣೆಯಂದಾದರೂ ನಾವು ತಾರಾ ಟೀಚರ್ ಮತ್ತು ಸುಭದ್ರಮ್ಮನವರಂತಹ ಶಿಕ್ಷಕಿಯರನ್ನು ನೆನಪಿಸಿಕೊಳ್ಳಬೇಕಲ್ಲವೇ..?.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.