ಸೋಮವಾರ, ಜನವರಿ 20, 2020
21 °C

ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಜನಸಾಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೋಟಗಾರಿಕಾ ಇಲಾಖೆಯು ಗಣರಾಜ್ಯೋತ್ಸವದ ಅಂಗವಾಗಿ ಲಾಲ್‌ಬಾಗ್‌ನಲ್ಲಿ ಏರ್ಪಡಿಸಿರುವ ವಿಶೇಷ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಗುರುವಾರ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಆಗಮಿಸಿದ್ದರು. ಕಳೆದ ಭಾನುವಾರ ಕೂಡ 1.03 ಲಕ್ಷ ಮಂದಿ ಉದ್ಯಾನಕ್ಕೆ ಭೇಟಿ ನೀಡ್ದ್ದಿದರು.ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಾವಕಾಶ ಕಲ್ಪಿಸಿದ್ದರಿಂದ ಸುಮಾರು 35 ಸಾವಿರ ಮಂದಿ ವಿದ್ಯಾರ್ಥಿಗಳು ಉದ್ಯಾನಕ್ಕೆ ಲಗ್ಗೆಯಿಟ್ಟು ಪ್ರದರ್ಶನ ವೀಕ್ಷಿಸಿದರು. ಪ್ರಮುಖ ಆಕರ್ಷಣೆಯಾಗಿರುವ ಗಾಜಿನ ಮನೆಯ ಸುತ್ತಮುತ್ತ ಕಿಕ್ಕಿರಿದು ಸೇರಿದ್ದ ಸಮೂಹ ಪುಷ್ಪರಾಶಿಯ ಸೊಬಗಿಗೆ ಮನಸೋತಿತು. ವಿಶೇಷವಾಗಿ ಬೌದ್ಧ ಸ್ತೂಪ ಹಾಗೂ `ಹೂ ನದಿ~ಯ ಹೂಗಳನ್ನು ಬುಧವಾರವಷ್ಟೇ ಬದಲಿಸಲಾಗಿತ್ತು. ಕಂಗೊಳಿಸಿದ ಹೂಗಳು ಪುಷ್ಪಪ್ರಿಯರನ್ನು ಹೆಚ್ಚು ಆಕರ್ಷಿಸಿದವು.ಸಾರ್ವಜನಿಕರ ಅನುಕೂಲಕ್ಕಾಗಿ ತೋಟಗಾರಿಕಾ ಇಲಾಖೆಯು ಉದ್ಯಾನದೊಳಗೆ `ಫುಡ್ ಕೋರ್ಟ್~ಗಳನ್ನು ತೆರೆದಿದ್ದರೂ ಅನಧಿಕೃತವಾಗಿ ತಿಂಡಿ-ತಿನಿಸು, ಆಟಿಕೆ, ಬಲೂನುಗಳನ್ನು ಮಾರಾಟ ಮಾಡುತ್ತಿದ್ದ ವ್ಯಾಪಾರಿಗಳ ಸಂಖ್ಯೆಗೇನೂ ಕಡಿಮೆಯಿರಲಿಲ್ಲ. ಪೊಲೀಸ್, ಗೃಹರಕ್ಷಕ ದಳ ಹಾಗೂ ಇಲಾಖೆ ಸಿಬ್ಬಂದಿಯ ಐದಾರು ತಂಡಗಳು ಸುಮಾರು 35 ಸುತ್ತುಗಳಲ್ಲಿ ಉದ್ಯಾನ ಜಾಲಾಡಿ ಅನಧಿಕೃತ ವ್ಯಾಪಾರಿಗಳನ್ನು ಹೊರಗೆ ಕಳಿಸಿದವು.

 

ಇನ್ನು, ವಾಹನ ನಿಲುಗಡೆಗೆ ಜಾಗವಿಲ್ಲದೆ ಗುರುವಾರ ಕೂಡ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಸಿದ್ದಾಪುರ ರಸ್ತೆ ಹಾಗೂ ಕೆ.ಎಚ್. ರಸ್ತೆಯಿಂದ ಬರುವಂತಹ ವಾಹನಗಳ ನಿಲುಗಡೆಗೆ ಉದ್ಯಾನದೊಳಗೆ ಪ್ರತ್ಯೇಕ ಕಡೆಗಳಲ್ಲಿ ಕಲ್ಪಿಸಲಾಗಿದ್ದ ಜಾಗ ಭರ್ತಿಯಾಗಿದ್ದರಿಂದ ಜನತೆ ಪರದಾಡಬೇಕಾಯಿತು.

ಜ. 29ರವರೆಗೆ ಫಲಪುಷ್ಪ ಪ್ರದರ್ಶನ ನಡೆಯಲಿದೆ.ಆ ವೇಳೆಗೆ ಒಟ್ಟು ಆರೇಳು ಲಕ್ಷ ಮಂದಿ ಪ್ರದರ್ಶನ ವೀಕ್ಷಿಸಬಹುದೆಂದು ನಿರೀಕ್ಷಿಸಲಾಗಿದೆ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಎಂ. ಜಗದೀಶ್ `ಪ್ರಜಾವಾಣಿ~ಗೆ ತಿಳಿಸಿದರು. ಪ್ರದರ್ಶನದ ಕೊನೆಯ ದಿನವಾದ ಭಾನುವಾರ ಕೂಡ ಇಷ್ಟೇ ಸಂಖ್ಯೆಯ ಜನ ಆಗಮಿಸುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.ಶುಕ್ರವಾರ ಬೆಳಿಗ್ಗೆ 11 ಗಂಟೆಗೆ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವ ಸಮಾರಂಭದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಪಾಲ್ಗೊಳ್ಳಲಿದ್ದಾರೆ.ಮಧ್ಯಾಹ್ನ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಭಾಗವಹಿಸಲಿದ್ದಾರೆ.

 

ಪ್ರತಿಕ್ರಿಯಿಸಿ (+)