ಗುರುವಾರ , ಮೇ 19, 2022
24 °C

ಫಲಿತಾಂಶ ತಡೆಗೆ ಆದೇಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ `ದ್ವಿತೀಯ ದರ್ಜೆ ಪರವಾನಗಿ ಸಮೀಕ್ಷೆದಾರರು~ ಹುದ್ದೆಗೆ ಶುಕ್ರವಾರ ಮತ್ತು ಶನಿವಾರಗಳಂದು (14-15) ನಡೆಯಲಿರುವ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸದಂತೆ ಹೈಕೋರ್ಟ್ ಸರ್ಕಾರಕ್ಕೆ  ಆದೇಶಿಸಿದೆ.ಪರೀಕ್ಷೆ ನಡೆಸಲು ಅನುಮತಿ ನೀಡಿರುವ ನ್ಯಾಯಮೂರ್ತಿಗಳಾದ ಕೆ.ಎಲ್.ಮಂಜುನಾಥ ಹಾಗೂ ಬಿ.ಮನೋಹರ ಅವರನ್ನು ಒಳಗೊಂಡ ವಿಭಾಗೀಯ ಪೀಠ, ಮುಂದಿನ ಆದೇಶದವರೆಗೆ ಫಲಿತಾಂಶಕ್ಕೆ ತಡೆ ನೀಡಿದೆ. ಈ ಹುದ್ದೆಗಳ ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ರೂಪಿಸಲಾದ ಹೊಸ ನಿಯಮಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಪೀಠ ನಡೆಸುತ್ತಿದೆ.ಈ ಮೊದಲು, ಎಸ್ಸೆಸ್ಸೆಲ್ಸಿ ಅಥವಾ ಪಿಯುಸಿ ನಂತರ ಜೆಓಸಿ (ಜಾಬ್ ಓರಿಯೆಂಟೆಡ್ ಕೋರ್ಸ್) ಮಾಡಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಹರಾಗಿದ್ದರು. ಆದರೆ ಈಗ ಬಿ.ಇ ಅಥವಾ ಬಿ.ಟೆಕ್ ಕೋರ್ಸ್ ಅನ್ನು ಕಡ್ಡಾಯ ಮಾಡಲಾಗಿದೆ. ಅಷ್ಟೆ ಅಲ್ಲದೆ ಈಗ ಚಾಲ್ತಿಯಲ್ಲಿ ಇರುವ ಸಾಮಾನ್ಯ ಪ್ರವೇಶ ಪರೀಕ್ಷೆಯ ಜೊತೆಗೆ ಸಾಮಾನ್ಯ ಜ್ಞಾನ ಪರೀಕ್ಷೆಯನ್ನೂ ಕಡ್ಡಾಯಗೊಳಿಸಲಾಗಿದೆ.ಆದರೆ ತಾವು ಜೆಒಸಿ ಅಧ್ಯಯನ ಮಾಡಿರುವ ಕಾರಣ ಹುದ್ದೆಯಿಂದ ವಂಚಿತರಾಗಬೇಕಾಗುತ್ತದೆ ಎನ್ನುವುದು ಅರ್ಜಿದಾರರ ವಾದ. ಆದರೆ ಇವರ ವಾದವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿ (ಕೆಎಟಿ) ಮಾನ್ಯ ಮಾಡಿರಲಿಲ್ಲ. ಹೊಸ ನಿಯಮಕ್ಕೆ ತಡೆ ನೀಡಲು ಅದು ಒಪ್ಪಿರಲಿಲ್ಲ. ಇದನ್ನು ಬಿ.ಎಸ್.ವಿರೂಪಾಕ್ಷಯ್ಯ ಹಾಗೂ ಇತರರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.ಜಾಮೀನು ಕೋರಿ ಅರ್ಜಿ

ಭೂಹಗರಣಕ್ಕೆ ಸಂಬಂಧಿಸಿದಂತೆ ವಕೀಲ ಸಿರಾಜಿನ್ ಬಾಷಾ ಅವರು ಲೋಕಾಯುಕ್ತ ವಿಶೇಷ ಕೋರ್ಟ್‌ನಲ್ಲಿ ದಾಖಲು ಮಾಡಿರುವ ಖಾಸಗಿ ದೂರಿನಲ್ಲಿನ ಆರೋಪಿಗಳಾದ ಆದರ್ಶ ಡೆವಲಪರ್ಸ್‌ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ಬಿ.ಎಂ.ಜಯಶಂಕರ ಹಾಗೂ ಆಕರ್ಷ ಪ್ರಾಪರ್ಟೀಸ್‌ನ ನಿರ್ದೇಶಕ ಬಿ.ಎಂ.ಕರುಣೇಶ್ ಅವರು ಜಾಮೀನು ಕೋರಿ ಹೈಕೋರ್ಟ್ ಮೊರೆ ಹೋಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಜೊತೆಗೆ ಇವರನ್ನೂ ಆರೋಪಿಯನ್ನಾಗಿಸಲಾಗಿದೆ.ಚಿತ್ರ ಬಿಡುಗಡೆ ತಡೆಗೆ ನಕಾರ

ಶುಕ್ರವಾರ (ಅ.14) ಬಿಡುಗಡೆಗೊಳ್ಳಲಿರುವ `ಆಜಾನ್~ ಹಿಂದಿ ಚಲನಚಿತ್ರದ ಬಿಡುಗಡೆಗೆ ತಡೆ ನೀಡಲು ಹೈಕೋರ್ಟ್ ಗುರುವಾರ ನಿರಾಕರಿಸಿದೆ. ಈ ಚಿತ್ರದ ಹೆಸರನ್ನು ವಿರೋಧಿಸಿ ಎಸ್.ಎ ಖಾದ್ರಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು.ಮುಸ್ಲಿಂ ಸಮುದಾಯವರು ಪ್ರಾರ್ಥನೆ ನಡೆಸುವ ಕುರಿತು ಸೂಚನೆ ನೀಡುವುದಕ್ಕೆ `ಆಜಾನ್~ ಎಂದು ಕರೆಯಲಾಗುತ್ತದೆ. ಈ ಪದಕ್ಕೆ ಕುರಾನ್‌ನಲ್ಲಿ ಪವಿತ್ರ ಭಾವನೆ ಇದೆ. ಆದರೆ ಇದೇ ಹೆಸರನ್ನು ಚಿತ್ರಕ್ಕೆ ಹಾಗೂ ಚಿತ್ರದ ನಾಯಕನಿಗೆ ಇಡಲಾಗಿದೆ. ಆದರೆ ಚಿತ್ರವು ಕೆಲವು ಅಸಭ್ಯ ದೃಶ್ಯಗಳನ್ನು ಒಳಗೊಂಡಿದೆ. ಇದರಿಂದ ಮುಸ್ಲಿಂ ಸಮುದಾಯದವರ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗುತ್ತದೆ ಎನ್ನುವುದು ಅರ್ಜಿದಾರರ ವಾದವಾಗಿತ್ತು.ಆದರೆ ಇದನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಮಾನ್ಯ ಮಾಡಲಿಲ್ಲ. ಇಂತಹ ಪ್ರಕರಣಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ವಿಚಾರಣೆ ನಡೆಸಲು ಆಗದು. ಅರ್ಜಿದಾರರು ಇಚ್ಛೆ ಪಟ್ಟರೆ ಬೇರೆ ಅರ್ಜಿ ಸಲ್ಲಿಸುವ ಮೂಲಕ ಪರಿಹಾರ ಕಂಡುಕೊಳ್ಳಬಹುದು ಎಂದು ಪೀಠ ತಿಳಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.